ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡುವವನ ಅಸಹಾಯಕತೆ

Last Updated 7 ಮೇ 2019, 20:19 IST
ಅಕ್ಷರ ಗಾತ್ರ

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಬ್ಬ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದ್ದ. ಅವನು ದೊಡ್ಡವನಾದ ಮೇಲೆ ತಕ್ಕಶಿಲೆಗೆ ಹೋಗಿ ಸರ್ವವಿದ್ಯೆಗಳನ್ನು ಕಲಿತ. ತನ್ನ ತಂದೆತಾಯಿಯರ ಬಡತನವನ್ನು ಕಂಡು, ಅವರ ಅಪ್ಪಣೆ ಪಡೆದು ವಾರಾಣಸಿಯ ಮಹಾರಾಜನಲ್ಲಿ ಕೆಲಸಕ್ಕೆ ನಿಂತ. ತನ್ನ ಕರ್ತವ್ಯನಿಷ್ಠೆಯಿಂದ ರಾಜನ ಮೆಚ್ಚುಗೆಯನ್ನು ಪಡೆದ.

ಹೀಗೆ ಎರಡು ತಿಂಗಳು ಕಳೆಯುವುದರಲ್ಲಿ ಅವನ ತಂದೆಯ ಬಳಿಯಿದ್ದ ಎರಡು ಎತ್ತುಗಳಲ್ಲಿ ಒಂದು ಸತ್ತು ಹೋಯಿತು. ವ್ಯವಸಾಯ ಮಾಡುವುದು ಕಷ್ಟವಾಯಿತು. ತಂದೆ ಮಗ ಬೋಧಿಸತ್ವನಿಗೆ ಹೇಳಿದ, ‘ಮಗೂ ಒಂದೇ ಎತ್ತಿನಿಂದ ಒಕ್ಕಲುತನ ಮಾಡುವುದು ಸಾಧ್ಯವಿಲ್ಲ. ನೀನು ಹೇಗೂ ಮಹಾರಾಜರ ಹತ್ತಿರ ಇದ್ದೀಯಾ, ಅವರನ್ನು ಇನ್ನೊಂದು ಎತ್ತಿಗಾಗಿ ಕೇಳು’ . ಬೋಧಿಸತ್ವ ಹೇಳಿದ, ‘ಅಪ್ಪಾ, ನಾನು ಕೆಲಸಕ್ಕೆ ಸೇರಿ ಈಗಷ್ಟೇ ಎರಡು ತಿಂಗಳಾಗಿದೆ. ರಾಜರನ್ನು ಕೇಳುವುದು ಅಷ್ಟು ಸರಿಯಲ್ಲ. ಬದಲಾಗಿ ಪ್ರಜೆಯಾಗಿ ನೀವೇ ಅವರನ್ನು ಕೇಳಬಹುದಲ್ಲ’. ತಂದೆ, ‘ಮಗೂ, ನಿನಗೆ ಗೊತ್ತು, ನಾನು ತುಂಬ ಸಂಕೋಚ ಸ್ವಭಾವದವನು. ಅದಲ್ಲದೆ ನಾನು ರೈತ, ಕೆಲಸಮಾಡಬಲ್ಲೆ ಮತ್ತು ಸ್ವಾಭಿಮಾನಿಯಾದ್ದರಿಂದ ಕೈಚಾಚಿ ಕೇಳುವ ಅಭ್ಯಾಸವಿಲ್ಲ. ನನಗೆ ಕೇಳುವ ರೀತಿಯೂ ಗೊತ್ತಿಲ್ಲ’ ಎಂದ. ಬೋಧಿಸತ್ವ, ‘ಅಪ್ಪಾ, ನಿಮಗೆ ಬೇಕಾದರೆ ರಾಜರನ್ನು ಹೇಗೆ ಬೇಡಬೇಕೆನ್ನುವುದರ ತರಬೇತಿ ಕೊಡುತ್ತೇನೆ. ನಿಮಗೆ ಕೇಳುವ ಧೈರ್ಯ ಬಂದ ಮೇಲೆ ಕೇಳಿರಿ’ ಎಂದು ಬೋಧನೆ ಮಾಡಿದ.

ಮುಂದೆ ತಾನೇ ನಿಂತು ತಂದೆಗೆ ರಾಜನನ್ನು ಬೇಡುವ ಬಗೆ ಹೇಗೆ ಎಂಬುದರ ತರಬೇತಿ ನೀಡಿದ. ತಂದೆ ಒಂದು ವಾರ ಸತತವಾಗಿ, ಒಂದು ಹುಲ್ಲಿನ ಬೊಂಬೆಯನ್ನು ರಾಜನಾಗಿ ಮುಂದಿಟ್ಟುಕೊಂಡು, ಮಗ ಹೇಳಿಕೊಟ್ಟಿದ್ದನ್ನು ಅಭ್ಯಾಸ ಮಾಡಿದ. ಅವನಿಗೆ ಈಗ ರಾಜನನ್ನು ಕೇಳುವುದು ಹೇಗೆ, ಯಾವ ಮಾತುಗಳಿಂದ ಎಂಬುದು ಸ್ಪಷ್ಟವಾಗಿದೆ ಎನ್ನಿಸಿತು.

ಮಗನಿಗೆ ತಿಳಿಸಿ ಮರುದಿನ ರಾಜನ ಅರಮನೆಗೆ ಹೋದ. ಬೋಧಿಸತ್ವ ಅವನನ್ನು ಕರೆದುಕೊಂಡು ರಾಜನ ಮುಂದೆ ಬಂದ. ‘ಯಾರಿವರು?’ ಕೇಳಿದ ರಾಜ. ‘ಮಹಾರಾಜಾ ಇವರು ನನ್ನ ತಂದೆ’ ಎಂದು ಪರಿಚಯಿಸಿದ ಬೋಧಿಸತ್ವ. ‘ಯಾಕೆ ಬಂದಿದ್ದಾರೆ?’ ‘ಮಹಾರಾಜರೇ ನನ್ನಲ್ಲಿ ಎರಡು ಎತ್ತುಗಳಿದ್ದವು. ನಾನು ವ್ಯವಸಾಯ ಮಾಡಿಕೊಂಡು ಬದುಕಿದ್ದೆ. ಆದರೆ ಇತ್ತೀಚಿಗೆ ಒಂದು ಎತ್ತು ಸತ್ತು ಹೋಯಿತು. ದಯವಿಟ್ಟು ಮಹಾರಾಜಾ, ನನ್ನ ಉಳಿದ ಒಂದು ಎತ್ತನ್ನು ತೆಗೆದುಕೊಂಡು ಬಿಡಿ’ ಎಂದ ಬೋಧಿಸತ್ವನ ತಂದೆ.

‘ಬೋಧಿಸತ್ವ, ನಿಮ್ಮ ಮನೆಯಲ್ಲಿ ಸಾಕಷ್ಟು ಎತ್ತುಗಳು ಇದ್ದ ಹಾಗಿದೆ’ ಎಂದು ಮಹಾರಾಜ ನಕ್ಕ. ‘ಹೌದು ಮಹಾರಾಜ, ತಾವು ಕೊಟ್ಟರೆ ಬೇಕಾದಷ್ಟು ಎತ್ತುಗಳು ಇರುತ್ತವೆ’ ಹೇಳಿದ ಬೋಧಿಸತ್ವ. ಬೋಧಿಸತ್ವನ ಬುದ್ಧಿವಂತಿಕೆಯ ಮಾತುಕೇಳಿ ಸಂತೋಷಪಟ್ಟ ರಾಜ ಬೋಧಿಸತ್ವನ ತಂದೆಗೆ ಹದಿನಾರು ಅಲಂಕೃತವಾದ ಎತ್ತುಗಳನ್ನು ಮತ್ತು ಅದರೊಂದಿಗೆ ಅವನು ವಾಸವಾಗಿದ್ದ ಹಳ್ಳಿಯನ್ನೇ ಅವನಿಗೆ ಉಂಬಳಿ ಹಾಕಿಕೊಟ್ಟ.

ಅವುಗಳನ್ನು ತೆಗೆದುಕೊಂಡು ಹಳ್ಳಿಗೆ ಹೋಗುವ ಸಮಯದಲ್ಲಿ ಬೋಧಿಸತ್ವ ತನ್ನ ತಂದೆಗೆ ಕೇಳಿದ, ‘ಅಪ್ಪಾ, ನಾನು, ನಿನಗೆ ಕಲಿಸಿದ್ದೇನು, ನೀನು ಕೇಳಿದ್ದೇನು? ನಾನು ಹೇಳಿಕೊಟ್ಟದ್ದು, ‘ಮಹಾರಾಜಾ, ನನ್ನ ಒಂದು ಎತ್ತು ಸತ್ತು ಹೋಯಿತು. ದಯವಿಟ್ಟು ಇನ್ನೊಂದನ್ನು ಕೊಡು’ ಎಂದು. ಆದರೆ ನೀನು ಕೇಳುವ ಬದಲು ಇರುವ ಎತ್ತನ್ನು ಕೊಡುವ ಮಾತನಾಡಿದೆಯಲ್ಲ?’. ತಂದೆ ಹೇಳಿದ, ‘ಮಗು ನಿನಗೆ ಅರ್ಥವಾಗುವುದಿಲ್ಲ. ಬೇಡುವವನ ಸ್ಥಿತಿಯೇ ಹೀಗೆ. ಅವನಿಗೆ ಬಂದ ಕೀಳರಿಮೆ, ಕುಂದಿದ ಆತ್ಮವಿಶ್ವಾಸ ಅಸಹಾಯಕನನ್ನಾಗಿ ಮಾಡಿ ತಪ್ಪು ಮಾತನ್ನು ಹೇಳಿಸುತ್ತದೆ’.

ಅಸಹಾಯಕತೆ ಮನುಷ್ಯನನ್ನು ತುಂಬ ಅಶಕ್ತನನ್ನಾಗಿ ಮಾಡುತ್ತದೆ. ಬೇಡುವ ಶಕ್ತಿಯನ್ನು ಕಳೆದುಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT