ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕಾಲಗಳನ್ನು ಮೀರಿದ ಸಾಹಿತ್ಯ

Last Updated 27 ನವೆಂಬರ್ 2018, 19:48 IST
ಅಕ್ಷರ ಗಾತ್ರ

ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ |
ಕಾಶಿಯಾ ಶಾಸ್ತ್ರಗಳನಾಕ್ಸ್‍ಫರ್ಡಿನವರು ||
ದೇಶಕಾಲವಿಭಾಗ ಮನದ ರಾಜ್ಯದೊಳಿರದು |
ಶ್ವಾಸವದು ಬೊಮ್ಮನದು – ಮಂಕುತಿಮ್ಮ || 60 ||

ಪದ-ಅರ್ಥ: ಕಬ್ಬ=ಕಾವ್ಯ, ಶಾಸ್ತ್ರಗಳಾನಕ್ಸ್‍ಫರ್ಡಿನವರು = ಶಾಸ್ತ್ರಗಳನು+ಆಕ್ಸಫರ್ಡಿನವರು, ಶ್ವಾಸ=ಉಸಿರು

ವಾಚ್ಯಾರ್ಥ: ಗ್ರೀಸ್ ದೇಶದ ಕಾವ್ಯಗಳನ್ನು ದೆಹಲಿಯಲ್ಲಿ ಓದುತ್ತಾರೆ. ಕಾಶಿಯ ಶಾಸ್ತ್ರಗಳನ್ನು ಆಕ್ಸ್ ಫರ್ಡಿನವರು ಓದುತ್ತಾರೆ. ದೇಶ, ಕಾಲವೆಂಬ ವಿಭಾಗಗಳು ಮನಸ್ಸಿನ ರಾಜ್ಯದಲ್ಲಿ ಇರಲಾರವು. ಇದೇ ಪರಬ್ರಹ್ಮನ ಉಸಿರು.

ವಿವರಣೆ: ಒಂದು ಸಾರ್ಥಕವಾದ ಸಾಹಿತ್ಯ ತನ್ನ ಕಾಲದ ಹಾಗೂ ದೇಶದ ಅವಧಿಗಳನ್ನು ದಾಟಿ ಹರಡುತ್ತದೆ. ಅದು ಎಷ್ಟು ವಿಸ್ತಾರವನ್ನು ಪಡೆಯುತ್ತದೆಯೋ ಅಷ್ಟು ದೊಡ್ಡದಾಗುತ್ತದೆ ಆ ಸಾಹಿತ್ಯದ ಘನತೆ. ಒಬ್ಬ ಮಹಾಕವಿ ಕಾವ್ಯಸೃಷ್ಟಿಯಲ್ಲಿ ತನ್ನ ಪರಿಸರದಲ್ಲಿದ್ದ ಸಾಮಗ್ರಿಗಳನ್ನೇ ಬಳಸಿಕೊಂಡರೂ ವಿಶ್ವಮಾನವ ದೃಷ್ಟಿಯಿಂದ ಇಡೀ ಪ್ರಪಂಚಕ್ಕೇ ಅನ್ವಯಿಸುವಂಥ ಸಾಹಿತ್ಯವನ್ನು ನೀಡುತ್ತಾನೆ. ಅವನು ಸ್ವಮತ ಹಾಗೂ ಸ್ವಸಮಾಜದ ಚಿಂತನೆಗಳಿಂದ ಅತೀತನಾಗಿ ವಿಶ್ವಮನುಷ್ಯ ಸ್ವಭಾವವನ್ನು ಹೃದಯದಲ್ಲಿ ಗ್ರಹಿಸಿ ರಚಿಸಿದ ಕಾವ್ಯ, ಸಾಹಿತ್ಯ ಜಗದ್ಪಂದ್ಯವಾಗುತ್ತದೆ.

ಅದಕ್ಕೆ ಕಾಲದ, ಪ್ರದೇಶದ ಮಿತಿಗಳಿಲ್ಲ. ಅವು ಸರ್ವೋತ್ಕೃಷ್ಟ ಗ್ರಂಥಗಳು. ಅಂತೆಯೇ ಗ್ರೀಕರ ರುದ್ರನಾಟಕಗಳನ್ನು, ಶೇಕ್ಸ್‌ಪಿಯರ್‍ನ ನಾಟಕಗಳನ್ನು, ಇಲಿಯಡ್‍ಅನ್ನು ಭಾರತೀಯರು ಆದರದಿಂದ ಓದಿ ಸಂತೋಷಪಡುತ್ತಾರೆ. ಅಂತೆಯೇ ನಮ್ಮ ರಾಮಾಯಣ, ಮಹಾಭಾರತ, ಭಗವದ್ಗೀತೆಗಳನ್ನು ಪರದೇಶದವರು ಶ್ರದ್ಧೆಯಿಂದ ಓದುತ್ತಾರೆ. ಯಾಕೆ? ಅವರ ಗ್ರಂಥಗಳ ರಂಜಕವಾದ ವಿವರಗಳು, ಸಂದೇಶಗಳು ನಮ್ಮ ಬದುಕಿಗೂ ಅನ್ವಯವಾದರೆ ನಮ್ಮ ಗ್ರಂಥಗಳು ನೀಡುವ ಆಧ್ಯಾತ್ಮಿಕ ಚಿಂತನೆಗಳು ಅವರ ಬದುಕನ್ನು ಹಸನು ಮಾಡುತ್ತವೆ.

ಹಾಗೆ ನೋಡಿದರೆ ಗ್ರೀಕರ ಟ್ರೋಜನ್ ಮಹಾಯುದ್ಧ ಮಹಾಭಾರತದ ಕುರುಕ್ಷೇತ್ರದ ಯುದ್ಧಕ್ಕೆ ಪ್ರತಿಬಿಂಬ ಎನ್ನಿಸುವುದಿಲ್ಲವೆ? ಇದಕ್ಕೆ ಮೂಲಕಾರಣವೆಂದರೆ ಪ್ರಪಂಚದ ಯಾವ ಮೂಲೆಯಲ್ಲಾದರೂ ಮನುಷ್ಯ ಸ್ವಭಾವಗಳು – ಕೋಪ, ತಾಪ, ಸಿಟ್ಟು, ಸೇಡು, ದುಃಖ, ಸಂತೋಷ- ಇವೆಲ್ಲ ಸಮಾನವಾದವುಗಳು. ಅದಕ್ಕೆಂದೇ ಮಹಾಕಾವ್ಯಗಳು ಕಾಲ, ದೇಶಗಳ ಸೀಮೆಗಳನ್ನು ದಾಟಿ ವಿಶ್ವಪ್ರಿಯವಾಗುತ್ತವೆ.

ಸೂರ್ಯಚಂದ್ರರಿಗೆ ಹೇಗೆ ದೇಶ, ಕಾಲಗಳ ಭೇದವಿಲ್ಲವೋ, ಹಾಗೆ ಮಹಾಕಾವ್ಯಗಳು ಸರ್ವತ್ರಪೂಜ್ಯವಾಗುತ್ತವೆ. ಅದಕ್ಕೇ ಡಿ.ವಿ.ಜಿ ಹೇಳುತ್ತಾರೆ ಗ್ರೀಸ್ ದೇಶದ ಕಾವ್ಯಗಳು ದೆಹಲಿಯಲ್ಲೂ ಪ್ರಸ್ತುತ ಹಾಗೆಯೇ ಕಾಶಿಯ ಶಾಸ್ತ್ರಗಳು ಇಂಗ್ಲೆಂಡಿನ ಆಕ್ಸಫರ್ಡ್‌ನಲ್ಲೂ ಮನ್ನಣೆ ಪಡೆಯುತ್ತಿವೆ. ಇವೆಲ್ಲ ಭಗವಂತನ ಉಸಿರು ಇದ್ದ ಹಾಗೆ ಕಾಲ, ದೇಶಗಳನ್ನು ಮೀರಿ ಸರ್ವಮೂಲವಾಗಿ, ಸರ್ವವ್ಯಾಪಿಯಾಗಿ ನಿಂತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT