ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೀಲಾಪ್ರಿಯನಾದ ಬ್ರಹ್ಮ

Last Updated 15 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಕೇಳಿಯುಂ ಮಾಯೆಯದು; ನೃತ್ಯಗತಿ ಬರಿ ತೋರ್ಕೆ |
ಮೂಲಮಂ ಕಂಡಂಗೆ ಸಂಭ್ರಾಂತಿಯೇನು ? ||
ಆಳದಲಿ ನಿರ್ಲಿಪ್ತ ಮೇಲೆ ನಿಯತಿಕ್ಲುಪ್ತ |
ಲೀಲಾಪ್ರಿಯಂ ಬ್ರಹ್ಮ – ಮಂಕುತಿಮ್ಮ || 94 ||

ಪದ-ಅರ್ಥ: ಕೇಳಿ=ಆಟ, ತೋರ್ಕೆ=ತೋರಿಕೆ, ನಿರ್ಲಿಪ್ತ=ಯಾವು
ದಕ್ಕೂ ಅಂಟದವನು, ನಿಯತಿಕ್ಲುಪ್ತ =ನಿಯಮಕ್ಕೆ ಕಟ್ಟುಬಿದ್ದವನು.
ವಾಚ್ಯಾರ್ಥ: ಈ ಆಟವೆಲ್ಲ ಮಾಯೆಯದೆ. ಜಗತ್ತಿನ ನೃತ್ಯವೂ ಒಂದು ತೋರಿಕೆಯೇ. ಆದರೆ ಮೂಲದಲ್ಲಿ ಬ್ರಹ್ಮನ ಗುಣಗಳನ್ನು ಅರಿತವರಿಗೆ ಭ್ರಾಂತಿ ಇಲ್ಲ. ಬ್ರಹ್ಮ ಮೂಲದಲ್ಲಿ ನೋಡಿದರೆ ನಿರ್ಲಿಪ್ತ, ಯಾವುದಕ್ಕೂ ಅಂಟದವನಲ್ಲ ಆದರೆ ಮೇಲ್ನೋಟಕ್ಕೆ ಆತ ನಿಯಮಕ್ಕೆ ಬದ್ಧವಾದಂತಿದ್ದಾನೆ. ಬ್ರಹ್ಮನಿಗೆ ಈ ಲೀಲೆ ಪ್ರಿಯವೇ.

ವಿವರಣೆ: ಈ ಅತ್ಯದ್ಭುತವಾದ ಜಗತ್ತಿನ ನೃತ್ಯ ಕಲ್ಪನಾತೀತವಾದದ್ದು. ಆದರೆ ಇದು ಕೇವಲ ತೋರಿಕೆ ಮಾತ್ರ. ಯಾಕೆಂದರೆ ಇದರ ಆಟವೆಲ್ಲ ಮಾಯೆಯೇ. ಕಣ್ಣು ತೆರೆದು ನೋಡಿದರೆ ದೇಹ, ಜಗತ್ತು ಕಾಣುತ್ತವೆ, ಕುಣಿಯುತ್ತವೆ. ದೇಹಪ್ರೀತಿ, ತನ್ನ ದೇಹಕ್ಕೆ ಸಂಬಂಧವಿದ್ದವರೆಲ್ಲರೊಡನೆ ಮೋಹ. ಒಳಗಿರುವ ಆತ್ಮ ಮಸುಕಾಗಿ ಹೋದಂತಿದೆ. ನಿಜವಾಗಿಯೂ ನೋಡಿದರೆ. ದೇಹ, ಮನಸ್ಸುಗಳನ್ನು ನಿಗ್ರಹ ಮಾಡಬೇಕಿದ್ದ ಆತ್ಮನ ಪ್ರಭಾವ ಹೆಚ್ಚಾಗಬೇಕಿತ್ತು. ಆದರೆ ಆದದ್ದೇನು? ದೇಹ, ಮನಸ್ಸುಗಳ ಪ್ರಭಾವ ಆತ್ಮನ ಇರುವಿಕೆಯನ್ನೇ ಮರೆಮಾಡಿದಂತಿದೆ. ಇದೇ ಭ್ರಾಂತಿ, ಮಾಯೆ. ಈ ಮಾಯೆ ತುಂಬ ವಿಚಿತ್ರ. ಅದು ಇದೆ ಎಂದರೆ ಇದೆ, ಇಲ್ಲವೆಂದರೆ ಇಲ್ಲ. ಅದು ಸತ್ಯವೂ ಹೌದು, ಅಸತ್ಯವೂ ಹೌದು. ಅದು ಸದಸತ್ ವಿಲಕ್ಷಣವಾದದ್ದು. ಅದು ಯಾರನ್ನೂ ಬಿಟ್ಟಿದ್ದಿಲ್ಲ.

ಆದಿ ಶಂಕರಾಚಾರ್ಯರು ಒಂದು ವಾದದ ಸಮರ್ಥನೆಗಾಗಿ ಅನುಭವ ಪಡೆಯಲು ಪರಕಾಯ ಪ್ರವೇಶದಿಂದ ರಾಜನೊಬ್ಬನ ಶರೀರವನ್ನು ಪ್ರವೇಶಿಸಿದರು. ಅವರು ಶಿಷ್ಯರಿಗೆ ಹೇಳಿಹೋಗಿದ್ದ ಸಮಯ ಮುಗಿಯುತ್ತ ಬಂತು. ಶಿಷ್ಯರು ಅವರನ್ನು ಹುಡುಕಿಕೊಂಡು ಅರಮನೆಗೆ ಬಂದರು. ಏಕಾಂತದಲ್ಲಿ ರಾಜನನ್ನು ಕಂಡು, “ಸ್ವಾಮೀ ನಾವು ನಿಮ್ಮ ಶಿಷ್ಯರು. ತಾವು ಹಾಕಿಕೊಂಡು ಬಂದ ಅವಧಿ ಮುಗಿಯುತ್ತಿದೆ. ದಯವಿಟ್ಟು ಹೊರಬನ್ನಿ” ಎಂದು ಬೇಡಿದರು. ಆಗ ಶಂಕರಾಚಾರ್ಯರು, “ನೀವು ಯಾರು? ನಾನು ರಾಜ. ನನಗೆ ಶಿಷ್ಯರಾರೂ ಇಲ್ಲ” ಎಂದರಂತೆ. ಶಿಷ್ಯರು ಆದದ್ದನ್ನು ನೆನಪಿಸಿ, “ತಾವು ಶಂಕರರು, ಪರಕಾಯ ಪ್ರವೇಶ ಮಾಡಿದ್ದೀರಿ” ಎಂದಾಗ ಶಂಕರರು ರಾಜನ ದೇಹ ತ್ಯಜಿಸಿ ಹೊರಬಂದು ತಮ್ಮ ದೇಹವನ್ನು ಸೇರಿದರಂತೆ. ಶಿಷ್ಯರು “ಅದು ಹೇಗೆ ಸ್ವಾಮೀ ತಮ್ಮಂತಹವರಗೆ, ಜ್ಞಾನಿಗಳಿಗೆ, ಇಷ್ಟು ವರ್ಷ ಅದ್ವೈತ ಸಾಧನೆ ಮಾಡಿದ ತಮಗೆ ಇಷ್ಟು ಬೇಗ ಮರೆವು ಬಂದದ್ದು ಹೇಗೆ?” ಎಂದು ಕೇಳಿದಾಗ ಶಂಕರರು, “ಹೌದಪ್ಪ, ಅದೇ ಮಾಯೆ” ಎಂದರಂತೆ! ಈ ಮಾಯಾಶಕ್ತಿ ಅದ್ಭುತವಾದದ್ದು. ಕಣ್ಣಿಗೆ ಕಾಣುವ ಜಗತ್ತಿನ ನೃತ್ಯವೆಲ್ಲ ಈ ಮಾಯೆಯೇ. ಮಾಯಾಪಟಲ ನಮ್ಮನ್ನು ಸುತ್ತುವರೆದ ಕಾರಣದಿಂದ ಜಗಜ್ಜೀವೇಶ್ವರ ತತ್ವ ನಮಗೆ ದೊರಕುವದಿಲ್ಲ. ಆದರೆ ಯಾವನು ಮೂಲವನ್ನು ಕಂಡಿದ್ದಾನೋ, ಈ ಮಾಯೆಯ ಮುಸುಕನ್ನು ಕಳೆದು ಬಿಸಾಡಿದ್ದಾನೋ ಅವನಿಗೆ ಪರಮತತ್ವ ಲಭ್ಯವಾಗುತ್ತದೆ. ಅದನ್ನು ದಾಟುವುದಕ್ಕೆ ಒಂದೇ ಉಪಾಯವೆಂದರೆ ಸದಾ ಕಾಲ ಭಗವಂತನನ್ನೇ ಆಶ್ರಯಿಸಿಕೊಂಡಿರುವುದು, ಈಶ್ವರನ ಇರುವಿಕೆಯನ್ನು ನಮ್ಮ ಬುದ್ಧಿಯಲ್ಲಿ ಸ್ಥಿರಪಡಿಸಿಕೊಳ್ಳುವುದು. ಆದರೆ ಆ ಈಶ್ವರ ಹೇಗಿದ್ದಾನೆ? ಆಳದಲ್ಲಿ ನಿರ್ಲಿಪ್ತ- “ಸರ್ವಕರ್ಮಾಣಿ ಮನಸಾಸಂನ್ಯಸ್ಯ” ಅಂತರಂಗದಲ್ಲಿ ಎಲ್ಲ ಕಾರ್ಯಗಳಲ್ಲಿ ಸನ್ಯಾಸ. ಅಂತರಂಗದಲ್ಲಿ ಮಾತ್ರ ಸಂನ್ಯಾಸನ. ಆದರೆ ಬಹಿರಂಗದಲ್ಲಿ ಸದಾ ಕಾರ್ಯಪ್ರವೃತ್ತ. ಇಲ್ಲದಿದ್ದರೆ ಜಗತ್ತು ನಡೆಯಬೇಕಲ್ಲ? ಸಂನ್ಯಸನ ಅಂತರಂಗದ ಕಾರ್ಯ, ಅದರಿಂದ ಬಹಿರಂಗ ಕಾರ್ಯದಲ್ಲಿ ಲೋಪವಾಗಬಾರದು. ಅಂತರಂಗದ ನಿರ್ಲಿಪ್ತತೆ, ಬಹಿರಂಗದ ನಿಷ್ಠುರ ಕರ್ತವ್ಯ ಪ್ರಜ್ಞೆ ಎರಡೂ ಬ್ರಹ್ಮನ ಲೀಲೆಗಳೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT