ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಒಳಹೊರಗೆಲ್ಲ ಒಂದೇ

Published:
Updated:
Prajavani

ಹೊರಗಾವುದೊಳಗಾವುದೀ ಸೃಷ್ಟಿ ಚಕ್ರದಲಿ ? |
ಎರಡನೊಂದಾಗಿಪುದು ಹರಿವ ನಮ್ಮುಸಿರು ||
ಇರುವುದುಳಿದಿನಿತು ಹೊರಗಾಳಿ ಯೋಗಿಗಳೊಳಂ |
ಬರಿ ಸುಷಿರಪಿಂಡ ಜಗ – ಮಂಕುತಿಮ್ಮ || 128 ||

ಪದ-ಅರ್ಥ: ಹೊರಗಾವುದೊಳಗಾವುದೀ=ಹೊರಗಾವುದು+ಒಳಗಾವುದು+ಈ. ಎರಡನೊಂದಾಗಿಪುದು=ಎರಡನೂ+ಒಂದಾಗಿಪುದು. ಇರುವುದುಳಿದಿನಿತು=ಇರುವುದು+ಉಳಿದ+ಇನಿತು(ಸ್ವಲ್ಪ), ಸುಷಿರಪಿಂಡ=ಒಳಗೆಪೂರ್ತಿ ಪೊಳ್ಳಾಗಿರುವ ಶಂಖ, ಕೊಳಲು, ನಾದಸ್ವರದಂಥ, ಊದುಗೊಳವೆಯಂಥ, ಒಳಹೊರಗಿನ ಗಾಳಿಯನ್ನು ಒಂದು ಮಾಡುವ ವಸ್ತು.

ವಾಚ್ಯಾರ್ಥ: ಈ ಸೃಷ್ಟಿಯ ಚಕ್ರದಲ್ಲಿ ಹೊರಗಾವುದು, ಒಳಗಾವುದು? ನಮ್ಮ ಹರಿಯುವ ಉಸಿರು ಎರಡನ್ನು ಒಂದಾಗಿಸುತ್ತದೆ. ಹೊರಗಿನ ಗಾಳಿ ಸ್ವಲ್ಪ ಏನಾದರೂ ಉಳಿದಿದ್ದರೆ ಅದು ಯೋಗಿಗಳಲ್ಲಿದೆ. ಈ ಜಗತ್ತು ಒಳ, ಹೊರಗಾಳಿಗಳನ್ನು ಒಂದುಗೂಡಿಸುವ ಸ್ಪಂಜಿನಂತಿದೆ.

ವಿವರಣೆ: ಈ ಸೃಷ್ಟಿಯೇ ಒಂದು ಚಕ್ರ. ಅದು ಸುತ್ತುತ್ತಲೇ ಇದೆ. ದೂರಹೋದಂತೆ ಭ್ರಮೆ ಹುಟ್ಟಿಸುತ್ತದೆ. ಆದರೆ ಅದು ಇದ್ದಲ್ಲಿಯೇ ಇದೆ. ಹಾಗಾದರೆ ಈ ಸೃಷ್ಟಿಯ ಒಳಗು ಯಾವುದು, ಹೊರಗು ಯಾವುದು? ಚಕ್ರದ ಹಾಗೆ ತಿರುಗುವಾಗ ಒಳಗಿದ್ದದ್ದು ಹೊರಗಾಗುತ್ತದೆ, ಹೊರಗಿದ್ದದ್ದು ಒಳಗಾಗುತ್ತದೆ. ಅಂದರೆ ಒಳಗೂ, ಹೊರಗೂ ಇರುವುದು ಒಂದೇ. ನಾರಾಯಣಸೂಕ್ತ ಈ ಮಾತನ್ನೇ ಹೇಳುತ್ತದೆ-

“ಅಂತರ್‍ಬಹಿಶ್ಚ ತತ್‍ಸರ್ವಂ ವ್ಯಾಪ್ಯ ನಾರಾಯಣ ಸ್ಥಿತ:”

ಸತತವಾಗಿ ಹರಿಯುವ ನಮ್ಮ ಉಸಿರು ಒಳಗು, ಹೊರಗುಗಳನ್ನು ಒಂದುಮಾಡುತ್ತದೆ. ಉಸಿರು ಎನ್ನುವುದು ಯಾವುದು? ಅದು ಎಲ್ಲಿದೆ? ಹೊರಗಿದೆಯೋ, ಒಳಗಿದೆಯೋ? ಈ ಪ್ರಪಂಚ ಸೃಷ್ಟಿಸಿದ ಗಾಳಿ ಇಲ್ಲೇ ಸುತ್ತುತ್ತಲೇ ಇದೆ ಶತಮಾನಗಳಿಂದ. ಅದನ್ನು ಕೋಟ್ಯಾನುಕೋಟಿ ಜೀವರುಗಳು ಉಸಿರಾಡುತ್ತಿದ್ದಾರೆ.

ಹೊರಗಿದ್ದ ಗಾಳಿಯನ್ನು ದೇಹದೊಳಗೆ ಎಳೆದುಕೊಂಡು ನಮ್ಮ ಪುಪ್ಪುಸಗಳಲ್ಲಿ ತುಂಬಿಕೊಂಡಾಗ ಅದನ್ನು ನಮ್ಮ ಉಸಿರು ಎನ್ನುತ್ತೇವೆ. ಅದನ್ನು ಹಾಗೆಯೇ ಇಟ್ಟುಕೊಳ್ಳಲಾಗುವುದಿಲ್ಲವಲ್ಲ? ಹೊರಗೆ ಅದನ್ನು ಬಿಟ್ಟಾಗ ಅದು ಮತ್ತೆ ಹೊರಗಿನ ಗಾಳಿಯೊಡನೆ ಸೇರಿ ಗಾಳಿಯೇ ಆಗಿಬಿಡುತ್ತದೆ. ಅಂದರೆ ಉಸಿರು ಬೇರೆಯಲ್ಲ, ಗಾಳಿ ಬೇರೆಯಲ್ಲ. ದೇಹದ ಒಳಗೆ, ಹೊರಗೆ ಇರುವುದು ಗಾಳಿಯೇ. ದೇಹ ಒಂದು ಕೊಳವೆಯಂತೆ ಇದ್ದು ಒಳಗಿನ ಹಾಗೂ ಹೊರಗಿನ ಗಾಳಿಗೆ ವಾಹಕವಾಗಿದೆ. ಹೊರಗಿನ ಗಾಳಿ ಅಲ್ಪಸ್ವಲ್ಪ ಏನಾದರೂ ಒಳಗೆ ಉಳಿದಿದ್ದರೆ ಅದು ಯೋಗಿಗಳಲ್ಲಿದ್ದೀತು.

ಒಂದು ದೇಹ ಕೊಳವೆಯಂತಾದರೆ, ಇಡೀ ಜಗತ್ತು ಒಂದು ಕೊಳವೆಯಂತಲ್ಲವೇ? ಅದೂ ಉಸಿರನ್ನು ಒಳಗಡೆ ಉಳಿಸಿಕೊಳ್ಳಲಾರದು. ಕಗ್ಗ ಬಳಸುವ ಪದ 'ಸುಷಿರಪಿಂಡ' ತುಂಬ ಸುಂದರವಾದದ್ದು. ಕೊಳಲು, ನಾದಸ್ಪರ, ಶಂಖದಂತಹ ವಾದ್ಯಗಳು ಸುಮಧುರವಾದ ಧ್ವನಿಯನ್ನು ಹೊರಡಿಸುವುದು ದೇಹದ ಒಳಗಿನ ಮತ್ತು ಹೊರಗಿನ ಗಾಳಿಗಳನ್ನು ಒಂದು ಮಾಡಿದಾಗ ಮಾತ್ರ. ಅದು ಒಂದು ರೀತಿಯ ಸ್ಪಂಜು ಇದ್ದ ಹಾಗೆ.

ಸ್ಪಂಜು ದಪ್ಪನಾಗಿ ಕಾಣುವುದು ಅದರೊಳಗಿದ್ದ ಅನೇಕಾನೇಕ ತೂತುಗಳಲ್ಲಿ ಗಾಳಿ ತುಂಬಿಕೊಂಡಾಗ. ಅದನ್ನು ಒತ್ತಿದಾಗ ಒಳಗಿದ್ದ ಗಾಳಿ ಹೊರಗೆ ಹೋಗಿ ಚಪ್ಪಟೆಯಾಗುತ್ತದೆ. ಮತ್ತೆ ಕೈ ಬಿಟ್ಟರೆ ಗಾಳಿಯನ್ನೆಳೆದುಕೊಂಡು ಉಬ್ಬಿ ನಿಲ್ಲುತ್ತದೆ. ಈ ಜಗತ್ತು ಹಾಗೆಯೇ.

Post Comments (+)