ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

276 ಬುದ್ಧಿವಂತ ಮಂತ್ರಿಯ ಕಾರ್ಯ

Last Updated 28 ಮೇ 2019, 19:45 IST
ಅಕ್ಷರ ಗಾತ್ರ

ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯವಾಳುತ್ತಿದ್ದಾಗ ಬೋಧಿಸತ್ವ ಪ್ರಧಾನಮಂತ್ರಿಯ ಮಗನಾಗಿ ಹುಟ್ಟಿದ್ದ. ಅವನು ಬೆಳೆದು ಅಪಾರಜ್ಞಾನ ಸಂಪಾದನೆ ಮಾಡಿಕೊಂಡು ಅವನೇ ಪ್ರಧಾನಮಂತ್ರಿಯಾದ. ಯಾವುದೋ ಕಾರಣಕ್ಕೆ ರಾಜನಿಗೆ ಮಗನ ಮೇಲೆ ಕೋಪ ಬಂದು ಅವನನ್ನು ಹೆಂಡತಿಯೊಂದಿಗೆ ನಗರದಿಂದ ಹೊರಗೆ ಹಾಕಿ ಬಿಟ್ಟ. ರಾಜಕುಮಾರ ತುಂಬ ಕಷ್ಟದಲ್ಲಿ, ಬಡತನದಲ್ಲಿ ಬದುಕಿದ.

ರಾಜ ತೀರಿಕೊಂಡ ಮೇಲೆ ರಾಜಪದವಿಯನ್ನು ಸ್ವೀಕರಿಸಲು ಮಗ ಸೊಸೆ ರಾಜಧಾನಿಯ ಕಡೆಗೆ ನಡೆದರು. ದಾರಿಯಲ್ಲಿ ಯಾರೋ ಈ ದಂಪತಿಗಳಿಗೆ ತಿನ್ನಲು ಆಹಾರದ ಪೊಟ್ಟಣವನ್ನು ನೀಡಿದರು. ಯುವರಾಜ ತುಂಬ ಜಿಪುಣನಾಗಿ ಎಲ್ಲವನ್ನೂ ತಾನೇ ತಿಂದು ಹೆಂಡತಿಗೆ ಏನನ್ನೂ ಕೊಡಲಿಲ್ಲ. ಗಂಡ ಇಷ್ಟು ಸ್ವಾರ್ಥಿಯಾದನಲ್ಲ ಎಂದು ಹೆಂಡತಿಗೆ ದು:ಖವಾಯಿತು.

ಮಗ ರಾಜನಾಗಿ ಅಧಿಕಾರ ಪಡೆದ ಮೇಲೆ ಹೆಂಡತಿ ಪಟ್ಟದರಾಣಿಯಾದಳೇ ವಿನ: ಆಕೆಗೆ ಯಾವುದೇ ಗೌರವ, ಮನ್ನಣೆ ಮತ್ತು ಅಧಿಕಾರಗಳನ್ನು ರಾಜ ಕೊಡಲಿಲ್ಲ. ಆಕೆ ಹೇಗಿದ್ದಾಳೆ ಎಂದು ಕೂಡ ಕೇಳುತ್ತಿರಲಿಲ್ಲ. ಮಂತ್ರಿಯಾದ ಬೋಧಿಸತ್ವ ಇದನ್ನು ಗಮನಿಸಿದ. ಪಾಪ! ಆಕೆ ರಾಜನಲ್ಲಿ ಅಷ್ಟು ಗೌರವ, ನಿಷ್ಠೆ ತೋರುತ್ತಾಳೆ, ಅಪಾರ ಪ್ರೀತಿಯನ್ನಿಟ್ಟುಕೊಂಡಿದ್ದಾಳೆ. ಆದರೆ ರಾಜ ಅವಳಿಗೆ ಯಾವ ಮರ್ಯಾದೆಯನ್ನು ಕೊಡದೆ ದೂರವಿಟ್ಟಿದ್ದಾನೆ. ಇದನ್ನು ಸರಿಪಡಿಸಿ ಅವರು ಮತ್ತೆ ಸಂತೋಷವಾಗಿ ಇರುವಂತೆ ಮಾಡಬೇಕು ಎಂದು ಯೋಚಿಸಿದ.

ಒಂದು ದಿನ ರಾಣಿಯ ಬಳಿ ಬಂದ ಬೋಧಿಸತ್ವ ಕೇಳಿದ, “ಮಹಾರಾಣಿ, ಹಿಂದಿನ ಮಹಾರಾಣಿಯರು ಆಗಾಗ, ಸಮಯ ಸಂದರ್ಭಗಳು ಬಂದಾಗ ರಾಜ್ಯದ ಹಿರಿಯರಿಗೆ ಮತ್ತು ಅನಾಥರಿಗೆ ವಸ್ತ್ರ, ಆಹಾರಗಳನ್ನು ನೀಡಿ ತಮ್ಮ ಗೌರವವನ್ನು ಸೂಚಿಸುತ್ತಿದ್ದರು. ಅದರಿಂದಾಗಿ ಜನರಿಗೆ ರಾಜಮನೆತನದ ಬಗ್ಗೆ ಆದರ ಬೆಳೆಯುತ್ತಿತ್ತು. ತಾವೂ ಹಾಗೆಯೇ ಮಾಡಬಹುದಲ್ಲ?” ರಾಣಿಗೆ ಕಣ್ಣಲ್ಲಿ ನೀರು ಉಕ್ಕಿ ಬಂತು. “ಅಮಾತ್ಯರೇ ತಾವು ಹೇಳುವುದು ಸರಿ. ನನ್ನ ಮನಸ್ಸಿನಲ್ಲೂ ಹಾಗೆಯೇ ವಿಚಾರವಿದೆ. ಆದರೆ ನನಗೇ ಏನೂ ದೊರೆಯುತ್ತಿಲ್ಲ, ನಿಮಗೇನು ಕೊಡಲಿ? ನನ್ನ ಕಡೆಗೆ ಚಿಕ್ಕಾಸೂ ಇಲ್ಲ. ಅಷ್ಟೇ ಏಕೆ ಅಧಿಕಾರ ಸ್ವೀಕಾರ ಮಾಡಲು ಬರುವಾಗ ನನ್ನ ಆಹಾರವನ್ನು ತಿಂದು ನನ್ನ ಉಪವಾಸವಿಟ್ಟರು ರಾಜರು. ನಾನು ಅಸಹಾಯಕಳು” ಎಂದಳು ರಾಣಿ. “ಅಮ್ಮಾ, ಇದೇ ಮಾತನ್ನು ತಾವು ರಾಜರ ಮುಂದೆ ಹೇಳಬಹುದೇ?” ಕೇಳಿದ ಮಂತ್ರಿ. ಪ್ರಾಮಾಣಿಕಳಾದ ರಾಣಿ, “ಹೌದು, ಹೇಳುತ್ತೇನೆ. ಇದರಲ್ಲಿ ಯಾವುದೂ ಸುಳ್ಳಲ್ಲವಲ್ಲ. ಅದಲ್ಲದೆ ಇದು ರಾಜರಿಗೂ ಗೊತ್ತಿದೆ” ಎಂದಳು.

ಮರುದಿನ ರಾಜರ ದರ್ಬಾರು ನಡೆದಿತ್ತು. ಮಹಾರಾಜ, ಮಹಾರಾಣಿ, ಅಮಾತ್ಯರುಗಳು, ನಗರ ಪ್ರಮುಖರು ಎಲ್ಲರಿಂದ ದರ್ಬಾರು ಕಿಕ್ಕಿರಿದಿತ್ತು. ಆಗ ಬೋಧಿಸತ್ವ ಎದ್ದು ನಿಂತು ಎಲ್ಲರಿಗೂ ಕೇಳುವಂತೆ ರಾಜನನ್ನುದ್ದೇಶಿಸಿ ಮಾತನಾಡಿದ, “ಮಹಾರಾಜರೇ, ಈ ದೇಶದ ಪರಂಪರೆಯಲ್ಲಿ ಮಹಾರಾಣಿಯವರ ಸ್ಥಾನ ಬಹಳ ಮುಖ್ಯವಾದದ್ದು, ಗೌರವಕ್ಕೆ ಪಾತ್ರವಾದದ್ದು. ಹಿಂದಿನ ಎಲ್ಲ ಮಹಾರಾಜರೂ ಮಹಾರಾಣಿಯರಿಗೆ ಅತ್ಯಂತ ಗೌರವದ ಅಧಿಕಾರಗಳನ್ನು ಕೊಟ್ಟು ಅವರ ತೀರ್ಮಾನಗಳನ್ನು ಗೌರವಿಸುತ್ತಿದ್ದರು. ಮಹಾರಾಣಿ ವರ್ಷದುದ್ದಕ್ಕೂ, ಅನಾಥರಿಗೆ, ಹಿರಿಯರಿಗೆ ದಾನ ಕಾರ್ಯಗಳನ್ನು ಮಾಡಿ ರಾಜ್ಯಕ್ಕೆ ಮರ್ಯಾದೆಯನ್ನು ತರುತ್ತಿದ್ದರು. ನಮ್ಮ ಮಹಾರಾಜರೂ ಹಾಗೆಯೇ ಮಾಡುತ್ತಾರೆಂಬ ನಂಬಿಕೆ ನಮಗಿದೆ. ಅಲ್ಲವೇ ಪ್ರಜೆಗಳೇ?” ಜನರೆಲ್ಲ ಎದ್ದು ನಿಂತು ಹೌದು, ಹಾಗೆಯೆ ಆಗಬೇಕು ಎಂದರು”. ರಾಣಿ ಎದ್ದು ನಿಂತು, “ಆದರೆ ನನಗೆ ಈಗ ಅಧಿಕಾರವೂ, ಗೌರವವೂ ಇಲ್ಲವಲ್ಲ” ಎಂದಳು. ತಕ್ಷಣ ಮಹಾರಾಜ, “ಹಾಗಲ್ಲ, ಇಂದಿನಿಂದ ಮಹಾರಾಣಿಗೆ ಸಕಲ ಅಧಿಕಾರ ಹಾಗೂ ಗೌರವಗಳು ಸಲ್ಲುತ್ತವೆ” ಎಂದು ಮರ್ಯಾದೆಯನ್ನು ಕಾಪಾಡಿಕೊಂಡ. ಅಂದಿನಿಂದ ಗಂಡ-ಹೆಂಡತಿ ತುಂಬ ಚೆನ್ನಾಗಿ ಬದುಕಿದರು.

ರಾಜ್ಯದ ಸ್ಥಿರತೆಗೆ, ಅಭಿವೃದ್ಧಿಗೆ ತಿಳುವಳಿಕೆ ಇದ್ದ ಮಂತ್ರಿಗಳ ಅವಶ್ಯಕತೆ ಎಂದಿಗೂ ಇದೆ. ಅವರು ಮನಸ್ಸುಗಳನ್ನು ಒಡೆಯುವುದಿಲ್ಲ, ಕೂಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT