ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಲೀಲೆಯಲ್ಲಿ ಮೈಮರೆತ ಪರವಸ್ತು

Last Updated 8 ಜನವರಿ 2019, 20:00 IST
ಅಕ್ಷರ ಗಾತ್ರ

ತರುಣಿ ತನ್ನೊಡವೆಗಳ ತಳೆಯುತ್ತ, ತೆಗೆಯುತ್ತ |
ಪರಕಿಸುತೆ ಮುಕರದಲಿ ಸೊಗಸುಗಳ ಪರಿಯ ||
ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ |
ಮೆರೆಯುವನು ಪರಬೊಮ್ಮ – ಮಂಕುತಿಮ್ಮ || 78 ||

ಪದ-ಅರ್ಥ: ತಳೆಯುತ್ತ=ಧರಿಸುತ್ತ, ಪರಕಿಸುತೆ=ನೋಡುತ್ತ, ಮುಕರ=ಕನ್ನಡಿ, ವಿಲಸಿಪಂತೆ=ವಿಲಾಸಮಾಡುವಂತೆ

ವಾಚ್ಯಾರ್ಥ: ಒಬ್ಬ ತರುಣಿ ಕನ್ನಡಿಯಲ್ಲಿ ತನ್ನ ಸೌಂದರ್ಯದ ಪರಿಯನ್ನು ನೋಡಿಕೊಳ್ಳುತ್ತ, ಆಭರಣಗಳನ್ನು ಹಾಕಿಕೊಳ್ಳುತ್ತ, ತೆಗೆಯುತ್ತ ಪ್ರಪಂಚವನ್ನೇ ಮರೆತು ಸಂತೋಷಪಡುವಂತೆ ಪರಬ್ರಹ್ಮ ತನ್ನ ವಿಶ್ವದಲ್ಲಿ ಮೆರೆಯುತ್ತಿದ್ದಾನೆ.

ವಿವರಣೆ: ಜರ್ಮನಿಯ ಖ್ಯಾತ ಚಿತ್ರಕಲಾವಿದ ಡ್ಯೂರರ್ ತಾನೇ ಬರೆದ ಚಿತ್ರವನ್ನು ಗಂಟೆಗಟ್ಟಲೆ ನೋಡುತ್ತ ಕುಳಿತು ಸಂತೋಷಪಡುತ್ತಿದ್ದನಂತೆ. ಸಂಗೀತಗಾರ ಬಿಥೊವನ್ ತಾನು ಸೃಷ್ಟಿಸಿದ ಸಂಗೀತವನ್ನು ತಾನೇ ಕೇಳಿ ಖುಷಿಪಡುತ್ತಿದ್ದ.

ನಾವೂ ಹಾಗೆಯೆ ಮಾಡುವುದಿಲ್ಲವೇ? ನೀವು ಕಷ್ಟಪಟ್ಟು ಕಟ್ಟಿಸಿದ ಮನೆಯನ್ನು ನೋಡಿ, ಮತ್ತೊಬ್ಬರಿಗೆ ತೋರಿಸಿ ಸಂತಸಪಡುವುದಿಲ್ಲವೇ? ಮನೆಯಲ್ಲಿ ಒಬ್ಬರೇ ಇದ್ದಾಗ, ಕೊನೆಗೆ ಬಚ್ಚಲ ಮನೆಯಲ್ಲಿಯೇ, ನಮಗಿರುವ ಕಂಠದಲ್ಲೇ, ಬಂದಷ್ಟೇ ಹಾಡನ್ನು ಹಾಡಿ ಸಂತೋಷಪಡುವುದಿಲ್ಲವೇ? ಕೆಲವು ಶ್ರೀಮಂತರು ಒಬ್ಬರೇ ಕುಳಿತು ತಾವು ಗಳಿಸಿಟ್ಟ ಹಣದ ಲೆಕ್ಕವನ್ನು ಗುಣಿಸಿ, ಕೂಡಿಸಿ ಆನಂದಪಡುವುದಿಲ್ಲವೇ? ಹೀಗೆ ಮಾಡುವುದರಲ್ಲಿ ಬೇರೆ ಅಪೇಕ್ಷೆಯಿಲ್ಲ, ಬೇರೆ ಉದ್ದೇಶಗಳಿಲ್ಲ.

ಕೇವಲ ನಮ್ಮ ಸ್ವಂತದ ಆನಂದಕ್ಕಾಗಿ ನಮ್ಮ ನಮ್ಮ ರೂಪ, ವಸ್ತು, ಪ್ರಭಾವಗಳನ್ನು ನೋಡಿ ನೆನೆನೆನೆದು ತೃಪ್ತಿ ಪಡುವುದು ಮನುಷ್ಯ ಸ್ವಭಾವ. ಹಾಗೆಯೇ ಪರಬ್ರಹ್ಮವಸ್ತು ಕೂಡ ತನ್ನ ಸೃಷ್ಟಿಯ ರೂಪ, ತನ್ನ ಸ್ವ್ಪಶಕ್ತಿಯ ಪ್ರಭಾವವನ್ನು ನೆನೆದು ಸಂತೋಷಪಡುತ್ತದೆ. ಇದೇ ಅದರ ಲೀಲೆ. ಇದನ್ನು ತೋಂಟದ ಸಿದ್ಧಲಿಂಗ ಶಿವಯೋಗಿ ಶರಣರು ಕಂಡರಿಸಿದ ಬಗೆ ಅನನ್ಯವಾದದ್ದು.

ವಾರಿ ಬಲಿದು ವಾರಿಶಿಲೆಯಾದಂತೆ, ವಾರಿಶಿಲೆ ಕರಗಿ ಉದಕವಾದಂತೆ,ನಿನ್ನ ವಿನೋದಕ್ಕೆ ನೀನೆ ಶರಣನಾದೆ.ನಿನ್ನ ವಿನೋದಕ್ಕೆ ನೀನೆ ಲಿಂಗವಾದೆ.ನಿನ್ನ ವಿನೋದ ನಿಂದಲ್ಲಿ, ನೀನೆ ಶರಣ ಲಿಂಗವೆಂಬುಭಯವಳಿದು, ನಿರಾಳ ನಿರ್ಮಾಯನಾಗಿ ನಿಶ್ಯಬ್ದಮಯನಾದೆ ಕಾಣಾಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ !

ಎಷ್ಟು ಚೆಂದದ ಮಾತು! ನೀರು (ವಾರಿ) ತಾನೇ ಗಟ್ಟಿಯಾಗಿ ಅಲಿಕಲ್ಲು ಆಗುವಂತೆ ಮತ್ತೆ ಅದೇ ಆಲಿಕಲ್ಲು ಕರಗಿ ನೀರಾಗುವಂತೆ, ಭಗವಂತ ತನ್ನ ವಿನೋದಕ್ಕೆ ತಾನೇ ಶರಣನೂ ಆಗಿದ್ದಾನೆ, ಲಿಂಗವೂ ಆಗಿದ್ದಾನೆ. ಪೂಜೆ ಮಾಡುವವನೂ ಅವನೇ, ಮಾಡಿಸಿಕೊಳ್ಳುವವನೂ ಅವನೆ. ಇದು ಅವನ ಸಂತೋಷ, ಆನಂದಪಡುವ ಪರಿ. ಒಂದು ಬಾರಿ ಅವನಿಗೆ ವಿನೋದ ಸಾಕೆನ್ನಿಸಿದರೆ ಅವನೇ ನಿರಾಳನಾಗಿ, ನಿರ್ಮಾಯವಾಗಿ, ನಿಶ್ಯಬ್ದಮಯನಾಗಿ ನಿಲ್ಲುತ್ತಾನೆ. ಅದೂ ಅವನ ಆನಂದದ ಮತ್ತೊಂದು ದರ್ಶನ.

ಭಗವಂತನ ಲೀಲೆಯನ್ನು ಈ ಕಗ್ಗ ಎಷ್ಟು ಸುಂದರವಾಗಿ ತರುಣಿ ಕನ್ನಡಿಯಲ್ಲಿ ತನ್ನದೇ ರೂಪ, ಲಾವಣ್ಯಗಳನ್ನು ಮೈಮರೆತು ನೋಡಿ ಆನಂದಿಸುವಂತೆ ಪರವಸ್ತುವೂ ತನ್ನ ಸೃಷ್ಟಿಯಲ್ಲಿ ಆನಂದಿಸುತ್ತದೆ ಎಂದು ಹೋಲಿಸಿ ನಮಗೆ ಅರ್ಥವಾಗುವ ರೀತಿಯಲ್ಲಿ ನಮ್ಮ ಮುಂದೆ ಇಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT