ತನ್ನ ಸೌಂದರ್ಯಕ್ಕೆ ತಾನೇ ಮರುಳಾದ ಬ್ರಹ್ಮಸತ್ವ

7

ತನ್ನ ಸೌಂದರ್ಯಕ್ಕೆ ತಾನೇ ಮರುಳಾದ ಬ್ರಹ್ಮಸತ್ವ

ಗುರುರಾಜ ಕರಜಗಿ
Published:
Updated:

ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ |
ರನ್ನವೋ ಬ್ರಹ್ಮ; ನೋಡುವನು - ನಿಜಪಿಂಛ ||
ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲವೊಲು |
ತನ್ಮಯನೊ ಸೃಷ್ಟಿಯಲಿ - ಮಂಕುತಿಮ್ಮ || 77 ||

ಪದ-ಅರ್ಥ: ರನ್ನ=ವಜ್ರ, ನಿಜಪಿಂಛ=ತನ್ನದೇ ಆದ ಗರಿ.
ವಾಚ್ಯಾರ್ಥ: ಬ್ರಹ್ಮ ತನ್ನ ಕಣ್ಣು ಕೋರೈಸುವ ಹೊಳಪನ್ನು ನೆನೆದು ಮೈಮರೆತ ವಜ್ರದಂತಿದ್ದಾನೆ. ತನ್ನ ಸ್ವಂತ ಗರಿಯ ಬಣ್ಣಗಳನ್ನು ಕಂಡು ತನ್ನನ್ನೇ ಮರೆತು ಸಂಭ್ರಮಿಸುವ ನವಿಲಿನಂತೆ ಸೃಷ್ಟಿ ರಚನೆಯಲ್ಲಿ ತನ್ಮಯನಾಗಿದ್ದಾನೆ.

ವಿವರಣೆ: ಅತ್ಯಂತ ಸುಂದರವಾದ ಆದರೆ ಅರಿಯಲು ಅಷ್ಟು ಸುಲಭವಲ್ಲದ ದೊಡ್ಡ ಆಧ್ಯಾತ್ಮಿಕ ಚಿಂತನೆಯನ್ನು ಅತಿ ಸರಳವಾದ ಉದಾಹರಣೆಗಳಿಂದ ತಿಳಿಸುತ್ತದೆ ಈ ಕಗ್ಗ. ಇದರ ಮಾತುಗಳನ್ನು ಗಮನಿಸೋಣ. ಬ್ರಹ್ಮ ತಾನೇ ಒಂದು ವಜ್ರ. ಆದರೆ ಅದರ ಹೊಳಪನ್ನು ನೋಡುತ್ತ ಸಂತೋಷದಿಂದ ಮೈಮರೆತಿದ್ದಾನೆ. ಇದು ಮೊದಲನೆಯ ಉಪಮೆ. ತನ್ನ ಸ್ವಂತದ ಬಣ್ಣಬಣ್ಣದ ಗರಿಗಳನ್ನು ನೋಡಿ ಸಂತೋಷಿಸುತ್ತ ಮೈಮರೆತ ನವಿಲಿನಂತೆ ಬ್ರಹ್ಮ ಸೃಷ್ಟಿಯಲ್ಲಿ ತನ್ಮಯನಾಗಿದ್ದಾನೆ. ಇದು ಎರಡನೆಯ ಉಪಮೆ.

‘ಮಯಾ ತತ್‍ಮಿದಂ ಸರ್ವಮ್’ ಎನ್ನುವುದು ಭಗವದ್ಗೀತೆಯ ಮಾತು. ಹೀಗೆಂದರೆ ಈ ಜಗತ್ತೆಲ್ಲ ಬ್ರಹ್ಮವಸ್ತುವಿನಿಂದ ವಿಸ್ತರಿಸಲ್ಪಟ್ಟಿತು ಎಂದರ್ಥ. ವಿಸ್ತರಿಸಲ್ಪಟ್ಟಿತು ಎನ್ನುವ ಮಾತಿನಲ್ಲಿ ಒಂದು ಮೂಲವಸ್ತು ಇತ್ತು ಅದನ್ನು ಒಂದು ಮೂಲಶಕ್ತಿ ವಿಸ್ತರಿಸಿತು ಎಂಬ ಸೂಚನೆ ಇದೆ.

ಯಾವ ಸೃಷ್ಟಿಗಾಗಲೀ ಒಂದು ಮೂಲದ್ರವ್ಯ ಬೇಕು ಹಾಗೂ ಅದನ್ನು ಸೃಷ್ಟಿಸಲು ಮೂಲಶಕ್ತಿ ಬೇಕು. ಹತ್ತಿಯಿಂದ ವಿಸ್ತಾರವಾದದ್ದು ನೂಲು, ನೂಲಿನಿಂದ ವಿಸ್ತಾರವಾದದ್ದು ಬಟ್ಟೆ. ಮೂಲವಸ್ತುವಾದ ಹತ್ತಿ ಇದ್ದರೆ ನೇಕಾರನ ಶಕ್ತಿಯು ಉಪಯೋಗಕ್ಕೆ ಬರುತ್ತದೆ. ಮಡಕೆ ಮಾಡಲು ಮೂಲವಸ್ತು ಮಣ್ಣು, ಕುಂಬಾರನ ಕೈಚಳಕ, ನೈಪುಣ್ಯತೆ ಮೂಲಶಕ್ತಿ. ಅಂದರೆ ಸೃಷ್ಟಿಯ ಪ್ರತಿಯೊಂದು ವಸ್ತುವಿಗೂ ಎರಡು ಕಾರಣ ಸ್ಥಾನಗಳಿವೆ-ಒಂದು ಮೂಲವಸ್ತು, ಮತ್ತೊಂದು ಮೂಲಶಕ್ತಿ.

ಹಾಗಾದರೆ ಬ್ರಹ್ಮವಸ್ತು ಸಿದ್ಧವಾದದ್ದು ಹೇಗೆ? ಅದರ ಮೂಲದ್ರವ್ಯ ಯಾವುದು? ಮೂಲಶಕ್ತಿ ಯಾವುದು? ಬ್ರಹ್ಮವಸ್ತು ಉಳಿದ ವಸ್ತುಗಳಂತೆ ಅನ್ಯನಿರ್ಮಿತವಲ್ಲ, ಸ್ವಯಂಭೂ ಆದದ್ದು, ಸ್ವತ:ಸಿದ್ಧವಾದದ್ದು. ಮೂಲವಸ್ತವೂ ಅದೇ, ಮೂಲಶಕ್ತಿಯೂ ಅದೇ. ಇದಕ್ಕೊಂದು ಉದಾಹರಣೆ ನಮ್ಮ ಪ್ರಪಂಚದಲ್ಲೇ ಇದೆ ಎನ್ನುತ್ತದೆ ಶಾಸ್ತ್ರದ ಮಾತು.

ಯಥೋರ್ಣನಾಭಿ: ಸೃಜತೇ ಗೃಹ್ಣತೇ ಚ| - ಮುಂಡಕೋಪನಿಷತ್ತು

ಊರ್ಣನಾಭಿ ಎಂದರೆ ಜೇಡರ ಹುಳು. ಅದು ಸೃಷ್ಟಿಸುವ ಬಲೆಯ ಮೂಲವಸ್ತುವಾದ ಅಂಟುರಸ ಅದರ ದೇಹದಿಂದಲೇ ಬರುತ್ತದೆ. ಅದು ಬಲೆಯನ್ನು ತನ್ನ ಶಕ್ತಿಯಿಂದಲೇ ರಚಿಸುತ್ತ ತುಂಬ ಸಂತೋಷ ಪಡುತ್ತದಂತೆ. ಇದು ಹೇಗೆ ಎಂದರೆ ತನ್ನ ಸ್ವ ಸಂತೋಷಕ್ಕೆ ಹಾಡಿಕೊಳ್ಳುವ ವ್ಯಕ್ತಿ ತನ್ನ ಕಂಠಮಾಧುರ್ಯಕ್ಕೆ ತಾನೇ ಮರುಳಾಗುವಂತೆ, ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳುವ ಸುಂದರಿ ಮೂಗು, ಕಣ್ಣುಗಳನ್ನು ತಿರುಗಿಸಿ ತನ್ನ ಸೌಂದರ್ಯಕ್ಕೆ ಮಾರು ಹೋಗುವಂತೆ.

ಅದಕ್ಕೇ ಕಗ್ಗ ಈ ಬ್ರಹ್ಮವಸ್ತುವಿನ ಚರ್ಯೆಯನ್ನು ಸುಲಭವಾಗಿ ವಜ್ರ ತನ್ನ ಹೊಳಪಿಗೆ ತಾನೇ ಬೆರಗಾಗುವಂತೆ, ನವಿಲು ತನ್ನ ಗರಿಗಳ ಸೌಂದರ್ಯಕ್ಕೆ ತಾನೇ ಮರುಳಾಗುವಂತೆ ಇದೆ ಎಂದು ಅಧ್ಯಾತ್ಮದ ಬಹು ಕ್ಲಿಷ್ಟವಾದ ತತ್ವವನ್ನು ಅತ್ಯಂತ ಸುಲಭವಾಗಿ ಚಿತ್ರಿಸುತ್ತದೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !