ವಿಕಾರಗೊಳ್ಳದ ಸತ್ವ

ಸೋಮವಾರ, ಏಪ್ರಿಲ್ 22, 2019
31 °C

ವಿಕಾರಗೊಳ್ಳದ ಸತ್ವ

ಗುರುರಾಜ ಕರಜಗಿ
Published:
Updated:

ಸ್ಥಾಪಿತವೆ ಜೀವ ನಿನ್ನೊಡಲಿನೊಂದಂಗದಲಿ
ಆಪಾದಶಿರುವುಮದು ತುಂಬಿರುವುದಲ್ತೆ ? ||
ವ್ಯಾಪಿಸಿಹುದಂತೊಂದು ಚೈತನ್ಯ ವಿಶ್ವದಲಿ |
ಲೇಪಗೊಳ್ಳದ ಸತ್ತ್ವ – ಮಂಕುತಿಮ್ಮ ||117 ||

ಪದ-ಅರ್ಥ: ಸ್ಥಾಪಿತವೆ=ಇರುವುದೆ, ನಿನ್ನೊಡಲಿನೊಂದಂಗದಲಿ=ನಿನ್ನ+ಒಡಲಿನ+ಒಂದು+ಅಂಗದಲಿ, ಆಪಾದಶಿರವುಮದು=ಆಪಾದಶಿರವುಂ(ಪಾದದಿಂದ ಶಿರದವರೆಗೆ)+ಅದು, ವ್ಯಾಪಿಸಿಹುದಂತೊಂದು=ವ್ಯಾಪಿಸಿಹುದು(ಹರಡಿರುವುದು)+ಅಂತೊಂದು, ಲೇಪಗೊಳ್ಳದ=ವಿಕಾರಗೊಳ್ಳದ
ವಾಚ್ಯಾರ್ಥ: ಜೀವ ನಿನ್ನ ದೇಹದ ಒಂದು ಅಂಗದಲ್ಲಿ ಮಾತ್ರ ಸ್ಥಾಪಿತವಾಗಿದೆಯೇ? ಅದು ಪಾದದಿಂದ ತಲೆಯವರೆಗೆ ತುಂಬಿರುವುದಲ್ಲವೆ? ಇಡೀ ವಿಶ್ವದಲ್ಲಿ ಅಂತಹದೊಂದು ಚೈತನ್ಯ ವ್ಯಾಪಿಸಿದೆ. ಅದು ಎಂದೆಂದಿಗೂ ವಿಕಾರಗೊಳ್ಳದ ಸತ್ವ.

ವಿವರಣೆ: ನಮ್ಮ ದೇಹದಲ್ಲಿ ಜೀವವೆಂಬುದು ಯಾವ ಅಂಗದಲ್ಲಿದೆ? ಅದು ಇಡೀ ದೇಹವನ್ನು ಪಾದದಿಂದ ಶಿರದವರೆಗೆ ಆವರಿಸಿಕೊಂಡಿದೆ. ಇದೇ ರೀತಿ ಒಂದು ಮಹಾ ಚೈತನ್ಯ ಇಡೀ ವಿಶ್ವವನ್ನು ವ್ಯಾಪಿಸಿದೆ.

ಇದನ್ನು ಸ್ವಲ್ಪ ಗಮನಿಸೋಣ. ಭಗವದ್ಗೀತೆ ಹೇಳುತ್ತದೆ, ಲೋಕದಲ್ಲಿರುವ ಪದಾರ್ಥಗಳು ಎರಡು. ಒಂದು ದೇಹ, ಇನ್ನೊಂದು ದೇಹಿ. ದೇಹವೆಂಬುದು ಎಲ್ಲರಿಗೂ ತಿಳಿದ ಹಾಗೂ ಕಾಣುವ ವಸ್ತು. ಅದರಲ್ಲಿ ಭೌತಿಕವಾದ ಅಂಗಾಂಗಳು ಮಾತ್ರವಲ್ಲ, ಬುದ್ಧಿ, ಮನಸ್ಸು, ಅಹಂಕಾರಗಳೆಂಬ ಅಂತ:ಕರಣಗಳೂ, ಜನ್ಮಜನ್ಮಾಂತರದ ಕರ್ಮವಿಶೇಷಗಳೂ ಸೇರಿಕೊಂಡಿವೆ. ಇವೇ ನಾವು ಬದುಕಿರುವುದನ್ನು ತೋರುವ ಜೀವಲಕ್ಷಣಗಳು. ದೇಹಿ ಎಂಬುದು ದೇಹದೊಳಗೆ ಸುಪ್ತವಾಗಿರುವ ಚೈತನ್ಯ. ಅದೇ ಶುದ್ಧಾತ್ಮ. ಅದು ದೇಹದೊಳಗಡೆಯೆಲ್ಲ ಹರಡಿಕೊಂಡಿರುವಂಥದ್ದು.

ಜೀವಿಗಳಿಂದಾದದ್ದು ಜಗತ್ತು, ಈ ವಿಶ್ವ. ಜಗತ್ತು ದೃಶ್ಯವಾದದ್ದರಿಂದ ಅದಕ್ಕೂ ನಾಶವುಂಟು, ವಿಕಾರಗಳುಂಟು. ಆದರೆ ಈ ವಿಶ್ವವನ್ನು ನಡೆಸುತ್ತಿರುವ, ಜನನಮರಣ ವಿಕಾರಗಳಿಲ್ಲದ ಶುದ್ಧ ಚೈತನ್ಯವೇ ಪರಸತ್ವ. ಅದು ಎಲ್ಲೆಡೆಯೂ ಹರಡಿಕೊಂಡಿದೆ ಎಂಬುದಕ್ಕೆ ಗುರುತೇನು? ಭಗವದ್ಗೀತೆ ಏಳನೆಯ ಅಧ್ಯಾಯದಲ್ಲಿ ಸ್ಪಷ್ಟವಾಗಿ ಹೇಳುತ್ತದೆ. ಅನ್ನಪಾನಾದಿಗಳ ರುಚಿ, ಸೂರ್ಯಚಂದ್ರರ ಬೆಳಕು, ಮನುಷ್ಯರಲ್ಲಿಯ ಪೌರುಷ, ಬೆಂಕಿಯಲ್ಲಿಯ ತೇಜಸ್ಸು, ತಪಸ್ಪಿಗಳ ತಪಸ್ಸು, ಬುದ್ಧಿವಂತರಲ್ಲಿಯ ಬುದ್ಧಿಗುಣ, ಸಂಯಮಶೀಲರಾದ ಬಲಿಷ್ಠರ ಬಲ, ಅಧರ್ಮಕ್ಕೆ ಹೋಗದ ಕಾಮನೆ ಇವೆಲ್ಲವೂ ಬ್ರಹ್ಮಶಕ್ತಿಯ ಚೆಹ್ನೆಗಳು. ಹಾಗೆ ನೋಡಿದರೆ ಎಲ್ಲೆಲ್ಲಿಯೂ ಬ್ರಹ್ಮಶಕ್ತಿಯ ಲಕ್ಷಣಗಳೇ ಇದ್ದರೂ ಗೀತೆಯಲ್ಲಿ ಹೆಗ್ಗುರುತುಗಳನ್ನು ಮಾತ್ರ ಹೇಳಿದೆ. ಒಟ್ಟಿನಲ್ಲಿ ಏನರ್ಥ? ಪ್ರಪಂಚ ವಿಕಾರ ಹೊಂದುವಂಥದ್ದು. ಆದರೆ ಅದನ್ನು ತುಂಬಿಕೊಂಡು ನಡೆಸುತ್ತಿರುವುದು ಎಂದೆಂದೂ ವಿಕಾರವಾಗದ, ಲೇಪಗೊಳ್ಳದ ಸತ್ವ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !