ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಂಖ್ಯ ವಿಶ್ವಗಳು

Last Updated 27 ಮೇ 2019, 19:49 IST
ಅಕ್ಷರ ಗಾತ್ರ

ನಾನೆನುವವನೆ ವಿಶ್ವಚಕ್ರನಾಭಿಯವಂಗೆ |

ಕಾಣಬಹ ದಿಗ್ಪಲಯಚಕ್ರನೇಮಿಪಥ ||
ಅನಂತ್ಯವೀಜಗಚ್ಚಕ್ರನಾಭಿಕ್ರಮತೆ |
ತಾನೊಂದೆ ಸತ್ಪವದು– ಮಂಕುತಿಮ್ಮ || 137 ||

ಪದ-ಅರ್ಥ: ನಾನೆನುವವನೆ=ನಾನು+ಎನುವವನೆ, ವಿಶ್ವಚಕ್ರನಾಭಿಯವಂಗೆ=ವಿಶ್ವಚಕ್ರ+ನಾಭಿ (ಕೇಂದ್ರಬಿಂದು)+ ಅವಂಗೆ(ಅವನಿಗೆ), ದಿಗ್ಪಲಯ=ದಿಕ್+ವಲಯ, ಚಕ್ರನೇಮಿಪಥ=ಚಕ್ರ+ನೇಮಿಪಥ(ಚಕ್ರದ ಪರಿಧಿ), ಜಗಚ್ಚಕ್ರನಾಭಿಕ್ರಮತೆ=ಜಗಚಕ್ರ(ಜಗತ್ತೆಂಬ ಚಕ್ರ)+ನಾಭಿ (ಕೇಂದ್ರ)+ಕ್ರಮತೆ(ಸುತ್ತುವಿಕೆ), ಅನಂತ್ಯ=ಅಂತ್ಯವಿಲ್ಲದ್ದು.

ವಾಚ್ಯಾರ್ಥ: ನಾನು ಎನ್ನುವ ಮನುಷ್ಯನೇ ವಿಶ್ವವೆಂಬ ಚಕ್ರದ ಕೇಂದ್ರ ಬಿಂದು. ಅವನಿಗೆ ಕಾಣಬರುವ, ಅನುಭವಕ್ಕೆ ಬರುವ ಪ್ರದೇಶವೆಲ್ಲವೂ ಆ ಚಕ್ರದ ಪರಿಧಿ. ಈ ಜಗತ್ತೆಂಬ ಚಕ್ರದ ಸುತ್ತುವಿಕೆ ಅನಂತವಾದದ್ದು. ಇದೆಲ್ಲವೂ ಒಂದೇ ಸತ್ವ.

ವಿವರಣೆ: ಭಾಗವತ ಪುರಾಣದಲ್ಲಿ ಒಂದು ಸುಂದರವಾದ ವಿವರಣೆ ದೊರಕುತ್ತದೆ. (6.16.37). ನಮ್ಮ ಆಧ್ಯಾತ್ಮಿಕ ಗ್ರಂಥಗಳು ಹೇಳುವ ಹಾಗೆ ಈ ವಿಶ್ವ ಅನೇಕ ಬಾರಿ ಸೃಷ್ಟಿಯಾಗಿ ಮತ್ತೆ ಲಯವನ್ನು ಕಂಡಿದೆ. ಅದೆಷ್ಟು ಬಾರಿ ಹೀಗೆ ಪುನಃ ಪುನಃ ಸೃಷ್ಟಿಯಾಗಿದೆಯೋ? ನಮಗೆ ದೊರೆತಿರುವ ಕಾಲವನ್ನು ನಾಲ್ಕು ಯುಗಗಳಲ್ಲಿ ಹಂಚಿ, ಈಗ ನಡೆದಿರುವುದು ಕಲಿಯುಗ ಎಂದು ತಿಳಿಸುತ್ತವೆ. ಭಾಗವತದ ಚಿಂತನೆಯಲ್ಲಿ ಒಂದೇ ವಿಶ್ವ ಎನ್ನುವುದಿಲ್ಲ. ಕೋಟ್ಯಾಂತರ ವಿಶ್ವಗಳಿವೆ. ಸಾಬೂನು ನೀರಿನಲ್ಲಿ ಹಾಕಿ ಕಲಕಿದಾಗ ಕಾಣುವಂತೆ, ಅಸಂಖ್ಯವಾದ ನೊರೆಗುಳ್ಳೆಗಳಂತೆ ವಿಶ್ವಗಳಿವೆ. ನೊರೆಗುಳ್ಳೆಗಳ ಹಾಗೆಯೇ ಅವು ಸೃಷ್ಟಿಯಾಗುತ್ತವೆ, ಸ್ವಲ್ಪ ಕಾಲ ಉಳಿಯುತ್ತವೆ ನಂತರ ಒಡೆದು ಮರೆಯಾಗುತ್ತವೆ.

ಏನಿದರ ಅರ್ಥ: ಅದರ ಒಂದು ವಿವರಣೆ ಹೀಗಿದೆ. ಅದನ್ನೇ ಈ ಕಗ್ಗ ತಿಳಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ವಿಶ್ವವಿದೆ. ಮನೆಯಲ್ಲಿ ಗಂಡ, ಹೆಂಡತಿ ಮತ್ತು ಮಕ್ಕಳು ಪಕ್ಕಪಕ್ಕದಲ್ಲೇ ಕುಳಿತಿದ್ದರೂ, ಒಬ್ಬರಿಗೊ
ಬ್ಬರು ಅಂಟಿಕೊಂಡಿದ್ದರೂ ಅವರಿಗೆ ಅವರದೇ ವಿಶ್ವ. ಅವರಿಗೆ ಅವರದೇ ಚಿಂತೆ, ಸಂತೋಷ, ಭಯ, ಸಾಧನೆ ಮತ್ತು ಅಪೇಕ್ಷೆಗಳು. ಪರಿವಾರದಲ್ಲಿ ಅವರ ವಿಶ್ವಗಳು ಸ್ವಲ್ಪಒಂದರ ಮೇಲೊಂದು ವ್ಯಾಪಿಸಬಹುದು. ಆದರೆ ಒಬ್ಬಬ್ಬರೂ ಒಂದೊಂದು ವೃತ್ತವೇ. ಅದೇ ಅವರ ವಿಶ್ವ. ಆ ವಿಶ್ವಕ್ಕೆ ಅವರೇ ಕೇಂದ್ರಬಿಂದು.

ಆ ವ್ಯಕ್ತಿಯ ಕಣ್ಣಿಗೆ ಕಾಣುವ, ಅನುಭವಕ್ಕೆ ಬರುವ ಪ್ರಪಂಚವೇ ಅವನ ವಿಶ್ವ. ಭಾರತದ ಒಂದು ಸಣ್ಣ ಊರಿನಲ್ಲಿರುವ ವ್ಯಕ್ತಿ ಇಂದು ಹವಾಯಿ ದ್ವೀಪದಲ್ಲಿ ಮಧ್ಯಾಹ್ನ ಮಳೆಯಾಗುತ್ತದೆಯೇ ಎಂದು ನೋಡುತ್ತಾನೆಯೇ? ಬಹುಶಃ ಇಲ್ಲ. ಅದು ಅವನ ವಿಶ್ವದ ಭಾಗದಲ್ಲಿಲ್ಲ. ಆದರೆ ಹವಾಯಿ ದ್ವೀಪದಲ್ಲಿರುವ ಮನುಷ್ಯನಿಗೆ ಅದು ಮುಖ್ಯವಾದ ವಿಷಯ. ಕಗ್ಗದ ಮಾತು ಅದೇ-ನಾನು ಎಂದುಕೊಳ್ಳುವ ಪ್ರತಿಯೊಬ್ಬ ಮನುಷ್ಯ ಅವನ ವಿಶ್ವದ ಕೇಂದ್ರ ಮತ್ತು ಅವನು ಕಾಣುವ ಪ್ರಪಂಚವೇ ಅವನ ವಿಶ್ವದ ಪರಿಧಿ.

ಒಬ್ಬ ವ್ಯಕ್ತಿ ಹೋದರೆ ಆ ವಿಶ್ವ ಹೋಯಿತು. ಮತ್ತೊಂದು ವ್ಯಕ್ತಿ ಹುಟ್ಟಿದಾಕ್ಷಣ ಮತ್ತೊಂದು ವಿಶ್ವ ತೆರೆದುಕೊಳ್ಳುತ್ತದೆ. ಹೀಗೆ ವಿಶ್ವಗಳ ಸೃಷ್ಟಿ, ಮತ್ತು ಆ ವಿಶ್ವದ ಕೇಂದ್ರವಾದ ವ್ಯಕ್ತಿಅನಂತವಾಗಿ ನಡೆದು ಬರುತ್ತಲೇ ಇದೆ, ಬರುತ್ತಲೇ ಇರುತ್ತದೆ. ಆದರೆ ಮುಖ್ಯವಾಗಿ ನೆನಪಿಡಬೇಕಾದ ವಿಷಯವೆಂದರೆ ಈ ವಿಶ್ವಗಳನ್ನು, ಅವುಗಳ ಕೇಂದ್ರವಾದ ವ್ಯಕ್ತಿಗಳನ್ನು ಮತ್ತು ಅವುಗಳ ಪರಿಭ್ರಮಣೆಯನ್ನು, ಸೃಷ್ಟಿ, ಸ್ಥಿತಿ, ಲಯಗಳನ್ನು ವ್ಯವಸ್ಥೆ ಮಾಡುವ ಮೂಲಸತ್ವವೇ ಬ್ರಹ್ಮತತ್ವ, ಬ್ರಹ್ಮವಸ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT