ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಥಿಯ ವಿನಯ, ರಾಜನ ಹೆಗ್ಗಳಿಕೆ

Last Updated 31 ಜನವರಿ 2019, 20:29 IST
ಅಕ್ಷರ ಗಾತ್ರ

ಬ್ರಹ್ಮದತ್ತ ವಾರಣಾಸಿಯಲ್ಲಿ ರಾಜ್ಯಭಾರ ಮಾಡುವಾಗ ಬೋಧಿಸತ್ವ ಅವನ ಮಗನಾಗಿ ಜನಿಸಿದ. ಅವನಿಗೆ ಬ್ರಹ್ಮದತ್ತ ಕುಮಾರ ಎಂದು ಹೆಸರಾಯಿತು. ಅವನು ತಕ್ಕಶಿಲೆಗೆ ಹೋಗಿ ಸಕಲ ವಿದ್ಯೆಗಳಲ್ಲಿ ಪಾರಂಗತನಾಗಿ ಬಂದು ತಂದೆಯ ಕಾಲಾನಂತರ ತಾನೇ ರಾಜನಾದ.

ಅವನು ಎಷ್ಟು ಧರ್ಮದಿಂದ, ನ್ಯಾಯದಿಂದ ರಾಜ್ಯಭಾರ ಮಾಡುತ್ತಿದ್ದನೆಂದರೆ ಅವನ ರಾಜ್ಯದ ಎಲ್ಲರೂ ಧರ್ಮಿಷ್ಠರಾದರು. ಎಲ್ಲವೂ ಧರ್ಮಾನುಸಾರವಾದದ್ದರಿಂದ ಮೋಸ, ಚಟುವಟಿಕೆಗಳಿಗೆ ಅವಕಾಶವೇ ಇರಲಿಲ್ಲ. ಯಾವ ತಂಟೆ ತಗಾದೆಗಳೂ ಇರಲಿಲ್ಲ. ಹೀಗಾಗಿ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಿಗೆ ಕೆಲಸವಿಲ್ಲದಂತಾಯಿತು. ಕಳ್ಳಕಾಕರೇ ಇಲ್ಲದ್ದರಿಂದ ಆರಕ್ಷಕ ದಳಕ್ಕೆ ಕಾರ್ಯವೇ ಇರಲಿಲ್ಲ.

ರಾಜ ವಾರಣಾಸಿಯಲ್ಲಿ ಸುತ್ತಾಡಿ ಜನ ಅವನ ದುರ್ಗುಣಗಳ ಬಗ್ಗೆ ಏನಾದರೂ ಮಾತನಾಡುತ್ತಾರೆಯೋ ಎಂದು ಕೇಳಬಯಸಿದ. ಹಾಗೇನಾದರೂ ಗೊತ್ತಾದರೆ ತನ್ನ ದುರ್ಗುಣಗಳನ್ನು ಬಿಡುವುದು ಅವನ ಉದ್ದೇಶ. ಯಾರೂ ಅವನ ದುರ್ಗುಣಗಳ ಬಗ್ಗೆ ಮಾತನಾಡಲಿಲ್ಲ, ಬದಲಿಗೆ ಎಲ್ಲರೂ ಅವನ ಗುಣಗಳನ್ನು ಹೊಗಳುವವರೇ. ನಂತರ ಅವನು ಹಳ್ಳಿಗಳಿಗೆ ವೇಷ ಮರೆಸಿಕೊಂಡು ಹೋದ. ಅಲ್ಲಿಯೂ ಅವನ ಗುಣಗಾನವೇ ನಡೆದಿತ್ತು. ಕೊನೆಗೆ ತನ್ನ ರಥವನ್ನು ತೆಗೆದುಕೊಂಡು ಗಡಿನಾಡ ಪ್ರದೇಶಕ್ಕೆ ಹೋದ. ಅಲ್ಲಿಯೂ ಯಾರೂ ಅವನ ದುರ್ಗುಣಗಳ ಬಗ್ಗೆ ಹೇಳಲೇ ಇಲ್ಲ, ಮರಳಿ ವಾರಣಾಸಿಗೆ ಹೊರಡಲು ಸಾರಥಿಗೆ ಹೇಳಿದ.

ಅದೇ ಸಮಯದಲ್ಲಿ ಕೋಸಲದ ರಾಜ ಮಲ್ಲಿಕನೂ ತನ್ನ ಬಗ್ಗೆ ಜನ ಏನು ಹೇಳುತ್ತಾರೆ ಎಂದು ಕೇಳಲು ರಥದಲ್ಲಿ ಹೊರಟಿದ್ದ. ಅವನಿಗೂ ಯಾರೂ ಅವನ ದುರ್ಗುಣಗಳ ಬಗ್ಗೆ ಹೇಳಿರಲಿಲ್ಲ. ಎರಡೂ ರಥಗಳು ಎದುರುಬದುರಾಗಿ ಬಂದವು. ಅಲ್ಲಿ ರಸ್ತೆ ತುಂಬ ಇಕ್ಕಟ್ಟಾದ್ದರಿಂದ ಯಾವುದೋ ಒಂದು ರಥ ಹಿಂದೆ ಸರಿಯಬೇಕಾಗಿತ್ತು.

ಮಲ್ಲಿಕರಾಜನ ಸಾರಥಿ ಕೂಗಿದ, “ಲೋ ಸಾರಥಿ, ನಿನ್ನ ರಥವನ್ನು ಹಿಂದೆ-ತೆಗೆದುಕೋ. ನನ್ನ ರಥದಲ್ಲಿ ಕೋಸಲದ ಚಕ್ರವರ್ತಿ ಮಲ್ಲಿಕ ಮಹಾರಾಜರಿದ್ದಾರೆ”.

ಬ್ರಹ್ಮದತ್ತಕುಮಾರನ ಸಾರಥಿ ವಿನಯದಿಂದ, “ತುಂಬ ಸಂತೋಷ ಅಯ್ಯಾ. ನನ್ನ ರಥದಲ್ಲಿ ವಾರಣಾಸಿಯ ಚಕ್ರವರ್ತಿಗಳಾದ ಬ್ರಹ್ಮದತ್ತಕುಮಾರ ಮಹಾರಾಜರಿದ್ದಾರೆ” ಎಂದ.

ಇಬ್ಬರೂ ಚಕ್ರವರ್ತಿಗಳೇ! ಇಬ್ಬರ ವಯಸ್ಸು ಅಷ್ಟೇ. ನಂತರ ರಾಜ್ಯದ ವಿಸ್ತಾರ, ಸೈನ್ಯಬಲ, ಐಶ್ವರ್ಯ ಎಲ್ಲವೂ ತಾಳೆ ಹಾಕಿದಂತೆ ಸಮನಾಗಿಯೇ ಇದ್ದವು. ನಂತರ ಸಾರಥಿಗಳು ತಮ್ಮ ತಮ್ಮ ರಾಜರುಗಳ ಗುಣಗಳನ್ನು ಹೇಳತೊಡಗಿದರು. ಮಲ್ಲಿಕರಾಜನ ಸಾರಥಿ ಜೋರಾಗಿ ಅಬ್ಬರ ಮಾಡುತ್ತ ತನ್ನ ರಾಜರ ಗುಣಗಳನ್ನು ಹೇಳಿದ. ನಂತರ ನಿಮ್ಮ ರಾಜರ ಗುಣಗಳನ್ನು ಹೇಳು ಎಂದು ಒತ್ತಾಯಿಸಿದ. ಆಗ ವಾರಣಾಸಿಯ ರಾಜನ ಸಾರಥಿ ಹೇಳಿದ, “ನಮ್ಮ ರಾಜರು ಕ್ರೋಧವನ್ನು ಅಕ್ರೋಧದಿಂದ ಗೆಲ್ಲುತ್ತಾರೆ; ಕೆಟ್ಟವರನ್ನು ಒಳ್ಳೆಯತನದಿಂದ ಗೆಲ್ಲುತ್ತಾರೆ, ಜಿಪುಣನನ್ನು ಔದಾರ್ಯದಿಂದ ಗೆಲ್ಲುತ್ತಾರೆ; ಸುಳ್ಳು ಹೇಳುವವನನ್ನು ಸತ್ಯದಿಂದ ಗೆಲ್ಲುತ್ತಾರೆ, ಅಹಂಕಾರಿಯನ್ನು ವಿನಯದಿಂದ ಗೆಲ್ಲುತ್ತಾರೆ”.

ಈ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಕೋಸಲದ ರಾಜ ರಥದ ಕೆಳಗಿಳಿದು ಬಂದು ಸಾರಥಿಗೆ ರಥವನ್ನು ಹಿಂದೆ ಸರಿಸಿ ದಾರಿ ಬಿಡಲು ಹೇಳಿದ. ಮುಂದೆ ಬಂದು ಬ್ರಹ್ಮದತ್ತ ಕುಮಾರನನ್ನು ಭೆಟ್ಟಿಯಾಗಿ ಅಭಿನಂದಿಸಿ ಹೇಳಿದ, “ನಾನು ನಿಮ್ಮಿಂದ ಕಲಿಯುವುದು ಬಹಳವಿದೆ. ಯಾವ ರಾಜನ ಸಾರಥಿಯೂ ವಿನಯವಾಗಿರುತ್ತಾನೋ ಅಂಥ ರಾಜ ಸದಾಚಾರಿಯಾಗಿರಲೇಬೇಕು”.

ದೊಡ್ಡವರು, ತಮ್ಮ ಸುತ್ತಲಿರುವವರನ್ನು ದೊಡ್ಡವರನ್ನಾಗಿ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT