ಮೂರ್ಖರ ಉಪಕಾರ

7

ಮೂರ್ಖರ ಉಪಕಾರ

ಗುರುರಾಜ ಕರಜಗಿ
Published:
Updated:

ವಾರಣಾಸಿಯಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ನಗರದಲ್ಲಿ ಉತ್ಸವವನ್ನು ಸಾರಿದರು. ಅದು ಪ್ರತಿವರ್ಷ ಅದೇ ದಿನ ನಡೆಯುವ ಬೃಹತ್ ಉತ್ಸವ. ಊರಿನಲ್ಲೆಲ್ಲ ಡಂಗುರ ಸಾರಲಾಯಿತು. ನಗರ ನಿವಾಸಿಗಳೆಲ್ಲ ಹರ್ಷದಿಂದ ಕುಣಿದಾಡಿದರು. ಎಲ್ಲರೂ ಹೊಸಬಟ್ಟೆಗಳನ್ನು ಕೊಂಡುಕೊಳ್ಳುವುದೇನು, ತರತರಹದ ತಿಂಡಿಗಳನ್ನು ಮಾಡುವುದೇನು, ಮನೆಗಳನ್ನು ಸಿಂಗರಿಸುವುದೇನು! ಇಡೀ ನಗರವೇ ಸಂಭ್ರಮದ ಜೋಕಾಲಿಯಲ್ಲಿ ತೇಲಾಡತೊಡಗಿತು.

ನಾಟಕಕಾರರು ನಾಟಕಗಳನ್ನು ಸಿದ್ಧಪಡಿಸಿದರು. ನೃತ್ಯಪಟುಗಳು ಸುಂದರ ನೃತ್ಯಗಳನ್ನು ಸಂಯೋಜನೆ ಮಾಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಂದಿರಗಳು ಸಿದ್ಧವಾದವು. ನಗರದ ಸುತ್ತಮುತ್ತಲಿನ ಜನರೆಲ್ಲ ಉತ್ಸವಕ್ಕೆಂದು ನಗರಕ್ಕೆ ಹೋಗಲು ಸಿದ್ಧತೆ ಮಾಡತೊಡಗಿದರು.

ನಗರದ ಹೊರಗಿದ್ದ ರಾಜೋದ್ಯಾನದಲ್ಲಿದ್ದ ಉದ್ಯಾನಪಾಲಕರಿಗೆ ತಾವೂ ನಗರಕ್ಕೆ ಹೋಗಿ ಉತ್ಸವದಲ್ಲಿ ಭಾಗವಹಿಸಬೇಕೆಂಬ ಇಚ್ಛೆ ಬಲವಾಗತೊಡಗಿತು. ಆದರೆ ಉದ್ಯಾನವನ್ನು ಬಿಟ್ಟು ಎಲ್ಲರೂ ಹೋಗಿ ಬಿಟ್ಟರೆ ಉದ್ಯಾನ ಹಾಳಾಗಿ ಹೋಗುತ್ತದೆ. ರಾಜನಿಗೆ ಈ ವಿಷಯ ತಿಳಿದರೆ ಅಥವಾ ಅವನೇ ರಾಜೋದ್ಯಾನಕ್ಕೆ ಬಂದುಬಿಟ್ಟರೆ ಅವನು ಕೋಪಗೊಂಡು ಕೆಲಸದಿಂದ ತೆಗೆದುಹಾಕಿಯಾನು ಅಥವಾ ಶಿಕ್ಷೆ ಕೊಟ್ಟಾನು ಎಂದು ಹೆದರಿದರು. ಉತ್ಸವಕ್ಕೆ ಹೋಗುವ ಆಸೆ ಆದರೆ ಹೋದರೆ ತೋಟ ಹಾಳಾಗುವ ಭಯ. ಮುಖ್ಯ ಉದ್ಯಾನಪಾಲಕ ಯೋಚಿಸಿದ. ತೋಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೋತಿಗಳು ಮನೆ ಮಾಡಿಕೊಂಡಿದ್ದವು. ಅವುಗಳಿಗೆ ಉದ್ಯಾನದ ಜವಾಬ್ದಾರಿಯನ್ನು ಒಪ್ಪಿಸಿ ತಾವೆಲ್ಲ ಉತ್ಸವಕ್ಕೆ ಹೋಗಬಹುದಲ್ಲ ಎಂದು ಚಿಂತಿಸಿ ಕೋತಿಗಳ ನಾಯಕನನ್ನು ಕರೆದು ಕೇಳಿದ. ‘ನೀನು ಕಪಿಗಳ ರಾಜ. ಬರಲಿರುವ ಉತ್ಸವ ನಮಗೆಲ್ಲ ಬಹಳ ಮುಖ್ಯವಾದದ್ದು. ನಾವೆಲ್ಲ ನಗರಕ್ಕೆ ಹೋಗಿಬರುವವರೆಗೆ ಉದ್ಯಾನದ ಗಿಡಗಳಿಗೆ ನಿನ್ನ ಪಡೆಗಳಿಂದ ನೀರು ಹಾಕಿಸುತ್ತೀಯಾ?’.

ವಾನರ ರಾಜ ಹೇಳಿತು, ‘ಪಾಲಕ, ದಯಮಾಡಿ ಚಿಂತಿಸಬೇಡ. ನಮಗೆ ಉತ್ಸವದಲ್ಲಿ ಯಾವ ಆಸಕ್ತಿಯೂ ಇಲ್ಲ. ಅದಲ್ಲದೇ ನಾವು ಈ ಉದ್ಯಾನಕ್ಕೆ ಋಣಿಗಳಾಗಿದ್ದೇವೆ. ಇಲ್ಲೇ ನಮ್ಮ ವಾಸ. ನಮಗೆ ಆಹಾರ, ನೀರು ದೊರಕುವುದೂ ಇಲ್ಲಿಂದಲೇ ಆದ್ದರಿಂದ ನಾವೆಲ್ಲ ಕೃತಜ್ಞತೆಯಿಂದ ಗಿಡಗಳಿಗೆ ನೀರು ಹಾಕಿ ಬೆಳೆಸುತ್ತೇವೆ. ನೀವೆಲ್ಲ ನಿಶ್ಚಿಂತೆಯಿಂದ ಹೋಗಿ ಬನ್ನಿ’. ಉದ್ಯಾನಪಾಲಕ ಮತ್ತೆ ಹೇಳಿದ, ‘ನೋಡಿ, ನೀವೆಲ್ಲ ಸೋಮಾರಿಯಾಗಿ ಕೆಲಸ ಮರೆತುಬಿಡಬಾರದು. ಉದ್ಯಾನದಲ್ಲಿ ನೀರಿನ ಕೊರತೆ ಇರುವುದರಿಂದ ನೀರು ಪೋಲಾಗದಂತೆ ನೋಡಿಕೊಳ್ಳಿ. ನಿಮಗೆ ನೀರು ಹಾಕಲು ಬೇಕಾದ ಉಪಕರಣಗಳನ್ನು ಒಂದೆಡೆ ಇಡುತ್ತೇನೆ, ಬಳಸಿಕೊಳ್ಳಿ’. ಕಪಿರಾಜನೊಡನೆ ಉಳಿದೆಲ್ಲ ಕಪಿಗಳು ಒಪ್ಪಿಗೆ ಸೂಚಿಸಿದವು. ಎಲ್ಲ ಉದ್ಯಾನಪಾಲಕರು ನಗರಕ್ಕೆ ಹೋದರು.

ಮರುದಿನ ಕಪಿರಾಜ ಶಿಷ್ಯರನ್ನೆಲ್ಲ ಕರೆದು, ‘ಎಚ್ಚರದಿಂದ ಕೆಲಸಮಾಡಿ. ನೀರು ವ್ಯರ್ಥಮಾಡಬೇಡಿ. ಆಳವಾದ ಬೇರಿರುವ ಗಿಡಕ್ಕೆ ಹೆಚ್ಚು ನೀರು ಮತ್ತು ಆಳವಿಲ್ಲದ ಬೇರಿನ ಗಿಡಗಳಿಗೆ ಕಡಿಮೆ ನೀರು ಹಾಕಿ’ ಎಂದು ಆಜ್ಞೆ ಮಾಡಿದ. ಅವೆಲ್ಲ ತಲೆ ಅಲ್ಲಾಡಿಸಿ ಕೆಲಸಕ್ಕೆ ಹೊರಟವು. ಅವುಗಳಿಗೆ ಗಿಡಗಳ ಬೇರಿನ ಆಳ ಹೇಗೆ ತಿಳಿಯಬೇಕು? ಅವು ಒಂದೊಂದೇ ಗಿಡವನ್ನು ಕಿತ್ತು ಬೇರಿನ ಆಳವನ್ನು ನೋಡಿ ನೋಡಿ ನೀರು ಹಾಕತೊಡಗಿದವು. ಎರಡು ದಿನದಲ್ಲಿ ತೋಟದ ಎಲ್ಲ ಗಿಡಗಳೂ ನೆಲದಲ್ಲಿ ಮಲಗಿಬಿಟ್ಟವು. ಉದ್ಯಾನಪಾಲಕರು ಮರಳಿ ಬರುವಷ್ಟರಲ್ಲಿ ರಾಜೋದ್ಯಾನ ನಿರ್ನಾಮವಾಗಿ ಹೋಗಿತ್ತು. ಒಂದು ಗಿಡವೂ ಉಳಿದಿರಲಿಲ್ಲ. ಆದರೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ಮಂಗಗಳು ಏಕೆ ಹೀಗಾಯಿತು ಎಂಬುದು ತಿಳಿಯದೇ ಪಿಳಿಪಿಳಿ ಕಣ್ಣು ಬಿಡುತ್ತಿದ್ದವು.

ಮೂರ್ಖರಿಗೆ ಜವಾಬ್ದಾರಿ ಕೊಡುವಾಗ ಹೆಚ್ಚಿನ ಎಚ್ಚರವಿರಬೇಕು. ಅವರು ಉಪಕಾರ ಮಾಡಬೇಕೆಂದು ಪ್ರಯತ್ನಿಸಿದರೂ ಅವರ ಮೂರ್ಖತನದಿಂದ ಅಪಕಾರವೇ ಹೆಚ್ಚಾದೀತು.

ಬರಹ ಇಷ್ಟವಾಯಿತೆ?

 • 28

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !