ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರೀಕ್ಷಣೆಯಿಂದ ಮಾತ್ರ ಸಾಕ್ಷಾತ್ಕಾರ

Last Updated 9 ಡಿಸೆಂಬರ್ 2018, 19:09 IST
ಅಕ್ಷರ ಗಾತ್ರ

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ |
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ||
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ |
ಶಾಸ್ತ್ರಿತನದಿಂದಲ್ಲ – ಮಂಕುತಿಮ್ಮ || 65 ||

ಪದ-ಅರ್ಥ: ದೊರೆತರಿವು=ದೊರೆತ+ಅರಿವು, ಬೆಳೆದರಿವು=ಬೆಳೆದ+ಅರಿವು, ಸಾಕ್ಷಾತ್ಕಾರವಂತರೀಕ್ಷಣೆಯಿಂದ=ಸಾಕ್ಷಾತ್ಕಾರ+ಅಂತರೀಕ್ಷಣೆಯಿಂದ (ಆತ್ಮಶೋಧನೆಯಿಂದ)

ವಾಚ್ಯಾರ್ಥ: ಪುಸ್ತಕದ ಓದಿನಿಂದ ದೊರೆತ ಜ್ಞಾನ ತಲೆಯಲ್ಲಿ ತಳೆದ ಮಣಿಯಂತೆ. ಆಂತರ್ಯದಲ್ಲಿ ಬೆಳೆದಂಥ ಅರಿವು ಬಳ್ಳಿಯಲ್ಲಿ ಅರಳಿದ ಹೂವಿದ್ದಂತೆ. ವಸ್ತುವಿನ ನಿಜವಾದ ಜ್ಞಾನ ಆತ್ಮಶೋಧನೆಯಿಂದ, ಒಳನೋಟದಿಂದಲೇ ಹೊರತು ಜೀರ್ಣವಾಗದ ಜ್ಞಾನದ ಬಡಬಡಿಕೆಯಿಂದಲ್ಲ.

ವಿವರಣೆ: ಎದುರಿಗೆ ನಿಂತ ಮಹಾಶಾಸ್ತ್ರಪ್ರವೀಣ ಮಹಾಕಾಶ್ಯಪನನ್ನು ಕಂಡು ನಕ್ಕ ಬುದ್ಧ. ಯಾಕೆಂದು ಕೇಳಿದರೆ ಆತ ಹೇಳಿದ, ‘ಒಂದು ಹಳ್ಳಿಯಲ್ಲಿ ನಾನೊಬ್ಬ ಮುದುಕನನ್ನು ಕಂಡಿದ್ದೆ. ಆತ ಮನೆಯ ಮುಂದೆ ಕುಳಿತು ಕಾಡಿಗೆ ಮೇಯಲು ಹೋಗುತ್ತಿದ್ದ ಹಸು, ದನ, ಕುರಿ, ಆಡುಗಳ ಸಂಖ್ಯೆಗಳನ್ನು ಎಣಿಸಿ ಇಟ್ಟುಕೊಳ್ಳುತ್ತಿದ್ದ. ಸಂಜೆ ಅವು ಮರಳುವಾಗ ಮತ್ತೆ ಅವುಗಳನ್ನು ತಪ್ಪದೇ ಎಣಿಸುತ್ತಿದ್ದ. ನಾನು ಆ ಎಲ್ಲ ಪ್ರಾಣಿಗಳು ನಿನ್ನವೇ? ಎಂದು ಕೇಳಿದೆ. ಅವುಗಳಲ್ಲಿ ಒಂದೂ ತನ್ನದಲ್ಲವೆಂದು ಆತ ತಿಳಿಸಿದ. ನಿನ್ನನ್ನು ನೋಡಿದಾಗ ನನಗೆ ಅವನ ನೆನಪು ಬಂತು’.

‘ಯಾಕೆ ಅವನನ್ನು ನನಗೆ ಹೋಲಿಸುತ್ತೀ?’ ಎಂದು ಕೇಳಿದ ಮಹಾಕಾಶ್ಯಪ. ಬುದ್ಧ ಹೇಳಿದ, ‘ಯಾವ ಶಾಸ್ತ್ರಗಳು, ಗ್ರಂಥಗಳು ನಿನಗೆ ಕರತಲಾಮಲಕವಾಗಿವೆಯೆಂದು ಅಭಿಮಾನಪಡುತ್ತಿರುವೆಯೋ ಅವುಗಳಲ್ಲಿ ಒಂದಾದರೂ ನಿನ್ನದೇ?’, ‘ಇಲ್ಲ’. ‘ನೀನು ಬಾಯಿಪಾಠ ಮಾಡಿದ ಒಂದು ಸಾಲಾದರೂ ನಿನ್ನದೇ?’, ‘ಇಲ್ಲ’. ‘ಹಾಗಾದರೆ ನೀನೂ ಆ ಮುದುಕನ ಹಾಗೆ ತನ್ನದಲ್ಲದ ಪ್ರಾಣಿಗಳನ್ನು ಎಣಿಸಿದಂತಾಯಿತಲ್ಲವೇ? ಬರೀ ಶಾಸ್ತ್ರಗ್ರಂಥಗಳಿಂದ ಮಾತುಗಳನ್ನು ಕಂಠಸ್ಥ ಮಾಡಿಕೊಂಡರೆ ಪ್ರಯೋಜನವಿಲ್ಲ, ಹೃದಯಸ್ಥವಾಗಿಸಿಕೊಳ್ಳಬೇಕು, ಅವು ಅನುಭವವಾಗಬೇಕು’ ಎಂದ ಬುದ್ಧ. ಮಹಾಕಾಶ್ಯಪ ಒಪ್ಪಿ ಅವನ ಶಿಷ್ಯನಾದ.

ನಮ್ಮ ಪುಸ್ತಕದ ಜ್ಞಾನ ತಲೆಯಲ್ಲಿ ತಳೆದ ಮಣಿ ಇದ್ದಂತೆ. ಇಂಗ್ಲೆಂಡಿನ ರಾಣಿ ತಲೆಯ ಮೇಲೆ ಅತ್ಯಂತ ಬೆಲೆಬಾಳುವ ಕೊಹಿನೂರ ವಜ್ರದ ಕಿರೀಟ ಧರಿಸಿದರೂ ಮಲಗುವ ಮುಂದೆ ಎತ್ತಿ ಇಡಲೇಬೇಕು. ಯಾಕೆಂದರೆ ಅದು ಅವಳ ದೇಹದ ಅವಿಭಾಜ್ಯ ಅಂಗವಲ್ಲ. ಅಂದರೆ ಪುಸ್ತಕದ ಜ್ಞಾನ ಬೇಡವೆಂದಲ್ಲ. ಅದು ಬೇಕು, ಆದರೆ ಅದು ಬರೀ ತೋರಿಕೆಯ ಅಸ್ತ್ರವಾಗಬಾರದು. ಸಾಧನೆಗೆ ಅದೊಂದು ಏಣಿ ಮಾತ್ರ. ಆದರೆ ಚಿಂತನೆ ಮನದಲ್ಲೇ ಬೆಳೆದರೆ ಬಳ್ಳಿಯಲ್ಲಿ ಹುಟ್ಟಿದ ಹೂವಿನಂತೆ ಬಳ್ಳಿಯ ಸಾರಸರ್ವಸ್ವವನ್ನು ಹೀರಿಕೊಂಡು ಅದರ ಅವಿಭಾಜ್ಯ ಅಂಗವೇ ಆಗುತ್ತದೆ, ವ್ಯಕ್ತಿಯ ಬದುಕೇ ಆಗುತ್ತದೆ. ಅದಕ್ಕೆ ಸದಾಕಾಲದ ಅಂತರೀಕ್ಷಣೆ ಬೇಕು. ಹಾಗಾದಾಗ ಮಾತ್ರ ವಸ್ತುಗಳ, ಪ್ರಪಂಚದ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ಅದು ಅರೆಜ್ಞಾನದ ಬಡಬಡಿಕೆಯಿಂದ ಸಾಧ್ಯವಿಲ್ಲ. ಅದನ್ನೇ ಕಗ್ಗ ಶಾಸ್ತ್ರಿತನ ಎಂದ ಕರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT