ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯ ನಿರ್ಣಯ

Last Updated 15 ಮಾರ್ಚ್ 2019, 20:07 IST
ಅಕ್ಷರ ಗಾತ್ರ

ಚೌಕಟ್ಟನಂತವದರೊಳು ಚಿತ್ರಪಟ ಸಾಂತ |
ಸಾಕಾರಘನತತಿ ನಿರಾಕಾರ ನಭದಿ ||
ಲೌಕಿಕದ ಮೌಲ್ಯ ನಿರ್ಲೌಕಿಕದ ನಾಣ್ಯದಲಿ |
ಲೆಕ್ಕ ತಾಲ್ಪೆಕನಿಗಿದು – ಮಂಕುತಿಮ್ಮ || 106 ||

ಪದ-ಅರ್ಥ: ಚೌಕಟ್ಟನಂತವದರೊಳು+ಚೌಕಟ್ಟು+ಅನಂತ+ಅದರೊಳು, ಸಾಂತ=ಅಂತ್ಯವುಳ್ಳದ್ದು, ನಿಯಮಿತವಾಗಿದ್ದದ್ದು, ಸಾಕಾರಘನತತಿ=ಸಾಕಾರ (ಆಕಾರವನ್ನು ಹೊಂದಿದ)+ಘನತತಿ (ಮೋಡಗಳ ಸಮೂಹ), ನಭ=ಆಕಾಶ, ನಿರ್ಲೌಕಿಕದ=ಪಾರಮಾರ್ಥಿಕ, ತಾತ್ವಿಕ=ತತ್ವಜ್ಞಾನಿ

ವಾಚ್ಯಾರ್ಥ: ಅನಂತವಾದ ಚೌಕಟ್ಟಿನಲ್ಲಿ ಸೀಮಿತವಾದ ಚಿತ್ರಪಟ. ನಿರಾಕಾರವಾದ ಆಕಾಶದಲ್ಲಿ ಬಗೆಬಗೆಯ ಆಕಾರದ ಮೇಘಸಮೂಹ. ಐಹಿಕವಾದ ಬದುಕಿನ ಮೌಲ್ಯ ಪಾರಮಾರ್ಥಿಕ ನಾಣ್ಯದಲ್ಲಿ. ಇದು ತತ್ವಜ್ಞಾನಿಯ ಲೆಕ್ಕ.

ವಿವರಣೆ: ಬದುಕು ವಿರೋಧಾಭಾಸಗಳ ಒಕ್ಕೂಟದಂತೆ ತೋರುತ್ತದೆ. ಪರಸ್ಪರ ವಿರೋಧವೆನ್ನಿಸುವ ವಿಷಯಗಳು ಜೊತೆಗೇ ಇರುತ್ತವೆ. ಆದರೆ ವಿರೋಧವಾಗಿಲ್ಲ. ಬದುಕಿನ ಸಮನ್ವಯತೆಯ ಸ್ವಾರಸ್ಯ ಇರುವುದೇ ಇಲ್ಲಿ. ಅನಂತ-ಸಾಂತಗಳು ಜೊತೆಗಿವೆ. ಆಕಾರ-ನಿರಾಕಾರಗಳು ಪರಸ್ಪರ ಪೂರಕವಾಗಿವೆ. ಲೌಕಿಕತೆ-ಪಾರಮಾರ್ಥಿಕತೆಗಳು ಒಂದರಲ್ಲಿ ಮತ್ತೊಂದರ ಸಾರ್ಥಕತೆಯನ್ನು ಅನುಭವಿಸುತ್ತವೆ. ಇವುಗಳ ಹೊಂದಾಣಿಕೆಯ ಅರ್ಥ ಕೇವಲ ತತ್ವಜ್ಞಾನಿಗೆ ಮಾತ್ರ ತಿಳಿಯುವಂಥದ್ದು.

ಪರಸತ್ವ ಕಣ್ಣಿಗೆ ಕಾಣದು, ಅಥವಾ ನಮ್ಮ ಕಣ್ಣಿನ ಮಿತಿಗೆ ನಿಲುಕದ್ದು. ಅದು ಅನಂತವಾದದ್ದು. ನಮ್ಮ ಕಲ್ಪನೆಯನ್ನು ಮೀರಿದ್ದು. ಅದಕ್ಕೇ ಪರಮಾತ್ಮನನ್ನು ವಿವರಿಸುವಾಗ ಬಳಸುವ ಪದ, - ‘ಅತ್ಯತಿಷ್ಠದ್ದಶಾಂಗುಲಂ’. ಅಂದರೆ ನೀವು ಹೇಗೆಯೋ, ಎಷ್ಟೋ ಅವನನ್ನು ವರ್ಣಿಸಿದರೂ ಅವನು ಅದಕ್ಕಿಂತ ಎತ್ತರದಲ್ಲೇ ಇದ್ದಾನೆ. ಅವನನ್ನು ವರ್ಣನೆಗೆ ಸಿಲುಕಿಸುವುದೂ ಅಸಾಧ್ಯ. ಇಂಥ ಅನಂತವಾದ, ಅಳೆಯಲಾಗದ ಚೌಕಟ್ಟು ಬ್ರಹ್ಮಸತ್ವ. ಅದರಲ್ಲಿ ಈ ಕಣ್ಣಿಗೆ ಕಾಣುವ ಪ್ರಪಂಚ ಒಂದು ಪುಟ್ಟ ಚಿತ್ರಪಟ.

ಅದು ಸಾಂತ, ಅಂದರೆ ಮಿತಿಯುಳ್ಳದ್ದು. ಅದು ಬದಲಾಗುವುದೂ ಹೌದು. ನಾವು ಬದುಕುವ, ಅನುಭವಿಸುವ ವಿಶ್ವ ಕ್ಷಣಕ್ಷಣಕ್ಕೂ ಬದಲಾಗುವಂಥದ್ದು. ಅದೇ ರೀತಿ ಅನಂತವಾದ ನಿರಾಕಾರವಾದ ಆಕಾಶದಲ್ಲಿ ಮೋಡಗಳ ಸಮೂಹ ಬದಲಾಗುವ, ವಿಚಿತ್ರ ಆಕೃತಿಗಳಲ್ಲಿ ಓಡಾಡುತ್ತಿವೆ. ಈ ಕಗ್ಗದ ಬಹುದೊಡ್ಡ ಸಂದೇಶ ಮೂರನೆಯ ಸಾಲಿನಲ್ಲಿದೆ. ಈ ಐಹಿಕ ಬದುಕಿನ ಮೌಲ್ಯ ಇರುವುದು ಪಾರಮಾರ್ಥಿಕದಲ್ಲಿ ಚಲಾವಣೆಯಾಗುವ ನಾಣ್ಯದಲ್ಲಿ.

ಸ್ನೇಹಿತನಿಗೋಸ್ಕರ ತನ್ನ ಅವಕಾಶವನ್ನು ತ್ಯಾಗ ಮಾಡಿದವನಿಗೆ, ದೇಶಕ್ಕೊಸ್ಕರ ತನ್ನ ಜೀವವನ್ನೇ ಪಣವಾಗಿಟ್ಟ ಸೈನಿಕನಿಗೆ, ಲಕ್ಷಗಟ್ಟಲೇ ಹಣಬರುವ ಅವಕಾಶವನ್ನು ಪ್ರಾಮಾಣಿಕತೆಗಾಗಿ ಕಳೆದುಕೊಂಡವನಿಗೆ ಲೌಕಿಕವಾಗಿ ಯಾವ ಲಾಭವೂ ಆಗಲಿಲ್ಲ ಎಂದು ಸಾಮಾನ್ಯರು ಭಾವಿಸಬಹುದು. ಅವರ ಪ್ರಯತ್ನಕ್ಕೆ ಲೌಕಿಕವಾಗಿ ಯಾವ ಲಾಭವೂ ಇಲ್ಲ.

ಆದರೆ ಈ ಮೌಲ್ಯಯುತ ನಡವಳಿಕೆಗಳು ಆ ವ್ಯಕ್ತಿಗೆ ಶಾಶ್ವತತೆಯನ್ನು ನೀಡುತ್ತವೆ. ಹರಿಶ್ಚಂದ್ರ, ಗಾಂಧಿ, ಭಗತ್‍ಸಿಂಗ್, ಬಸವಣ್ಣ, ಕಲಾಂ ಇವರಾರೂ ಲೌಕಿಕ ಬದುಕಿನಲ್ಲಿ ಹಣಕ್ಕೋಸ್ಕರ ದುಡಿದವರಲ್ಲ, ಕೇವಲ ಮೌಲ್ಯಕ್ಕಾಗಿ ಬದುಕಿದವರು. ಆದರೆ ಎಲ್ಲರೂ ಮೃತ್ಯುವನ್ನು ಗೆದ್ದವರು, ಅಮೃತತ್ವವನ್ನು ಪಡೆದವರು.

ಐಹಿಕ ಜೀವನದಲ್ಲಿ ನಡೆದ ಮೌಲ್ಯದ ಬದುಕು ಪಾರಮಾರ್ಥಿಕವಾಗಿ ಶಾಶ್ವತತೆಯನ್ನು ನೀಡುತ್ತದೆ. ಇದುಪರಮಾರ್ಥದಲ್ಲಿ ಚಲಾವಣೆಯಾಗುವ ನಾಣ್ಯ. ಇದನ್ನು ಸರಿಯಾಗಿ ತಿಳಿದವನೇ ತತ್ವಜ್ಞಾನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT