ಮತ್ತೇರದ ಸಂಯಮ

ಶನಿವಾರ, ಏಪ್ರಿಲ್ 20, 2019
29 °C

ಮತ್ತೇರದ ಸಂಯಮ

ಗುರುರಾಜ ಕರಜಗಿ
Published:
Updated:

ಹಿಂದೆ ಬ್ರಹ್ಮದತ್ತ ವಾರಣಾಸಿಯಲ್ಲಿ ರಾಜ್ಯವಾಳುವಾಗ ಬೋಧಿಸತ್ವ ಒಬ್ಬ ಅಮಾತ್ಯನ ಮಗನಾಗಿ ಹುಟ್ಟಿದ್ದ. ಅವನು ಸಕಲವಿದ್ಯೆಗಳನ್ನು ಪಡೆದು ಪಾರಂಗತನಾದ. ಕಾಲಕ್ರಮದಲ್ಲಿ ತನ್ನ ತಂದೆ ಕಾಲವಾದ ಮೇಲೆ ಅವನೇ ಅಮಾತ್ಯನಾದ.

ಅವನು ರಾಜನಿಗೆ ಸರಿಯಾದ ಸಮಯದಲ್ಲಿ, ಸರಿಯಾದ ಬೋಧನೆ ಮಾಡುತ್ತ ರಾಜ್ಯ ಸುಭಿಕ್ಷವಾಗಿರುವಂತೆ ನೋಡಿಕೊಳ್ಳುತ್ತಿದ್ದ.

ಒಂದು ಬಾರಿ ರಾಜನಿಗೆ ತನ್ನ ರಾಜ್ಯದ ಕೊನೆಯ ಗ್ರಾಮಗಳಲ್ಲಿ ದಾಳಿಕೋರರ ಹಾವಳಿ ಹೆಚ್ಚಾಗಿ ಪ್ರಜೆಗಳಿಗೆ ತೊಂದರೆಯಾಗುತ್ತಿರುವ ವಿಷಯ ತಿಳಿಯಿತು. ಆಗ ಆತ ತನ್ನ ಬಳಿಯಿದ್ದ ಅತ್ಯಂತ ಶ್ರೇಷ್ಠವಾದ ಐದುನೂರ ಸೈಂಧವ ಕುದುರೆಗಳನ್ನು ಸಜ್ಜುಮಾಡಿಕೊಂಡು, ಚತುರಂಗ ಬಲದೊಡನೆ ನಡೆದ. ಅಲ್ಲಿ ದಾಳಿಕೋರರೊಂದಿಗೆ ಹೋರಾಡಿ, ಅವರನ್ನಡಗಿಸಿ ವಾರಣಾಸಿಗೆ ಮರಳಿ ಬಂದ.

ಯುದ್ಧದಲ್ಲಿ, ಪ್ರವಾಸದಲ್ಲಿ ಕುದುರೆಗಳು ತುಂಬ ದಣಿದು ಹೋಗಿದ್ದವು. ಆದರೆ, ಅವುಗಳನ್ನು ನೋಡಿದವರಿಗೆ ಅರಿವೇ ಆಗದಷ್ಟು ಗಂಭೀರವಾಗಿ, ಸಂಯಮದಿಂದ ನಿಂತಿದ್ದವು. ಅವುಗಳಿಗೆ ಶಕ್ತಿ, ಉತ್ಸಾಹಗಳು ಬರುವಂತೆ ಸುಗಂಧಿತವಾದ, ಮೃದುವಾದ ಅಂಗೂರದ ಹಣ್ಣುಗಳ ರಸವನ್ನೇ ಹೊಟ್ಟೆ ತುಂಬ ಕುಡಿಸುವಂತೆ ಆಜ್ಞೆ ಮಾಡಿದ. ಸೇವಕರು ಅಂತೆಯೇ ಅವುಗಳಿಗೆ ತೃಪ್ತಿಯಾಗುವಷ್ಟು ಹಣ್ಣಿನ ರಸವನ್ನು ಕುಡಿಸಿ, ಮೈತೊಳೆದು ಅಶ್ವಶಾಲೆಯಲ್ಲಿ ಕಟ್ಟಿದರು. ಅಶ್ವಗಳು ಗಂಭೀರವಾಗಿ ತಮ್ಮ ಸ್ಥಳದಲ್ಲಿ ನಿಂತವು.

ಕುದುರೆಗಳು ಹಣ್ಣಿನ ರಸವನ್ನು ಕುಡಿದ ಮೇಲೆ ಗಟ್ಟಿಯಾದ ಒಗರುಭಾಗ ಉಳಿಯಿತು. ಅದನ್ನೇನು ಮಾಡುವುದು ಎಂದು ಕೇಳಿದಾಗ ರಾಜ, ‘‘ಅದಕ್ಕೆ ಮತ್ತಷ್ಟು ನೀರು ಸೇರಿಸಿ, ದಪ್ಪನಾದ ಗೋಣಿಯಿಂದ ಸೋಸಿ, ಮೇವನ್ನು ಹೊತ್ತು ತಂದ ಕತ್ತೆಗಳಿಗೆ ಕುಡಿಸಿಬಿಡಿ‘‘ ಎಂದ. ಅಂತೆಯೇ ಸೇವಕರು ಮಾಡಿದರು. ಕತ್ತೆಗಳು ಆ ಒಗರು ನೀರನ್ನು ಕುಡಿದ ಸ್ವಲ್ಪ ಹೊತ್ತಿಗೆ ಮತ್ತೇರಿ ಕಿರುಚತೊಡಗಿದವು.

ಕಟ್ಟಿದ ಹಗ್ಗಗಳನ್ನು ಹರಿದುಕೊಂಡು ರಾಜಾಂಗಣದ ಕಡೆಗೆ ಕುಣಿಯುತ್ತ, ಕುಪ್ಪಳಿಸುತ್ತ, ಅರಚುತ್ತ ಓಡತೊಡಗಿದವು. ಅರಮನೆಯ ಸುತ್ತಮುತ್ತ ಕೋಲಾಹಲವೋ ಕೋಲಾಹಲ.

ರಾಜ ಸೈನಿಕರಿಗೆ ಹೇಳಿದ, “ಈ ಕತ್ತೆಗಳನ್ನು ಹೊಡೆದು ರಾಜಾಂಗಣದಿಂದ ದೂರ ಅಟ್ಟಿ. ಸಾಯಂಕಾಲ ಮತ್ತು ಇಳಿದ ಮೇಲೆ ತಾವೇ ಮರಳಿ ಬರುತ್ತವೆ”. ಕತ್ತೆಗಳೆಲ್ಲ ಹೊಡೆಸಿಕೊಂಡು ದೂರ ಹೋದಮೇಲೆ ರಾಜ ಬೋಧಿಸತ್ವನಿಗೆ ಕೇಳಿದ”, “ಸೈಂಧವ ಕುದುರೆಗಳು ಅತ್ಯಂತ ಮತ್ತು ಬರಿಸಬಹುದಾದ ಅಂಗೂರರಸವನ್ನು ಹೊಟ್ಟೆ ತುಂಬ ಕುಡಿದು ನಿಶ್ಯಬ್ದವಾಗಿ, ಗಂಭೀರವಾಗಿ ನಿಂತಿವೆ. ಅವುಗಳು ಕುಡಿದು ಬಿಟ್ಟ, ನೀರು ಬೆರೆಸಿದ ಒಗಟನ್ನೇ ಕುಡಿದು ಈ ಕತ್ತೆಗಳು ಮತ್ತೇರಿ ಹಾರಾಡುತ್ತಿವೆಯಲ್ಲ, ಇದಕ್ಕೆ ಏನು ಕಾರಣ?”.

ಬೋಧಿಸತ್ವ ಹೇಳಿದ, “ಕತ್ತೆಗಳಿಗೆ ಕೊಂಚವೇ ರಸವುಳ್ಳ, ತುಚ್ಛವಾದ ಗೋಣಿಯಲ್ಲಿ ಸೋಸಲ್ಪಟ್ಟ ನೀರನ್ನು ಕುಡಿಯುವುದರಿಂದಲೇ ಮದ ಬಂದುಬಿಡುತ್ತದೆ. ಸಿಂಧೂ ದೇಶದ ಶ್ರೇಷ್ಠ ಕುದುರೆಗಳಿಗೆ ಶ್ರೇಷ್ಠವಾದ ರಸವನ್ನು ಕುಡಿದರೂ ಮತ್ತು ಬರುವುದಿಲ್ಲ. ಕ್ಷುದ್ರರಿಗೆ ಸ್ವಲ್ಪವೇ ಅಧಿಕಾರ, ಸಂಪತ್ತು ಬಂದರೂ ಮತ್ತೇರಿದಂತೆ ಹಾರಾಡುತ್ತಾರೆ. ಧೃಡ ಚಾರಿತ್ರ್ಯವುಳ್ಳವರು, ನೀತಿಯಲ್ಲಿ ಶ್ರೇಷ್ಠರಾದವರು ಎಂಥ ಪದವಿ, ಎಷ್ಟು ಹಣ ಬಂದರೂ ಸಮಚಿತ್ತರಾಗಿರುತ್ತಾರೆ”. ಈ ಮಾತು ಇಂದಿಗೂ ಸತ್ಯ ಅಲ್ಲವೇ?

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !