ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೃಶ್ಯಸತ್ವದ ದೃಶ್ಯ ಪ್ರಪಂಚ

Last Updated 1 ಜನವರಿ 2019, 20:00 IST
ಅಕ್ಷರ ಗಾತ್ರ

ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿ- |

ಸ್ತರಿಸುವಂದದಿ, ಸೃಷ್ಟಿ ತನ್ನ ಮೂಲವನು ||

ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಣಳಿಗೆ |

ನೊರೆ ಸೃಷ್ಟಿ ಪಾಲ್ ಬ್ರಹ್ಮ – ಮಂಕುತಿಮ್ಮ || 75 ||

ಪದ-ಅರ್ಥ: ಬೀಜವನಿಲ್ಲವೆನಿಸಿ=ಬೀಜವನ್ನು+ಇಲ್ಲವೆನಿಸಿ, ಮರೆಮಾಚಿ=ಮುಚ್ಚಿಟ್ಟು, ಪಾಲ್=ಹಾಲು,

ವಾಚ್ಯಾರ್ಥ: ಮರ ಹುಟ್ಟುವಾಗ ತನ್ನನ್ನು ಹೆತ್ತ ಬೀಜವನ್ನು ಇಲ್ಲವೆನಿಸಿ ವಿಸ್ತರಿಸುವ ಹಾಗೆ ಸೃಷ್ಟಿ ತನ್ನ ಮೂಲರೂಪವನ್ನು ಮುಚ್ಚಿಟ್ಟುಕೊಂಡು ಬೇರೊಂದು ರೂಪದಲ್ಲಿ ಕಣ್ಣುಗಳಿಗೆ ಹೊಳೆಯುತ್ತಿರುವುದು. ಬ್ರಹ್ಮ ಹಾಲು, ಸೃಷ್ಟಿ ಅದರ ನೊರೆ.

ವಿವರಣೆ: ಮರ ಹುಟ್ಟಬೇಕಾದರೆ ಬೀಜ ಮರೆಯಾಗಬೇಕು. ಮರ ವಿಸ್ತಾರವಾಗಿ ಹರಡಿದ್ದನ್ನು ಕಂಡಾಗ ಯಾರಿಗೂ ಬೀಜದ ಕಲ್ಪನೆ ಬರಲಾರದು. ಮರ ಬರುವುದಕ್ಕೆ ಬೀಜವೇ ಕಾರಣವೆಂಬುದು ಮರೆತುಹೋಗುತ್ತದೆ. ಇದನ್ನು ತುಂಬ ಸಾಂಕೇತಿಕವಾಗಿ ಈಶಾವಾಸ್ಯ ಉಪನಿಷತ್ತು, ‘ತೇನ ತ್ಯಕ್ತೇನ ಭುಂಜೀಥಾ:’ ಎನ್ನುತ್ತದೆ. ಇದರ ನೇರ ಅರ್ಥ ‘ಈ ಜಗತ್ತನ್ನು ತ್ಯಜಿಸಿ ಸಂತೋಷಪಡು’. ಜಗತ್ತನ್ನೇ ತ್ಯಜಿಸುವುದು ಎಂದರೇನು? ಅದು ಆಗುತ್ತದೆಯೇ? ಆಗುತ್ತದೆ ಎನ್ನುತ್ತದೆ ಉಪನಿಷತ್ತು. ಜಗತ್ತನ್ನು ತ್ಯಜಿಸುವುದಲ್ಲ, ಅದು ಜಗತ್ತು ಎನ್ನುವ ಭ್ರಮೆಯನ್ನು ತ್ಯಾಗಮಾಡುವುದು. ಈ ಜಗತ್ತಿನ ವೈಭವ, ಅಬ್ಬರ ನಮ್ಮ ಕಣ್ಣನ್ನು ಮರೆಮಾಚಿದೆ. ಅದರ ಮೆರೆದಾಟದಲ್ಲಿ ಮೂಲಸತ್ವ ಕಾಣದೆ ಹೋಗಿದೆ.

ಒಂದು ಸುಂದರವಾಗಿ ಕೆತ್ತಿದ ಮರದ ಆನೆಯನ್ನು ನೆನೆಸಿಕೊಳ್ಳಿ. ಆನೆಯ ಗಾತ್ರ, ಆಕಾರ, ಅಲಂಕಾರಗಳನ್ನು ನೋಡುತ್ತ ತಲ್ಲೀನವಾಗಿದ್ದಾಗ ಅದು ಮರ ಎನ್ನುವುದೇ ಮರೆತುಹೋಗುತ್ತದೆ. ಅದರೆ ಅದು ಒಂದು ಮರ ಎಂದು ವಿಚಾರ ಬಂತೋ, ಆಗ ಆನೆ ಮಾಯವಾಗಿ ಅದು ಯಾವ ಜಾತಿಯ ಮರ, ಅದರ ಲಕ್ಷಣ, ಅದರ ಮೇಲಿರುವ ಗೆರೆಗಳು, ಮರದ ಬಾಳಿಕೆ, ಭಾರ, ಅದಕ್ಕೆ ಹಾಕಿದ ಬಣ್ಣ, ಪಾಲಿಶ್ ಎನ್ನುವುದು ಮುಖ್ಯವಾಗುತ್ತದೆ. ಮೂಲತ: ಅದು ಒಂದು ಮರವೇ. ಅದು ಆನೆಯಂತೆ ಕಾಣುವುದರಿಂದ ಆನೆಯೆಂದೇ ಭ್ರಮೆ ಮೂಡುತ್ತದೆ.

ಇದರಂತೆಯೇ ಪ್ರಪಂಚದಲ್ಲಿಯ ಎಲ್ಲ ವಸ್ತುಗಳೂ ಈ ಆನೆ ಇದ್ದಂತೆ. ಪ್ರಪಂಚದಲ್ಲಿರುವುದೆಲ್ಲವೂ ಪರಸತ್ವದ ಬಗೆಬಗೆಯ ರೂಪಾಂತರಗಳು. ಜಗತ್ತಿನಲ್ಲಿರುವ ದೃಶ್ಯವೆಲ್ಲ ಪ್ರಕೃತಿ ಅಥವಾ ಸೃಷ್ಟಿ. ಅದೃಶ್ಯವಾದದ್ದು ಮೂಲವಸ್ತು. ಒಂದು ಮೇಜು ಮರದಿಂದಾದ್ದು. ಮೇಜು ಮಾಡುವುದಕ್ಕಿಂತ ಮೊದಲು ಅದು ಕೇವಲ ಮರವಾಗಿಯೇ ಕಾಣುತ್ತಿತ್ತು. ಮೇಜು ಆದ ಮೇಲೆ ಅದು ಮೇಜು ಎಂದೇ ಕರೆಸಿಕೊಳ್ಳುತ್ತದೆಯೇ ವಿನ: ಮರ ಎನ್ನಿಸಿಕೊಳ್ಳುವುದಿಲ್ಲ. ಇದೇ ತರಹ ಮಡಕೆಯಾದ ಮೇಲೆ ಮಣ್ಣು ಅದೃಶ್ಯವಾಗುತ್ತದೆ. ತೆರೆಗಳನ್ನು ನೋಡುವಾಗ ಸಮುದ್ರ ಮರೆಯಾಗುತ್ತದೆ. ಇದೇ ಪರಸತ್ವದ ವೈಖರಿ.

ತಾನು ಮರೆಯಾಗಿದ್ದು ತನ್ನ ರೂಪಾಂತರಗಳನ್ನು ನಿಲ್ಲಿಸಿ ಕಣ್ಣು ತುಂಬಿಸುತ್ತದೆ-ಹಾಲಿನ ನೊರೆಯ ಹಾಗೆ. ಕಗ್ಗ ಇದನ್ನು ಸುಂದರ ಉಪಮೆಯನ್ನಾಗಿ ನಮ್ಮ ಮುಂದೆ ನಿಲ್ಲಿಸುತ್ತದೆ. ಅದೃಶ್ಯವಾದ ಹಾಲು ಬ್ರಹ್ಮ ಇದ್ದ ಹಾಗೆ ಮತ್ತು ನೊರೆ ಸೃಷ್ಟಿಯ ಹಾಗೆ ಕಣ್ಣಿಗೆ ಎದ್ದು ಕಾಣುತ್ತದೆ. ನೊರೆ ಇಳಿದ ಮೇಲೆ ಅಂದರೆ ತಿಳುವಳಿಕೆಯಿಂದ ಚಿಂತಿಸಿದ ಮೇಲೆ ಹಾಲು ಅಂದರೆ ಪರಸತ್ವ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT