ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಅನಾಸಕ್ತಿಯೋಗ

Last Updated 3 ಫೆಬ್ರುವರಿ 2023, 4:19 IST
ಅಕ್ಷರ ಗಾತ್ರ

ನ್ಯಾಯಾಧಿಪತಿ ತನ್ನ ಮತಿ ಮನಸುಗಳನೆಲ್ಲ |
ಸ್ಪೀಯಲಾಭಸ್ಮರಣೆಯುಳಿದು ವಿವದಿಗಳಾ - ||
ದಾಯ ನಿರ್ಣಯಕೆ ಯೋಜಿಸುವಂತೆ, ನೀಂ ಜಗದ |
ಶ್ರೇಯಸ್ಸಿಗುಜ್ಜುಗಿಸು – ಮಂಕುತಿಮ್ಮ || 814 ||

ಪದ-ಅರ್ಥ: ಸ್ಪೀಯಲಾಭಸ್ಮರಣೆಯುಳಿದು=ಸ್ಪೀಯ(ಸ್ವಂತದ)+ಲಾಭ+ಸ್ಪಣೆ+ಉಳಿದು, ವಿವದಿಗಳಾದಾಯನಿರ್ಣಯಕೆ=ವಿವದಿಗಳ (ವಾದಿ, ಪ್ರತಿವಾದಿಗಳ)+ಆದಾಯ+ನಿರ್ಣಯಕೆ, ನೀಂ=ನೀನು, ಶ್ರೇಯಸ್ಸಿಗುಜ್ಜುಗಿಸು=ಶ್ರೇಯಸ್ಸಿಗೆ+ಉಜ್ಜುಗಿಸು (ಉದ್ಯೋಗಿಸು, ಕಾರ್ಯಮಾಡು).

ವಾಚ್ಯಾರ್ಥ: ಒಬ್ಬ ಸಮರ್ಥ ನ್ಯಾಯಾಧಿಪತಿ ತನ್ನ ಬುದ್ಧಿ, ಮನಸ್ಸುಗಳನ್ನೆಲ್ಲ, ವಾದಿ, ಪ್ರತಿವಾದಿಗಳ ಆದಾಯ ನಿರ್ಣನೆಗೆ ತೊಡಗಿಸುವಾಗ ಹೇಗೆ ತನ್ನ ಸ್ವಂತದ ಲಾಭವನ್ನು ಚಿಂತಿಸುವುದಿಲ್ಲವೋ, ಹಾಗೆಯೇ ನೀನು ಜಗತ್ತಿನ ಶ್ರೇಯಸ್ಸಿಗಾಗಿ ದುಡಿ.

ವಿವರಣೆ: ಕಗ್ಗ ಒಂದು ಸುಂದರ ಸಂದರ್ಭವನ್ನು ತಂದು ನಮ್ಮ ಮುಂದೆ ಇಡುತ್ತದೆ. ನ್ಯಾಯಾಲಯದಲ್ಲಿ ಒಬ್ಬ ನ್ಯಾಯಾಧೀಶರ ಮುಂದೆ ಒಂದು ವ್ಯಾಜ್ಯ ಬಂದಿದೆ. ವಾದಿಗಳು, ಪ್ರತಿವಾದಿಗಳು ತಮ್ಮ ವಾದ ಮಂಡನೆಮಾಡಿದ್ದಾರೆ. ಜಗಳ ಬಂದಿರುವುದು ಒಂದು ಆಸ್ತಿಗಾಗಿ, ಆ ಆಸ್ತಿಯ ಬೆಲೆ ತುಂಬ ದೊಡ್ಡದು. ಸಾವಿರಾರು ಕೋಟಿ ಇದ್ದಿರಬಹುದು. ಆಗ ಸಮರ್ಥ ನ್ಯಾಯಾಧೀಶ ಏನು ಯೋಚಿಸುತ್ತಾನೆ? ತನ್ನ ತೀರ್ಪಿನಿಂದ ಯಾರಿಗೆ ಎಷ್ಟು ಲಾಭ ಅಥವಾ ಹಾನಿಯಾಗಬಹುದು? ಅದರಿಂದ ಅವರು ಏನು ಮಾಡಿಯಾರು? ಈ ತೀರ್ಪಿನಿಂದ ನನಗೇನಾದರೂ ಲಾಭವಾಗಬಹುದೆ? ಅವನು ಸಮರ್ಥನಾದ್ದರಿಂದ ಹೀಗೆಲ್ಲ ಯೋಚಿಸಲಾರ. ಅವನ ಗಮನ, ಬುದ್ಧಿಯ ಹರಿತತೆ ಏಕತ್ವವಾಗಿರುವುದು ನ್ಯಾಯದ ಕಡೆಗೆ. ನ್ಯಾಯವಾದದ್ದನ್ನು ಎತ್ತಿ ಹಿಡಿಯುವುದು ಅವನ ಕಾರ್ಯ. ತನ್ನ ವೈಯಕ್ತಿಕ ಲಾಭದ ಚಿಂತೆ ಬರಲಾರದು.

ಬ್ಯಾಂಕಿನಲ್ಲಿ ಕ್ಯಾಶಿಯರ್ ಕೆಲಸವೂ ಹಾಗೆಯೇ ಅಲ್ಲವೆ? ಯಾರೋ ಕೋಟಿ ರೂಪಾಯಿಯನ್ನು ತಮ್ಮ ಖಾತೆಗೆ ಜಮಾ ಮಾಡುತ್ತಾರೆ. ಮತ್ತಾರೋ ತಮ್ಮ ಖಾತೆಯಿಂದ ಲಕ್ಷಾಂತರ ರೂಪಾಯಿಗಳನ್ನು ತೆಗೆಯುತ್ತಾರೆ. ಇಡೀ ದಿನ ನೋಟುಗಳ ಮಧ್ಯೆಯೇ ಇದ್ದರೂ, ಎಣಿಸಿ ಎಣಿಸಿ ನೋಡಿದರೂ, ಸಂಜೆಗೆ ಮನೆಗೆ ಹೊರಡುವಾಗ ಕೈಝಾಡಿಸಿಕೊಂಡು ಎಲ್ಲವನ್ನೂ ಅಲ್ಲಿಯೇ ಬಿಟ್ಟು ಹೊರಡಬೇಕು. ಯಾಕೆಂದರೆ ಹಣ ತನ್ನದಲ್ಲ. ಈ ಮನೋಭಾವ ಬಹಳ ಮುಖ್ಯ. ವಿವೇಕಾನಂದರು ಹೇಳುತ್ತಾರೆ, “ಮನುಷ್ಯ ಸಮಾಜಕಾರ್ಯ ಮಾಡುವಾಗ ಯಂತ್ರದಂತಿರಬೇಕು. ಯಂತ್ರ ಎಷ್ಟೊಂದು ಕೆಲಸ ಮಾಡುತ್ತದೆ. ಆದರೆ ಅದರಲ್ಲಿ ‘ನಾನು ಮಾಡುತ್ತೇನೆ’ ಎಂಬ ಭಾವ ಇರುವುದಿಲ್ಲ. ಆದರೆ ಯಂತ್ರದಲ್ಲಿ ಅರಿವು ಇಲ್ಲ. ನಿಷ್ಕಾಮಕರ್ಮಿಯಾದ ಮನುಷ್ಯನಲ್ಲಿ ಅರಿವೇ ತುಂಬಿಕೊಂಡಿದೆ”. ಇದೇ ಅನಾಸಕ್ತಿಯೋಗ. ಇದರಲ್ಲಿ ಕಾರ್ಯದಲ್ಲಿ ಆಸಕ್ತಿ ಇದೆ, ಆದರೆ ವೈಯಕ್ತಿಕ ಲಾಭದಲ್ಲಿ ಆಸಕ್ತಿ ಇಲ್ಲ. ಶ್ರೀ ರಾಮಕೃಷ್ಣರು ಹೇಳುತ್ತಿದ್ದರು, “ಹಲಸಿನ ಹಣ್ಣನ್ನುಹೆಚ್ಚುವಾಗ ಕೈಗೆ ಎಣ್ಣೆ ಸವರಿಕೊಂಡರೆ ಅಂಟುಮೆತ್ತಿಕೊಳ್ಳುವುದಿಲ್ಲ. ಅಂತೆಯೇ ಅನಾಸಕ್ತಿ ಎಂಬ ಎಣ್ಣೆಯನ್ನು ಮನಸ್ಸಿಗೆ ಹಚ್ಚಿಕೊಂಡರೆ ಯಾವ ಕರ್ಮವೂಬಂಧನವಾಗುವುದಿಲ್ಲ” ಎಂದು ಕಗ್ಗ ಹೇಳುತ್ತದೆ, ನ್ಯಾಯಾಧೀಶ ಹೇಗೆ ಸ್ವಂತ ಲಾಭದಆಸೆ ಇಲ್ಲದೆ ಕೇವಲ ನ್ಯಾಯನಿರ್ಣಯಕ್ಕಾಗಿ ತನ್ನ ಮನಸ್ಸು, ಬುದ್ಧಿಗಳನ್ನು ಸಂಪೂರ್ಣವಾಗಿ ಬಳಸುತ್ತಾನೋ ಹಾಗೆಯೇ ನೀನು ಜಗತ್ತಿನ ಶ್ರೇಯಸ್ಸಿಗಾಗಿ, ನಿಷ್ಕಾಮಕರ್ಮವನ್ನು ಮಾಡು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT