ಸೃಷ್ಟಿಸಿ ನಿರ್ಲಿಪ್ತನಾದ ಬ್ರಹ್ಮ

7

ಸೃಷ್ಟಿಸಿ ನಿರ್ಲಿಪ್ತನಾದ ಬ್ರಹ್ಮ

ಗುರುರಾಜ ಕರಜಗಿ
Published:
Updated:

ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ |
ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲಸಿ |
ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ |
ವಿಹರಿಪನು ನಿರ್ಲಿಪ್ತ – ಮಂಕುತಿಮ್ಮ || 76 ||

ಪದ-ಅರ್ಥ: ಬಹುವಾಗಲೆಳಸಿ=ಬಹುವಾಗಲು(ಬಹಳವಾಗಲು+ಎಳಸಿ(ಅಪೇಕ್ಷಿಸಿ), ತಾನೊಬ್ಬಂಟಿ=ತಾನು+ಒಬ್ಬಂಟಿ, ಸೃಜಿಸಿ=ಸೃಷ್ಟಿಸಿ, ನಿರ್ಲಿಪ್ತ=ಯಾವುದಕ್ಕೂ ಅಂಟದವನು.

ವಾಚ್ಯಾರ್ಥ: ಒಬ್ಬಂಟಿಯಾಗಿದ್ದ ಬ್ರಹ್ಮ ಬಹಳವಾಗಬೇಕೆಂದು ಅಪೇಕ್ಷಿಸಿ. ತನ್ನ ಮಹಿಮೆಯಿಂದ ವಿಶ್ವವನ್ನು ಸೃಷ್ಟಿಸಿ, ತಾನೂ ಅದರಲ್ಲೇ ನೆಲೆಸಿ, ಜೀವಿಗಳ ಬದುಕನ್ನು ಮಾಯೆಯ ಸರಸ, ವಿರಸಗಳಿಗೆ ಒಪ್ಪಿಸಿ, ತಾನು ಮಾತ್ರ ನಿರ್ಲಿಪ್ತನಾಗಿ ವಿಹರಿಸುತ್ತಾನೆ.

ವಿವರಣೆ: ಬ್ರಹ್ಮ ಅಥವಾ ದೇವರು ಎನ್ನುವುದು ಒಂದು ಸರ್ವತಂತ್ರ ಸ್ವತಂತ್ರವಾದ ಚೈತನ್ಯ. ಅದು ಪರಿಪೂರ್ಣವಾದದ್ದು. ಮೊದಲು ಅದೊಂದೇ ಇದ್ದದ್ದು. ತಾನು ಬಹಳವಾಗಬೇಕೆಂದು ಆ ಸತ್ವ ಅಪೇಕ್ಷಿಸಿತಂತೆ. ನಾನಾ ಉಪಾರ್ಧಿಗಳಲ್ಲಿ ಈ ವಿಶ್ವವನ್ನು ಸೃಷ್ಟಿ ಮಾಡಿತಂತೆ. ಸೃಷ್ಟಿ ಮಾಡುವುದು ಮಾತ್ರವಲ್ಲ, ತಾನೂ ಆ ಜೀವಿಗಳಲ್ಲಿ ನೆಲೆಸಿತಂತೆ. ಇದು ಏಕೆ ಹೀಗೆ ಮಾಡಿತು? ಇವೆಲ್ಲ ಬೇಕಿತ್ತೇ? ಈ ಎಲ್ಲ ಪ್ರಶ್ನೆಗಳಿಗೆ ವೇದಾಂತದ ಉತ್ತರ ಒಂದೇ.

“ದೈವಸ್ಯೇೃಷ ಸ್ವಭಾವೋಯಮ್ |”
- ಮಾಂಡೂಕ್ಯಕಾರಿಕಾ

ಇದು ದೇವಶಕ್ತಿಯ ಲೀಲೆ. ಅದಕ್ಕೆ ಯಾವ ಬಂಧನಗಳೂ ಇಲ್ಲ. ಅದು ತನ್ನಷ್ಟಕ್ಕೆ ತಾನೇ ವಿಧವಿಧವಾದ ಆಟವಾಡುತ್ತದೆ. ಈ ಆಟದಿಂದಲೇ ಜಗತ್ತಿನ ಸೃಷ್ಟಿ, ಜಗತ್ತಿನ ಸ್ಥಿತಿ ಹಾಗೂ ಜಗತ್ತಿನ ನಾಶ. ಜಗತ್ತನ್ನು ಸೃಷ್ಟಿ ಮಾಡಿದವನು ಅದನ್ನು ನಡೆಯಿಸುವುದಕ್ಕೆ ಮಾಯೆಯನ್ನು ನಿಯಮಿಸಿದ. ಆ ಮಾಯೆ ಜೀವಗಳನ್ನು ಸಂತೋಷ, ದು:ಖಗಳ ಬಲೆಯಲ್ಲಿ ಸಿಲುಕಿಸಿ ಒದ್ದಾಡಿಸುತ್ತದೆ. ಆದರೆ ಬ್ರಹ್ಮ ಮಾತ್ರ ಯಾವುದಕ್ಕೂ ಅಂಟದಂತೆ ನಿರ್ಲಿಪ್ತನಾಗಿದ್ದಾನೆ. ಇದೇ ವೇದಾಂತವನ್ನು ವಚನಕಾರರು

ಸುಲಭವಾಗಿ ತೋರಿದ ಪರಿ ಎಷ್ಟು ಸುಂದರ!
ಜಗವನಾಡಿಸುವನು, ಜಗವನೇಡಿಸುವನು.
ಜಗದ ನಟನಾಟಕನ ಪರಿಯ ನೋಡಯ್ಯ !
ಜಗವ ರಂಜಿಸುವನು, ಜಗವ ಭುಜಿಸುವನು.
ಜಗದೊಳಗಿಪ್ಪನು, ಜಗದ ಹೊರಗಿಪ್ಪನು.
ಜಗಕೆ ತೋರಿಯೂ ತೋರದಂತಿಪ್ಪನು
ದರ್ಪಣದೊಳಗಣ ಪ್ರತಿಬಿಂಬದಂತಿಪ್ಪನು
ಉದಕ-ಪದ್ಮಪತ್ರದಂತಿಪ್ಪನು.
ನಿಜಗುರುವೆ, ಸ್ವತಂತ್ರಕಪಿಲಸಿದ್ಧಮಲ್ಲೇಶ್ವರನೆ,
ನೋಟ ತೀರಲೊಡನೆ ಜಗದಾಟ ತೀರಿತು.

ಜಗದ ನಟನಾಟಕನಾದ ಬ್ರಹ್ಮ ಏನೆಲ್ಲ ಮಾಡುತ್ತಾನೆ! ಜಗತ್ತನ್ನು ಮಾಡುತ್ತಾನೆ, ಆಡುತ್ತಾನೆ. ಅದರೊಳಗಿದ್ದಾನೆ. ಹೊರಗೂ ಇದ್ದಾನೆ. ಮುಖ್ಯವಾಗಿ ಉದಕ-ಪದ್ಮಪತ್ರದಂತಿದ್ದಾನೆ. ಅಂದರೆ ನೀರೊಳಗೆ ಇದ್ದೂ ಒಂದು ಹನಿನೀರೂ ಅಂಟದಿರುವ ಕಮಲದ ಎಲೆಯಂತಿದ್ದಾನೆ. ಇದೇ ಅವನ ನಿರ್ಲಿಪ್ತತೆ.

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !