ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿಯಿಡೀ ಸೊಳ್ಳೆ ಕಚ್ಚಿಸಿಕೊಂಡರೂ ಖುಷಿ

ಬಿಜೆಪಿ ಮುಖಂಡರ ದಲಿತರ ಮನೆ ವಾಸ್ತವ್ಯಕ್ಕೆ ಸಚಿವೆ ಸಮರ್ಥನೆ
Last Updated 4 ಮೇ 2018, 22:17 IST
ಅಕ್ಷರ ಗಾತ್ರ

ಲಖನೌ: ಗ್ರಾಮಗಳಿಗೆ ಭೇಟಿ ನೀಡಿ ದಲಿತರ ಮನೆಗಳಲ್ಲಿ ಊಟ ಮತ್ತು ವಾಸ್ತವ್ಯ ಮಾಡುವ ಬಿಜೆಪಿ ಮುಖಂಡರು ‘ರಾತ್ರಿಯಿಡೀ ಸೊಳ್ಳೆ ಕಡಿತ ಸಹಿಸಿಕೊಳ್ಳುತ್ತಾರೆ. ಈ ಬಗ್ಗೆ ಅವರಿಗೆ ಬಹಳ ಖುಷಿ ಇದೆ’ ಎಂದು ಉತ್ತರ ಪ್ರದೇಶದ ಪ್ರಾಥಮಿಕ ಶಿಕ್ಷಣ ಸಚಿವೆ ಅನುಪಮ ಜೈಸ್ವಾಲ್ ಹೇಳಿದ್ದಾರೆ.

ಆದರೆ ದಲಿತರು, ಹಿಂದುಳಿದ ವರ್ಗದವರನ್ನು ತಲುಪುವ ಆಡಳಿತಾರೂಢ ಪಕ್ಷದ ಈ ಕಾರ್ಯಕ್ರಮಕ್ಕೆ ಬಹುಜನ ಸಮಾಜವಾದಿ ಪಕ್ಷವಷ್ಟೇ ಅಲ್ಲದೆ ಸಂಸದ ಉದಿತ್ ರಾಜ್ ಸೇರಿದಂತೆ ಬಿಜೆಪಿಯ ಕೆಲವು ನಾಯಕರಿಂದ ವಿರೋಧ ವ್ಯಕ್ತವಾಗುತ್ತಿದೆ.

ಸರ್ಕಾರದ ಯೋಜನೆಗಳು ಸಮಾಜದ ಬಡವರ್ಗದವರನ್ನು ತಲುಪುತ್ತಿವೆಯೇ ಎನ್ನುವುದನ್ನು ಪರಿಶೀಲಿಸಲು ಹಾಗೂ ಆ ಕುರಿತು ಮಾಹಿತಿ ನೀಡಲು ಪಕ್ಷದ ನಾಯಕರು ದಲಿತರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಜೈಸ್ವಾಲ್ ಹೇಳಿದ್ದಾರೆ.‌

‘ಗ್ರಾಮದಲ್ಲಿ ಎರಡು ಸಭೆಗಳನ್ನು ನಡೆಸಲು ಅವಕಾಶ ದೊರಕಿದರೆ ಅಂತಹ ನಾಲ್ಕು ಸಭೆಗಳನ್ನು ನಡೆಸಲು ಸಚಿವರು ಬಯಸುತ್ತಾರೆ’ ಎಂದೂ ತಿಳಿಸಿದ್ದಾರೆ.

ಪಕ್ಷದ ನಾಯಕರಿಂದಲೇ ವಿರೋಧ:  ‘ದಲಿತರ ಮನೆಗಳಲ್ಲಿ ಆಹಾರ ಸೇವಿಸುವುದು ಹಾಗೂ ರಾತ್ರಿ ವಾಸ್ತವ್ಯ ಹೂಡುವುದು ದಲಿತರ ಕುಟುಂಬಗಳನ್ನು ಸಶಕ್ತಗೊಳಿಸುವುದಿಲ್ಲ ಹಾಗೂ ರಾಜಕಾರಣಿಗಳಿಗೂ ಲಾಭವಿಲ್ಲ. ರಾಹುಲ್ ಗಾಂಧಿ ಇದಕ್ಕೆ ಉತ್ತಮ ನಿದರ್ಶನ. ಅವಶ್ಯಕತೆ ಇರುವ ದಲಿತರಿಗೆ ಆಹಾರ, ಬಟ್ಟೆ, ವಸತಿ, ಉದ್ಯೋಗ ಹಾಗೂ ಚಿಕಿತ್ಸೆಯ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಬಿಜೆಪಿ ಸಂಸದ ಉದಿತ್ ರಾಜ್ ಟ್ವೀಟ್ ಮಾಡಿದ್ದಾರೆ.

**

ಅಶಕ್ತ ವರ್ಗದವರಿಗೆ ಅವಮಾನ

ದಲಿತರ ಮನೆಗಳಿಗೆ ಹೋಗುತ್ತಿರುವ ರಾಜಕಾರಣಿಗಳು, ಆಹಾರ, ಪಾತ್ರೆ ಹಾಗೂ ಆಹಾರ ಬಡಿಸುತ್ತಿರುವವರನ್ನು ಸಹ ಹೊರಗಿನಿಂದ ಕರೆದು ತರುತ್ತಿರುವುದು ದುರ್ಬಲ ವರ್ಗದವರಿಗೆ ಮಾಡುತ್ತಿರುವ ‘ಅವಮಾನ’ ಎಂದು ಬಿಜೆಪಿ ಸಂಸದೆ ಸಾಧ್ವಿ ಸಾವಿತ್ರಿ ಬಾಯಿ ಫುಲೆ ‍ತಿಳಿಸಿದ್ದಾರೆ.

‘ರಾಜಕಾರಣಿಗಳು ದಲಿತರ ಮನೆಗಳಿಗೆ ಭೇಟಿ ನೀಡುವ ಪದ್ಧತಿಯನ್ನು ನಾನು ಒಪ್ಪುವುದಿಲ್ಲ. ಜಾತಿ ವ್ಯವಸ್ಥೆಗೆ ವಿರುದ್ಧವಾಗಿದ್ದ ಭೀಮರಾವ್ ಅಂಬೇಡ್ಕರ್ ಅವರನ್ನು ಅನುಸರಿಸುವವರು, ರಾಜಕೀಯ ಉದ್ದೇಶಕ್ಕೆ ಜಾತಿ ಬಳಸಿಕೊಳ್ಳಬಾರದು. ದಲಿತರ ಮನೆಗಳಲ್ಲಿನ ಭೋಜನವನ್ನು  ಮಾತ್ರ ಏತಕ್ಕಾಗಿ ವೈಭವೀಕರಿಸಬೇಕು? ಇತರೆ ಜಾತಿಯವರ ಮನೆಗಳಲ್ಲಿನ ಇಂತಹದೇ ಕಾರ್ಯಕ್ರಮಗಳನ್ನು ಏಕೆ ಮಾಧ್ಯಮದಲ್ಲಿ ತೋರಿಸುವುದಿಲ್ಲ’ ಎಂದು ಫುಲೆ ಪ್ರಶ್ನಿಸಿದ್ದಾರೆ.

**

ಪ್ರತ್ಯೇಕ ಆಹಾರ ತಂದಿದ್ದ ಸಚಿವ

ಕಳೆದ ವಾರ ಅಲಿಗಡದಲ್ಲಿ ದಲಿತರ ಮನೆಯಲ್ಲಿ ಏರ್ಪಡಿಸಲಾಗಿದ್ದ ಭೋಜನಕ್ಕೆ ಸಚಿವ ಸುರೇಶ್ ರಾಣಾ ಅವರು ತಾವೇ ಆಹಾರ, ನೀರು ತಂದುಕೊಂಡಿದ್ದರು ಎನ್ನುವ ವರದಿ ಪ್ರಕಟವಾಗಿತ್ತು.

ಇದನ್ನು ನಿರಾಕರಿಸಿದ್ದ ಅವರು, ‘ಆಹಾರ ಗ್ರಾಮದಲ್ಲಿ, ಗ್ರಾಮಸ್ಥರಿಂದಲೇ ಸಿದ್ಧವಾಗಿತ್ತು’ ಎಂದು ಹೇಳಿದ್ದರು.

**

ದಲಿತರನ್ನು ತಲುಪುವ ಕಾರ್ಯಕ್ರಮದಿಂದ ಅವರಲ್ಲಿ ಮತ್ತಷ್ಟು ಕೀಳರಿಮೆ ಉಂಟು ಮಾಡಿದಂತಾಗುತ್ತದೆ. ಪಕ್ಷಕ್ಕೂ ಯಾವುದೇ ಚುನಾವಣಾ ಲಾಭವಿಲ್ಲ.

–ಉದಿತ್ ರಾಜ್, ಬಿಜೆಪಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT