ಪರೀಕ್ಷಿಸದ ಮಾತು ತಂದ ಅನಾಹುತ

7

ಪರೀಕ್ಷಿಸದ ಮಾತು ತಂದ ಅನಾಹುತ

ಗುರುರಾಜ ಕರಜಗಿ
Published:
Updated:

ಬ್ರಹ್ಮದತ್ತ ಕಾಶಿಯ ರಾಜನಾಗಿದ್ದಾಗ ಬೋಧಿಸತ್ವ ಕಾಡಿನಲ್ಲಿ ಬಲಶಾಲಿಯಾದ ಸಿಂಹವಾಗಿ ಜನಿಸಿದ್ದ. ಸಮುದ್ರ ತೀರದ ಕಾಡಿನಲ್ಲಿ ಸಾಕಷ್ಟು ತಾಳೆ ಮರಗಳು, ಬಿಲ್ವ ವೃಕ್ಷಗಳು ಇದ್ದವು. ಒಂದು ದಿನ ಮಧ್ಯಾಹ್ನ ಒಂದು ಮೊಲ ಬಿಲ್ವ ಮರದ ಕೆಳಗೆ ಮಲಗಿತ್ತು. ಅದಕ್ಕೊಂದು ಯೋಚನೆ ಬಂತು.

‘ಈಗ ಏನಾದರೂ ಭೂಮಿ ಅದುರಿ ಸೀಳಿ ಹೋದರೆ ನನ್ನ ಗತಿ ಏನು?’ ಅದು ಹಾಗೆ ಯೋಚಿಸುತ್ತಿರುವಾಗಲೇ ಪಕ್ವವಾದ ಬೇಲದ ಹಣ್ಣು ಠಪ್ಪನೇ ಅದರ ಮುಂದೆಯೇ ಬಿತ್ತು. ‘ಅಯ್ಯೋ, ನಾನು ಅಂದುಕೊಂಡ ಹಾಗೆಯೇ ಭೂಮಿ ಬಿರಿಯುತ್ತಿದೆ, ಮರಗಳು ಬೀಳುತ್ತಿವೆ. ಇಲ್ಲಿ ಇರುವುದು ಅಪಾಯ’ ಎಂದು ಗಾಬರಿಯಿಂದ ಓಡತೊಡಗಿತು.

ದಾರಿಯಲ್ಲಿ ಎದುರಾದ ಮತ್ತೊಂದು ಮೊಲ ಕಾರಣ ಕೇಳಿದಾಗ, ‘ಈಗ ಸಮಯವಿಲ್ಲ, ಭೂಮಿ ಬಿರಿಯುತ್ತಿದೆ, ನಾನೇ ನೋಡಿದೆ, ಓಡು’ ಎಂದು ಮತ್ತಷ್ಟು ವೇಗವಾಗಿ ಓಡಿತು. ಆ ಮೊಲವೂ ಇದನ್ನು ಹಿಂಬಾಲಿಸಿತು. ಹತ್ತು ನಿಮಿಷದಲ್ಲಿ ಈ ಸುದ್ದಿ ಒಂದರಿಂದ ಮತ್ತೊಂದಕ್ಕೆ ಹರಡಿ ನೂರಾರು ಮೊಲಗಳು ಗಾಬರಿಯಿಂದ ಓಡತೊಡಗಿದವು. ಈ ಕೋಲಾಹಲವನ್ನು ಕಂಡ ಉಳಿದ ಪ್ರಾಣಿಗಳು, ನರಿಗಳು, ತೋಳಗಳು, ಕರಡಿಗಳು, ಕಾಡುಕೋಣಗಳೂ ಅದೇ ದಿಕ್ಕಿಗೆ ಹಾರಿ ಹಾರಿ ಓಡಲಾರಂಭಿಸಿದವು. ಆರಾಮವಾಗಿ ನಿದ್ರೆ ಮಾಡುತ್ತಿದ್ದ ಆನೆಗಳು ಕುತೂಹಲದಿಂದ ಇದನ್ನು ನೋಡಿ, ‘ಯಾಕೆ ಓಡುತ್ತಿದ್ದೀರಿ’ ಎಂದು ಕೇಳಿದವು. ಆಗ ಕಾಡುಕೋಣಗಳು, ‘ನೀವೂ ಓಡಿ, ಮಾತನಾಡಲು ಸಮಯವಿಲ್ಲ’ ಎಂದು ವೇಗವಾಗಿ ಮುನ್ನುಗ್ಗಿದವು. ಇಷ್ಟೊಂದು ಪ್ರಾಣಿಗಳು ಹೋಗುತ್ತಿದ್ದರೆ ವಿಷಯ ಸತ್ಯವಾಗಿರಬೇಕು ಎಂದುಕೊಂಡು ಅವೂ ಹಿಂಡು ಹಿಂಡಾಗಿ ಓಡಿದವು.

ನಂತರ ಹುಲಿಗಳು, ಸಿಂಹಗಳೂ ಇವುಗಳನ್ನು ಹಿಂಬಾಲಿಸಿದವು. ಬೋಧಿಸತ್ವ ಸಿಂಹ ಇದನ್ನು ಗಮನಿಸಿ, ‘ಈ ಪ್ರಾಣಿಗಳು ಯಾವುದೋ ಸುದ್ದಿಯನ್ನು ಕೇಳಿ ಗಾಬರಿಯಿಂದ ಓಡುತ್ತಿವೆ. ನಾನು ಇದನ್ನು ತಡೆಯದಿದ್ದರೆ ಅನಾಹುತವಾಗುತ್ತದೆ’ ಎಂದುಕೊಂಡು ತನ್ನ ಬಲವನ್ನೆಲ್ಲ ಹಾಕಿ ಎಲ್ಲ ಪ್ರಾಣಿಗಳಿಗಿಂತ ವೇಗವಾಗಿ ಓಡುತ್ತ ಬೆಟ್ಟದ ಇಳಿಜಾರಿನಲ್ಲಿ ಹೋಗಿ ಇವುಗಳ ಮಾರ್ಗಕ್ಕೆ ಅಡ್ಡವಾಗಿ ನಿಂತಿತು. ಗಾಬರಿಯಾಗಿದ್ದ ಪ್ರಾಣಿಗಳು ಇದನ್ನು ನೋಡಲೇ ಇಲ್ಲ. ಆಗ ಸಿಂಹ ಭಯಂಕರವಾಗಿ ಘರ್ಜಿಸಿ, ‘ನಿಲ್ಲಿ’ ಎಂದಿತು. ಪ್ರಾಣಿಗಳು ಗಕ್ಕನೇ ನಿಂತವು.

‘ಯಾಕೆ ಹೀಗೆ ಹುಚ್ಚರಂತೆ ಓಡುತ್ತಿದ್ದೀರಿ?’ ಕೇಳಿತು ಬೋಧಿಸತ್ವ ಸಿಂಹ. ‘ಭೂಮಿ ಬಿರಿದು ಹೋಳಾಗುತ್ತಿದೆ’ ಎಂದವು ಹುಲಿ, ಸಿಂಹಗಳು. ‘ಅದನ್ನು ಕಂಡವರಾರು?’ ಘರ್ಜಿಸಿತು ಸಿಂಹ. ಅದನ್ನು ಕಂಡದ್ದು ಆನೆಗಳು ಎಂದವು ಹುಲಿಸಿಂಹಗಳು. ಇಲ್ಲ, ಅದನ್ನು ಕಂಡದ್ದು ಕೋಣಗಳು ಎಂದವು ಆನೆಗಳು. ಕರಡಿಗೆ ಗೊತ್ತು ಎಂದು ಕೋಣಗಳು, ನರಿ ತೋಳಗಳಿಗೆ ಗೊತ್ತು ಎಂದು ಕರಡಿಗಳು, ಜಿಂಕೆಗಳಿಗೆ ತಿಳಿದಿದೆ ಎಂದು ನರಿತೋಳಗಳು, ಮೊಲಗಳೇ ಕಂಡದ್ದು ಎಂದು ಜಿಂಕೆಗಳು ಹೇಳಿದವು. ನಿಮ್ಮಲ್ಲಿ ಯಾರು ಕಂಡದ್ದು? ಎಂದು ಗುಡುಗಿತು ಸಿಂಹ.

ಎಲ್ಲ ಮೊಲಗಳೂ ಒಂದೇ ಮೊಲವನ್ನು ತೋರಿಸಿದವು. ಸಿಂಹ ಮೊಲವನ್ನು ಹೆಗಲ ಮೇಲೆ ಹೊತ್ತುಕೊಂಡು ಬಿಲ್ವ ಮರದ ಕೆಳಗೆ ಬಂದಿತು. ಅಲ್ಲಿ ಬಿದ್ದಿದ್ದು ಒಂದು ಬೇಲದ ಹಣ್ಣು ಎಂದು ತೋರಿಸಿ, ಭೂಮಿ ಬಿರಿಯುತ್ತಿಲ್ಲ ಎಂದು ಖಾತ್ರಿ ಪಡಿಸಿದಾಗ ಎಲ್ಲ ಪ್ರಾಣಿಗಳು ನಿರಾಳವಾಗಿ ಮರಳಿ ತಮ್ಮ ಸ್ಥಾನಗಳಿಗೆ ತೆರಳಿದವು.

ನಮ್ಮ ಬದುಕಿನಲ್ಲೂ ಸುದ್ದಿಗಳು ಬರುತ್ತಲೇ ಇರುತ್ತವೆ. ಬಹಳಷ್ಟು ಬಾರಿ ಋಣಾತ್ಮಕವಾದ ವಿಷಯಗಳೇ ಹೆಚ್ಚು ರೋಚಕವಾಗಿ, ನಂಬಲರ್ಹವಾದಂತೆ ತೋರುತ್ತವೆ. ಈ ಗಾಳಿಸುದ್ದಿಗಳು ಬಲವಾಗಿ ಸುಂಟರಗಾಳಿಯಾಗಿ ಮಹಾ ಆಪತ್ತುಗಳನ್ನೇ ತರುತ್ತವೆ. ಆಗ ನಾಯಕರು ಗಟ್ಟಿಯಾಗಿ ನಿಂತು ಅದರ ನಿವಾರಣೆ ಮಾಡಿದಾಗ ಮತ್ತೆ ಶಾಂತಿ ನೆಲೆಸುತ್ತದೆ.

ಬರಹ ಇಷ್ಟವಾಯಿತೆ?

 • 28

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !