ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಷ್ಟಿಯಲ್ಲಿ ಶ್ರೇಷ್ಠತೆ ಕಾಣುವ ಭಗವಂತ

Last Updated 19 ಸೆಪ್ಟೆಂಬರ್ 2019, 9:50 IST
ಅಕ್ಷರ ಗಾತ್ರ

ಮರೆತಿಹನೆ ಬೊಮ್ಮ? ಮರೆತಿಲ್ಲ; ಮರೆತವೊಲಿಹನು |

ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ ||

ಅರಸಿಕೊಳ್ಳುವವೊಲಿಹದು; ದೊರೆತವೊಲ್ ತೋರೆ ಸುಖ |

ದೊರೆವವರೆಗಾಯಸವೊ – ಮಂಕುತಿಮ್ಮ

ಪದ-ಅರ್ಥ:ಮರೆತವೊಲಿಹನು=ಮರೆತವೊಲ್(ಮರೆತಂತೆ)+ಇಹನು(ಇದ್ದಾನೆ), ಅರಸಿಕೊಳುವವೊಲಿಹದು=ಅರಸಿಕೊಳುವ್‍ವೊಲ್(ಹುಡುಕಿಕೊಳ್ಳುವಂತೆ)+ಇಹುದು, ದೊರೆತೆವೊಲ್=ದೊರೆತಂತೆ, ದೊರೆವವರೆಗಾಯಸವೊ=ದೊರೆಯುವವರೆಗೆ+ಆಯಸವೊ ||

ವಾಚ್ಯಾರ್ಥ: ಬ್ರಹ್ಮ ಮರೆತಿದ್ದಾನೆಯೇ? ಮರೆತಿಲ್ಲ, ಮರೆತಂತೆ ಇದ್ದಾನೆ. ಜಗದ ಜೀವಗಳಲ್ಲಿ ತಾನೇ ಸೇರಿಕೊಂಡು ತನ್ನನ್ನೇ ಹುಡುಕಿಕೊಳ್ಳುವಂತಿದ್ದಾನೆ. ದೊರೆತಂತೆ ಅನ್ನಿಸಿದಾಗ ಸುಖ, ದೊರೆಯುವವರೆಗೆ ಆಯಸವೇ.

ವಿವರಣೆ: ತಾನೇ ಮಾಡಿದ ಸೃಷ್ಟಿಯನ್ನು ಭಗವಂತ ಮರೆತಿದ್ದಾನೆಯೇ? ಕೆಲವೊಮ್ಮೆ ಹಾಗೆ ಎನ್ನಿಸುವುದುಂಟಲ್ಲವೇ? ಅವನು ಮರೆತಿಲ್ಲ. ನಮಗೆ ಹಾಗೆ ತೋರುತ್ತದೆ. ಮಗು ಅಂಗಳದಲ್ಲಿ ಆಡುವಾಗ ತನ್ನ ಸುತ್ತಮುತ್ತ ಯಾರೂ ಇಲ್ಲ, ತಾಯಿ ತನ್ನನ್ನು ಗಮನಿಸುತ್ತಿಲ್ಲ ಎಂದು ಭಾವಿಸುತ್ತದೆ. ಆದರೆ ಅಡುಗೆ ಮನೆಯಲ್ಲಿ ಬೇರೆ ಕೆಲಸ ಮಾಡುವ ತಾಯಿ ಎಷ್ಟೊಂದು ವ್ಯಸ್ತಳಾಗಿದ್ದರೂ ಮಗುವಿನ ಮೇಲೆ ಹೇಗೆ ಒಂದು ಕಣ್ಣಿಟ್ಟಿರುತ್ತಾಳೋ ಹಾಗೆ ಭಗವಂತ ತಾನೇ ಎಲ್ಲದರಲ್ಲೂ ಸೇರಿಕೊಂಡು ಪ್ರಪಂಚವನ್ನು ಸದಾಕಾಲ ಗಮನಿಸುತ್ತಾನೆ. ಗಮನಿಸುವುದು ಮಾತ್ರವಲ್ಲ, ತನ್ನ ಸೃಷ್ಟಿಯಲ್ಲಿ ತನ್ನನ್ನು ತಾನೇ ಹುಡುಕುವ ಪ್ರಯತ್ನ ಮಾಡುತ್ತಾನೆ.

ಈ ಕಗ್ಗವನ್ನು ಓದುವಾಗ ನನ್ನ ಮನಸ್ಸಿಗೆ ಹೊಳೆದದ್ದು ಗುರುದೇವ ರವೀಂದ್ರನಾಥ್ ಠಾಕೂರರ ಗೀತಾಂಜಲಿಯ ಅರವತ್ತೈದನೆಯ ಪದ್ಯ. ಅದೊಂದು ಅತ್ಯಮೋಘವಾದ ಭಾವಧಾರೆ, ಸರ್ವಾರ್ಪಣದ ಗೌರೀಶಂಕರ. ಆ ಪದ್ಯ ಪ್ರಸ್ತುತ ಕಗ್ಗದ ಆಂತರ್ಯವನ್ನು ತಿಳಿಗೊಳಿಸಿ ಕಣ್ಣಮುಂದೆ ನಿಲ್ಲಿಸುತ್ತದೆ. ‘What divine drink would st thou have, my God’ ಎಂದು ಪ್ರಾರಂಭವಾಗುವ ಪದ್ಯ ಅನುವಾದಕ್ಕೆ ಸಿಕ್ಕದು. ಆದರೂ ಅದನ್ನು ಹೀಗೆ ಬರೆಯಬಹುದೇನೋ?

‘ಓ ನನ್ನ ದೇವರೇ, ತುಂಬಿಹರಿಯುತ್ತಿರುವ ನನ್ನ ಬದುಕಿನ ಬಟ್ಟಲಿನಿಂದ ಅದಾವ ದಿವ್ಯ ಪಾನೀಯವನ್ನು ಬಯಸುತ್ತೀಯೋ?

ಓ ನನ್ನ ಬಾಳ ಕಾವ್ಯದ ಕವಿಯೆ, ನಿನ್ನದೇ ಸೃಷ್ಟಿಯನ್ನು ನನ್ನ ಕಣ್ಣುಗಳ ಮೂಲಕ ಕಾಣುವುದು ಮತ್ತು ಮೌನವಾಗಿ ನನ್ನ ಕಿವಿಗಳ ದ್ವಾರದಲ್ಲಿ ನಿಂತು, ನಿನ್ನದೇ ಅನಂತ ಇಂಚರವನ್ನು ಕೇಳುವುದು ನಿನಗೆ ಆನಂದವೇ?

ನಿನ್ನ ಸೃಷ್ಟಿ ನನ್ನ ಮನದಲ್ಲಿ ಪದಗಳನ್ನು ಹೆಣೆಯುತ್ತಿದೆ, ಅದಕ್ಕೆ ನಿನ್ನ ಸಂತೋಷ ಸಂಗೀತವನ್ನು ಸೇರಿಸುತ್ತಿದೆ.

ನನ್ನ ತಂದೆ, ಅನನ್ಯವಾದ ಪ್ರೀತಿಯಲ್ಲಿ ನಿನ್ನನ್ನೇ ನನಗೆ ನೀಡಿ ನಿನ್ನ ಸಮಗ್ರ ಇಂಪನ್ನು ನನ್ನಲ್ಲಿ ಅನುಭವಿಸುತ್ತೀಯಾ?’

ಎಂಥ ಅನೂಹ್ಯವಾದ ಸರ್ವಾರ್ಪಣ! ಭಗವಂತ ತನ್ನನ್ನೇ ತನ್ನ ಸರ್ವಸೃಷ್ಟ ಯಲ್ಲಿ ಸಮರ್ಪಿಸಿಕೊಂಡು ತನ್ನ ಸೌಂದರ್ಯವನ್ನು, ಇಂಪನ್ನು, ಶ್ರೇಷ್ಠತೆಯನ್ನು ಅರಸುತ್ತಾನೆ. ಆ ಶ್ರೇಷ್ಠತೆಯನ್ನು ಕಂಡಾಗ ಸುಖಿಸುತ್ತಾನೆ. ಅದನ್ನು ಕಾಣುವವರೆಗೆ ಪ್ರಯಾಸಪಡುತ್ತಾನೆ. ಇದೊಂದು ಬಹುಸುಂದರವಾದ ಕಲ್ಪನೆ. ತನ್ನದೇ ಸೃಷ್ಟಿಯಲ್ಲಿ ತನ್ನ ಪೂರ್ಣತೆಯನ್ನು, ಸುಂದರತೆಯನ್ನು ಕಾಣಬಯಸುವ ಸೃಷ್ಟಿಕರ್ತ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT