ಸತ್ಪುರುಷರ ಸಂಗ

ಶುಕ್ರವಾರ, ಏಪ್ರಿಲ್ 19, 2019
27 °C

ಸತ್ಪುರುಷರ ಸಂಗ

ಗುರುರಾಜ ಕರಜಗಿ
Published:
Updated:
Prajavani

ಹಿಂದೆ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಬ್ಬ ಅತ್ಯಂತ ಶ್ರದ್ಧಾಳು, ಸೋತಾಪನ್ನ ಶ್ರಾವಕನಾಗಿದ್ದ. ಒಂದು ಬಾರಿ ದೂರದ ಸಮುದ್ರ ಪ್ರಯಾಣಕ್ಕೆ ಹೊರಟು ನಿಂತ. ಅವನೊಂದಿಗೆ ಒಬ್ಬ ಕ್ಷಾರಿಕ ಗೃಹಸ್ಥ ನೌಕೆಯನ್ನು ಏರಿದ. ಅವನ ಹೆಂಡತಿಗೆ ಗಂಡನ ಚಿಂತೆ. ಜೊತೆಗೆ ಹೊರಟಿದ್ದ ಸಾತ್ವಿಕ ಬೋಧಿಸತ್ವನನ್ನು ಕಂಡು, “ಸ್ವಾಮಿ, ನನ್ನ ಗಂಡ ಮೊದಲಬಾರಿಗೆ ಸಮುದ್ರ ಪ್ರವಾಸ ಮಾಡುತ್ತಿದ್ದಾರೆ. ಅವರ ಸುಖ-ದು:ಖಗಳ ಭಾರ ತಮ್ಮ ಮೇಲಿದೆ” ಎಂದು ಬೇಡಿಕೊಂಡಳು. ಯಾತ್ರೆ ಪ್ರಾರಂಭವಾಯಿತು.

ಏಳನೆಯ ದಿನ ಸಮುದ್ರದಲ್ಲಿ ಬಿರುಗಾಳಿ ಎದ್ದು ನೌಕೆ ಒಡೆದು ಹೋಯಿತು. ಇವರಿಬ್ಬರೂ ಒಂದೇ ಹಲಗೆಯನ್ನು ಹಿಡಿದುಕೊಂಡು ತೇಲುತ್ತ ಮನುಷ್ಯರಿಲ್ಲದ ದ್ವೀಪಕ್ಕೆ ಬಂದರು. ಹಸಿವೆಯನ್ನು ಹಿಂಗಿಸಲು ಕ್ಷೌರಿಕ ಹಕ್ಕಿಗಳನ್ನು ಹೊಡೆದು ಬೇಯಿಸಿ ತಿನ್ನುತ್ತಿದ್ದ. ಅದನ್ನು ಬೋಧಿಸತ್ವನಿಗೂ ಕೊಡಲು ಬಂದ. ಆದರೆ ಬೋಧಿಸತ್ವ ತನಗೆ ಬೇಡವೆಂದು ಹೇಳಿ, ಕೇವಲ ದೊರೆತ ಹಣ್ಣುಗಳು ಮತ್ತು ನೀರಿನಿಂದ ಬದುಕಿದ್ದ. ಅವನು ಸದಾ ಭಗವಂತನ ಧ್ಯಾನ ಮಾಡುತ್ತ ತ್ರಿರತ್ನಗಳನ್ನು ಕುರಿತು ಚಿಂತಿಸುತ್ತಿದ್ದ. ತ್ರಿರತ್ನದ ಗುಣಗಳನ್ನೇ ನೆನೆಯುತ್ತಿದ್ದ.

ಇವನ ಶ್ರದ್ಧೆಯನ್ನು ಕಂಡು ದ್ವೀಪದ ನಾಗರಾಜ ತನ್ನ ದೇಹವನ್ನೇ ದೊಡ್ಡ ನೌಕೆಯನ್ನಾಗಿ ಮಾಡಿದ, ಸಮುದ್ರ ದೇವತೆ ನಾವಿಕನಾಯಿತು. ನೌಕೆಯ ತುಂಬ ಮುತ್ತುರತ್ನಗಳು ತುಂಬಿದವು. ಹಡಗಿನ ಪಟಗಳನ್ನು ಕಟ್ಟಲು ವಜ್ರಖಚಿತವಾದ ಮೂರು ಕಂಭಗಳಿದ್ದವು, ಚಿನ್ನದ ಹುಟ್ಟುಗಳಿದ್ದವು. ಸಮುದ್ರ ದೇವತೆ ನೌಕೆಯ ಅಂಚಿಗೆ ಬಂದು, “ಯಾರಾದರೂ ಜಂಬೂದ್ವೀಪಕ್ಕೆ ಹೋಗುವವರಿದ್ದೀರಾ?” ಎಂದು ಕೇಳಿದ. ಆಗ ಬೋಧಿಸತ್ವ, “ಮಹಾತ್ಮಾ, ದಯವಿಟ್ಟು ನಮ್ಮನ್ನು ಕರೆದುಕೊಂಡು ಹೋಗು” ಎಂದು ವಿನಂತಿಸಿದ. ಸಮುದ್ರದೇವತೆ ಬೋಧಿಸತ್ವನನ್ನು ನೌಕೆಯಲ್ಲಿ ಏರಿಸಿಕೊಂಡ.

ಬೋಧಿಸತ್ವ ಜೋರಾಗಿ ಕ್ಷೌರಿಕನನ್ನು ಕೂಗಿ ಮೇಲೆ ಹತ್ತಲು ಕೇಳಿದ. ಆಗ ಸಮುದ್ರ ದೇವತೆ ಗಟ್ಟಿಯಾಗಿ ಹೇಳಿದ, “ನೀನು ಮಾತ್ರ ನೌಕೆಯನ್ನೇರಬಹುದು, ಅವನು ಬರುವುದು ಸಾಧ್ಯವಿಲ್ಲ”. ಅದಕ್ಕೆ ಕಾರಣವನ್ನು ಬೋಧಿಸತ್ವ ಕೇಳಿದಾಗ ಆತ, “ಅವನು ಶೀಲವಂತನಲ್ಲ. ತನ್ನನ್ನು ಕಾಪಾಡಿದ ದ್ವೀಪದಲ್ಲಿದ್ದ ನಿರಪರಾಧಿ ಪಕ್ಷಿಗಳನ್ನು ಹೊಡೆದು ಕೊಂದಿದ್ದಾನೆ. ಅವನು ಕ್ರೂರಿಯಾದ್ದರಿಂದ ನೌಕೆಯಲ್ಲಿ ಸ್ಥಳವಿಲ್ಲ. ನೀನು ಮಾತ್ರ ಬರಬಹುದು” ಎಂದ. ಒಂದು ಕ್ಷಣ ಯೋಚಿಸಿದ ಬೋಧಿಸತ್ವ ಹೇಳಿದ, “ಮಹಾತ್ಮ, ಸ್ವಲ್ಪ ತಡೆ. ನಾನು ಇದುವರೆಗೂ ಮಾಡಿದ ದಾನ, ಕಾಪಾಡಿಕೊಂಡ ಶೀಲ ಇವುಗಳಲ್ಲಿ ಅರ್ಧವನ್ನು ಅವನಿಗೆ ನೀಡಿ ಅವನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುತ್ತೇನೆ. ಈಗ ಇಬ್ಬರೂ ಅಷ್ಟೇ ಅರ್ಹರಲ್ಲವೇ?”. ಸಮುದ್ರದೇವತೆ ನಕ್ಕು ಕ್ಷಾರಿಕನನ್ನು ನೌಕೆಯಲ್ಲಿ ಕರೆದುಕೊಂಡು ಪ್ರಯಾಣ ಬೆಳೆಸಿ ಅವರಿಬ್ಬರನ್ನೂ ವಾರಣಾಸಿಯ ಮನೆಯವರೆಗೂ ತಂದು ಬಿಟ್ಟು ಇಬ್ಬರ ಮನೆಗಳನ್ನು ಐಶ್ವರ್ಯದಿಂದ ತುಂಬಿಬಿಟ್ಟ. ಕ್ಷ್ಷೌರಿಕನ ಹೆಂಡತಿ ಬಂದು ಕೃತಜ್ಞತೆ ಹೇಳಿದಳು. ಕ್ಷೌರಿಕ ಹೇಳಿದ, “ನನಗೊಂದು ದೊಡ್ಡ ಪಾಠವಾಯಿತು. ಸ್ನೇಹ ಮಾಡಿದರೂ ಉದಾತ್ತರೊಂದಿಗೆ, ಸಾಧಕರೊಂದಿಗೆ ಮಾಡಬೇಕು. ಆಗ ನಮಗೂ ಅದರ ಭಾಗ ದೊರೆಯುತ್ತದೆ”.

ಅದು ಸರಿಯಾದದ್ದೇ. ಶ್ರದ್ದೆ, ತ್ಯಾಗ, ಶೀಲಗಳನ್ನು ಬೆಳೆಸಿಕೊಂಡ ಸತ್ಪುರುಷರ ಸಂಗ ನಮಗೂ ಒಳ್ಳೆಯದನ್ನು ಮಾಡುವುದರೊಂದಿಗೆ ನಮ್ಮನ್ನು ಸೂಕ್ತಸಮಯದಲ್ಲಿ ಕಾಪಾಡುತ್ತದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !