ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಬೆಳಕಿನ ಎರಡು ರೂಪಗಳು

Last Updated 20 ಜನವರಿ 2019, 20:00 IST
ಅಕ್ಷರ ಗಾತ್ರ

ಮಾನಸವ ಚಿಂತೆವಿಡಿದಂದೊರ್ವನೆರಡಾಗಿ |
ತಾನದಾರೊಳೊ ವಾದಿಸುವನಂತೆ ಬಾಯಿಂ ||
ದೇನನೋ ನುಡಿಯುತ್ತ ಕೈಸನ್ನೆಗೈಯುವನು |
ಭಾನವೊಂದರೊಳೆರಡು – ಮಂಕುತಿಮ್ಮ || ರತಿ ||

ಪದ-ಅರ್ಥ: ಚಿಂತೆವಿಡಿದಂದೊರ್ವನೆರಡಾಗಿ=ಚಿಂತೆವಿಡಿದಂ+
ಓರ್ವನು+ಎರಡಾಗಿ, ತಾನದಾರೊಳೊ=ತಾನು+ಅದಾರಒಳೋ, ಭಾನುವೊಂದರೊಳೆರಡು=ಭಾನ(ಹೊಳಪು)+ಒಂದರೊಳು+ಎರಡು

ವಾಚ್ಯಾರ್ಥ: ಮನಸ್ಸಿಗೆ ಚಿಂತೆ ಹಿಡಿದಾಗ ಒಬ್ಬನು ತಾನು ಎರಡಾದಂತೆ ತಾನು ಯಾರ ಜೊತೆಗೋ ವಾದಮಾಡುವವನಂತೆ, ಬಾಯಿಂದ ಏನನ್ನೋ ಹೇಳುತ್ತ ಕೈಗಳಿಂದ ಸನ್ನೆ ಮಾಡುತ್ತಾನೆ. ಮೂಲ ಹೊಳಪು ಒಂದೇ ಆದರೆ ಎರಡಾಗಿ ಕಾಣುವುದು.

ವಿವರಣೆ: ಇದು ಡಿ.ವಿ.ಜಿ ಯವರ ಅಸಾಮಾನ್ಯವಾದ ಶಕ್ತಿ. ಅವರು ನಮ್ಮ ಕಣ್ಣಮುಂದೆ ನಮಗೆ ಅರ್ಥವಾಗುವಂಥ ಚಿತ್ರವನ್ನು ಕೊಡುತ್ತಾರೆ. ಆ ಚಿತ್ರ ಮನದಲ್ಲಿ ಮೂಡುತ್ತಿದ್ದಂತೆ ಅದಕ್ಕೊಂದು ಅಧ್ಯಾತ್ಮಿಕ ಅರ್ಥವಿದೆಯೆಂಬ ಸೂಚನೆಯನ್ನು ನೀಡುತ್ತಾರೆ. ಅದರ ಬೆಳಕು ಮೂಡಿದಾಗ ಕಗ್ಗ ವಾಸ್ತವದ ಹಾಗೂ ಅಧ್ಯಾತ್ಮಿಕತೆಯ ಎರಡೂ ಹಂತಗಳಲ್ಲಿ ಸುಳಿದಾಡಿದ್ದನ್ನು ಕಂಡು ಬೆರಗು ಹುಟ್ಟುತ್ತದೆ.

ಮೊದಲಿಗೆ ನಮ್ಮ ಅರಿವಿಗೆ ಬರುವ ಸಾಮಾನ್ಯ ಚಿತ್ರ. ಮನಸ್ಸಿಗೆ ಚಿಂತೆ ಹಿಡಿದ, ಭ್ರಾಂತಿಯಾದ ಮನುಷ್ಯ ತಾನೊಬ್ಬನೇ ಇದ್ದರೂ, ಇಬ್ಬರಿದ್ದಂತೆ, ತಾನು ಇನ್ನೊಬ್ಬನ ಜೊತೆಗೆ ಮಾತನಾಡುವವನಂತೆ ಕೈಸನ್ನೆ, ಬಾಯಿಸನ್ನೆ ಮಾಡುತ್ತಿರುತ್ತಾನೆ. ತಾನೊಬ್ಬನೇ ಇರುವುದು ಎನ್ನುವುದನ್ನು ಮರೆತು ಇಬ್ಬರಿರುವಂತೆ ವ್ಯವಹಾರ ಮಾಡುತ್ತಾನೆ. ಹೊರಗಿನಿಂದ ನೋಡುವವರಿಗೆ ಅವನ ನಡೆ ವಿಚಿತ್ರ ಎನ್ನಿಸುತ್ತದೆ, ಅವನೊಬ್ಬ ಭ್ರಮಾಧೀನ ವ್ಯಕ್ತಿ ಎಂದುಕೊಳ್ಳುತ್ತಾರೆ.

ಆದರೆ ಸ್ವಲ್ಪ ಆಳದಲ್ಲಿ ನೋಡಿದರೆ ನಾವೆಲ್ಲರೂ ಆ ವ್ಯಕ್ತಿಯಂತೆಯೆ ಇದ್ದೇವೆ. ನಾನು ಒಬ್ಬ ಮನುಷ್ಯ, ನನ್ನ ದೇಹವೇ ನಾನು ಎಂದು ತಿಳಿದಿದ್ದೇವೆ. ಜನಕ ಮಹಾರಾಜನ ಅರಮನೆಗೆ ಅಷ್ಟಾವಕ್ರ ಋಷಿಗಳು ಬಂದರು. ಹೆಸರೇ ಹೇಳುವಂತೆ ಋಷಿಗಳ ಶರೀರ ಎಂಟು ಕಡೆಗೆ ವಕ್ರವಾಗಿತ್ತು, ನೋಡಲು ಕುರೂಪವಾಗಿತ್ತು. ಸಾವಕಾಶವಾಗಿ ಅಲುಗಾಡುತ್ತ ಅರಮನೆಯೊಳಗೆ ಬಂದ ಅಷ್ಟಾವಕ್ರರು ನುಣುಪಾದ ನೆಲದ ಮೇಲೆ ಜಾರಿ ಬಿದ್ದರು. ಅವರ ಆಕಾರ, ನಡಿಗೆ ಮತ್ತು ಬೀಳುವುದನ್ನು ನೋಡಿ ಸಭಾಸದರು ನಕ್ಕರು. ಆಶ್ಚರ್ಯವೆಂದರೆ ಋಷಿಗಳಿಗೆ ಕೋಪ ಬರಲಿಲ್ಲ. ಬದಲಿಗೆ ಅವರು ನಿಧಾನವಾಗಿ ಎದ್ದು ಎಲ್ಲರನ್ನೂ ನೋಡಿ ತಾವೂ ಮನಸಾರೆ ನಕ್ಕರು. ಈಗ ಸಭಾಸದರು ಗಂಭೀರರಾದರು. ಒಬ್ಬ ವ್ಯಕ್ತಿ ಮುನಿಗಳನ್ನು ಕೇಳಿದ, ‘ನಾವು ನಕ್ಕು ತಪ್ಪು ಮಾಡಿದೆವು. ನಿಮ್ಮ ವಕ್ರಾಕಾರ, ತಾವು ಬೀಳುವ ರೀತಿಯನ್ನು ನೋಡಿ ನಾವು ನಕ್ಕೆವು. ಆದರೆ ತಾವು ನಕ್ಕದ್ದು ಏಕೆ?’ಅಷ್ಟವಕ್ರರು ಹೇಳಿದರು.

‘ನಾನೂ ಅದೇ ಕಾರಣಕ್ಕಾಗಿ ನಕ್ಕೆ. ಯಾಕೆಂದರೆ ನೀವೆಲ್ಲ ಈ ವಕ್ರವಾದ, ಅನಾಕರ್ಷಕವಾದ, ನಶ್ವರವಾದ ದೇಹವನ್ನೇ ನಾನು ಎಂದು ತಿಳಿದಿದ್ದೀರಲ್ಲವೇ?ನನ್ನ, ನಿಮ್ಮೆಲ್ಲರ, ಜಗತ್ತಿನ, ಸರ್ವಪ್ರಾಣಿಗಳಲ್ಲಿ ಅಂತರ್ಗತವಾಗಿರುವುದು ಒಂದೇ ಬ್ರಹ್ಮಸತ್ವ. ನಾನು, ನೀನು ಎನ್ನುವುದು ಯಾವುದೂ ಇಲ್ಲ. ಎಲ್ಲವೂ ಒಂದೇ ಆಗಿದೆ. ಅದನ್ನು ನೀವರಿಯಲಿಲ್ಲವಲ್ಲ ಎಂದು ನಕ್ಕೆ’. ಸಭಾಸದರಿಗೆ ಅಮರವಾದ ಆತ್ಮನ ದರ್ಶನವಾಗಿತ್ತು !

ಕಗ್ಗದ ಕೊನೆಯ ಸಾಲಿನ ಅರ್ಥ ಅದೇ. ಹೊಳಪು ಒಂದೇ, ಅದು ಅತ್ಮದ್ದು. ಆದರೆ ವ್ಯವಹಾರದಲ್ಲಿ ದೇಹ ಮತ್ತು ಆತ್ಮ ಎಂದು ಎರಡಾಗಿ ತೋರುತ್ತದೆ, ವ್ಯವಹರಿಸುತ್ತದೆ, ಆ ಭ್ರಮಾಧೀನನಾದ ಮನುಷ್ಯನಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT