ಸೋಮವಾರ, ಸೆಪ್ಟೆಂಬರ್ 16, 2019
21 °C

ಒಳಗೊಂದು - ಹೊರಗೊಂದು

ಗುರುರಾಜ ಕರಜಗಿ
Published:
Updated:
Prajavani

ಪೂರ್ವಕಾಲದಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಅತ್ಯಂತ ದರಿದ್ರ ಮನೆತನದಲ್ಲಿ ಹುಟ್ಟಿ, ಬೆಳೆದು, ಭಿಕ್ಷೆಯಿಂದ ಬದುಕು ಸಾಗಿಸುತ್ತಿದ್ದ.

ಒಂದು ದಿನ ಹೀಗೆ ಭಿಕ್ಷೆಗಾಗಿ ಸುತ್ತಾಡುತ್ತ ಒಬ್ಬ ಬ್ರಾಹ್ಮಣನ ಮನೆಯ ಮುಂದೆ ಬಂದು ನಿಂತ. ಮನೆಯಲ್ಲಿ ಬ್ರಾಹ್ಮಣ ಮತ್ತು ಅವನ ಹೆಂಡತಿ ಇಬ್ಬರೇ ಇರುವವರು. ಬ್ರಾಹ್ಮಣ ಕೆಲಸಕ್ಕೆ ಹೊರಗೆ ಹೋಗಿದ್ದ. ಅವನ ಹೆಂಡತಿ ದುರ್ನಡತೆಯವಳು. ವ್ಯಭಿಚಾರಿಣಿಯಾಗಿದ್ದಳು. ಗಂಡ ಹೊರಗೆ ಹೋದಾಗ ವಿಟ ಮನೆಯೊಳಗೆ ಬಂದ. ಈ ಹೆಂಗಸು ಇದೇ ಒಳ್ಳೆಯ ಅವಕಾಶವೆಂದುಕೊಂಡು ಅವನನ್ನು ಸ್ವಾಗತಿಸಿದಳು. ಪರಪುರುಷನೊಂದಿಗೆ ಅನಾಚಾರಮಾಡಿ ನಂತರ “ಹೇಗೂ ಬಂದಿದ್ದೀಯಾ, ಒಳ್ಳೆಯ ಅಡುಗೆ ಮಾಡುತ್ತೇನೆ, ಊಟ ಮಾಡಿಯೇ ಹೋಗು. ನನ್ನ ಗಂಡ ಬರುವುದು ಇನ್ನು ಯಾವಾಗಲೋ” ಎಂದು ಭರ್ಜರಿ ಅಡುಗೆಯನ್ನೇ ಮಾಡಿದಳು.

ಮಾಡಿದ ಅನ್ನ, ಸಾರು ಮತ್ತಿತರ ವ್ಯಂಜನಗಳನ್ನು ಬಡಿಸಿ “ನಿಧಾನಕ್ಕೆ ಊಟ ಮಾಡು” ಎಂದು ಹೇಳಿ ಬಾಗಿಲನ್ನು ಕಾಯುತ್ತ ನಿಂತಳು. ಬೋಧಿಸತ್ವ ಹೊರಗೆ ಭಿಕ್ಷೆಗಾಗಿ ಕಾಯುತ್ತಲೇ ಇದ್ದ. ವಿಟನ ಊಟ ಮುಕ್ಕಾಲು ಭಾಗ ಮುಗಿಯುತ್ತ ಬಂದಾಗ ಬ್ರಾಹ್ಮಣ ಮನೆಗೆ ಬಂದುಬಿಟ್ಟ. ಬ್ರಾಹ್ಮಣಿ ಅವನನ್ನು ಕಂಡು ಗಾಬರಿಯಾಗಿ ಅವಸರವಸರದಿಂದ ಒಳಕ್ಕೆ ಬಂದು, “ನನ್ನ ಗಂಡ ಬರುತ್ತಿದ್ದಾನೆ, ಬೇಗ ಏಳು, ಅಡಗಿಕೋ” ಎಂದು ಅವನನ್ನು ಒಂದು ಕೋಣೆಯಲ್ಲಿ ಕೂಡಿಹಾಕಿದಳು. ಬ್ರಾಹ್ಮಣ ಮನೆಯೊಳಗೆ ಬಂದಕೂಡಲೇ ಕೃತ್ತಿಮವಾದ ನಗುವನ್ನು ನಕ್ಕು ಅವನಿಗೆ ಕೈಕಾಲು ತೊಳೆಯಲು ನೀರು ಕೊಟ್ಟು ಮಣೆ ಹಾಕಿ ವಿಟ ಊಟಮಾಡಿದ ಎಂಜಲು ಎಲೆಯಲ್ಲಿಯೇ ಉಳಿದಿದ್ದ ಅನ್ನದ ಮೇಲೆ ಬಿಸಿಬಿಸಿ ಅನ್ನವನ್ನು ಹಾಕಿದಳು. ಬ್ರಾಹ್ಮಣ ಅನ್ನಕ್ಕೆ ಕೈ ಹಾಕಿದಾಗ ವಿಚಿತ್ರವೆನ್ನಿಸಿತು. ಅನ್ನದ ಮೇಲ್ಭಾಗ ಬಿಸಿ ಇದೆ ಆದರೆ ಕೆಳಗಿನ ಭಾಗ ತಣ್ಣಗಿದೆ. ಅಂದರೆ ಇದು ಯಾರೋ ತಿಂದು ಬಿಟ್ಟ ಎಂಜಲು ಎಲೆ ಎಂಬುದು ಖಚಿತವಾಯಿತು. ಅವನು ಬ್ರಾಹ್ಮಣಿಯನ್ನು ಕೇಳಿದ, (ಪಾಲಿ ಭಾಷೆ)

“ಆಞ್ಞ ಅಪರಿಮೊ ಏಣ್ಣೊ ಆಞ್ಞ ವಣ್ಣೋವ ಹೆಟ್ಠಮೊ |
ಬ್ರಾಹ್ಮಣಿಂ ತ್ಪೆವ ಪುಚ್ಛಾಮಿ ಕಿಂ ಹೆಟ್ಠಾ ಕಿಂ ಚ ಉಪ್ಪರಿ ||

“ಮೇಲಿನ ಹಾಗೂ ಕೆಳಗಿನ ಅನ್ನದ ರೀತಿಯೇ ಬೇರೆ ಬೇರೆ ಇದೆ. ಬ್ರಾಹ್ಮಣಿ, ನಿನ್ನನ್ನೇ ಕೇಳುತ್ತೇನೆ, ಮೇಲೇನಿದೆ ಮತ್ತು ಕೆಳಗೇನಿದೆ?” ತನ್ನ ದುರ್ನಡತೆ ಗಂಡನಿಗೆ ಎಲ್ಲಿ ಗೊತ್ತಾಗುತ್ತದೋ ಎಂದು ಬ್ರಾಹ್ಮಣಿ ಅವನೆಷ್ಟು ಕೇಳಿದರೂ ಬಾಯಿ ಬಿಡಲಿಲ್ಲ. ತಾನು ಮಾಡಿದ್ದೇ ಸರಿಯೆಂದು ವಾದಿಸತೊಡಗಿದಳು.

ಹೊರಗೆ ಭಿಕ್ಷೆಗೆ ನಿಂತಿದ್ದ ಬೋಧಿಸತ್ವನಿಗೆ, ಮೊದಲು ಬಂದವನು ವಿಟ ಹಾಗೂ ನಂತರ ಬಂದವನು ಗಂಡ ಎಂದು ತಿಳಿಯಿತು. ಈ ಮೋಸ ಹೀಗೆಯೇ ನಡೆಯಬಾರದೆಂದು ಗಂಡನಿಗೆ ನಡೆದ ವಿಷಯವನ್ನು ಹೇಳಲು ತೀರ್ಮಾನಿಸಿಕೊಂಡ. ವಿಟಪುರುಷ ಮನೆಯೊಳಗೆ ಬಂದದ್ದು, ಬ್ರಾಹ್ಮಣಿ ಅವನನ್ನು ಸ್ವಾಗತಿಸಿ ಅನಾಚಾರ ಮಾಡಿದ್ದು, ಒಳ್ಳೆಯ ಭೋಜನ ಮಾಡಿಸಿದ್ದು, ಆಗ ಬ್ರಾಹ್ಮಣ ಆಕಸ್ಮಿಕವಾಗಿ ಬಂದಾಗ ಆರಿದ ಅನ್ನದ ಮೇಲೆಯೇ ಬಿಸಿ ಅನ್ನವನ್ನು ಸುರಿದದ್ದು ಎಲ್ಲವನ್ನೂ ಹೇಳಿ ವಿಟ ಕೋಣೆಯಲ್ಲಿಯೇ ಇದ್ದಾನೆ ಎಂಬುದನ್ನು ವಿವರವಾಗಿ ಬ್ರಾಹ್ಮಣನಿಗೆ ತಿಳಿಸಿದ.

ಬ್ರಾಹ್ಮಣ ಇಬ್ಬರನ್ನೂ ಹೊರಗೆ ಕರೆಯಿಸಿ ಇನ್ನೊಮ್ಮೆ ಇಂಥ ಪಾಪಕರ್ಮ ಮಾಡದಂಥ ಶಿಕ್ಷೆ ಕೊಟ್ಟು ಕಳುಹಿಸಿಬಿಟ್ಟ. ಈ ಗಾಥೆಯಲ್ಲಿ ಬರುವ ‘ಕಿಂ ಹೆಟ್ಠಾ ಕಿಂ ಚ ಉಪ್ಪರಿ’ ಬಹಳ ಮುಖ್ಯ ಪ್ರಶ್ನೆ. ಅದು ಅನ್ನವನ್ನು ಕುರಿತು “ಮೇಲೇನಿದೆ ಮತ್ತು ಕೆಳಗೇನಿದೆ” ಎಂದು ಕೇಳಿದ್ದಾದರೂ ಅದು ನಮ್ಮೆಲ್ಲರನ್ನೂ 'ಹೊರಗೇನಿದೆ ಮತ್ತು ಒಳಗೇನಿದೆ' ಎಂದು ಕೇಳಿದ ಹಾಗಿದೆ. ಒಳಗೆಲ್ಲ ದುಷ್ಟ ಚಿಂತನೆಗಳನ್ನು ತುಂಬಿಕೊಂಡು ಹೊರಗೆ ಸಂತರ ಮುಖವಾಡ ಹಾಕುವ ಎಲ್ಲ ಆಷಾಡಭೂತಿಗಳಿಗೆ ಈ ಪ್ರಶ್ನೆ ಹೊಂದುತ್ತದೆ.

Post Comments (+)