ಶನಿವಾರ, ಜೂನ್ 6, 2020
27 °C

ಶರೀರ ಚೈತನ್ಯ ತುಂಬಿದ ಮಣ್ಣು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಗಾಳಿ ಮಣ್ಣುಂಡೆಯೊಳಹೊಕ್ಕು ಹೊರಹೊರಳಲದು|
ಆಳೆನಿಪುದಂತಾಗದಿರೆ ಬರಿಯ ಹೆಂಟೆ||
ಬಾಳೇನು ಧೂಳು ಸುಳಿ, ಮರತಿಕ್ಕಿದುರಿಯ ಹೊಗೆ|
ಕ್ಷ್ಪೇಳವೇನಮೃತವೇಂ? - ಮಂಕುತಿಮ್ಮ ||9||

ಮಣ್ಣುಂಡೆಯೊಳಹೊಕ್ಕು - ಮಣ್ಣು +ಉಂಡೆ +ಒಳ +ಹೊಕ್ಕು, ಆಳೆನಿಪುದಂತಾಗದಿರೆ = ಆಳು (ಮನುಷ್ಯ) + ಎನಿಪುದು (ಎನ್ನಿಸುವುದು) +ಅಂತಾಗದಿರೆ (ಹಾಗೆ ಆಗದಿದ್ದರೆ), ತಿಕ್ಕಿದುರಿಯ = ತಿಕ್ಕಿದ + ಉರಿಯ, ಕ್ಷ್ಪೇಳವೇನಮೃತವೇಂ = ಕ್ಷ್ಪೇಳವೇನು (ವಿಷವೇನು) + ಅಮೃತವೇನು

ವಾಚ್ಯಾರ್ಥ: ಮಣ್ಣಿನ ಉಂಡೆಯಲ್ಲಿ (ದೇಹದಲ್ಲಿ) ಚೈತನ್ಯದ ಗಾಳಿ ಹೊಕ್ಕಾಗ ಅದೊಂದು ಜೀವಿಯಾಗುತ್ತದೆ. ಹಾಗೆ ಚೈತನ್ಯದ ಪ್ರವೇಶವಾಗದಿದ್ದರೆ ಅದೊಂದು ಮಣ್ಣಿನ ಮುದ್ದೆ, ಗಾಳಿ ಸೃಷ್ಟಿಸಿದ ದೂಳಿನ ಸುಳಿ, ಮರ ಮತ್ತೊಂದು ಮರವನ್ನು ತಿಕ್ಕಿದಾಗ ಬರುವ ಉರಿಯ ಹೊಗೆ. ಇದಕ್ಕೆ ವಿಷವಾದರೂ ಅಷ್ಟೇ, ಅಮೃತವಾದರೂ ಅಷ್ಟೇ.

ವಿವರಣೆ: ಈ ಕಗ್ಗ ಬಹು ಸುಂದರವಾದ ತತ್ವವನ್ನು ಕುರಿತು ಹೇಳುತ್ತದೆ. ನಮ್ಮ ಶರೀರ ಪಂಚಭೂತಗಳಿಂದ ಆದದ್ದು. ಮಣ್ಣು ಕೂಡ ಅವುಗಳಿಂದಲೇ ಸೃಷ್ಟಿಯಾದದ್ದು. ಆದ್ದರಿಂದ ಈ ದೇಹವೂ ಒಂದು ಮಣ್ಣಿನ ಮುದ್ದೆಯೇ ಸರಿ. ದೇಹ ಅಥವಾ ಶರೀರವೆಂಬ ಈ ಮಣ್ಣಿನ ಉಂಡೆಯಲ್ಲಿ ಚೈತನ್ಯವೆಂಬ ಗಾಳಿ ಒಳಸೇರಿದಾಗ ಅದೊಂದು ಜೀವಂತ ವ್ಯಕ್ತಿಯಾಗುತ್ತದೆ, ಚಲನಶೀಲವಾಗುತ್ತದೆ. ಅಂತೆಯೇ ಕ್ರಿಯಾಶೀಲವಾಗುತ್ತದೆ, ಮನುಷ್ಯ ಎಂದು ಕರೆಸಿಕೊಳ್ಳುತ್ತದೆ. ಹಾಗೆ ಶರೀರದಲ್ಲಿ ಚೈತನ್ಯದ ಪ್ರವೇಶವಾಗದಿದ್ದರೆ ಅಥವಾ ಪ್ರವೇಶವಾಗಿದ್ದ ಚೈತನ್ಯ ಶರೀರವನ್ನು ತೊರೆದು ಹೋದರೆ ಅದು ಜಡವಾಗುತ್ತದೆ, ಶವ, ಹೆಣ ಎನ್ನಿಸಿಕೊಳ್ಳುತ್ತದೆ. ಅಂಥ ದೇಹ ಸ್ವತಃ ಏನನ್ನೂ ಮಾಡಲಾರದು. ಅದು ಮತ್ತೆ ಕೊಳೆತು ಪಂಚಭೂತಗಳಲ್ಲಿ ಸೇರಿಕೊಳ್ಳುತ್ತದೆ. ಅದು ಆಗ ಕೇವಲ ಮಣ್ಣಿನ ಹೆಂಟೆ ಇದ್ದ ಹಾಗೆ.

ಡಿ.ವಿ.ಜಿ ಕೇಳುತ್ತಾರೆ, ಹಾಗಾದರೆ ಆ ಬಾಳು ಎಂದರೇನು? ಗಾಳಿ ಬಿಟ್ಟಾಗ ಮೇಲೆದ್ದ ದೂಳು ಎದ್ದು ಸುಳಿದಾಡಿದಂತೆಯೇ? ಆ ದೂಳಿನ ಸುಳಿಗೂ ಚಲನಶೀಲತೆ ಇದೆ, ಅದರೊಳಗೂ ಚೈತನ್ಯವಿದೆ. ಅಥವಾ ಘನವಾದ ಕಾಡಿನಲ್ಲಿ ಮರಗಳ ಕೊಂಬೆಗಳು ಒಂದಕ್ಕೊಂದು ರಭಸದಿಂದ ಉಜ್ಜಿದಾಗ ಬೆಂಕಿ ಹುಟ್ಟಿ ಹೊಗೆ ಹರಡುತ್ತದೆ. ಅಲ್ಲಿ ಸಾಕಷ್ಟು ಬಿಸಿ ಇದೆ. ಬದುಕಿನ ಲಕ್ಷಣಗಳು ಉಸಿರಾಟದ ಗಾಳಿ ಮತ್ತು ಬಿಸಿ ಅಥವಾ ಬೆಚ್ಚಗಿರುವಿಕೆ ಎನ್ನುವುದಾದರೆ ದೂಳಿನ ಸುಳಿಯನ್ನು ಅಥವಾ ಮರಗಳ ತಿಕ್ಕುವಿಕೆಯಿಂದಾದ ಬಿಸುಪನ್ನೇ ಬದುಕು ಎನ್ನಲಾದೀತೇ? ದೂಳಿನ ಸುಳಿಯಲ್ಲಿ ಗಾಳಿ ಇದೆ, ಮರದ ತಿಕ್ಕಾಟದಲ್ಲಿ ಬಿಸಿ ಇದೆ. ಆದರೆ ಅದು ಜೀವನವಲ್ಲ. ಈ ಬದುಕು ವಿಷವೂ ಅಲ್ಲ, ಅಮೃತವೂ ಅಲ್ಲ. ಅದೊಂದು ಪ್ರಯೋಜನಕಾರಿಯಲ್ಲದ ಚಟುವಟಿಕೆ. ಹಾಗಾದರೆ ನಮ್ಮ ಸಾರ್ಥಕ ಬದುಕು ಇದಕ್ಕಿಂತ ಭಿನ್ನವಾಗುವುದು ಹೇಗೆ? ಅದನ್ನೇ ಮೊದಲನೆಯ ಸಾಲಿನಲ್ಲೇ ಡಿ.ವಿ.ಜಿ ಸೂಚ್ಯವಾಗಿ ಹೇಳುತ್ತಾರೆ. ಗಾಳಿ ಈ ಮಣ್ಣಿನ ಉಂಡೆಯಲ್ಲಿ ಒಳಹೊಕ್ಕು ಹೊರಹೊರಳಿದಾಗ ಒಂದು ಜೀವವಾಗುತ್ತದೆ. ಪರಮಾತ್ಮನೆಂಬ ಚೈತನ್ಯ ನಮ್ಮ ಶರೀರವನ್ನೆಲ್ಲ ವ್ಯಾಪಿಸಿದಾಗ (ಹೊರಹೊರಳಿದಾಗ) ದೇಹವೆಂಬ ಪಾತ್ರೆಯಲ್ಲಿ ಅಮೃತ ಸಿಂಚನವಾಗುತ್ತದೆ. ಆ ಚೈತನ್ಯ ಕೇವಲ ಗಾಳಿ ಹಾಗೂ ಬಿಸಿ ಅಲ್ಲ. ಅದೊಂದು ಪರಮ ಚೈತನ್ಯದ ಸ್ಫುರಣೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.