ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಿಡದ ಪಾಪ

Last Updated 23 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ವರ್ತಕನಾಗಿ ಜನಿಸಿದ್ದ. ಅವನ ಹೆಸರು ‘ಪಂಡಿತ’ ಎಂದಾಗಿತ್ತು. ದೊಡ್ಡವನಾದ ಮೇಲೆ ಸ್ವಂತವಾಗಿ ವ್ಯಾಪಾರ ಮಾಡುತ್ತಿದ್ದ. ಆಗ ಅವನೊಂದಿಗೆ ಇನ್ನೊಬ್ಬ ವರ್ತಕ ಪಾಲುದಾರನಾಗಿ ಸೇರಿಕೊಂಡ. ಅವನ ಹೆಸರು ‘ಅತಿಪಂಡಿತ’. ಇಬ್ಬರೂ ಸಮಾನವಾಗಿ ಬಂಡವಾಳ ಹಾಕಿ ವ್ಯಾಪಾರ ಮಾಡುತ್ತಿದ್ದರು.

ಒಮ್ಮೆ ಹೆಚ್ಚು ಬಂಡವಾಳ ಹಾಕಿ ಐದುನೂರು ಬಂಡಿಗಳಲ್ಲಿ ಸಾಮಾನು ತುಂಬಿಸಿಕೊಂಡು ಬೇರೆ ಪ್ರದೇಶಗಳಿಗೆ ಹೋಗಿ ವ್ಯಾಪಾರ ಮಾಡಿ ಹೆಚ್ಚಿನ ಲಾಭ ಪಡೆದರು. ಅತಿಪಂಡಿತ ಕುಟಿಲ ವ್ಯಕ್ತಿ. ಅವನಿಗೆ ದುರಾಸೆ ಹೆಚ್ಚು. ಹೆಚ್ಚು ಲಾಭ ಬಂದದ್ದನ್ನು ಕಂಡು, ‘ಪಂಡಿತ ಈ ಸಲ ಬಂದ ಲಾಭದಲ್ಲಿ ಒಂದು ಪಾಲು ನಿನಗೆ ಮತ್ತು ಎರಡು ಪಾಲು ನನಗೆ ದೊರೆಯಬೇಕು’ ಎಂದ. ಪಂಡಿತ, ‘ಅದು ಏಕೆ? ಇಬ್ಬರೂ ಸಮನಾದ ಬಂಡವಾಳ ಹಾಕಿದ್ದರಿಂದ ಲಾಭದಲ್ಲೂ ಸಮಪಾಲು ದೊರೆಯಬೇಕಲ್ಲವೇ?’ ಎಂದು ಕೇಳಿದ. ಅದಕ್ಕೆ ಅತಿಪಂಡಿತ, ‘ಬಂಡವಾಳವೇನೋ ಸಮಸಮವಾಗಿದೆ. ಆದರೆ ಲಾಭ ಬಂದದ್ದು ನನ್ನ ಅತಿ ಬುದ್ಧಿವಂತಿಕೆಯಿಂದ. ಆದ್ದರಿಂದ ನನಗೆ ಎರಡು ಪಾಲು ಬರಬೇಕು’ ಎಂದು ವಾದ ಮಾಡಿದ. ಆಗ ಜಗಳವಾಯಿತು.

ಅತಿಪಂಡಿತ ತನ್ನ ಮನೆಗೆ ಹೋಗಿ ವೃದ್ಧ ತಂದೆಯನ್ನು ಕರೆತಂದು ಒಂದು ದೊಡ್ಡ ವೃಕ್ಷದ ಪೊಟರೆಯೊಳಗೆ ಕೂಡ್ರಿಸಿ ಹೇಳಿದ, ‘ನಾವಿಬ್ಬರೂ ಇಲ್ಲಿಗೆ ಬಂದು ನ್ಯಾಯ ಕೇಳುತ್ತೇವೆ. ಆಗ ನೀನು ಧ್ವನಿ ಬದಲಾಯಿಸಿ ಪಂಡಿತನಿಗೆ ಒಂದು ಪಾಲು, ಅತಿಪಂಡಿತನಿಗೆ ಎರಡುಪಾಲು ಎಂದು ಹೇಳು’. ಪಾಪ! ಮುದುಕ ಮಗನ ಹೆದರಿಕೆಯಿಂದ ಒಪ್ಪಿಕೊಂಡ. ನಂತರ ಅತಿಪಂಡಿತ ಪಂಡಿತನನ್ನು ಕರೆದುಕೊಂಡು ಈ ಮರದ ಹತ್ತಿರ ಬಂದ.

‘ನೋಡಪ್ಪ ಪಂಡಿತ, ನಮ್ಮಲ್ಲಿ ವಾದ, ಜಗಳ ಬೇಡ. ಈ ವೃಕ್ಷದೇವತೆ ಅತ್ಯಂತ ಜಾಗ್ರತವಾದದ್ದು. ಅದನ್ನೇ ಕೇಳೋಣ, ಅದೇ ತೀರ್ಪು ನೀಡಲಿ’ ಎಂದ. ಏನೂ ತೋಚದೆ ಪಂಡಿತ ಒಪ್ಪಿದ. ಅತಿಪಂಡಿತ ಮರಕ್ಕೆ ಪೂಜೆ ಮಾಡಿದ ಹಾಗೆ ಮಾಡಿ ಕೇಳಿದ, ‘ಅಯ್ಯಾ ವೃಕ್ಷ ದೇವತೆ, ನಮ್ಮಲ್ಲಿ ಬಂದ ಭೇದವನ್ನು ನಿವಾರಿಸಿ ನ್ಯಾಯ ನೀಡು. ಬಂದ ಲಾಭದಲ್ಲಿ ಯಾರಿಗೆ ಎಷ್ಟು ಪಾಲು ಬರಬೇಕು?’. ಪೊಟರೆಯೊಳಗೆ ಕುಳಿತಿದ್ದ ಅತಿಪಂಡಿತನ ತಂದೆ ತನ್ನ ಧ್ವನಿಯನ್ನು ಬದಲಾಯಿಸಿಕೊಂಡು, ‘ಪಂಡಿತನಿಗೆ ಒಂದು ಪಾಲು, ಅತಿಪಂಡಿತನಿಗೆ ಎರಡು ಪಾಲು. ಇದೇ ನ್ಯಾಯ’ ಎಂದ.

ಪಂಡಿತನಿಗೆ ಬೇರೆ ದಾರಿ ಉಳಿಯಲಿಲ್ಲ. ಆದರೂ ಅವನಿಗೆ ವೃಕ್ಷದೇವತೆಯ ಮಾತಿನಲ್ಲಿ ಸಂಶಯ ಬಂತು. ಆತ ಅತಿಪಂಡಿತನಿಗೆ, ‘ಅಯ್ಯಾ ನನಗೆ ವೃಕ್ಷದೇವತೆಯ ನ್ಯಾಯದಲ್ಲಿ ನಂಬಿಕೆ ಇದೆ. ಇಂಥ ದೊಡ್ಡ ದೇವತೆಗೆ ನಾನೂ ನನ್ನ ಗೌರವ ಸಲ್ಲಿಸುತ್ತೇನೆ ಎಂದು ಸುತ್ತಮುತ್ತಲಿದ್ದ ಒಣಗಿದ್ದ ಕಂಟಿ, ಕೊಂಬೆಗಳನ್ನೆಲ್ಲ ಮರದ ಸುತ್ತಲೂ ಹಾಕಿ ಬೆಂಕಿ ಹಚ್ಚಿ. ‘ಇದು ಮರಕ್ಕೆ ನನ್ನ ಗೌರವವಾಗಿ ಈ ಯಜ್ಞವನ್ನು ಮಾಡುತ್ತೇನೆ’ ಎಂದು ಕೈ ಮುಗಿದ. ಬೆಂಕಿ ಹರಡಿ ಅತಿಪಂಡಿತನ ತಂದೆಯನ್ನು ಸುಡತೊಡಗಿತು. ಆತ ಹೌಹಾರಿ ಅರ್ಧ ಮೈಸುಟ್ಟುಕೊಂಡು ಹೊರಗೆ ಹಾರಿ ಬಂದ. ಅತಿಪಂಡಿತನ ಮೋಸ ಬಯಲಾಗಿ ಕ್ಷಮೆ ಕೇಳಿ ಸಮಪಾಲು ನೀಡಿದ.

ಬುದ್ಧ ಹೇಳಿದ, ‘ಅನ್ಯಾಯ, ಮೋಸ ಎಂದಿಗೂ ಒಳ್ಳೆಯದನ್ನು ಮಾಡುವುದಿಲ್ಲ. ಹೇಗೆ ತಂದೆ-ತಾಯಿಯರ ಪಾಪ ಮಕ್ಕಳನ್ನು ಕಾಡುತ್ತದೆಯೋ ಹಾಗೆಯೇ ಮಕ್ಕಳು ಮಾಡಿದ ಪಾಪ ತಂದೆ-ತಾಯಿಯರನ್ನು ತಟ್ಟುತ್ತದೆ. ಎಚ್ಚರವಾಗಿರಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT