ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಾನಕ್ಕೆ ತಕ್ಕ ಮಾತು

Last Updated 10 ಸೆಪ್ಟೆಂಬರ್ 2019, 20:01 IST
ಅಕ್ಷರ ಗಾತ್ರ

ಒಂದಾನೊಂದು ಕಾಲದಲ್ಲಿ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜನಾಗಿದ್ದಾಗ ಬೋಧಿಸತ್ವ ಅವನ ಮುಖ್ಯಮಂತ್ರಿಯಾಗಿದ್ದ. ರಾಜ್ಯದ ಹಣಕಾಸು, ಶಾಸನ ಹಾಗೂ ಧರ್ಮದ ರಕ್ಷೆಯನ್ನು ಮಾಡುವುದು ಅವನ ಜವಾಬ್ದಾರಿಯಾಗಿತ್ತು. ಅದನ್ನು ಅವನು ಸಮರ್ಪಕವಾಗಿ ಮಾಡುತ್ತ ರಾಜನನ್ನು ಸರಿಯಾದ ದಾರಿಯಲ್ಲಿ ನಡೆಸುತ್ತಿದ್ದ.

ಒಂದು ದಿನ ಬೆಳಿಗ್ಗೆ ಅರಮನೆಯಲ್ಲಿ ಕಿಟಕಿಯ ಬಳಿಯಲ್ಲಿ ನಿಂತು ತನ್ನ ಸುಂದರವಾದ ತೋಟವನ್ನು ನೋಡುತ್ತಿದ್ದ. ಆಗ ಅವನ ಕಣ್ಣಿಗೊಂದು ದೃಶ್ಯ ಬಿತ್ತು. ತೋಟದ ಮಾಲಿಯ ಮಗಳು ತಲೆಯ ಮೇಲೆ ಬುಟ್ಟಿಯಲ್ಲಿ ಎಲಚಿ ಹಣ್ಣುಗಳನ್ನು ತುಂಬಿಕೊಂಡು ಮಾರಲು ಹೊರಟಿದ್ದಳು. ಆಕೆ ಚೆಲುವೆ, ಏರುತ್ತಿರುವ ಯೌವನ ಆಕೆಯದು. ಆಕೆಯ ರೂಪ, ನಡೆಯುವ ಶೈಲಿ ರಾಜನ ಮನಸ್ಸನ್ನು ಸೆರೆಹಿಡಿಯಿತು. ಆ ತರುಣಿ, ‘ಎಲಚಿ ಹಣ್ಣು ಬೇಕೇ?’ ಎಂದು ಕೂಗುತ್ತ ರಾಜಬೀದಿಯಲ್ಲಿ ನಡೆದಿದ್ದಳು. ರಾಜ ದೂತರನ್ನು ಕಳುಹಿಸಿ ಆ ತರುಣಿಯ ಹಿನ್ನೆಲೆಯನ್ನು ತಿಳಿದುಕೊಂಡ. ಆಕೆಗೆ ಇನ್ನೂ ಮದುವೆಯಾಗಿಲ್ಲವೆಂದು ತಿಳಿದಾಗ ಮಂತ್ರಿಗಳಿಗೆ ಹೇಳಿ ಆಕೆಯನ್ನು ಮದುವೆಯಾದ. ಹೊಸ ಹೆಂಡತಿಯ ಮೇಲಿನ ಅತಿಯಾದ ಪ್ರೀತಿಯಿಂದ ಆಕೆಯನ್ನು ಪಟ್ಟದ ರಾಣಿಯನ್ನಾಗಿ ಮಾಡಿ ಆಕೆಗೆ ಹೊಸ ಅರಮನೆ, ಬೇಕಾದಷ್ಟು ಬಂಗಾರ, ರತ್ನಗಳ ಆಭರಣಗಳನ್ನು ಉಡುಗೊರೆಯಾಗಿ ನೀಡಿದ. ಸುಜಾತಾದೇವಿ ಎಂದು ಆಕೆಯ ಹೆಸರನ್ನು ಬದಲಾಯಿಸಿದ.

ಒಂದು ದಿನ ರಾಜ ಮಹಡಿಯ ಮೇಲೆ ಕುಳಿತು ಚಿನ್ನದ ತಟ್ಟೆಯಲ್ಲಿದ್ದ ಎಲಚಿ ಹಣ್ಣುಗಳನ್ನು ತಿನ್ನುತ್ತಿದ್ದ. ಆಗ ಅಲ್ಲಿಗೆ ಸುಜಾತಾದೇವಿ ಬಂದಳು. ಇವನನ್ನು ನೋಡಿ ‘ಏನು ತಿನ್ನುತ್ತಿದ್ದೀರಿ? ಚಿನ್ನದ ತಟ್ಟೆಯಲ್ಲಿರುವ ಮೊಟ್ಟೆಯಂಥ ಕೆಂಪುಬಣ್ಣದ ವಸ್ತು ಯಾವುದು?’ ಎಂದು ಕೇಳಿದಳು. ರಾಜನಿಗೆ ಭಾರೀ ಕೋಪ ಬಂದಿತು. ಬಿದಿರಿನ ಬುಟ್ಟಿಯಲ್ಲಿ ಎಲಚಿ ಹಣ್ಣುಗಳನ್ನು ತುಂಬಿಕೊಂಡು ಓಣಿ, ಓಣಿ ಸುತ್ತಾಡಿ ಮಾರಿಕೊಂಡು ಬರುತ್ತಿದ್ದ ಇವಳಿಗೆ ಧನದ ಅಹಂಕಾರ ಬಂದು ತನ್ನ ಕುಲದ ಎಲಚಿ ಹಣ್ಣುಗಳನ್ನೇ ಮರೆತಿದ್ದಾಳೆ ಎಂದುಕೊಂಡು, ‘ಎಲೆ ಹೆಣ್ಣೇ, ನೀನು ಹಿಂದೆ ಚಿಂದಿಯನ್ನು ಉಟ್ಟುಕೊಂಡು ಹರಕು ಬುಟ್ಟಿಯಲ್ಲಿ ತುಂಬಿಕೊಂಡು ಮಾರುತ್ತಿದ್ದ ಹಣ್ಣುಗಳೇ ಇವು. ಇವಳನ್ನು ರಾಜಭೋಗಗಳು ಸೊಕ್ಕಿಸುತ್ತಿವೆ. ಆದ್ದರಿಂದ ಇವಳನ್ನು ಕರೆದುಕೊಂಡು ಎಲಚಿಹಣ್ಣು ಬೆಳೆಯುವ ಕಾಡಿನಲ್ಲಿ ಬಿಟ್ಟು ಬನ್ನಿ’ ಎಂದು ಆಜ್ಞೆ ನೀಡಿದ.

ಇದನ್ನು ಗಮನಿಸಿದ ಮುಖ್ಯಮಂತ್ರಿಯಾದ ಬೋಧಿಸತ್ವ ತಕ್ಷಣವೇ ಕಾರ್ಯೋನ್ಮುಖನಾದ. ರಾಜ-ರಾಣಿಯರ ನಡುವೆ ಮನಸ್ತಾಪ ಒಳ್ಳೆಯದಲ್ಲ. ಅವರನ್ನು ತಾನಲ್ಲದೆ ಬೇರೆಯವರು ಕೂಡಿಸಲಾರರು ಎಂದು ತಿಳಿದು ರಾಜನ ಬಳಿಗೆ ಬಂದ. ಸಮಯವನ್ನು ನೋಡಿಕೊಂಡು ರಾಜನಿಗೆ ಹೇಳಿದ, “ಪ್ರಭೂ, ದಯವಿಟ್ಟು ಮಹಾರಾಣಿಯನ್ನು ಕ್ಷಮಿಸಬೇಕು. ತಾವೇ ಆಕೆಗೆ ಉನ್ನತಿಯ ಕೀರ್ತಿಯನ್ನು ಕೊಟ್ಟಿದ್ದೀರಿ. ಆದ್ದರಿಂದ ಆಕೆ ಉನ್ನತಮಟ್ಟದ ಸ್ತ್ರೀಯರು ಹೇಗೆ ನಡೆದುಕೊಳ್ಳಬೇಕಿತ್ತೋ ಹಾಗೆಯೇ ನಡೆದುಕೊಂಡಿದ್ದಾರೆ. ಹೆಂಗಸಿಗೆ ಉಚ್ಚಸ್ಥಾನವನ್ನು ನೀಡಿ ಆ ಸ್ಥಾನಕ್ಕೆ ಅವಶ್ಯವಾದ ಗೌರವವನ್ನು ತೋರದಿರುವುದು ಸರಿಯಲ್ಲ”. ರಾಜನಿಗೆ ಅವನ ಮಾತು ಸರಿಯೆನ್ನಿಸಿ ರಾಣಿಯನ್ನು ಕರೆದು ಮಾತನಾಡಿ ಒಲಿಸಿದ. ಮುಂದೆ ಅವರು ಜೊತೆಯಾಗಿ, ಚೆನ್ನಾಗಿ ಬಾಳಿದರು.

ಮಾತು, ನಡತೆಗಳು ಸ್ಥಾನ ಗೌರವಕ್ಕೆ ತಕ್ಕಂತೆಯೇ ಇರುವುದು ಸಹಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT