ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾತರೋಗದ ಔಷಧಿ

Last Updated 31 ಡಿಸೆಂಬರ್ 2018, 20:13 IST
ಅಕ್ಷರ ಗಾತ್ರ

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಂದು ಬ್ರಾಹ್ಮಣರ ವಂಶದಲ್ಲಿ ಜನಿಸಿದ್ದ. ಪ್ರಾಪ್ತವಯಸ್ಕನಾದ ಮೇಲೆ ತಕ್ಷಶಿಲೆಗೆ ಹೋಗಿ ಸರ್ವವಿದ್ಯೆಗಳಲ್ಲಿ ಪಾರಂಗತನಾಗಿ ಮರಳಿ ಬಂದ. ಅವನು ಶ್ರೇಷ್ಠ ಆಚಾರ್ಯನಾಗಿ ಅನೇಕ ಕ್ಷತ್ರಿಯ ಹಾಗೂ ಬ್ರಾಹ್ಮಣ ಕುಮಾರರಿಗೆ ವಿದ್ಯೆ ಹೇಳಿಕೊಡುತ್ತಿದ್ದ.

ಒಬ್ಬ ಬ್ರಾಹ್ಮಣ, ಬೋಧಿಸತ್ವನಿಂದ ಮೂರು ವೇದಗಳನ್ನು ಹಾಗೂ ಹದಿನೆಂಟು ವಿದ್ಯೆಗಳನ್ನು ಕಲಿತ. ಅವನು ಪ್ರತಿದಿನವೂ ಎರಡು ಬಾರಿ ಗುರುಗಳನ್ನು ಕಾಣಲು ಹಾಗೂ ಸೇವೆ ಮಾಡಲು ಬರುತ್ತಿದ್ದ. ಅವನ ಹೆಂಡತಿ ದುರಾಚಾರಿಯಾಗಿದ್ದಳು. ಗಂಡ ಹೊರಗಡೆಗೆ ಹೋದಾಗ ಅನಾಚಾರ ಮಾಡುತ್ತ ಉಳಿದ ವೇಳೆಯಲ್ಲಿ ಅನಾರೋಗ್ಯದ ನೆಪ ಮಾಡಿಕೊಂಡು ಸದಾಕಾಲ ನರಳುತ್ತ ಮಲಗಿರುತ್ತಿದ್ದಳು. ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಗಂಡ ನಿನಗೇನು ತೊಂದರೆ ಎಂದು ಕೇಳಿದರೆ ‘ನನಗೆ ವಾತರೋಗವಾಗಿದೆ. ಅದರಿಂದ ಶರೀರದಲ್ಲೆಲ್ಲ ಸೂಜಿಯಿಂದ ಚುಚ್ಚಿದಂತೆ ವೇದನೆಯಾಗುತ್ತದೆ. ಹೀಗಾಗಿ ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲದಂತಾಗಿದೆ’ ಎನ್ನುತ್ತಿದ್ದಳು.

ತನ್ನ ರೋಗಕ್ಕೆ ಔಷಧಿಯೆಂದರೆ ಮೃದುವಾದ, ಸಿಹಿಯಾದ ತಿಂಡಿ ತಿನಿಸುಗಳು ಮತ್ತು ಸುಗಂಧ ತೈಲಗಳಿಂದ ದೇಹಕ್ಕೆ ಮಾಲೀಶು ಎನ್ನುತ್ತಿದ್ದಳು. ಅವಳಿಗೆ ಅನುಕೂಲವಾಗಲಿ ಎಂದು ಬ್ರಾಹ್ಮಣ ಅವಳು ಕೇಳಿದ್ದನ್ನೆಲ್ಲ ತಂದುಕೊಟ್ಟು ಸದಾಕಾಲ ದಾಸನಂತೆ ದುಡಿಯುತ್ತಿದ್ದ.

ಒಂದು ದಿನ ಗುರುಗಳನ್ನು ಕಾಣಲು ಬಂದಾಗ ಅವರು, ‘ಏಕೆ ಮೊದಲಿನ ಹಾಗೆ ನಿತ್ಯವೂ ಕಾಣುವುದಿಲ್ಲವಲ್ಲ?’ ಎಂದು ಕೇಳಿದರು. ಆತ ಹೇಳಿದ, ‘ಗುರುಗಳೇ ನನ್ನ ಹೆಂಡತಿಗೆ ವಾತರೋಗ ದೇಹವನ್ನೆಲ್ಲ ಚುಚ್ಚುತ್ತಿದೆ. ಅದಕ್ಕೆ ಆಕೆಯ ಅಪೇಕ್ಷೆಯಂತೆ ಅತ್ಯಂತ ಒಳ್ಳೆಯ ಊಟವನ್ನು ಹಾಕುತ್ತಿದ್ದೇನೆ. ಸುಗಂಧ ತೈಲಗಳಿಂದ ದೇಹಕ್ಕೆ ಮಾಲೀಶು ಮಾಡುತ್ತೇನೆ. ಹೀಗಾಗಿ ಅವಳ ದೇಹ ದಪ್ಪಗಾಗಿದೆ ಮತ್ತು ಚರ್ಮ ಮಿರಮಿರನೆ ಮಿನುಗುತ್ತಿದೆ. ಆದರೂ ಅವಳ ರೋಗ ವಾಸಿಯಾಗುತ್ತಿಲ್ಲ. ಆಕೆಯ ಸೇವೆಯಲ್ಲಿಯೇ ಬಹುಕಾಲ ಕಳೆಯುವುದರಿಂದ ತಮ್ಮ ದರ್ಶನಕ್ಕೆ ಬರಲಾಗುತ್ತಿಲ್ಲ’.

ಗುರುಗಳಿಗೆ ಸಮಸ್ಯೆಯ ಅರಿವಾಯಿತು. ಈ ದುರಾಚಾರಿ ಹೆಂಗಸು ಕಪಟ ನಾಟಕವಾಡುತ್ತಾಳೆ ಎಂಬುದನ್ನು ತಿಳಿದು ಬ್ರಾಹ್ಮಣನಿಗೆ ಹೇಳಿದರು, ‘ಅಯ್ಯಾ, ಇಂದಿನಿಂದ ಅವಳಿಗೆ ಮೃದುವಾದ, ಸೊಗಸಾದ ಊಟವನ್ನು ನಿಲ್ಲಿಸಿಬಿಡು. ಗೋಮೂತ್ರದಲ್ಲಿ ತ್ರಿಫಲ ಹಾಗೂ ನಾನು ಹೇಳುವ ಐದು ವಿಧವಾದ ತೊಪ್ಪಲುಗಳನ್ನು ಹಾಕಿ ಕುದಿಸಿ ಕಷಾಯ ಮಾಡು, ಅದನ್ನು ತಾಮ್ರದ ಪಾತ್ರೆಯಲ್ಲಿ ಒಂದು ರಾತ್ರಿ ಇಟ್ಟು ಮರುದಿನ ತಾಮ್ರದ ವಾಸನೆ ಬಂದಮೇಲೆ ಅವಳಿಗೆ ಕುಡಿಯಲಿಕ್ಕೆ ಕೊಡು. ಕುಡಿಯದಿದ್ದರೆ ಒಂದು ಹಗ್ಗ ಅಥವಾ ಬಿರುಸಾದ ಬಳ್ಳಿಯಿಂದ ಸರಿಯಾಗಿ ನಾಲ್ಕು ಪೆಟ್ಟು ಕೊಟ್ಟು, ಜುಟ್ಟು ಹಿಡಿದು ಮೊಣಕೈಯಿಂದ ಬೆನ್ನ ಮೇಲೆ ನಾಲ್ಕು ಗುದ್ದು ಹಾಕು. ಅವಳ ವಾತರೋಗ ಬಿಟ್ಟು ಹೋಗುತ್ತದೆ”. ಬ್ರಾಹ್ಮಣ ಅದರಂತೆ ಕಷಾಯವನ್ನು ತಯಾರಿಸಿ, ‘ಪ್ರಿಯೆ ಇದು ನನ್ನ ಗುರುಗಳು ಹೇಳಿದ ಔಷಧಿ. ಇದನ್ನು ಕುಡಿದರೆ ವಾತರೋಗ ಹೋಗಿಬಿಡುತ್ತದೆ’ ಎಂದ.

ಔಷಧಿಯ ಘಾಟು ವಾಸನೆಯನ್ನು ನೋಡಿ ಅದನ್ನು ಕುಡಿಯಲಾರೆ ಎಂದಳು. ಅಗ ಬ್ರಾಹ್ಮಣ, ಆಕೆಯ ಕೈಗಳನ್ನು ಹಗ್ಗದಿಂದ ಕಟ್ಟಿ, ಬಳ್ಳಿಯಿಂದ ನಾಲ್ಕಾರು ಸರಿಯಾದ ಪೆಟ್ಟುಕೊಟ್ಟ. ನಂತರ ಜುಟ್ಟು ಹಿಡಿದೆಳೆದು ಬೆನ್ನ ಮೇಲೆ ಮೊಣಕೈಯಿಂದ ಹತ್ತಾರು ಬಾರಿ ಗುದ್ದಿದ. ಆಕೆಗೆ ಇನ್ನು ನಾಟಕ ನಡೆಯದೆಂದು ತಿಳಿಯಿತು. ಇನ್ನು ಮೋಸ ಮಾಡುವುದು ಸಾಧ್ಯವಿಲ್ಲವೆಂದು ಅರಿತು ದುರಾಚಾರವನ್ನು ಬಿಟ್ಟು ಗಂಡನೊಡನೆ ಶೀಲವಂತಳಾಗಿ ಬಾಳಿದಳು.

ಪ್ರಪಂಚ ನಮಗೆ ಹದವಾಗಿ ಬಾಳಲು ಅವಕಾಶ ಕೊಡುತ್ತದೆ. ಆದರೆ ನಮ್ಮ ನಡೆ ಸರಿಯಾಗದಿದ್ದರೆ ಸರಿಯಾದ ಸಮಯದಲ್ಲಿ ತಕ್ಕ ಶಾಸ್ತಿ ಮಾಡಿ ಬುದ್ಧಿ ಕಲಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT