ಮಹಾಶಕ್ತಿಯ ಮೂಲ

ಭಾನುವಾರ, ಏಪ್ರಿಲ್ 21, 2019
32 °C

ಮಹಾಶಕ್ತಿಯ ಮೂಲ

ಗುರುರಾಜ ಕರಜಗಿ
Published:
Updated:

ಹಿಂದೆ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಅವನ ಪಟ್ಟದ ರಾಣಿಯ ಮಗನಾಗಿ ಹುಟ್ಟಿದ್ದ. ಅವನು ಹೆಸರು ಅಸದಿಸಕುಮಾರ. ಕೆಲವು ವರ್ಷಗಳ ನಂತರ ಅವನಿಗೊಬ್ಬ ತಮ್ಮ ಹುಟ್ಟಿದ. ಅವನ ಹೆಸರು ಬ್ರಹ್ಮದತ್ತ ಕುಮಾರ. ಅಸದಿಸಕುಮಾರ ತಕ್ಷಶಿಲೆಗೆ ಹೋಗಿ ಎಲ್ಲ ವಿದ್ಯೆಗಳನ್ನು, ಶಾಸ್ತ್ರಗಳನ್ನು ಕಲಿತು ಬಂದ.

ರಾಜನಿಗೆ ವಯಸ್ಸಾದಾಗ ಹಿರಿಯ ಮಗನಿಗೆ ಪಟ್ಟ ಕಟ್ಟಲು ಮಂತ್ರಿಗಳಿಗೆ ಹೇಳಿ ನಿಧನನಾದ. ಆದರೆ ಅಸದಿಸಕುಮಾರ ತನಗೆ ಅಧಿಕಾರದ ಆಸೆ ಇಲ್ಲವೆಂದು ಹೇಳಿ ತಮ್ಮ ಬ್ರಹ್ಮದತ್ತ ಕುಮಾರನನ್ನು ಪಟ್ಟಕ್ಕೆ ಕೂಡ್ರಿಸಿದ.

ಯಾರೋ ತಮ್ಮನಿಗೆ ಅಣ್ಣನ ಬಗ್ಗೆ ಚಾಡಿ ಹೇಳಿ ಒಂದಲ್ಲ ಒಂದು ದಿನ ಆತ ರಾಜಪಟ್ಟವನ್ನು ಕಸಿದುಕೊಳ್ಳುತ್ತಾನೆ ಎಂದು ಹೆದರಿಸಿದರು. ತಮ್ಮ, ಅಣ್ಣನನ್ನು ಸೆರೆಹಿಡಿಯಲು ಆಜ್ಞೆ ಮಾಡಿದ. ಅದನ್ನು ತಿಳಿದು ಅಸದಿಸಕುಮಾರ ರಾಜ್ಯದಿಂದ ಪಾರಾಗಿ ಮತ್ತೊಬ್ಬ ಸಾಮಂತರಾಜನ ಬಳಿಗೆ ಹೋಗಿ ತಾನೊಬ್ಬ ಧನುರ್ಧರ, ತಾನು ರಾಜ್ಯವನ್ನು ಕಾಪಾಡಬಲ್ಲೆ ಎಂದು ಹೇಳಿಕೊಂಡ. ವರ್ಷಕ್ಕೆ ಒಂದು ಲಕ್ಷ ಹೊನ್ನನ್ನು ಸಂಬಳವಾಗಿ ಕೇಳಿದ.

ರಾಜನ ಮಂತ್ರಿಗಳಿಗೆ ಸಂದೇಹ. ಇವನಿಗೇಕೆ ಇಷ್ಟು ಸಂಬಳ? ಇವನ ಪರೀಕ್ಷೆಯಾಗಲಿ ಎಂದು ರಾಜನಿಗೆ ಸೂಚಿಸಿದರು. ಪರೀಕ್ಷೆಗೆ ಅಸದಿಸಕುಮಾರನೂ ಒಪ್ಪಿದ. ಅರಮನೆಯ ಹೊರಗಿದ್ದ ಮಾವಿನ ತೋಟಕ್ಕೆ ಎಲ್ಲರೂ ಬಂದರು. ಗಿಡದಲ್ಲಿ ಮಾವಿನಹಣ್ಣುಗಳು ಸುರಿದಿದ್ದವು. ಅಸದಿಸಕುಮಾರ ಒಂದು ದೊಡ್ಡ ಮಾವಿನಹಣ್ಣನ್ನು ತೋರಿಸಿ, “ಈ ಹಣ್ಣನ್ನು ಮೇಲಕ್ಕೆ ಹೋಗುವ ಬಾಣದಿಂದ ಬೀಳಿಸಲೋ, ಕೆಳಕ್ಕೆ ಬರುವ ಬಾಣದಿಂದ ಬೀಳಿಸಲೋ?” ಎಂದು ಕೇಳಿದ. “ಅಯ್ಯಾ, ಧನುರ್ಧರ, ಇದುವರೆಗೂ ಮೇಲಕ್ಕೆ ಹೋಗುವ ಬಾಣದಿಂದ ಗುರಿಯನ್ನು ತಲುಪುವುದನ್ನು ಕಂಡಿದ್ದೇನೆ.

ಆದರೆ ಮರಳಿಬರುವಾಗ ಗುರಿಯನ್ನು ತಲುಪುವುದನ್ನು ಕಂಡಿಲ್ಲ. ಆದ್ದರಿಂದ ನೀನು ಶ್ರೇಷ್ಠ ಧನುರ್ಧರನೇ ಆದ ಪಕ್ಷದಲ್ಲಿ ಬಾಣ ಮರಳಿ ಬರುವಾಗ ಈ ಮಾವಿನಹಣ್ಣನ್ನು ಹೊಡೆದು ಬೀಳಿಸು, ನೋಡೋಣ” ಎಂದ ರಾಜ. ಅಸದಿಸಕುಮಾರ ಹೇಳಿದ, “ನಾನು ಬಿಡುವ ಬಾಣದ ಇನ್ನೊಂದು ವಿಶೇಷವೆಂದರೆ ಅದು ನಾನು ಬಿಟ್ಟ ತಕ್ಷಣ ಮರಕ್ಕೆ ಹೊಡೆದು, ಅದರ ಮಧ್ಯಕ್ಕೆ ಸೇರಿ, ದಿಕ್ಕು ಬದಲಿಸಿ ಮರದ ಕಾಂಡದ ಮಧ್ಯದಲ್ಲೇ ಸೀಳಿಕೊಂಡು ಮರವನ್ನು ದಾಟಿ ಬಹುದೂರ ಹೋಗುತ್ತದೆ. ಬರುವಾಗ ಸರಿಯಾಗಿ ಮಾವಿನ ಹಣ್ಣಿಗೇ ಬಡಿದು ಅದನ್ನು ಕತ್ತರಿಸಿ ತರುತ್ತದೆ”. ಸಾವಿರಾರು ಜನ ಈ ಪವಾಡವನ್ನು ನೋಡಲು ನೆರೆದರು.

ಈತ ಗುರಿ ಇಟ್ಟು ಬಿಟ್ಟ ಬಾಣ ಮರದ ಕಾಂಡವನ್ನು ಸೀಳಿಕೊಂಡು ಮೇಲೇರಿತು. ಭಯಂಕರವಾದ ಶಬ್ದದಿಂದ ಮರಳಿ ಬರುತ್ತ ಸರಿಯಾಗಿ ಆ ಮಾವಿನ ಹಣ್ಣಿನ ತೊಟ್ಟನ್ನು ಮಾತ್ರ ಕತ್ತರಿಸಿತು. ಆಗ ಅಸದಿಸಕುಮಾರ ಒಂದು ಕೈಯಿಂದ ಹಣ್ಣು, ಮತ್ತೊಂದು ಕೈಯಿಂದ ಬಾಣವನ್ನು ಹಿಡಿದುಕೊಂಡು ಬಂದು, ರಾಜನಿಗೆ ಹಣ್ಣು ನೀಡಿದ, ಜನರೆಲ್ಲ ಬೆರಗಾದರು.

ಅಸದಿನಕುಮಾರ ಆ ರಾಜ್ಯದಲ್ಲೇ ನೆಲೆಯಾಗಿ ನಿಂತ. ಇತ್ತ ಒಂದು ಸಮಯ ಬ್ರಹ್ಮದತ್ತಕುಮಾರ ವಾರಾಣಸಿಯಲ್ಲಿಲ್ಲದಾಗ ಏಳು ಜನ ಸುತ್ತಲಿನ ರಾಜರು ದಾಳಿಮಾಡಿ ರಾಜ್ಯವನ್ನು ವಶಪಡಿಸಿಕೊಳ್ಳಲು ನೋಡಿದರು. ತಮ್ಮ ಭಯದಿಂದ ಹೇಳಿದ, “ನನ್ನನ್ನು ಅಣ್ಣ ಅಸದಿಸಕುಮಾರ ಮಾತ್ರ ಉಳಿಸಬಲ್ಲ. ದಯವಿಟ್ಟು ತಾವು ಹೋಗಿ ಅವನ ಪಾದಗಳಿಗೆ ನನ್ನ ಕ್ಷಮೆಯನ್ನೂ ಹೇಳಿ ಕರೆತನ್ನಿ” ಎಂದು ಮಂತ್ರಿಗಳನ್ನು ಕಳುಹಿಸಿದ. ಅಸದಿಸಕುಮಾರ ಯಾವ ದ್ವೇಷವನ್ನೂ ಮನದಲ್ಲಿಟ್ಟುಕೊಳ್ಳದೆ, ನೇರವಾಗಿ ವಾರಾಣಸಿಗೆ ಹೋಗಿ ಏಳೂ ರಾಜಕುಮಾರರನ್ನು ಹೊಡೆದೋಡಿಸಿ ಮತ್ತೆ ತಮ್ಮನನ್ನು ಸಿಂಹಾಸನದಲ್ಲಿ ಪ್ರತಿಷ್ಠಾಪಿಸಿದ, ನಂತರ ಹಿಮಾಲಯಕ್ಕೆ ತೆರಳಿ ಋಷಿಗಳ ಕ್ರಮದಲ್ಲಿ ಪಬ್ಬಜ್ಜನಾದ.

ಬುದ್ಧ ಹೇಳಿದ, “ಅಸದಿಸಕುಮಾರನಿಗೆ ಈ ಅದ್ವಿತೀಯ ಶಕ್ತಿ ಬಂದದ್ದು ಅದ್ವೇಷದಿಂದ, ಅನಸೂಯೆಯಿಂದ. ದ್ವೇಷವಿಲ್ಲದೆ, ಅಸೂಯೆಯಿಲ್ಲದೆ ಮಾಡಿದ ಕೆಲಸಕ್ಕೆ ನಂಬಲಸಾಧ್ಯವಾದ ಶಕ್ತಿ ಬರುತ್ತದೆ. ದ್ವೇಷ, ಅಸೂಯೆಗಳು ಇರುವ ಶಕ್ತಿಯನ್ನು ತಿಂದು ಹಾಕುತ್ತವೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !