ಬದಲಾಗದ ಮೂಲಸತ್ವ

ಮಂಗಳವಾರ, ಏಪ್ರಿಲ್ 23, 2019
29 °C

ಬದಲಾಗದ ಮೂಲಸತ್ವ

ಗುರುರಾಜ ಕರಜಗಿ
Published:
Updated:

ಕ್ರಮದ ನಭವಿಕೃತಿ ವಾಯ್ಪಾದಿ ರೂಪಗಳಂತೆ |
ಕ್ರಮಿ ಬೀಜದಿಂ ಮತ್ಸ್ಯ ಮೃಗ ಮನುಜರಂತೆ ||
ಕ್ರಮ ವಿವರವೇನಿರಲಿ ಸೃಷ್ಟಿಯ ವಿಧಾನದಲಿ |
ಸಮಸದದು ಸತ್ತ್ವವನು – ಮಂಕುತಿಮ್ಮ || 115 ||

ಪದ-ಅರ್ಥ: ಕ್ರಮದ ವ್ಯವಸ್ಥೆಯ, ನಭವಿಕೃತಿ=ನಭ(ಆಕಾಶ)+ವಿಕೃತಿ, ವಾಯ್ಪಾದಿ=ವಾಯು+ಆದಿ, ಸಮಸದನು=ಸವೆಸಲಾರದು, ಕಡಿಮೆಮಾಡಲಾರದು

ವಾಚ್ಯಾರ್ಥ: ವ್ಯವಸ್ಥೆಯಾಗಿರುವ ಆಕಾಶದ ವಿಕೃತಿಗೆ ಗಾಳಿಯಿಂದ ಬರುವ ಮೋಡಗಳೇ ಕಾರಣ. ಕ್ರಿಮಿಯ ಬೀಜದಿಂದ ಮೀನು, ಪ್ರಾಣಿ, ಮನುಷ್ಯರೆಂಬ ವ್ಯವಸ್ಥೆಯ ಬೆಳವಣಿಗೆ. ಈ ಸೃಷ್ಟಿಯ ವಿಧಾನದಲ್ಲಿ ವೈವಿಧ್ಯತೆಗಳು ಏನೇ ಇದ್ದರೂ ಅವು ಮೂಲಸತ್ವವನ್ನು ಸವೆಸಲಾರವು, ಕಡಿಮೆಮಾಡಲಾರವು.

ವಿವರಣೆ: ತಾಯಿ ಮಗುವಿಗೆ ಆಕಾಶ ತೋರಿಸುತ್ತಿದ್ದಾಳೆ. ಸ್ವಚ್ಛ, ನಿರಭ್ರ ಆಕಾಶ. ಅದು ನೀಲಿಸಾಗರ. ನಿಜವಾಗಿ ನೋಡಿದರೆ ಅಲ್ಲಿ ಏನೂ ಇಲ್ಲ. ಅದು ಖಾಲಿ ಪ್ರದೇಶ. ಅದೇ ಆಕಾಶದ ವ್ಯವಸ್ಥೆ, ಕ್ರಮ. ತಾಯಿ ತೋರುತ್ತಿರುವಂತೆಯೇ ಗಾಳಿ ಬೀಸತೊಡಗಿತು. ಸಣ್ಣ, ದೊಡ್ಡ ಮೋಡಗಳು ತೇಲಿಬಂದವು. ಯಾವವೂ ಸ್ಥಿರವಲ್ಲ, ಕ್ಷಣಕ್ಷಣಕ್ಕೆ ಬದಲಾಗುವಂಥವು. ತಾಯಿ ಮಗುವಿಗೆ ಅವುಗಳಲ್ಲಿ ಆಕಾರಗಳನ್ನು ತೋರುತ್ತಾಳೆ. “ಅಗೋ ನೋಡು ಅದು ಸಿಂಹ, ಈಗ ಅದು ಆನೆಯಾಯಿತು ನೋಡು”. ಮೋಡಕ್ಕೆ ಯಾವ ಆಕಾರವೂ ಇಲ್ಲ. ಸ್ವಚ್ಛ, ನಿರಾಕಾರ ಆಕಾಶದ ವಿಕೃತಿ ಈ ಮೋಡಗಳ ರೂಪ. ಇದನ್ನು ಕಗ್ಗ ಎಷ್ಟು ಸುಂದರವಾಗಿ, “ಕ್ರಮದ ನಭವಿಕೃತಿ ವಾಯ್ಪಾದಿ ರೂಪಗಳು” ಎನ್ನುತ್ತದೆ!

ಒಂದು ಕ್ರಿಮಿಯಿಂದ ಪ್ರಾಣಿ ವಿಕಾಸ. ಅಮೀಬಾದಂಥ ಏಕಕೋಶ ಜೀವಿಯಿಂದ ವಿಕಾಸ ಕ್ರಮ. ನಮ್ಮಲ್ಲಿ ಪ್ರಚಲಿತವಿರುವ ಅವತಾರ ಕ್ರಮವೂ ಇದೆ. ಮೊದಲು ಮತ್ಸ್ಯಾವತಾರ. ಜೀವಿ ಹುಟ್ಟಿದ್ದೇ ನೀರಿನಲ್ಲಿ. ನಂತರ ಕೂರ್ಮ-ಆಮೆ. ಅದು ನೀರು ಮತ್ತು ನೆಲ ಎರಡರಲ್ಲೂ ಇರುವಂಥದ್ದು. ಆಮೇಲೆ ವರಾಹ-ಹಂದಿ. ಅದು ನೀರನ್ನು ಇಷ್ಟಪಟ್ಟರೂ ಹೆಚ್ಚಾಗಿ ಇರುವುದು ಭೂಮಿಯ ಮೇಲೆ. ಹೀಗೆ ಜೀವಿ ನೀರು ಬಿಟ್ಟು ನೆಲಕ್ಕೆ ಬಂತು. ವರಾಹದ ನಂತರ ನರಸಿಂಹ-ಅರ್ಧಸಿಂಹ, ಅರ್ಧ ಮನುಷ್ಯ. ಪೂರ್ತಿ ಮನುಷ್ಯನೂ ಅಲ್ಲದ, ಮೃಗವೂ ಅಲ್ಲದ ರೂಪ. ಮುಂದೆ ವಾಮನ-ಪುಟ್ಟ ಮನುಷ್ಯ. ಶಕ್ತಿಯಿಂದ ತ್ರಿವಿಕ್ರಮನಾಗಬಲ್ಲವ. ಅದ ನಂತರ ಪರಶುರಾಮ-ಭಾವಾವೇಶದ ಮನುಷ್ಯ. ಅದರ ವಿಕಾಸ ಹೊಂದಿ ಬಂದದ್ದು ಆದರ್ಶ ಮನುಷ್ಯನಾದ ರಾಮ. ನಂತರ ಪರಿಪೂರ್ಣ ಅವತಾರವೆನ್ನಿಸಿದ ಕೃಷ್ಣ. ಹೀಗೆ ಒಂದಾದ ಮೇಲೆ ಜೀವವಿಕಾಸ ಒಂದು ಕ್ರಮದಲ್ಲಿ ನಡೆದಿದೆ.

ಹೀಗೆ ಸೃಷ್ಟಿಯ ವಿಧಾನದಲ್ಲಿ ಯಾವುದೇ ವ್ಯವಸ್ಥೆ ಇರಲಿ, ವೈವಿಧ್ಯತೆ ಇರಲಿ, ಅದು ಮೂಲಸತ್ವವನ್ನು ಕಡಿಮೆ ಮಾಡಲಾರದು, ಸವೆಸಲಾರದು. ಸೃಷ್ಟಿಯ ಪ್ರತಿಯೊಂದು ವಸ್ತುವಿನಲ್ಲಿ ಮೂಲಸತ್ವ ಅದೇ ಆಕಾರದಲ್ಲಿ ಇದೆ. ಕಟ್ಟಡ ನಿರ್ಮಾಣಕ್ಕೆ ಸಿಮೆಂಟು, ಮರಳು, ಕಬ್ಬಿಣ, ಜಲ್ಲಿಕಲ್ಲು ಬೇಕು. ಅವೇ ಕಟ್ಟಡದ ಆಕಾರದಲ್ಲಿ ನಿಲ್ಲುತ್ತವೆ. ಕಟ್ಟಡಕ್ಕೆ ಏನೆಲ್ಲ ಅಲಂಕಾರ, ಬಣ್ಣ ಹಾಕಿದರೂ ಒಳಗಿರುವ ಮೂಲವಸ್ತುಗಳ ಸ್ವಭಾವ ಹಾಗೆಯೇ ಇರುತ್ತದೆ, ಅದು ಬದಲಾಗುವುದಿಲ್ಲ, ಮಡಕೆಗೆ ಯಾವ ಅಲಂಕಾರ ಮಾಡಿದರೂ ಮೂಲವಸ್ತುವಾದ ಮಣ್ಣು ತಾನಾಗಿಯೇ ಇದ್ದ ಹಾಗೆ. ಹೀಗಾಗಿ ಮೂಲಸತ್ವ ಎಂದೆಂದಿಗೂ ಕಡಿಮೆಯಾಗಲಾರದೆ ಉಳಿಯುತ್ತದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !