ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ-ಸತ್ವದ ವಿಕಾರ

Last Updated 3 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಸೃಷ್ಟಿರೂಪಂಗಳವತಾರದೊಳ್ ಕ್ರಮ ಲಕ್ಷ್ಯ |
ಪುಷ್ಟವಾಗಿರ್ದೊಡದೇ ನಿಲ್ಲದೊಡದೇನು ? |
ಶಿಷ್ಟಮಾದುದು ಸತ್ತ್ವವದನು ಸೋಕದು ರೂಪ |
ದೃಷ್ಟಿ ಸತ್ತ್ವದೊಳಿರಲಿ - ಮಂಕುತಿಮ್ಮ || 114 ||

ಪದ-ಅರ್ಥ: ಸೃಷ್ಟಿರೂಪಂಗಳವತಾರದೊಳ್=ಸೃಷ್ಟಿ+ರೂಪಂಗಳ(ರೂಪಗಳ)+ಅವತಾರದೊಳ್(ಅವತಾರದಲ್ಲಿ), ಕ್ರಮ=ಪದ್ಧತಿ, ಲಕ್ಷ್ಯ=ಗುರಿ, ಪುಷ್ಟವಾಗಿರ್ದೊಡೇನಿಲ್ಲದೊಡದೇನು=ಪುಷ್ಟವಾಗಿರ್ದೊಡೆ(ಪರಿಪೂರ್ಣವಾಗಿದ್ದರೆ)+ಏನು+ಇಲ್ಲದೊಡೆ+ಅದೇನು, ಶಿಷ್ಟಮಾದುದು=ಶಿಷ್ಟವಾದದ್ದು(ನಾಮರೂಪ ರಹಿತವಾದದ್ದು)

ವಾಚ್ಯಾರ್ಥ: ಸೃಷ್ಟಿಯ ರೂಪಗಳು ಅವತಾರದಲ್ಲಿ ಒಂದು ವ್ಯವಸ್ಥೆ, ಗುರಿ ಪುಷ್ಟವಾಗಿದ್ದರೇನು, ಆಗಿಲ್ಲದಿದ್ದರೇನು? ಸತ್ವ ನಾಮರೂಪರಹಿತವಾದದ್ದು. ರೂಪ ಸತ್ವವನ್ನು ಸೊಂಕದು. ನಮ್ಮ ದೃಷ್ಟಿ ಸತ್ವದಲ್ಲಿರಲಿ.

ವಿವರಣೆ: ಸೃಷ್ಟಿಯಲ್ಲಿ ಕಂಡು ಬರುವ ಅನೇಕಾನೇಕ ರೂಪಗಳಲ್ಲಿ, ಅವುಗಳ ಬೆಳವಣಿಗೆಯಲ್ಲಿ ಒಂದು ಕ್ರಮ, ಒಂದು ಗುರಿ ಸ್ಪಷ್ಟವಾಗಿ ಕಂಡು ಬರಬಹುದು. ಡಾರ್ವಿನ್‍ನ ವಿಕಾಸವಾದದಲ್ಲಿ ಹೇಗೆ ಮಂಗನಿಂದ ಕ್ರಮಕ್ರಮವಾಗಿ ಬದಲಾಗುತ್ತ ಮಾನವನಾದ ಎಂಬ ಸಿದ್ಧಾಂತವಿದೆ. ಅಲ್ಲಿ ಒಂದು ಸ್ಪಷ್ಟವಾದ ಕ್ರಮ ಕಂಡೀತು. ಮತ್ತೆ ಕೆಲವು ಬಾರಿ ಸೃಷ್ಟಿಯಲ್ಲಿ ಯಾವುದೇ ಕ್ರಮವೇ ಇಲ್ಲ ಎಂದೂ ಎನ್ನಿಸಬಹುದು.

ನಮ್ಮ ಪರಂಪರೆಯಲ್ಲಿ ಹೇಳುವಂತೆ ಎಂಭತ್ನಾಲ್ಕು ಲಕ್ಷ ಜೀವರಾಶಿಗಳು ಬೇಕಿತ್ತೇ? ಸೃಷ್ಟಿಯಲ್ಲಿ ಯಾವುದೂ ಒಂದು ಗುರಿಯಲ್ಲಿ, ಕ್ರಮದಲ್ಲಿ ನಡೆದಿಲ್ಲ ಎನ್ನಿಸುತ್ತದೆ. ಅವ್ಯವಸ್ಥೆಯಲ್ಲಿ ಯಾವುದೋ, ಹೇಗೊ ಆಗಿ ಹೋಗಿದೆ ಎಂದು ತೋಚಬಹುದು. ಅದು ಹಾಗಿರುವುದಕ್ಕೆ ಪ್ರಕೃತಿಯ ಗುಣವೇ ಕಾರಣ. ಮೂರುಗುಣಗಳು ಪ್ರಕೃತಿಯನ್ನು ನಿರ್ಮಿಸಿವೆ. ಅವು, ಸತ್ವ, ರಜಸ್ಸು ಹಾಗೂ ತಮಸ್ಸು. ಯಾವ ಗುಣವೂ ಶುದ್ಧವಾಗಿರುವುದಿಲ್ಲ. ಅದು ಮತ್ತೊಂದರ ಜೊತೆಗೆ ತುಸು ಬೆರೆತಿರುತ್ತದೆ, ಬಂಗಾರ ಎಷ್ಟೇ ಶುದ್ಧವಾಗಿದ್ದರೂ ಆಭರಣ ತಯಾರಿಕೆಗೆ ಒಂದಷ್ಟು ತಾಮ್ರದ ಬೆರಕೆ ಬೇಕಾಗುವಂತೆ. ಹೀಗೆ ಗುಣಗಳು ಬೆರೆತಾಗ ಕೆಲವೊಮ್ಮೆ ಪುಷ್ಟವಾಗಿ, ಕೆಲವೊಮ್ಮೆ ಪರಿಪೂರ್ಣವಾಗಿರದಂತೆ ಸೃಷ್ಟಿ ತೋರುತ್ತದೆ.

ಈ ಸೃಷ್ಟಿಯ ರೂಪಗಳು, ಅವುಗಳ ಅವತಾರಗಳು ಒಂದು ವ್ಯವಸ್ಥೆಯಲ್ಲಿ, ಗುರಿಯಲ್ಲಿ ಪುಷ್ಟವಾಗಿದ್ದರೇನು ಅಥವಾ ಆಗಿಲ್ಲದಿದ್ದರೇನು?

ಯಾಕೆಂದರೆ ಈ ಸೃಷ್ಟಿಯ ಅನೇಕ ಅವತಾರಗಳಿಗೆ ಕಾರಣವಾದದ್ದು, ಮೂಲವಾಗಿದ್ದುದು ಸತ್ವ-ಪರಸತ್ವ. ಅದು ಯಾವಾಗಲೂ ನಾಮರೂಪರಹಿತವಾದದ್ದು. ಮಣ್ಣಿನ ಅನೇಕ ಆಟಿಕೆಗಳಿವೆ, ಮಡಕೆಗಳಿವೆ. ಅವುಗಳ ಆಕಾರ, ರೂಪ ಭಿನ್ನವಾದರೂ ಅವುಗಳ ಮೂಲಸತ್ವ ಮಣ್ಣೇ. ಬಂಗಾರ ಶುದ್ಧ. ಅದನ್ನು ಬಳಸಿ ನೂರಾರು ತರಹದ ಆಭರಣಗಳು ಸೃಷ್ಟಿಯಾಗುತ್ತವೆ. ಕೆಲವು ನಮಗೆ ಆಕರ್ಷಕವಾಗುತ್ತವೆ, ಕೆಲವು ಆಗುವುದಿಲ್ಲ.

ಈ ಆಕಾರ, ರೂಪಗಳಿಂದ ಬಂಗಾರಕ್ಕೆ ಯಾವ ತೊಂದರೆಯೂ ಇಲ್ಲ. ಅವುಗಳನ್ನೆಲ್ಲ ಕರಗಿಸಿ, ಶುದ್ಧಪಡಿಸಿದರೆ ಉಳಿಯವುದು ಶುದ್ಧ ಬಂಗಾರ. ಅದನ್ನೇ ಕಗ್ಗ ಹೇಳುತ್ತದೆ. ಶಿಷ್ಟವಾದದ್ದು ಸತ್ವ. ವಿವಿಧ ರೂಪಗಳು ಈ ಸತ್ವವನ್ನು ಬದಲಾಯಿಸುವುದಿಲ್ಲ, ಅದರ ಮೂಲಗುಣವನ್ನು ಸೋಂಕುವುದೂ ಇಲ್ಲ. ಆದ್ದರಿಂದ ನಮ್ಮ ದೃಷ್ಟಿ ಸದಾಕಾಲ ಸತ್ವದಲ್ಲೇ ನೆಲೆಯಾಗಬೇಕು. ಆಗ ಸೃಷ್ಟಿಯಲ್ಲಿ ಕಾಣುವ ವ್ಯವಸ್ಥೆ, ಅವ್ಯವಸ್ಥೆಗಳು, ಗುರಿಗಳು, ಬೆಳವಣಿಗೆಗಳೆಲ್ಲ ಆ ಮೂಲ ಸತ್ವದ, ಶುದ್ಧಸತ್ವದ ಆಕಾರ, ವಿಕಾರಗಳೆಂಬುದು ಸ್ಪಷ್ಟವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT