ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತೆಯ ನೆರಳಲ್ಲಿ ಆಪತ್ತಿನ ಸುಳಿ

Last Updated 9 ಜನವರಿ 2019, 19:52 IST
ಅಕ್ಷರ ಗಾತ್ರ

ಒಬ್ಬ ತರುಣ ಭಿಕ್ಷು ಬುದ್ಧನಿಂದ ಕರ್ಮಸ್ಥಾನವನ್ನು ಪಡೆದುಕೊಂಡು ದೂರದ ಒಂದು ಹಳ್ಳಿಯ ಬಳಿ ಅರಣ್ಯದಲ್ಲಿ ವಾಸಮಾಡತೊಡಗಿದ. ಅಲ್ಲಿ ಅವನು ಧ್ಯಾನ ನಿಷ್ಠೆಯಲ್ಲಿ ತೊಡಗಬೇಕೆಂದು ತೀರ್ಮಾನಿಸಿದ. ಮೊದಲನೆ ತಿಂಗಳಿನಲ್ಲಿಯೇ ಆತ ಭಿಕ್ಷೆಗಾಗಿ ಹೋಗಿ ಬರುವುದರಲ್ಲಿ ಅವನ ಗುಡಿಸಲಿಗೆ ಬೆಂಕಿ ಹತ್ತಿ ಭಸ್ಮವಾಗಿ ಬಿಟ್ಟಿತ್ತು.

ಹಳ್ಳಿಯಲ್ಲಿದ್ದ ತನ್ನ ಶಿಷ್ಯರಿಗೆ ಕಷ್ಟವನ್ನು ಹೇಳಿಕೊಂಡ.ಅವರು ‘ಆಗಲಿ ಭಂತೇ, ನಾವೇ ನಿಂತು ಮತ್ತೊಂದು ಗುಡಿಸಲು ಕಟ್ಟಿಕೊಡುತ್ತೇವೆ’ ಎಂದರು. ಆದರೆ ಅದು ಆಗಲೇ ಇಲ್ಲ. ಅವರು ಕೇಳಿದಾಗಲೆಲ್ಲ, ಆಯಿತು ಈಗ ಹೊಲದ ಕಳೆ ತೆಗೆಯುತ್ತಿದ್ದೇವೆ. ಈಗ ಬೀಜ ಬಿತ್ತನೆಯಾದ ಮೇಲೆ ಮಾಡುತ್ತೇವೆ ಎಂದು ನೆಪಗಳನ್ನು ಹೇಳುತ್ತಲೇ ಬಂದರು. ಮೂರು ತಿಂಗಳಾದರೂ ಭಿಕ್ಷುವಿಗೆ ನೆಲೆ ದೊರಕಲಿಲ್ಲ. ಹೀಗಾಗಿ ಅವನ ಯೋಗಾಭ್ಯಾಸ ಮುಂದುವರೆಯಲಿಲ್ಲ. ನಂತರ ಬಂದು ಬುದ್ಧನನ್ನು ಕಂಡಾಗ ಆತ ‘ನಿನ್ನ ಕರ್ಮಸ್ಥಾನ ಸಫಲವಾಯಿತೇ?’ ಎಂದು ಕೇಳಿದ. ಆಗ ಭಿಕ್ಷು ತನ್ನ ಕಷ್ಟವನ್ನು ಹೇಳಿಕೊಂಡು ಕಾರ್ಯಸಾಧನೆಯಾಗಲಿಲ್ಲ ಎಂದ. ಬುದ್ಧ, ‘ಅಲ್ಲಪ್ಪ, ಪರಿಸ್ಥಿತಿ ಪ್ರತಿಕೂಲವೆಂದು ಎನ್ನಿಸಿದರೆ ಪಶು-ಪಕ್ಷಿಗಳೂ ಸ್ಥಳ ಬಿಟ್ಟು ಹೋಗುತ್ತವೆ. ನೀನೇಕೆ ಹಾಗೆ ಮಾಡಲಿಲ್ಲ?’ ಎಂದು ಕೇಳಿ ಅವನಿಗೊಂದು ಪ್ರಸಂಗವನ್ನು ಹೇಳಿದ.

ಹಿಂದೆ ಬೋಧಿಸತ್ವ ಒಂದು ಪಕ್ಷಿಯಾಗಿ ಹುಟ್ಟಿ ತನ್ನ ಜೊತೆಯ ನೂರಾರು ಪಕ್ಷಿಗಳೊಡನೆ ಕೆರೆಯ ದಂಡೆಯ ಮೇಲಿದ್ದ ಬೃಹತ್ ವೃಕ್ಷದಲ್ಲಿ ನೆಲೆಯಾಗಿದ್ದ. ಆ ಮರದ ರೆಂಬೆ ಕೊಂಬೆಗಳು ಕೆರೆಯ ನೀರಿನ ಮೇಲೆ ಚಾಚಿಕೊಂಡಿದ್ದವು. ಪಕ್ಷಿಗಳು ಕೊಂಬೆಗಳ ಮೇಲೆ ಕುಳಿತು ಮಲವನ್ನು ನೀರಿನಲ್ಲಿ ವಿಸರ್ಜಿಸುತ್ತಿದ್ದವು. ಆ ಸರೋವರದಲ್ಲಿ ಒಬ್ಬ ಅತ್ಯಂತ ಬಲಶಾಲಿಯಾಗಿದ್ದ ನಾಗರಾಜ ವಾಸವಾಗಿದ್ದ. ತನ್ನ ನಿವಾಸದ ಮೇಲೆ ಈ ಪಕ್ಷಿಗಳು ಮಲವಿಸರ್ಜನೆ ಮಾಡುತ್ತವೆ ಎಂದು ಕೋಪದಿಂದ ಅವುಗಳನ್ನು ಓಡಿಸಲು ಯೋಜಿಸಿದ. ರಾತ್ರಿ ಪಕ್ಷಿಗಳ ಸಮೂಹ ನಿದ್ರೆ ಮಾಡುತ್ತಿದ್ದಾಗ ಸರೋವರದ ನೀರನ್ನು ಬಿಸಿಮಾಡಿ ಗುಳ್ಳೆಗಳು ಎದ್ದು ಹಬೆ ಮರದ ಕೊಂಬೆಗಳನ್ನು ತಲುಪುವಂತೆ ಮಾಡಿದ.

ಪಕ್ಷಿಗಳು ಆಹಾ! ವಾತಾವರಣ ಬೆಚ್ಚಗಾಯಿತು ಎಂದು ಸಂತೋಷಪಟ್ಟವು. ಮರುದಿನ ಆತ ನೀರಿನಿಂದ ಹೊಗೆ ಏಳುವಂತೆ ಮಾಡಿದ. ಆಗ ಪಕ್ಷಿಗಳಿಗೆ ಸಂಕಟವಾಯಿತು. ಆದರೆ ಅವು ಮರವನ್ನು ಬಿಟ್ಟು ಹಾರಲಿಲ್ಲ. ಅದರ ಮರುದಿನ ನಾಗರಾಜ ತಾಳೆವೃಕ್ಷದಷ್ಟು ಎತ್ತರದ ಬೆಂಕಿಯ ಜ್ವಾಲೆಗಳನ್ನು ಹುಟ್ಟಿಸಿದ. ಆಗ ಪಕ್ಷಿಗಳಿಗೆ ನಾಯಕನಾದ ಬೋಧಿಸತ್ವ, ‘ಸ್ನೇಹಿತರೇ, ಬೆಂಕಿ ಹತ್ತಿದರೆ ನೀರಿನಿಂದ ಆರಿಸಿಕೊಳ್ಳಬಹುದು. ಆದರೆ ನೀರಿಗೇ ಬೆಂಕಿ ಹತ್ತಿದರೆ ಇಲ್ಲಿ ಇರುವುದು ಸಾಧ್ಯವಿಲ್ಲ. ಪರಿಸ್ಥಿತಿ ನಮಗೆ ಪ್ರತಿಕೂಲವಾಗಿದೆ. ಇನ್ನು ಇಲ್ಲಿ ಇರುವುದು ಕ್ಷೇಮವಲ್ಲ. ಬೇರೆ ಕಡೆಗೆ ಹೋಗೋಣ’ ಎಂದು ಎಲ್ಲ ಪಕ್ಷಿಗಳನ್ನು ಕರೆದುಕೊಂಡು ಹೋದ. ಅವು ದೂರದ ಮತ್ತೊಂದು ಮರವನ್ನು ಆಶ್ರಯಿಸಿ ನೆಮ್ಮದಿಯಿಂದಿದ್ದವು.

ಈ ಪ್ರಸಂಗವನ್ನು ಹೇಳಿ ಬುದ್ಧ ತಿಳಿಸಿದ, ‘ಎಲ್ಲಿ ಕಲ್ಯಾಣವಿದೆಯೋ ಅಲ್ಲಿಯೇ ಶತ್ರುವೂ ಹುಟ್ಟುತ್ತಾನೆ. ಎಲ್ಲಿ ನಮಗೆ ತುಂಬ ಭದ್ರತೆ ಎನ್ನಿಸುತ್ತದೆಯೋ ಅಲ್ಲಿಯೇ ಭಯ ಉತ್ಪನ್ನವಾಗುತ್ತದೆ. ಯಾವಾಗ ಭಯ ಹುಟ್ಟಿತೋ, ಸಹಕಾರ ದೊರೆಯಲಿಲ್ಲವೋ ಆ ಸ್ಥಳವನ್ನು ಬಿಟ್ಟು ಬೇರೆ ದಿಕ್ಕಿಗೆ ಹೋಗುವುದೇ ಬುದ್ಧಿವಂತಿಕೆ. ಅಲ್ಲಿಯೇ ಮೋಹದಿಂದ ಉಳಿದರೆ ಸಾಧನೆಯಾಗುವುದಿಲ್ಲ ಮತ್ತು ಪ್ರಾಣಕ್ಕೇ ಅಪಾಯ ಉಂಟಾಗುತ್ತದೆ’. ಎಷ್ಟು ಸುಂದರವಾದ ಮಾತು! ಭದ್ರತೆಯ ನೆರಳಿನಲ್ಲೇ ಆಪತ್ತಿನ ಸುಳಿ, ಕಲ್ಯಾಣದ ನೆಲದಲ್ಲೇ ಶತ್ರುವಿನ ಮೊಳಕೆ, ಸಾಧನೆಯ ಉತ್ತುಂಗದಲ್ಲೇ ವೈಫಲ್ಯದ ಬೀಜ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT