ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕತೆಯೊಡನೆ ಬುದ್ಧಿವಂತಿಕೆ

Last Updated 11 ಅಕ್ಟೋಬರ್ 2019, 19:46 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಬ್ರಾಹ್ಮಣ ವಂಶದಲ್ಲಿ ಹುಟ್ಟಿದ. ತಕ್ಕಶಿಲೆಗೆ ಹೋಗಿ ಎಲ್ಲ ವಿದ್ಯೆಗಳನ್ನು ಕಲಿತು ನಂತರ ಹಿಮಾಯಲಕ್ಕೆ ಹೋಗಿ ಅಲ್ಲಿ ಋಷಿ-ಪ್ರವ್ರಜ್ಯವನ್ನು ಸ್ವೀಕರಿಸಿದ. ಅಲ್ಲಿಯೇ ಆಶ್ರಮ ಕಟ್ಟಿಕೊಂಡು ಧ್ಯಾನದಲ್ಲಿ ತಲ್ಲೀನನಾದ.

ಕೆಲವು ವರ್ಷಗಳ ನಂತರ ಪರ್ಯಟನೆ ಮಾಡುತ್ತ ಅರಣ್ಯದ ಅಂಚಿನಲ್ಲಿದ್ದ ಹಳ್ಳಿಗೆ ಬಂದ. ಅಲ್ಲಿಯ ಭಕ್ತಾಳುಗಳು ಅವನನ್ನು ಗೌರವದಿಂದ ಸ್ವಾಗತಿಸಿ, ಅವನಿಗೊಂದು ಪುಟ್ಟ ಆಶ್ರಮವನ್ನು ಕಟ್ಟಿಕೊಟ್ಟರು, ಇರುವುದಕ್ಕೆ ಎಲ್ಲ
ಅನುಕೂಲತೆಗಳನ್ನು ಮಾಡಿದರು.

ಆ ಹಳ್ಳಿಯಲ್ಲಿ ಒಬ್ಬ ಬೇಡನಿದ್ದ. ಅವನ ವೃತ್ತಿ ಕಾಡಿನಲ್ಲಿನ ಹಕ್ಕಿಗಳನ್ನು ಹಿಡಿದು ತಂದು ಹಳ್ಳಿಯಲ್ಲಿ ಮಾರುವುದು. ಒಂದು ಬಾರಿ ಅವನಿಗೊಂದು ಸುಂದರವಾದ ಗೌಜಲ ಹಕ್ಕಿ ಸಿಕ್ಕಿತು. ಅದನ್ನು ಕೊಲ್ಲಲು ಅವನಿಗೆ ಮನಸ್ಸು ಬರಲಿಲ್ಲ. ಹಕ್ಕಿಯನ್ನು ಪಂಜರದಲ್ಲಿ ಕೂಡಿಟ್ಟು ಅದಕ್ಕೆ ತರಬೇತಿ ನೀಡಿದ. ಅವನು ಮಾತನಾಡು ಎಂದರೆ ಹಕ್ಕಿ ಮಾತನಾಡುತ್ತಿತ್ತು. ಅವನಿಗೊಂದು ಹೊಸ ಯೋಜನೆ ಹೊಳೆಯಿತು. ಹಕ್ಕಿ ಇರುವ ಪಂಜರವನ್ನು ಕಾಡಿಗೆ ತೆಗೆದುಕೊಂಡು ಹೋಗಿ ಅದಕ್ಕೆ ಮಾತನಾಡಲು ಹೇಳಿದರೆ ಅದರ ಧ್ವನಿಯನ್ನು ಕೇಳಿ ಅನೇಕ ಗೌಜಲ ಹಕ್ಕಿಗಳು ಬರುತ್ತವೆ, ಅವುಗಳನ್ನು ಬಲೆ ಹಾಕಿ ಹಿಡಿಯಬಹುದು. ಆತ ಪಕ್ಷಿಯನ್ನು ಕಾಡಿಗೆ ಕರೆದೊಯ್ದು ಮಾತನಾಡಲು ಹೇಳಿದಾಗ ಹಿಂಡುಹಿಂಡಾಗಿ ಗೌಜಲ ಪಕ್ಷಿಗಳು ಬಂದವು. ಆತ ಅವುಗಳನ್ನು ಹಿಡಿದು ತಂದು ಮಾರಿ ಸಾಕಷ್ಟು ಹಣ ಗಳಿಸಿದ.

ಈಗ ಅವನಿಗೊಂದು ಒಳ್ಳೆಯ ಉಪಾಯ ದೊರೆತಂತಾಯಿತು. ಆದರೆ ಪಂಜರದಲ್ಲಿದ್ದ ಗೌಜಲ ಪಕ್ಷಿ ಬಹಳ ದುಃಖಪಡುತ್ತಿತ್ತು. ನನ್ನಿಂದಾಗಿ ನನ್ನ ಜಾತಿಯ ಅನೇಕ ಪಕ್ಷಿಗಳು ಬಲಿಯಾಗುತ್ತಿವೆ. ಇನ್ನು ಮುಂದೆ ಕಾಡಿನಲ್ಲಿ ಮಾತನಾಡುವುದಿಲ್ಲವೆಂದು ತೀರ್ಮಾನಿಸಿತು. ಆದರೆ ಬೇಡ ಬಿಡುತ್ತಾನೆಯೇ? ಮೊದಲು ಪ್ರೀತಿಯಿಂದ ಹೇಳಿನೋಡಿದ, ನಂತರ ಕಾಳು ಹಾಕಿ ರಮಿಸಿದ. ಆಮೇಲೂ ಮಾತನಾಡದಿದ್ದಾಗ ಬಿದಿರಿನ ಪಟ್ಟಿಯಿಂದ ಅದರ ತಲೆಗೆ ಪಟಪಟನೆ ಹೊಡೆದ. ನೋವನ್ನು ತಡೆದುಕೊಳ್ಳಲಾರದೆ ಪಕ್ಷಿ ಮಾತನಾಡಿತು. ಮತ್ತೆ ಅನೇಕ ಗೌಜಲ ಪಕ್ಷಿಗಳು ಹಾರಿಬಂದು ಬೇಡನ ಬಲೆಯನ್ನು ಸೇರಿದವು.

ಪಕ್ಷಿ ಬಹಳ ಕಳವಳಕ್ಕೀಡಾಯಿತು. ನನ್ನಿಂದಾಗಿ ಪಕ್ಷಿಗಳು ಸಾಯುತ್ತಿವೆ. ಅದರ ಪಾಪ ತನಗೆ ಸುತ್ತಿಕೊಳ್ಳುತ್ತದೆ. ಈ ಪಾಪದಿಂದ ಪಾರಾಗುವುದು ಹೇಗೆ? ಯಾರಾದರೂ ಮಹಾತ್ಮರು ದೊರಕಿದರೆ ಅವರನ್ನು ಕೇಳಬೇಕು ಎಂದುಕೊಂಡಿತು.

ಒಂದು ದಿನ ಬೇಟೆಗಾರ ಪಂಜರವನ್ನು ಹಿಡಿದುಕೊಂಡು ಬೋಧಿಸತ್ವನ ಆಶ್ರಮದ ಹತ್ತಿರ ಬಂದ. ನೀರು ಕುಡಿಯಬೇಕೆಂದುಕೊಂಡು ಬೋಧಿಸತ್ವನ ಬಳಿಗೆ ಪಂಜರವನ್ನು ಇಟ್ಟು ಹೋದ. ಇದು ಒಳ್ಳೆಯ ಅವಕಾಶವೆಂದುಕೊಂಡು ಗೌಜಲ ಪಕ್ಷಿ ತನ್ನ ಸಮಸ್ಯೆಯನ್ನು ಹೇಳಿಕೊಂಡು ಪರಿಹಾರವನ್ನು ಕೇಳಿತು. ಬೋಧಿಸತ್ವ ಹೇಳಿದ, ‘ಆ ಪಕ್ಷಿಗಳ ಸಾವಿನ ಪಾಪ ನಿನಗೆ ತಗುಲುವುದಿಲ್ಲ ಯಾಕೆಂದರೆ ನಿನ್ನ ಮನಸ್ಸು ಪಾಪಕರ್ಮದ ಕಡೆಗೆ ವಾಲಲಿಲ್ಲ. ಮುಂದೆ ನಿನಗೆ ಬೇಡ ಶಬ್ದ ಮಾಡು ಎಂದಾಗ ಮಾತನಾಡು. ಅವನಿಗೆ ನಿನ್ನ ಭಾಷೆ ತಿಳಿಯುವುದಿಲ್ಲ. ಜೋರಾಗಿ ಕೂಗಿ ನಿನ್ನ ಬಾಂಧವರಿಗೆ ಹತ್ತಿರ ಬರದಂತೆ ಹೇಳು. ಆಗ ನೀನು ಮಾತನಾಡಿದ ಹಾಗೆಯೂ ಆಯಿತು, ನಿನ್ನ ಬಾಂಧವರ ಪ್ರಾಣಗಳೂ ಉಳಿದಾವು’.

ಪ್ರಾಮಾಣಿಕತೆ ಅವಶ್ಯ ಬೇಕು ಆದರೆ ಅದರೊಂದಿಗೆ ಬುದ್ಧಿವಂತಿಕೆಯೂ ಇದ್ದರೆ ಸಮಾಜಕ್ಕೆ ಪ್ರಯೋಜನವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT