ಅತಿಯಾದ ಪ್ರಾಮಾಣಿಕತೆ ಪ್ರದರ್ಶನ

7

ಅತಿಯಾದ ಪ್ರಾಮಾಣಿಕತೆ ಪ್ರದರ್ಶನ

ಗುರುರಾಜ ಕರಜಗಿ
Published:
Updated:

ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಒಂದು ಗ್ರಾಮದಲ್ಲಿ ಒಬ್ಬ ಮಹಾ ಕುಟಿಲನಾದ, ಡಾಂಭಿಕ ತಪಸ್ವಿಯಂತೆ ಮುಖವಾಡ ಹಾಕಿಕೊಂಡ ವ್ಯಕ್ತಿ ಬದುಕಿದ್ದ. ಅವನನ್ನು ಗುರುವೆಂದು ನಂಬಿ ಗೃಹಸ್ಥನೊಬ್ಬ ಶ್ರದ್ಧೆಯಿಂದ ಅವನ ಸೇವೆ ಮಾಡುತ್ತಿದ್ದ.

ಊರ ಹೊರಗೆ ಕಾಡಿನ ಬದಿಯಲ್ಲಿ ಅವನಿಗೊಂದು ಪರ್ಣಶಾಲೆಯನ್ನು ಕಟ್ಟಿಕೊಟ್ಟು ಅವನ ಊಟದ ವ್ಯವಸ್ಥೆಯನ್ನು ಸರಿಯಾಗಿ ಮಾಡುತ್ತಿದ್ದ. ಒಂದು ಬಾರಿ ಊರಿನಲ್ಲಿ ಕಳ್ಳತನವಾಗುತ್ತಿರುವುದನ್ನು ಗಮನಿಸಿ ಗೃಹಸ್ಥ ತನ್ನ ಉಳಿತಾಯದ ನೂರು ಚಿನ್ನದ ನಾಣ್ಯಗಳನ್ನು ತಪಸ್ವಿಯ ಪರ್ಣಶಾಲೆಗೆ ತಂದು ಅಲ್ಲಿಯೇ ನೆಲದಲ್ಲಿ ಮುಚ್ಚಿಟ್ಟ. ತಪಸ್ವಿಯ ಗುಡಿಸಲಿನಲ್ಲಿ ಹಣವಿದ್ದರೆ ಅದು ಭದ್ರವಾಗಿರುತ್ತದೆ ಎಂಬ ನಂಬಿಕೆ ಅವನದು.

ಆತ ತಪಸ್ವಿಗೆ ಹೇಳಿದ ‘ಸ್ವಾಮಿ, ನನ್ನ ಹಣ ತಮ್ಮ ಬಳಿ ಇದ್ದರೆ ನನಗೆ ಧೈರ್ಯ’. ಬೂಟಾಟಿಕೆಯ ತಪಸ್ವಿ, ‘ನಮಗೇನಪ್ಪ ಅದರ ಚಿಂತೆ? ನಮಗೆ ಚಿನ್ನವೂ ಒಂದೇ ಕಸವೂ ಒಂದೇ’ ಎಂದು ಹೇಳಿ ಅನಾಸಕ್ತನಂತೆ ಕುಳಿತ.

ಗೃಹಸ್ಥ ಮನೆಗೆ ಹೋದ ಮೇಲೆ ಈ ತಪಸ್ವಿ ಚಿಂತಿಸಿದ, ‘ನಾನು ಬಯಸದೇ ಬಂಗಾರ ಮನೆಗೆ ಬಂದಿದೆ. ಅದು ನನಗಾಗಿಯೇ ಬಂದಿರಬೇಕು. ಇಂದೇ ತೆಗೆದುಕೊಂಡು ಹೋದರೆ ನನ್ನ ಮೇಲೆಯೇ ಸಂಶಯ ಬರುತ್ತದೆ. ಅದಕ್ಕೆ ಸ್ವಲ್ಪ ಕಾಲ ಕಾಯುತ್ತೇನೆ’ ಎಂದುಕೊಂಡು ನಾಲ್ಕಾರು ದಿನಗಳ ನಂತರ ಚಿನ್ನದ ನಾಣ್ಯಗಳನ್ನು ತೆಗೆದುಕೊಂಡು ಒಂದು ದೂರದ ಸ್ಥಳದಲ್ಲಿ ಹೂತಿಟ್ಟು ಮರಳಿ ಬಂದ.

ಮತ್ತೆರಡು ದಿನ ಅಲ್ಲಿಯೇ ಸಂಶಯ ಬಂದಂತೆ ಇದ್ದ. ಮರುದಿನ ಗೃಹಸ್ಥನ ಮನೆಗೆ ಹೋಗಿ ಹೇಳಿದ, ‘ನೋಡಪ್ಪ ನಾನು ಇಲ್ಲಿಗೆ ಬಂದು ಬಹಳ ದಿನಗಳಾದವು. ನಾವು ಸನ್ಯಾಸಿಗಳು ಯಾವಾಗಲೂ ಒಂದೆಡೆ ಬಹಳ ದಿನ ಇರಬಾರದು. ಇದ್ದರೆ ಮೋಹ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ನಾನು ಇಂದೆಯೇ ಇಲ್ಲಿಂದ ಹೊರಡುತ್ತಿದ್ದೇನೆ. ನೀನು ಮಾಡಿದ ಸೇವೆಗೆ ಭಗವಂತ ಕೃಪೆ ಮಾಡುತ್ತಾನೆ’.

ಗೃಹಸ್ಥ ಎಷ್ಟೇ ಒತ್ತಾಯ ಮಾಡಿದರೂ ಅವನು ಕೇಳದೆ ಹೊರಟ. ಶ್ರದ್ಧೆಯಿಂದ ಸೇವೆ ಮಾಡಿದ ಗೃಹಸ್ಥ ಅವನನ್ನು ಒಲ್ಲದ ಮನಸ್ಸಿನಿಂದ ಕಳುಹಿಸಿ ಬಂದ.

ಸ್ವಲ್ಪ ದೂರ ಹೋದ ಕಪಟ ಸನ್ಯಾಸಿ ತನ್ನ ಪ್ರಾಮಾಣಿಕತೆಯನ್ನು ಇನ್ನೂ ಸಾಬೀತು ಮಾಡಬೇಕೆಂದು ತನ್ನ ಜಟೆಯಲ್ಲಿ ಒಂದು ಹುಲ್ಲಿನ ಕಡ್ಡಿಯನ್ನು ಸಿಕ್ಕಿಸಿಕೊಂಡು ಮರಳಿ ಗೃಹಸ್ಥನ ಮನೆಗೆ ಬಂದು ಹೇಳಿದ, ‘ನೋಡಪ್ಪ ನಿನ್ನ ಮನೆಯ ಈ ಹುಲ್ಲುಕಡ್ಡಿ ಆ ನನ್ನ ತಲೆಯಲ್ಲಿ ಸಿಕ್ಕಿಕೊಂಡಿತ್ತು. ನಿನ್ನ ಅಪ್ಪಣೆ ಇಲ್ಲದೇ ಒಂದು ಹುಲ್ಲುಕಡ್ಡಿಯನ್ನೂ ತೆಗೆದುಕೊಳ್ಳಬಾರದಲ್ಲವೇ?’ ಹೀಗೆ ಹೇಳಿ ಹುಲ್ಲುಕಡ್ಡಿಯನ್ನು ಕೊಟ್ಟ.

ಸನ್ಯಾಸಿಯ ಅಪರಿಗ್ರಹ ಗುಣಕ್ಕೆ ಗೃಹಸ್ಥ ಬೆರಗಾದ. ಈ ಸಮಯದಲ್ಲಿ ಪ್ರವಾಸ ಮಾಡುತ್ತಿದ್ದ ಬೋಧಿಸತ್ವ ಈ ಮನೆಯಲ್ಲಿ ತಂಗಿದ್ದ. ಈ ಸನ್ಯಾಸಿಯ ಅತಿಯಾದ ವರ್ತನೆಯನ್ನು ಕಂಡು, ‘ಈ ತಪಸ್ವಿಯ ಹತ್ತಿರ ದುಡ್ಡೇನಾದರೂ ಕೊಟ್ಟಿದ್ದೀಯಾ?” ಎಂದು ಕೇಳಿದ. ಆತ, ’ಹೌದು ನೂರು ಚಿನ್ನದ ನಾಣ್ಯಗಳನ್ನು ಅವನ ಗುಡಿಸಲಿನಲ್ಲಿ ಇಟ್ಟಿದ್ದೆ’ ಎಂದ. ಇಬ್ಬರೂ ತಕ್ಷಣವೇ ಹೋಗಿ ನೋಡಿದರೆ ಹಣ ಮಾಯವಾಗಿತ್ತು! ಬೋಧಿಸತ್ವ ಹೇಳಿದ, ‘ಬೇಗ ನಡೆ, ಆ ಕಪಟ ಸನ್ಯಾಸಿಯನ್ನು ಹಿಡಿಯೋಣ. ಅವನೇ ಕಳ್ಳ’.

ಇಬ್ಬರೂ ಓಡಿಹೋಗಿ ಸನ್ಯಾಸಿಯನ್ನು ಹಿಡಿದು, ಥಳಿಸಿ ಹಣವನ್ನು ಪಡೆದರು. ಗೃಹಸ್ಥ ಕೇಳಿದ, ‘ನಿಮಗೆ ಅವನ ಮೇಲೆ ಹೇಗೆ ಸಂಶಯ ಬಂದಿತು?‌’ ಬೋಧಿಸತ್ವ ಹೇಳಿದ, ‘ನಿಜವಾದ ಪ್ರಾಮಾಣಿಕರು ಹೀಗೆ ಅತಿಯಾದ ಪ್ರದರ್ಶನ ಮಾಡುವುದಿಲ್ಲ. ಅದು ಕಪಟಿಗಳ ವಿಧಾನ’.

ಬುದ್ಧ ಹೇಳಿದ, ‘ಅತಿಯಾಗಿ ಮಧುರವಾದ ಮಾತುಗಳನ್ನಾಡುವವರು, ವಿನಯವನ್ನು, ಪ್ರಾಮಾಣಿಕತೆಯನ್ನು ಪ್ರದರ್ಶನ ಮಾಡುವವರ ಬಗ್ಗೆ ಎಚ್ಚರವಾಗಿರಬೇಕು’. ಇಂದಿಗೂ ಆ ಮಾತು ಸತ್ಯ.

ಬರಹ ಇಷ್ಟವಾಯಿತೆ?

 • 36

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !