ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ-ದೇಹವನು ಕುಣಿಸುವ ಮೂರನೆ ಶಕ್ತಿ

Last Updated 19 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ತನುವೇನು ? ಮನವೇನು ? ಪರಮಾಣು ಸಂಧಾನ |

ಕುಣಿಸುತಿಹುದುಭಯವನು ಮೂರನೆಯದೊಂದು ||

ತೃಣದ ಹಸಿರಿನ ಹುಟ್ಟು ತಾರೆಯೆಸಕದ ಗುಟ್ಟು|

ದಣಿಯದದನರಸು ನೀಂ – ಮಂಕುತಿಮ್ಮ || 121 ||

ಪದ-ಅರ್ಥ: ಕುಣಿಸುತಿಹುದುಭಯವನು=ಕುಣಿಸುತಿಹುದು+ಉಭಯವನು(ಎರಡನ್ನೂ), ತಾರೆಯೆಸಕದ= ತಾರೆಯ= ಎಸಕದ (ಮಿನುಗುವಿಕೆಯ), ದಣಿಯದದನರಸು=ದಣಿಯದೆ+ಅದನು+ಅರಸು

ವಾಚ್ಯಾರ್ಥ: ದೇಹವೇನು? ಮನಸ್ಸೇನು? ಅವರೆಡೂ ಪರಮಾಣು ಸಂಧಾನ. ಆದರೆ ಮೂರನೆಯದು ಒಂದು ಶಕ್ತಿ ಎರಡನ್ನೂ ಕುಣಿಸುತ್ತಿದೆ. ಹುಲ್ಲಿನ ಹಸಿರು ಬಂದದ್ದು ಹೇಗೆ, ತಾರೆಗಳ ಮಿನುಗುವಿಕೆಯ ಗುಟ್ಟೇನು ಎಂಬೆಲ್ಲವನ್ನು ದಣಿಯದೆ ನೀನು ಹುಡುಕಾಡು.

ವಿವರಣೆ : ಮೇಲ್ನೋಟಕ್ಕೆ ತೋರುವಂತೆ ಒಬ್ಬ ವ್ಯಕ್ತಿಯಲ್ಲಿ ದೇಹವಿದೆ ಮತ್ತು ಅದರಲ್ಲಿ ಮನಸ್ಸಿದೆ. ಅವೆರಡೂ ಪರಮಾಣು ಸಂಧಾನಗಳೇ. ದೇಹವೆಂದರೆ ಕೋಟಿ ಕೋಟಿ ಜೀವಕೋಶಗಳ ಒಂದು ಮೊತ್ತ. ಖ್ಯಾತ ಖಗೋಳಶಾಸ್ತ್ರಜ್ಞ ಕಾರ್ಲ ಸಗಾನ್ ತನ್ನನ್ನು ಪರಿಚಯಿಸಿಕೊಳ್ಳುತ್ತಿದ್ದುದು ಹೀಗೆ, ‘I am a bundle of trillions of molecules called carl Sagan’. ಈ ಜೀವಕೋಶಗಳು ಒಂದನ್ನೊಂದು ಪರಮಾಣು ಬಂಧದಲ್ಲಿ ಹಿಡಿದಿರಿಸಿವೆ. ಆಗ ಅದೊಂದು ದೇಹವಾಗುತ್ತದೆ. ಇಂಥ ದೇಹವನ್ನು ಒಳಗೆ ಅವಿತುಕೊಂಡಿರುವ ಮನಸ್ಸು ಬೇಕಾದ ಹಾಗೆ ಕುಣಿಸುತ್ತದೆ. ಆಸೆ ಹುಟ್ಟಿಸುತ್ತದೆ, ಕಳ್ಳತನ ಮಾಡು ಎನ್ನುತ್ತದೆ. ದೇಹ ಮನಸ್ಸು ಹೇಳಿದಂತೆ ಕಳ್ಳತನ ಮಾಡಲು ಹೋಗುತ್ತದೆ, ಆಗ ಅಲ್ಲಿ ಯಾರೋ ಬರುತ್ತಾರೆ. ಮನಸ್ಸು ‘ಓಡು’ ಎನ್ನುತ್ತದೆ. ದೇಹ ಓಡುತ್ತದೆ. ಯಾರೋ ಹಿಡಿಯುತ್ತಾರೆ. ಒದೆ ಬೀಳುತ್ತದೆ, ಶಿಕ್ಷೆಯಾಗುತ್ತದೆ. ಇದೆಲ್ಲ ಆಗುವುದು ದೇಹಕ್ಕೆ. ಮನಸ್ಸಿಗೇನೂ ಆಗುವುದಿಲ್ಲವೇ? ಅದಕ್ಕೂ ನೋವಾಗುತ್ತದೆ, ಅನುಭವವಾಗುತ್ತದೆ. ದೇಹ ಸಂತೋಷಪಟ್ಟಾಗ, ರುಚಿಯಾದದ್ದನ್ನು ತಿಂದಾಗ, ಸುಂದರವಾದದ್ದನ್ನು ಕಂಡಾಗ, ಮಾಧುರ್ಯದ ಧ್ವನಿ ಕೇಳಿದಾಗ ಮನಸ್ಸೂ ಮುದಗೊಳ್ಳುತ್ತದೆ. ಅಂದರೆ ದೇಹ ಮತ್ತು ಮನಸ್ಸುಗಳ ನಡುವೆ ಅನ್ಯೋನ್ಯ ಸಂಬಂಧವಿದೆ. ಒಂದು ಮತ್ತೊಂದಕ್ಕೆ ಸ್ಪಂದಿಸುತ್ತದೆ.

ಆದರೆ ಆಧ್ಯಾತ್ಮ ಹೇಳುತ್ತದೆ, ಇವೆರಡನ್ನು ಕುಣಿಸುವ ಮತ್ತೊಂದು ಮೂರನೆಯ ಶಕ್ತಿ ಇದೆ. ಅದನ್ನು ವಿಧಿ ಅಥವಾ ಪರವಸ್ತು ಎಂದೆಲ್ಲ ಕರೆಯಬಹುದು. ಮನಸ್ಸು ದೇಹವನ್ನು ಪ್ರಚೋದಿಸಿದರೆ ವಿಧಿ ಮನಸ್ಸನ್ನು ಪ್ರಚೋದಿಸುತ್ತದೆ. ವಿಧಿ ವಿಶ್ವಾಮಿತ್ರನ ಮನಸ್ಸನ್ನು ಪ್ರಚೋದಿಸಿ ಹರಿಶ್ಚಂದ್ರನ ಬದುಕನ್ನು ಪರೀಕ್ಷಿಗೆ ನೂಕಿತು. ಎತ್ತರದ ಇಂದ್ರನನ್ನು ನೈತಿಕತೆಯ ಪ್ರಪಾತಕ್ಕೆ ತಳ್ಳಿತು. ಅದರ ಬಗ್ಗೆ ನಮ್ಮ ಗಮನ ಸದಾಕಾಲ ಇರುವುದು ಕ್ಷೇಮ.

ಈ ಕಗ್ಗದಲ್ಲಿ ಡಿ.ವಿ.ಜಿ ಇನ್ನೊಂದು ಬದುಕಿನ ಸೂತ್ರವನ್ನು ಕೊಡುತ್ತಾರೆ. ಬದುಕಿನಲ್ಲಿ ಕುತೂಹಲವನ್ನು ಕಳೆದುಕೊಳ್ಳಬಾರದು. ನಮ್ಮ ಪ್ರಪಂಚದಲ್ಲಿ ಅಗುವ, ಕಾಣುವ ಎಲ್ಲ ವಿಷಯಗಳ ಬಗ್ಗೆ ಜಿಜ್ಞಾಸುವಾಗಿ ತಿಳಿದುಕೊಳ್ಳಬೇಕು. ನಾವು ಹಸಿರು ಹುಲ್ಲನ್ನು ಕಾಣುತ್ತೇವೆ. ಅದರ ಬಣ್ಣ ಹಸಿರೆಂದು ಗೊತ್ತು. ಆದರೆ ಅದು ಹಸಿರೇ ಏಕೆ? ಕೆಂಪಲ್ಲವೇಕೆ? ಆ ಹಸಿರಿಗೆ ಆ ಬಣ್ಣ ಬಂದದ್ದು ಯಾವುದರಿಂದ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುವವರು ಅಪರೂಪ, ಅಂತೆಯೇ ದೂರದ ತಾರೆಗಳು ಮಿನುಗುವುದೇಕೆ? ಅವು ಎಷ್ಟು ದೂರ ಇವೆ? ಅವುಗಳ ನಡುವಿನ ಅಂತರವೆಷ್ಟು ಮುಂತಾದ ಪ್ರಶ್ನೆಗಳನ್ನು ನಾವೇ ಕೇಳಿಕೊಂಡು ಉತ್ತರ ಪಡೆಯಲು ಪ್ರಯತ್ನಿಸಬೇಕು. ಈ ಶೋಧನೆ ಮಾನವನ ಮೂಲಪ್ರವೃತ್ತಿ. ಅದು ಸಕಲ ಜೀವರಾಶಿಗಳ ಜೀವನದ ಅವಿಭಾಜ್ಯ ಅಂಗ. ಅದು ಅನಿವಾರ್ಯವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT