ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ, ಜಗತ್ತುಗಳ ವಿಕಾಸ ಬ್ರಹ್ಮನ ವಿಲಾಸ

Last Updated 30 ಜನವರಿ 2019, 20:19 IST
ಅಕ್ಷರ ಗಾತ್ರ

ಬೆಳೆಹೊಳಪು ವಿಕಸನ ವಿಕಾರ ಸಂಭ್ರಮಗಳಲಿ |
ಬೆಳಕು ವೇಗಗಳೆನಿಪ ಕಾಲ ದಿಕ್ಕುಗಳ ||
ಚಲನೆಯಲಿ ವಿಶ್ವಸಂಮೋಹನಗಳೆಲ್ಲವಾ |
ವಿಲಸಿತವು ಬೊಮ್ಮನದು – ಮಂಕುತಿಮ್ಮ || 87 ||

ಪದ-ಅರ್ಥ: ವಿಕಸನ=ವಿಕಾಸ, ಸಂಮೋಹನ=ಆಕರ್ಷಣೆ, ವಿಲಸಿತ=ವಿಲಾಸ

ವಾಚ್ಯಾರ್ಥ: ಬೆಳೆಯುವಿಕೆ, ಹೊಳಪು, ವಿಕಾಸ ಹಾಗೂ ವಿಕಾರವೆಂಬ ಸಂಭ್ರಮಗಳಲ್ಲಿರುವ, ಬೆಳಕು ಮತ್ತು ವೇಗಗಳೆನಿಸುವ ಕಾಲದಿಕ್ಕುಗಳ ಚಲನೆಯಲ್ಲಿರುವ, ವಿಶ್ವದ ಸಂಮೋಹನೆಗಳೆಲ್ಲವೂ ಆ ಬ್ರಹ್ಮನ ವಿಲಾಸವೇ ಆಗಿವೆ.

ವಿವರಣೆ: ಕಗ್ಗದ ಮೂಲವಸ್ತು ಜಗನ್ಮೂಲತತ್ವ. ಇದು ಮನುಷ್ಯನಾದವನು ಇಹವನ್ನು ತ್ಯಜಿಸದೆ, ಪರವನ್ನು ಮರೆಯದೆ ಅವೆರಡನ್ನೂ ಸಮನ್ವಯದಿಂದ ಕಂಡು ಸುಖ-ಶಾಂತಿಗಳಿಂದ ಬದುಕುವ ವ್ಯವಹಾರ ಜ್ಞಾನ. ಅದು ಮೂರು ಅಂಶಗಳನ್ನು ಕುರಿತ ಸಿದ್ಧಾಂತದ ಮೇಲೆ ನಿಂತಿದೆ.

1. ‘ನಾನು’ ಎನ್ನುವ ಜೀವ
2. ಜೀವದ ಅನುಭವಕ್ಕೆ ಸದಾ ಬರುವ ‘ಪ್ರಪಂಚ’
3. ಜೀವ, ಪ್ರಪಂಚಗಳೆರಡಕ್ಕೂ ಮೂಲಕಾರಣವಾಗಿಯೂ, ನಿಯಾಮಕವಾಗಿಯೂ ಇರುವ ವಿಶೇಷ ವಸ್ತು ಅಥವಾ ಶಕ್ತಿ ಇದೆಯಲ್ಲ ಆ ಪರವಸ್ತು, ಬ್ರಹ್ಮ, ಈಶ್ವರ ಅಥವಾ ‘ಭಗವಂತ’.

ಜೀವ, ಜಗತ್ತು, ಭಗವಂತ ಈ ಮೂರರ ಅರಿವಿನ ವಿಚಾರವೇ ತತ್ವಜ್ಞಾನ. ಅದರ ವಿಚಾರವೇ ಈ ಕಗ್ಗದ ಮೂಲ ಸಾಮಗ್ರಿ.

ಮೊದಲನೆಯ ಸಾಲು ಜೀವಿಗಳಿಗೆ ಸಂಬಂಧಿಸಿದ್ದು. ಪ್ರತಿಯೊಂದು ಜೀವ ಹುಟ್ಟುತ್ತದೆ, ಬೆಳೆಯುತ್ತದೆ (ಹೊಳೆಯುತ್ತದೆ), ಮುಂದೆ ವಿಕಾಸನ ಹೊಂದುತ್ತದೆ. ನಂತರ ಕಾಲಕ್ರಮೇಣ ವಿಕಾರಹೊಂದಿ ಕರಗಿ ಹೋಗುತ್ತದೆ. ಸರ್ವ ಪ್ರಾಣಿಗಳಿಗೂ ಆನ್ವಯಿಸಿದ್ದು ಇದು. ಹುಟ್ಟು, ಬಾಲ್ಯ, ಯೌವನ, ಮಧ್ಯವಯಸ್ಸು, ವೃದ್ಧಾಪ್ಯ ಕೊನೆಗೆ ಮರಣ. ಇದರಲ್ಲಿ ಪ್ರತಿಯೊಂದು ಹಂತವೂ ಸಂಭ್ರಮವೇ. ಯಾವ ಕಾಲಕ್ಕೆ ಏನಾಗಬೇಕೋ ಅದು ಆದರೆ ಸಂಭ್ರಮವೇ. ಎರಡನೆಯ ಸಾಲು ಜಗತ್ತಿಗೆ ಸಂಬಂಧಪಟ್ಟಿದ್ದು. ಅದರ ರಚನೆ ಅಷ್ಟಾಂಶದ್ದು.

ಭೂಮಿರಾಪೋ ನಲೋ ವಾಯು: ಖಂ ಮನೋ ಬುದ್ಧಿರೇವ ಚ |
ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟದಾ ||

ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ- ಈ ಐದು ಪಂಚಭೂತಗಳು. ಇವುಗಳ ಗುಣಗಳಾದ ಗಂಧ, ರುಚಿ, ಬೆಳಕು, ಸ್ಪರ್ಶ, ಶಬ್ದ - ಈ ಐದನ್ನು ಅನುಭವಿಸಿ ಅವುಗಳ ಜೊತೆಗೆ ಕೆಲಸ ಮಾಡುವ ಮನಸ್ಸು, ಬುದ್ಧಿ, ಅಹಂಕಾರ- ಈ ಮೂರು ಅಂತ:ಕರಣಗಳು ಒಟ್ಟಾಗಿ ಸೇರಿ ಎಂಟು ಪ್ರಕೃತಿಯ ಅಂಗಗಳಾಗುತ್ತವೆ. ಈ ಜಗತ್ತಿನ ಗುಣಲಕ್ಷಣಗಳು ನಿರ್ಭರವಾಗಿರುವುದು ಅದರ ಚಲನೆಯ ವೇಗದಿಂದ. ಅದರ ಚಲನೆಯೇ ನೆರಳು ಬೆಳಕಿನ ಅವಧಿಯನ್ನು ನಿರ್ಧರಿಸುವುದು. ಕಾಲ, ದಿಕ್ಕುಗಳನ್ನು ನಿರ್ದೇಶಿಸುವುದು. ಭೂಮಿ ತನ್ನ ಸುತ್ತಲೂ ಸುತ್ತುವ ವೇಗದಿಂದಲೇ, ಸೂರ್ಯನನ್ನು ಸುತ್ತುವ ವೇಗದಿಂದಲೇ ಹಗಲು-ರಾತ್ರಿಗಳ ನಿರ್ಧಾರವಾಗುವುದು.

ಹೀಗೆ ಜೀವಿಗಳ ಹೆಜ್ಜೆ ಹೆಜ್ಜೆಯ ವಿಕಾಸದ ಸಂಭ್ರಮ, ಜಗತ್ತಿನ ವೇಗದ, ಬೆಳಕಿನ ಆಕರ್ಷಣೆಗಳು ಎಲ್ಲವೂ ಬ್ರಹ್ಮನ ವಿಲಾಸದಿಂದಲೇ ಆದದ್ದು ಎನ್ನುತ್ತದೆ ಕಗ್ಗ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT