ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ಮಯತೆ

Last Updated 24 ಏಪ್ರಿಲ್ 2019, 18:59 IST
ಅಕ್ಷರ ಗಾತ್ರ

ಬನ್ನಬವಣೆಗಳ ತಾನೆನಿತೆನಿತು ಪಟ್ಟಿರೆಯು |
ಮಿನ್ನೊಮ್ಮೆ ಮತ್ತೊಮ್ಮೆ ಹೊಸ ಸಾಹಸಗಳಿಂ ||
ಸನ್ನಹಿಸುವಂ ಸುಮ್ಮನಿರಲೊಲದೆ ಮಾನವನು |
ಚಿನ್ಮಯತೆಯಾತ್ಮ ಗುಣ – ಮಂಕುತಿಮ್ಮ || 123 ||

ಪದ-ಅರ್ಥ: ಬನ್ನಬವಣೆಗಳ=ಬನ್ನ(ಭಂಗ, ಅಪಮಾನ)+ಬವಣೆಗಳ(ಕಷ್ಟಗಳ, ಭ್ರಮಣೆಗಳ), ತಾನೆನಿತೆನಿತು=ತಾನು+ಎನಿತೆನಿತು(ಎಷ್ಟೆಷ್ಟು), ಸನ್ನಹಿಸುವಂ=ಸನ್ನಾಹಮಾಡುವ, ಚಿನ್ಮಯತೆಯಾತ್ಮಗುಣ=ಚಿನ್ಮಯತೆ+ಆತ್ಮಗುಣ.
ವಾಚ್ಯಾರ್ಥ: ಅಪಮಾನ, ಬವಣೆಗಳನ್ನು ತಾನೆಷ್ಟು ಪಟ್ಟಿದ್ದರೆಯಾ ಮತ್ತೊಮ್ಮೆ, ಇನ್ನೊಮ್ಮೆ ಸುಮ್ಮನಿರಲಾರದೆ ಹೊಸ ಹೊಸ ಸಾಹಸಗಳ ಸನ್ನಾಹಗಳನ್ನು ಮಾಡುವನು ಮನುಷ್ಯ. ಈ ಚಿನ್ಮಯತೆ ಆತ್ಮದ ಗುಣ.

ವಿವರಣೆ: ಇದು ಮನುಷ್ಯ ಜನಾಂಗದ ಕಥೆ. ಥಾಮಸ್ ಅಲ್ವಾ ಎಡಿಸನ್ ವಿಜ್ಞಾನ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ವಿದ್ಯುತ್ ಬಲ್ಬನ್ನು ಅವಿಷ್ಕಾರ ಮಾಡಲು ಆತ ಎರಡು ಸಾವಿರ ಪ್ರಯೋಗಗಳನ್ನು ಮಾಡಿದನಂತೆ. ಅಷ್ಟು ಬಾರಿ ನೀವು ವಿಫಲರಾದಿರಲ್ಲ ಎಂದು ಕೇಳಿದರೆ ಆತ ಹೇಳಿದ, “ನಾನು ವಿಫಲನಾಗಿಲ್ಲ, ಯಾವ ಎರಡು ಸಾವಿರ ವಿಧಾನಗಳಲ್ಲಿ ಬಲ್ಬ ಮಾಡುವುದು ಸಾಧ್ಯವಿಲ್ಲ ಎಂಬುದನ್ನು ಕಂಡುಹಿಡಿದ್ದೇನೆ”. ಎಂತಹ ಉತ್ಸಾಹ ! ಆತನಿಗೆ ಅರವತ್ತೆಂಟು ವರ್ಷ ವಯಸ್ಸ್ಸಾದಾಗ ಅವನು ಜೀವಮಾನ ಪ್ರಯತ್ನದಿಂದ ಕಟ್ಟಿದ ಅವನ ಕಾರ್ಖಾನೆ ಸುಟ್ಟು ಭಸ್ಮವಾಯಿತು. ಅವನು ನಿರಾಶನಾಗಲಿಲ್ಲ, ಬದಲಿಗೆ ಹೇಳಿದ, “ಇದುವರೆಗೂ ನಾನು ಮಾಡಿದ ತಪ್ಪುಗಳು ಸುಟ್ಟು ಭಸ್ಮವಾದವು. ಇನ್ನು ಮೇಲೆ ತಪ್ಪಿಲ್ಲದೆ ಕಾರ್ಯ ಮಾಡುತ್ತೇನೆ”. ಅವನು ಕಂಡು ಹಿಡಿದ ವಿದ್ಯುತ್ ಬಲ್ಬು ಮನೆಗಳನ್ನು ಬೆಳಗುತ್ತಿವೆ, ಉಳಿದ ಅವಿಷ್ಕಾರಗಳು ಸಮಾಜವನ್ನು ಮುನ್ನಡೆಸಿವೆ. ರೈಟ್‌ ಸಹೋದರರ ವಿಮಾನ ಒಮ್ಮೆಲೇ ಸಾಧ್ಯವಾಯಿತೇ? ಇಲ್ಲ. ಹಲವಾರು ವಿಫಲ ಯತ್ನಗಳ ನಂತರ ಸಾಧ್ಯವಾದದ್ದು ಇಂದಿನ ವಿಮಾನ. ಒಮ್ಮೆ ಬರಡಾಗಿದ್ದ ಪ್ರದೇಶಗಳು ಕನ್ನಂಬಾಡಿಯ ಆಣೆಕಟ್ಟಿನ ನಂತರ ಸಮೃದ್ಧವಾಗಿವೆ. ಆದರೆ ಅಣೆಕಟ್ಟು ಕಟ್ಟುವುದು ಸುಲಭವಾಗಿತ್ತೇ? ವಿಶ್ವೇಶ್ವರಯ್ಯನವರು ಎದುರಿಸಿದ ಸಂಕಷ್ಟಗಳು, ಅದಕ್ಕೆ ಅವರು ಕಂಡುಕೊಂಡ ಪರಿಹಾರಗಳು, ಎಲ್ಲವೂ ದಾಖಲಾಗಿವೆ. ಗಾಂಧೀಜಿಯವರ ಜೀವನ ಹೋರಾಟದ, ಸೋಲಿನ, ಅಪಮಾನಗಳ ಸರಮಾಲೆ. ಆದರೆ ಅದಕ್ಕೆ ಕುಗ್ಗದೆ ಮತ್ತೆ ಸೆಟೆದೆದ್ದು ನಿಂತು ಎಂದೂ ಮುಳು
ಗದ ಸಾಮ್ರಾಜ್ಯವನ್ನು ಮಣಿಸಿದ್ದು ಅವರ ಜೀವನೋತ್ಸಾಹದ ದ್ಯೋತಕ.

ನಮ್ಮ ವೇದಕಾಲದ ಋಷಿಗಳ ಜೀವನ ಸುಲಭವಾಗಿರಲಿಲ್ಲ. ಕಾಡಿನ ಜೀವನ, ವೃತನಿಷ್ಠೆಯ ಬದುಕು, ಕ್ಷಣಕ್ಷಣಕ್ಕೂ ಅಪಾಯದ ನಿರೀಕ್ಷೆ. ಆದರೂ ಅವರ ಚೈತನ್ಯ ಉಡುಗಲಿಲ್ಲ. ಬದಲಾಗಿ ಭಗವಂತನನ್ನು ಅವರು ಕೇಳಿದ್ದು, ‘ನಮಗೆ ದೀರ್ಘಾಯಸ್ಸು ಕೊಡು, ನಮ್ಮ ಕಿವಿಗಳಿಗೆ ಶುಭವಾದುದೇ ಬೀಳಲಿ, ನಮ್ಮ ಬುದ್ಧಿ ಚುರುಕಾಗಿರಲಿ, ದೇಹಸಾಮರ್ಥ್ಯ ಅಮಿತವಾಗಿರಲಿ, ನಮ್ಮಿಂದ ನೂರು ನೂರು ವರ್ಷ ಹೊಸಕಾರ್ಯಗಳನ್ನು ಮಾಡಿಸಿಕೊಳ್ಳಿ’. ಇದು ಮಾನವರ ಜಯಶ್ರದ್ಧೆಯ ಮನೋವೃತ್ತಿ. ಸಾಧಕರಿಗೆ ಪೆಟ್ಟುಕೊಡುವ, ಅವರನ್ನು ಪರೀಕ್ಷಿಸುವ, ಕುಸಿಯುವಂತೆ ಮಾಡುವ ಅನೇಕ ಅಡೆತಡೆಗಳಿದ್ದವು. ಪ್ರಕೃತಿಯ ರೌದ್ರ, ಮನುಷ್ಯನ ಕ್ಷುದ್ರತೆ, ನಿರಾಸೆ, ದುರ್ಭಿಕ್ಷ, ರೋಗ, ಸಾವು, ಶತ್ರುಭಯ ಇವೆಲ್ಲ ಅವರನ್ನು ತಡೆದು ನಿಲ್ಲಿಸಿದಷ್ಟೂ ಜೀವನಾಕಾಂಕ್ಷೆಯ ಚಿಗುರು ಪುಟದೆದ್ದು ನಿಂತಿದೆ. ಅದರಿಂದಲೇ ಪ್ರಪಂಚದ ಬೆಳವಣಿಗೆಯಾಗಿದೆ.

ಇದನ್ನೇ ಈ ಕಗ್ಗ ಸಾರವತ್ತಾಗಿ ಹೇಳುತ್ತದೆ. ಎಷ್ಟೆಷ್ಟೋ ಕಷ್ಟಗಳನ್ನು ಅಪಮಾನಗಳನ್ನು ಪಟ್ಟರೂ ಪ್ರತಿಬಾರಿ ಇನ್ನೊಮ್ಮೆ, ಮತ್ತೊಮ್ಮೆ ಹೊಸ ಹೊಸ ಸಾಹಸಕ್ಕೆ ಸನ್ನಾಹಮಾಡುತ್ತಾನೆ ಮನುಷ್ಯ. ಅವನು ಸುಮ್ಮನಿರದಿರುವುದು ಚಿನ್ಮಯತೆ, ಸತ್, ಚಿತ್ ಮಯತೆ. ಇದೇ ಆತ್ಮದಗುಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT