ಮೋಹದ ಸೆಳೆತ

7

ಮೋಹದ ಸೆಳೆತ

ಗುರುರಾಜ ಕರಜಗಿ
Published:
Updated:

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ, ಬೋಧಿಸತ್ವ ಆಕಾಶ ದೇವತೆಯಾಗಿ ಹುಟ್ಟಿದ್ದ. ವಾರಣಾಸಿಯಲ್ಲಿ ಕಾರ್ತೀಕಮಾಸ ಬಹಳ ಸಂಭ್ರಮದಿಂದ ಆಚರಿಸಲ್ಪಡುತ್ತಿತ್ತು. ನಗರವೆಲ್ಲ ಸ್ವರ್ಗದಂತೆ ಅಲಂಕಾರವಾಗಿತ್ತು. ನಗರದ ಎಲ್ಲ ಜನರು ಹೊಸ ಬಟ್ಟೆಗಳು, ಹೊಸ ಆಭರಣಗಳನ್ನು ಧರಿಸಿ ಉತ್ಸವದಲ್ಲಿ ಭಾಗಿಯಾಗುತ್ತಿದ್ದರು.

ವಾರಣಾಸಿಯಲ್ಲಿ ಒಬ್ಬ ದಟ್ಟದರಿದ್ರನಿದ್ದ. ಅವನ ಬಳಿ ಹೊಸ ಬಟ್ಟೆಇರಲಿಲ್ಲ. ಆದರೆ ಒಂದುಜೊತೆ ದಪ್ಪ ಬಟ್ಟೆಇತ್ತು. ಅದನ್ನು ಆತ ಒಗೆದು ಒಗೆದು ಸ್ವಚ್ಛ ಮಾಡಿ, ನೂರಾರು ಮಡಿಕೆ ಬರುವಂತೆ ಮಾಡಿ ಕಾಪಾಡಿಕೊಂಡಿದ್ದ. ಅವನ ಹೆಂಡತಿಯ ಮೇಲೆ ಅವನಿಗೆ ಅಸಾಧ್ಯ ಮೋಹ. ಆಕೆ, ‘ಸ್ವಾಮಿ, ಇಡೀ ನಗರವೇ ಕಾರ್ತೀಕ ಮಾಸದ ಸಂಭ್ರಮದಲ್ಲಿದೆ. ನನಗೂ ನಿನ್ನನ್ನುಅಪ್ಪಿ ಮುದ್ದಾಡಿ ನಂತರ ಕೇಸರೀ ವರ್ಣದ ಬಟ್ಟೆಯನ್ನುಟ್ಟು ನಗರವನ್ನು ಸುತ್ತಬೇಕೆಂಬ ಆಸೆಯಾಗಿದೆ’ ಎಂದು ಕೇಳಿದಳು. ‘ಪ್ರಿಯೆ, ನಾವು ಬಡವರು, ನಮ್ಮ ಬಳಿ ಕೇಸರಿಯ ಬಟ್ಟೆಎಲ್ಲಿದ್ದೀತು? ನನ್ನ ಬಳಿ ಇರುವ ಶುದ್ಧ ಬಿಳಿಯ ಬಟ್ಟೆಯನ್ನೇ ಉಟ್ಟು ತಿರುಗಾಡಿ ಸಂತೋಷಪಡು’ ಎಂದ ಗಂಡ.

‘ಕೇಸರಿ ಬಟ್ಟೆಇಲ್ಲದೇ ನಾನು ಮನೆಯ ಹೊರಗೆ ಹೋಗಲಾರೆ, ಉತ್ಸವದಲ್ಲಿ ಭಾಗವಹಿಸುವುದು ಸಾಧ್ಯವಿಲ್ಲ. ನೀನು ಬೇಕಾದರೆ ಬೇರೆ ಹೆಂಗಸಿನ ಜೊತೆಗೆ ಸುತ್ತಾಡು’ ಎಂದಳು ಮೋಹದ ಹೆಂಡತಿ.

ಅಸಹಾಯಕನಾಗಿ ಗಂಡ ಕೇಳಿದ, ‘ನಾನೇನು ಮಾಡಲಿ? ನಮ್ಮಂತಹ ಬಡವರಿಗೆ ಕೇಸರಿ ಎಲ್ಲಿ ದೊರೆತೀತು?’

‘ನೀನು ಮನಸ್ಸು ಮಾಡಿದರೆ ಅರಸನ ಸಂರಕ್ಷಣಾ ಗೃಹದಲ್ಲಿಇರುವ ಕೇಸರಿಯನ್ನು ತರಬಹುದಲ್ಲವೇ?” ಎಂದು ಕೇಳಿದಳು.
‘ಅಯ್ಯೋ, ಅಲ್ಲಿ ಸೈನಿಕರು ಬಿಟ್ಟಾರೆಯೇ? ನನ್ನನ್ನು ಶೂಲಕ್ಕೇ ಏರಿಸಿಬಿಡುತ್ತಾರೆ. ಅಂಥ ಆಸೆ ಬೇಡ’ ಎಂದು ಬೇಡಿಕೊಂಡ ಗಂಡ.

‘ನನಗೋಸ್ಕರ ಅಷ್ಟೂ ಮಾಡಲಾರಿರಾ? ಕತ್ತಲಲ್ಲಿ ಹೋದರೆ ಯಾವ ಸೈನಿಕನಿಗೆ ಗೊತ್ತಾದೀತು?’ ಎಂದು ಕೆಣಕಿದಳು ಹೆಂಡತಿ.

ನಿರ್ವಾಹವಿಲ್ಲದೆ ಗಂಡ ರಾತ್ರಿ ಸಂರಕ್ಷಣಾ ಗೃಹಕ್ಕೆ ಹೋದ. ಬೇಲಿ ಹಾರಿ ಹೋಗುವಾಗ ಸೈನಿಕರು ಸದ್ದು ಕೇಳಿ ಓಡಿ ಬಂದು ಹಿಡಿದು ದಳಪತಿಯ ಮುಂದೆ ನಿಲ್ಲಿಸಿದರು. ಮರುದಿನ ರಾಜನ ಮುಂದೆ ತಂದಾಗ ‘ಇವನನ್ನು ಶೂಲಕ್ಕೆ ಏರಿಸಿಬಿಡಿ’ ಎಂದ ರಾಜ.
ಮರುದಿನ ಬೆಳಿಗ್ಗೆ ಅವನನ್ನು ಶೂಲಕ್ಕೆ ಏರಿಸಿದರು. ಇನ್ನೂ ಪ್ರಾಣ ಹೋಗಲಿಲ್ಲ. ನೋವಿನಿಂದ ಒದ್ದಾಡುತ್ತಿದ್ದ. ಕಾಗೆಗಳು ಅವನ ತಲೆಯ ಮೇಲೆ ಕುಳಿತು ತಮ್ಮ ಬಲವಾದ ಕೊಕ್ಕಿನಿಂದ ಅವನ ತಲೆಯನ್ನು ಕುಕ್ಕಿ, ಕುಕ್ಕಿ ಮಾಂಸವನ್ನು ತಿನ್ನುತ್ತಿದ್ದವು. ಆದರೆ ಆ ಮನುಷ್ಯ ಮಾತ್ರ, ‘ನಾನು ಹೇಗಾದರೂ ಮಾಡಿ ಕೇಸರಿಯನ್ನು ಕದ್ದು ಹೆಂಡತಿಯ ಬಟ್ಟೆಯನ್ನು ಕೇಸರಿವರ್ಣವನ್ನಾಗಿ ಮಾಡಿಕೊಟ್ಟಿದ್ದರೆ ಈ ಕಾರ್ತೀಕಮಾಸದಲ್ಲಿಆಕೆ ಹೇಗೆ ಸಂಭ್ರಮಿಸುತ್ತಿದ್ದಳು, ಎಷ್ಟು ಚೆನ್ನಾಗಿ ಕಾಣುತ್ತಿದ್ದಳು’ ಎಂದು ಯೋಚಿಸಿ ದು:ಖ ಪಡುತ್ತಿದ್ದ.

ಅತಿಯಾದ ಮೋಹದ ಸೆಳವೇ ಅಂತಹದ್ದು! ತಾನು ನೋವು ಪಟ್ಟು ಸಾಯುತ್ತಿದ್ದರೂ ಹೆಂಡತಿಯ ಮೋಹದ ಬಯಕೆಯನ್ನುಈಡೇರಿಸಲಾಗಲಿಲ್ಲವಲ್ಲಎಂದೇ ದು:ಖ ಪಡುತ್ತಿದ್ದ. ಮೋಹ ಹೆಚ್ಚಾದಷ್ಟು ನೋವು ಹೆಚ್ಚು. 

 

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !