ಅನಿಶ್ಚಿತ ಭವಿಷ್ಯ

ಶುಕ್ರವಾರ, ಮಾರ್ಚ್ 22, 2019
28 °C

ಅನಿಶ್ಚಿತ ಭವಿಷ್ಯ

ಗುರುರಾಜ ಕರಜಗಿ
Published:
Updated:
Prajavani

ಹಿಂದೆ ಬ್ರಹ್ಮದತ್ತ ರಾಜ್ಯವಾಳುತ್ತಿದ್ದಾಗ ಬೋಧಿಸತ್ವ ವಾರಣಾಸಿಯ ಒಂದು ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದ. ದೊಡ್ಡವನಾದಂತೆ ಎಲ್ಲ ವಿದ್ಯೆಗಳಲ್ಲಿ ಪರಿಣಿತನಾಗಿ ನಂತರ ಗುರುಗಳನ್ನು ಆಶ್ರಯಿಸಿ ಪಬ್ಬಜಿತನಾದ. ಧ್ಯಾನದಲ್ಲಿ ಮನಸ್ಸನ್ನು ನೆಟ್ಟು ಹಿಮಾಲಯದ ಸರೋವರದ ಬಳಿ ವಾಸ ಹೂಡಿದ.

ಒಂದು ದಿನ ಇಡೀ ರಾತ್ರಿ ಯೋಗಾಭ್ಯಾಸವನ್ನು ಮಾಡುತ್ತಿದ್ದ. ಬೆಳಿಗ್ಗೆ ಅರುಣೋದಯ ಕಾಲದಲ್ಲಿ ಸ್ನಾನ ಮಾಡಿದ. ಅವನ ಮೈ ಬಣ್ಣ ಸುವರ್ಣಕಾಂತಿಯನ್ನು ಹೊಂದಿತ್ತು. ಅವನು ಒಂದು ವಲ್ಕಲ-ಚೀವರವನ್ನು ಒಂದು ಕೈಯಲ್ಲಿ ಹಿಡಿದು ತನ್ನ ಮೈಯನ್ನು ಒಣಗಿಸುತ್ತಿದ್ದ. ಅವನು ಅಂತರವಾಸವನ್ನು ಮಾತ್ರ ತೊಟ್ಟಿದ್ದ. ಬೆಳಗಿನ ಸೂರ್ಯನ ಎಳೆಬಿಸಿಲು ಮೈಮೇಲೆ ಬಿದ್ದಾಗ ಅವನ ಸುಂದರ ಶರೀರ ಸುವರ್ಣದ ಮೂರ್ತಿಯಂತೆ ಕಂಗೊಳಿಸುತ್ತಿತ್ತು. ಅವನು ತನ್ನ ದೇಹಸೌಂದರ್ಯಕ್ಕಾಗಿ ತುಂಬ ಪ್ರಸಿದ್ಧನೂ ಆಗಿದ್ದ.

ಆಗ ಆಕಾಶದಿಂದ ಅವನನ್ನು ನೋಡುತ್ತಿದ್ದ ದೇವಕನ್ಯೆಯೊಬ್ಬಳು ಅವನಲ್ಲಿ ಮೋಹಿತಳಾದಳು. ಅವಳು ಕೆಳಗೆ ಇಳಿದು ಬಂದು ಬೋಧಿಸತ್ವನನ್ನು ಪ್ರಲೋಭನಗೊಳಿಸುತ್ತ. “ಭಿಕ್ಷು, ನೀನು ಚೆಲುವ, ತರುಣ. ನಿನ್ನ ಕೂದಲುಗಳೆಷ್ಟು ಸುಂದರವಾಗಿವೆ! ಕಪ್ಪಾಗಿವೆ! ನೀನು ಅತ್ಯಂತ ಶ್ರೇಷ್ಠವಾದ ಯೌವನವನ್ನು ಹೊಂದಿದ್ದೀಯಾ, ಮನೋಹರನಾಗಿದ್ದೀ, ದರ್ಶನೀಯನಾಗಿರುವೆ. ನಿನ್ನನ್ನು ನೋಡಿದರೆ ಯಾರಿಗಾದರೂ ಮನಸ್ಸು ಪ್ರಸನ್ನವಾಗುತ್ತದೆ. ನಿನ್ನಂಥವನು ಸನ್ಯಾಸ ತೆಗೆದುಕೊಳ್ಳುವುದು ಅನ್ಯಾಯ. ಈ ಸುಂದರ ದೇಹದಿಂದ ಕಾಮಭೋಗಗಳನ್ನು ಸಂತೋಷದಿಂದ ಪಡೆಯುವದನ್ನು ಬಿಟ್ಟು ಪಬ್ಬಜಿತನಾಗಿರುವುದು ದೇಹಕ್ಕೆ ಮಾಡಿದ ಅಪಚಾರ” ಎಂದಳು.

ಬೋಧಿಸತ್ವ ನಕ್ಕು, “ನಿನ್ನ ದೃಷ್ಟಿಯಿಂದ ನೀನು ಹೇಳಿದ್ದು ಸರಿ. ಆದರೆ ನಾನು ಈಗಾಗಲೇ ಸ್ವಯಂ ಅಪೇಕ್ಷೆಯಂತೆ ಪಬ್ಬಜಿತನಾಗಿದ್ದೇನಲ್ಲ” ಎಂದ.
“ಆಯ್ತು, ಇಷ್ಟು ವರ್ಷ ಸನ್ಯಾಸವನ್ನೇ ನಿಷ್ಠೆಯಿಂದ ಪಾಲಿಸಿದ್ದೀಯಲ್ಲ. ಅಷ್ಟು ಸಾಕು. ಈಗ ಕೆಲವರ್ಷ ಕಾಮ-ಭೋಗಗಳನ್ನು ಅನುಭವಿಸು. ನಂತರ ಮತ್ತೆ ಬೇಕಾದರೆ ಸನ್ಯಾಸಕ್ಕೆ ಮರಳಬಹುದು” ಎಂದು ಪುಸಲಾಯಿಸಲು ನೋಡಿದಳು.

ಆಗ ಬೋಧಿಸತ್ವ ಹೇಳಿದ, ‘ಅಮ್ಮಾ, ದೇವಕನ್ಯೆ ನಿನಗೆ ಕೆಲವು ಶಾಶ್ವತ ಸತ್ಯಗಳನ್ನು ಹೇಳಬೇಕು. ನಾನು ಯಾವಾಗ, ಯಾವ ವಯಸ್ಸಿನಲ್ಲಿ ಸಾಯುವೆನೆಂಬುದು ನನಗೆ ತಿಳಿದಿಲ್ಲ. ಈ ಜೀವಲೋಕದಲ್ಲಿ ಆಯುಸ್ಸು, ರೋಗ, ಮೃತ್ಯುವಿನ ಸಮಯ, ಮರಣದ ಸ್ಥಳ ಮತ್ತು ಮೃತ್ಯುವಿನ ನಂತರ ನನಗೆ ಯಾವ ಗತಿ ದೊರಕುತ್ತದೆಂಬುದು ಯಾರಿಗೂ ತಿಳಿಯುವುದಿಲ್ಲ. ಆದ್ದರಿಂದ ಮೃತ್ಯು ನನ್ನನ್ನು ಮುಟ್ಟುವ ಮೊದಲೇ ಶ್ರಮಣ ಧರ್ಮವನ್ನು ಪಾಲಿಸಲು ಇಚ್ಛಿಸಿದ್ದೇನೆ. ಅದ್ದರಿಂದ ನೀನು ಸಮಯವನ್ನು ವ್ಯರ್ಥಮಾಡಿಕೊಳ್ಳದೆ ಹೊರಡು’ ಅವಳು ನಿರಾಸೆಯಿಂದ ಅಂತರ್ಧಾನಳಾದಳು.

ಎಷ್ಟು ಸತ್ಯದ ಮಾತು! ನಾವು ಎಷ್ಟು ಕಾಲ ಬದುಕಿರುತ್ತೇವೆ? ನಮ್ಮ ಕೊನೆಯ ಗಳಿಗೆ ಯಾವ ಕ್ಷಣದಲ್ಲಿ ಬಂದೀತು ಎಂಬುದನ್ನು ಹೇಳುವುದು ಅಸಾಧ್ಯ. ಆದ್ದರಿಂದ ಒಳ್ಳೆಯ ಕಾರ್ಯಗಳಿಗೆ ಸಮಯವನ್ನು ನಂತರ ಕೊಡುತ್ತೇನೆ ಎಂದು ಹೇಳುವ ಬದಲು ಆ ಕ್ಷಣದಲ್ಲೇ ಅದನ್ನು ಮಾಡಿಬಿಡುವುದು ಕ್ಷೇಮ. ಮುಂದಿನ ಕ್ಷಣವನ್ನು ಯಾರು ಕಂಡಾರು?

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !