ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈವದ ರಸತಂತ್ರ

Last Updated 21 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ !
ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು ||
ಬಾವಿಗೂಟೆಯನಿತ್ತು ನರರೊಡಲ ಸೇರುವುದು |
ದೈವ ರಸತಂತ್ರವಿದು – ಮಂಕುತಿಮ್ಮ || 70 ||

ಪದ-ಅರ್ಥ: ಪುದಿದ=ತುಂಬಿದ, ಆವಿಯಾಗೇಳ್ದು=ಆವಿಯಾಗಿ+ಏಳ್ದು(ಎದ್ದು), ಬಾವಿಗೂಟೆಯನಿತ್ತು=ಬಾವಿಗೆ+ಊಟೆಯನ್ನಿತ್ತು(ಸೆಲೆಯನ್ನಿತ್ತು), ನರರೊಡಲ=ನರರ+ಒಡಲ
ವಾಚ್ಯಾರ್ಥ: ಭೂಮಿಯಲ್ಲಿ ಅಡಗಿದ ರಸ ವಾಸನೆಗಳು ಕುದಿದು ಆವಿಯಾಗಿ, ಮೋಡಗಳಾಗಿ ಮಳೆಯನ್ನು ಕರೆದು, ನೆಲದಲ್ಲಿ ನೀರು ಇಂಗಿ, ಬಾವಿಯಲ್ಲಿ ಸೆಲೆಯಾಗಿ ಬಂದು ಮನುಷ್ಯರ ಒಡಲನ್ನು ಸೇರುವುದು ದೈವದ ರಸತಂತ್ರ.

ವಿವರಣೆ: ಈ ಕಗ್ಗ ಭಗವದ್‍ವಿಲಾಸದ ಬಹುದೊಡ್ಡ ತತ್ವವನ್ನು ವಿವರಿಸುತ್ತದೆ. ಮನುಷ್ಯನ ವಿಶೇಷತೆ ಅವನ ಸಾತ್ವಿಕ ಬುದ್ಧಿ. ಪ್ರಪಂಚದಲ್ಲಿ ನಾವು ಕಾಣುವ ಪ್ರತಿಯೊಂದು ಜೀವಿಯಲ್ಲಿಯೂ ಎರಡು ಅಂಶಗಳು ಸ್ಪಷ್ಟವಾಗಿ ಕಾಣುತ್ತವೆ. ಒಂದು ದೇಹ, ಮತ್ತೊಂದು ಜೀವ. ದೇಹವೆಂಬುದು ಪ್ರಕೃತಿಯ ಅಂಶಗಳಿಂದ ಆದದ್ದು ಆದರೆ ಜೀವವೆಂಬುದು ಅಂತರಂಗದ ಚೈತನ್ಯ. ಪ್ರಕೃತಿಯು ಅನೇಕ ರೂಪಗಳನ್ನು ಧರಿಸಿ, ನಾನಾ ರೂಪ, ವಿಕಾರಗಳಲ್ಲಿ ಬದಲಾಗುತ್ತದೆ. ಪ್ರಕೃತಿಯ ಪಂಚಮಹಾಭೂತಗಳೇ ನಮ್ಮ ದೇಹರಚನೆಗೆ, ಸ್ಥಿರತೆಗೆ ಕಾರಣ.

ಅವು ನಮ್ಮನ್ನು ಸೇರುವ ಪ್ರಕ್ರಿಯೆ ಅನನ್ಯವಾದದ್ದು. ಭೂಮಿಯ ಆಳದಲ್ಲಿದ್ದ ಖನಿಜಗಳು, ಲವಣಗಳು, ಕ್ಷಾರಗಳು, ಆಮ್ಲಗಳು ನೇರವಾಗಿ ನಮ್ಮ ದೇಹವನ್ನು ಸೇರಲಾರವು. ಅವು ಸೂರ್ಯನ ಹಾಗೂ ಭೂಮಿಯ ಅಂತರಂಗದಲ್ಲಿರುವ ಶಾಖದಿಂದ ಕುದಿಯುತ್ತವೆ. ಅವುಗಳ ನಿಖರವಾದ ಅಂಶಗಳು, ಭೂಮಿಯಲ್ಲಿಯ ಆದ್ರ್ರತೆಯೊಂದಿಗೆ ಆವಿಯಾಗಿ ಮೇಲೇರಿ ಮೋಡವಾಗುತ್ತವೆ. ಹಾಗೆ ಮೇಲೇರಿದಂತೆ ತಂಪಾಗಿ ಮಳೆಯಾಗಿ ಧರೆಯನ್ನು ಸೇರಿ, ನೆಲದಲ್ಲಿ ಇಂಗಿ ತಾನು ತಂದಿದ್ದ ಎಲ್ಲ ಖನಿಜಾಂಶಗಳನ್ನು ಮಳೆಯ ನೀರಿನಲ್ಲಿ ಕರಗಿಸಿ ಬಾವಿಯ ಸೆಲೆಯಾಗಿ ಕಂಡುಬರುತ್ತದೆ. ಆ ನೀರು ನಮಗೆ ಜೀವಜಲವಾಗಿ ನಮ್ಮ ಒಡಲನ್ನು ಪೋಷಿಸುತ್ತದೆ.

ಇದರ ಹಿಂದೆ ಇನ್ನೊಂದು ಬಹುದೊಡ್ಡ ತತ್ವವಿದೆ. ಪ್ರಪಂಚದಲ್ಲಿ ಯಾವುದೂ ಹೊರಗಲ್ಲ. ಎಲ್ಲವೂ ಒಂದೇ, ಬೇರೆಬೇರೆಯಲ್ಲ. ಎಲ್ಲಿಯ ಮಣ್ಣಿನ ಲವಣಾಂಶ, ಎಲ್ಲಿಯ ಮನುಷ್ಯನ ಶರೀರ ಎನ್ನುವಂತಿಲ್ಲ. ಅವೆಲ್ಲವೂ ಒಂದೇ ಸೂತ್ರದಲ್ಲಿ ಪೋಣಿಸಿದ ಮಣಿಗಳಿದ್ದಂತೆ. ಇಡೀ ಪ್ರಪಂಚವೇ ಭಗವಂತನ ಲೀಲೆಯಲ್ಲಿ ಸಮನ್ವಯಗೊಂಡಿದೆ, ಒಂದಾಗಿದೆ. ಮಹಾದೇವಿಯಕ್ಕ ತನ್ನ ವಚನದಲ್ಲಿ ಹೇಳುತ್ತಾಳೆ

... ಇಂತೀ ಜಲ ಒಂದೆ, ನೆಲ ಒಂದೆ, ಆಕಾಶ ಒಂದೆ!
ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿ ಬೇರಾಗಿಹ ಹಾಗೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿದ್ದರೇನು? ತನ್ನ ಪರಿ ಬೇರೆ

ಭೂಮಿಯ ಹಲವು ದ್ರವ್ಯಗಳು ಕೂಡಿದ್ದರೂ ಅದರ ಪರಿಯೇ ಬೇರೆ. ಅದರ ಪೋಷಕ ಶಕ್ತಿಯೇ ಬೇರೆ. ಅಂತೆಯೇ ಭಗವಂತ ಯಾವ ಯಾವ ರೀತಿಯಲ್ಲಿದ್ದರೂ ಅವನ ಪರಿಯೇ ಬೇರೆ. ಅವನಲ್ಲೇ ಇಡೀ ವಿಶ್ವ ಅಂತರ್ಗತ. ಇದೇ ದೈವದ ರಸತಂತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT