ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆಯನ್ನು ಎದುರಿಸಲು ಕೆಲವು ಸಲಹೆಗಳು

Last Updated 4 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳೇ, ಹತ್ತನೆಯ ತರಗತಿ ಹಾಗೂ ದ್ವಿತೀಯ ಪಿಯುಸಿ ನಿಮ್ಮ ವಿದ್ಯಾರ್ಥಿಜೀವನದ ಎರಡು ಪ್ರಮುಖ ತಿರುವುಗಳು. ಈ ತರಗತಿಗಳ ಅಂತ್ಯದಲ್ಲಿ ನೀವು ಬರೆಯಲಿರುವ ಪರೀಕ್ಷೆಗಳು ನಿಮ್ಮ ಸಾಧನೆ, ನಿಮ್ಮ ಭವಿಷ್ಯಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ದ್ವಿತೀಯ ಪಿಯು ಪಬ್ಲಿಕ್ ಪರೀಕ್ಷೆಗಳು ಈಗಷ್ಟೇ ಪ್ರಾರಂಭವಾಗಿವೆ. ಹತ್ತನೆಯ ತರಗತಿಯ ಪರೀಕ್ಷೆಗಳು ಹತ್ತಿರದಲ್ಲಿವೆ. ಈ ಹಂತದಲ್ಲಿ ನಿಮ್ಮ ಪರೀಕ್ಷಾ ಸಿದ್ಧತೆಗೆ ನೆರವಾಗುವ ನಿಟ್ಟಿನಲ್ಲಿ ಕಳೆದ ವಾರ ಪ್ರಕಟವಾದ ಲೇಖನವನ್ನು ನೀವು ಗಮನಿಸಿದ್ದೀರಿ. ಅದರ ಮುಂದುವರೆದ ಭಾಗವಾದ ಈ ಲೇಖನದಲ್ಲಿ ನಿಮ್ಮ ಪರೀಕ್ಷಾ ಭಯವನ್ನು ದೂರಮಾಡಿ, ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲವು ಸಲಹೆಗಳನ್ನು ನೀಡಲಾಗಿದೆ.

ಪುನರ್ಮನನ ಮಾಡಿಕೊಳ್ಳಿ

* ಪರೀಕ್ಷೆಯ ವೇಳಾಪಟ್ಟಿಯಲ್ಲಿ ನೀವು ಗಮನಿಸಿರುವಂತೆ, ಒಂದು ವಿಷಯದ ಪರೀಕ್ಷೆ ಮುಗಿದ ಮೇಲೆ ಒಂದೆರಡು ದಿನಗಳ ನಂತರ ಇನ್ನೊಂದು ವಿಷಯದ ಪರೀಕ್ಷೆ ಇರುತ್ತದೆ. ಈ ಅವಧಿಯನ್ನು ಮುಂದಿನ ಪರೀಕ್ಷೆಯ ವಿಷಯದ ಪುನರ್ಮನನಕ್ಕೆ ಸೂಕ್ತವಾಗಿ ಬಳಸಿಕೊಳ್ಳಿ

* ಪುನರ್ಮನನಕ್ಕೆ ನೀವು ಸಿದ್ಧಪಡಿಸಿಕೊಂಡಿರುವ ಸಾರಾಂಶದ ಹಾಳೆಗಳನ್ನು ಬಳಸಿಕೊಳ್ಳಿ. ಅವಶ್ಯವಿರುವ ಕಡೆ ಮಾತ್ರ ಪಠ್ಯಪುಸ್ತಕ ಅಥವಾ ನೋಟ್ಸ್‌ಗಳ ಸಹಾಯ ಪಡೆಯಿರಿ.

* ಹೆಚ್ಚು ಕ್ಲಿಷ್ಟ ಅನ್ನಿಸುವ ಅಧ್ಯಾಯಗಳ ಪುನರ್ಮನನಕ್ಕೆ ಹೆಚ್ಚು ಒತ್ತು ನೀಡಿ. ಓದುವಾಗ ಏಕಾಗ್ರತೆ ಇರಲಿ.

* ಪ್ರತಿ ಅಧ್ಯಾಯಕ್ಕೆ ಸಂಬಂಧಿಸಿದ ಸಿದ್ಧಾಂತಗಳು, ನಿರೂಪಣೆಗಳು, ಉದಾಹರಣೆಗಳು ಹಾಗೂ ಚಿತ್ರಗಳನ್ನು ಮತ್ತೊಮ್ಮೆ ಪರಾಮರ್ಶಿಸಿ.

* ಪುನರ್ಮನನ ಮಾಡಿಕೊಳ್ಳುವಾಗ ನಿಮ್ಮ ಮನಸ್ಸನ್ನು ಬೇರೆಡೆಗೆ ತಿರುಗಿಸಬಹುದಾದ ವಸ್ತು ಹಾಗೂ ವಿಷಯಗಳಿಂದ ದೂರವಿರಿ.

* ಯಾವುದೇ ವಿಷಯದ ಪರೀಕ್ಷೆಯ ಹಿಂದಿನ ದಿನ ನಿದ್ರೆ ಬಿಟ್ಟು ಓದುವುದು ಬೇಡ. ಕೊಂಚ ಬೇಗ ಮಲಗಿ, ಪರೀಕ್ಷೆಯ ದಿನ ಬೇಗ ಏಳಿ.

* ರಾತ್ರಿ ಮಲಗುವ ಮುನ್ನವೇ ಮಾರನೆಯ ದಿನದ ಪರೀಕ್ಷೆಗೆ ಕೊಂಡೊಯ್ಯಬೇಕಾದ ಪ್ರವೇಶಪತ್ರ, ಪೆನ್‍ಗಳು ಹಾಗೂ ಇತರ ಸಲಕರಣೆಗಳನ್ನು ಸಿದ್ಧಮಾಡಿ ಇಟ್ಟುಕೊಳ್ಳಿ.

ಪರೀಕ್ಷೆಯ ದಿನ ಅನುಸರಿಸಬೇಕಾದ ಅಂಶಗಳು

* ಪರೀಕ್ಷೆಯ ದಿನ ಬೇಗ ಸಿದ್ಧವಾಗಿ, ಸಾಕಷ್ಟು ಮುಂಚಿತವಾಗಿ ಮನೆಯಿಂದ ಹೊರಡಿ. ಪರೀಕ್ಷಾಕೇಂದ್ರ ಬೇರೆ ಶಾಲೆ ಅಥವಾ ಕಾಲೇಜಿನಲ್ಲಿ ಇರುವ ಸಾಧ್ಯತೆ ಹೆಚ್ಚು.

* ನಿಮ್ಮ ಮನೆಯಿಂದ ಪರೀಕ್ಷಾ ಕೇಂದ್ರ ದೂರವಿದ್ದಲ್ಲಿ, ಅಲ್ಲಿಗೆ ಸರಿಯಾದ ಸಮಯಕ್ಕೆ ತಲುಪಲು ನಿಮ್ಮ ಪೋಷಕರ ಸಹಾಯವನ್ನು ಪಡೆದುಕೊಳ್ಳಿ.

* ಮನೆಯಿಂದ ಹೊರಡುವಾಗ ನಿಮ್ಮ ಮನಸ್ಸು ಪ್ರಶಾಂತವಾಗಿರಲಿ. ಯಾವುದೇ ಆತಂಕ, ಭಯ ಬೇಡ. ಅತಿಯಾದ ಆತ್ಮವಿಶ್ವಾಸವೂ ಬೇಡ.

* ಪರೀಕ್ಷೆ ಪ್ರಾರಂಭವಾಗುವುದಕ್ಕೆ ಕನಿಷ್ಠ ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾಕೇಂದ್ರವನ್ನು ತಲುಪುವಂತೆ ಯೋಜಿಸಿ.

* ಬಸ್ಸಿನಲ್ಲೋ, ಬೇರೆ ವಾಹನದಲ್ಲೋ ಕುಳಿತು ಪರೀಕ್ಷಾಕೇಂದ್ರ ತಲುಪುವವರೆಗೆ ಓದುತ್ತಲೇ ಇರುವುದು ಒಳ್ಳೆಯ ಅಭ್ಯಾಸವಲ್ಲ.

* ನಿಮ್ಮ ಜೊತೆಗೆ ಕೊಂಡೊಯ್ಯುವ ಬ್ಯಾಗ್‍ನಲ್ಲಿ ಪರೀಕ್ಷೆಗೆ ಅಗತ್ಯವಾದ ಪ್ರವೇಶಪತ್ರ ಮತ್ತು ಸಲಕರಣೆಗಳು ಮಾತ್ರ ಇರಲಿ. ಯಾವುದೇ ಪುಸ್ತಕ, ನೋಟ್ಸ್ ಕೊಂಡೊಯ್ಯುವುದು ಬೇಡ.

* ನಿಮ್ಮ ಜೇಬಿನಲ್ಲಾಗಲಿ, ಬ್ಯಾಗಿನಲ್ಲಾಗಲಿ ಅನಗತ್ಯವಾದ ಯಾವುದೇ ಚೀಟಿಗಳನ್ನು ಕೊಂಡೊಯ್ಯಬೇಡಿ. ಅಕಸ್ಮಾತ್ ಇದ್ದಲ್ಲಿ, ಪರೀಕ್ಷಾಕೇಂದ್ರ ತಲುಪುವ ಮುನ್ನವೇ ಅವುಗಳನ್ನು ಹೊರಗೆ ಎಸೆದು ಬಿಡಿ.

* ಪರೀಕ್ಷಾಕೇಂದ್ರದ ಹೊರಗೆ ಅಥವಾ ಸೂಚನಾ ಫಲಕದಲ್ಲಿ ಪರೀಕ್ಷೆ ನಡೆಯುವ ಕೊಠಡಿಗಳ ಸಂಖ್ಯೆ ಮತ್ತು ಅಲ್ಲಿಗೆ ಹಂಚಲಾಗಿರುವ ರಿಜಿಸ್ಟರ್ ನಂಬರ್‌ಗಳನ್ನು ಹಾಕಲಾಗಿರುತ್ತದೆ.

*ನಿಮ್ಮ ಪ್ರವೇಶಪತ್ರದಲ್ಲಿರುವ ರಿಜಿಸ್ಟರ್ ನಂಬರ್ ಅನ್ನು ಯಾವ ಕೊಠಡಿಗೆ ಹಂಚಲಾಗಿದೆ ಎಂಬುದನ್ನು ಪತ್ತೆ ಮಾಡಿಕೊಳ್ಳಿ. ಅವಶ್ಯ ಬಿದ್ದಲ್ಲಿ ಅಲ್ಲಿನ ಸಿಬ್ಬಂದಿಯ ಸಹಾಯ ಪಡೆಯಿರಿ.

* ಕನಿಷ್ಠ ಹತ್ತು ನಿಮಿಷ ಮುಂಚಿತವಾಗಿ ನಿಮ್ಮ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಿ, ನಿಮ್ಮ ರಿಜಿಸ್ಟರ್ ನಂಬರನ್ನು ಸೂಚಿಸಿರುವ ಜಾಗದಲ್ಲಿ ಹೋಗಿ ಕುಳಿತುಕೊಳ್ಳಿ. ತಡವಾಗಿ ಹೋಗುವುದರಿಂದ ನಿಮ್ಮ ಮೇಲೆ ಅನಗತ್ಯ ಒತ್ತಡ ಬಿದ್ದು, ಆತಂಕಕ್ಕೆ ಕಾರಣವಾಗಬಹುದು. ಅದು ನಿಮ್ಮ ಉತ್ತರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು.

ಪರೀಕ್ಷಾ ಕೊಠಡಿ ಒಳಗೆ ಹೀಗಿರಿ

* ಪರೀಕ್ಷೆಯ ಪ್ರಾರಂಭದಲ್ಲಿಯೇ ನಿಮಗೆ ಪ್ರಶ್ನಪತ್ರಿಕೆ ನೀಡಲಾಗುತ್ತದೆಯಾದರೂ, 15 ನಿಮಿಷದ ನಂತರವೇ ನೀವು ಉತ್ತರಿಸಲು ಪ್ರಾರಂಭಿಸಬೇಕು.

* ಪ್ರಶ್ನೆ ಪತ್ರಿಕೆ ಪಡೆದ ಕೂಡಲೇ ಅದರ ಮೇಲೆ ನಿಮ್ಮ ರಿಜಿಸ್ಟರ್ ನಂಬರ್‌ ಅನ್ನು ಬರೆಯಿರಿ.

* ಹದಿನೈದು ನಿಮಿಷಗಳ ಅವಧಿಯಲ್ಲಿ ಪ್ರಶ್ನಪತ್ರಿಕೆಯನ್ನು ಒಮ್ಮೆ ಪೂರ್ತಿ ಓದಿಕೊಳ್ಳಿ. ಉತ್ತರಿಸಬೇಕಾದ ಪ್ರಶ್ನೆಗಳ ಆದ್ಯತೆಯನ್ನು ನಿರ್ಧರಿಸಿಕೊಳ್ಳಲು ಇದು ನಿಮಗೆ ನೆರವಾಗುತ್ತದೆ.

* ಉತ್ತರಪತ್ರಿಕೆ ಪಡೆದ ಕೂಡಲೇ ಸೂಚಿಸಿದ ಜಾಗದಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಅನ್ನು ಬರೆಯಿರಿ. ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.

* ಸುಲಭ ಎನಿಸಿದ ಪ್ರಶ್ನೆಗಳನ್ನು ಮೊದಲು ಉತ್ತರಿಸಿ. ಯಾವ ಪ್ರಶ್ನೆಯನ್ನೂ ಉತ್ತರಿಸದೆ ಬಿಡಬೇಡಿ. ತಿಳಿದಿರುವಷ್ಟನ್ನಾದರೂ ಬರೆಯಿರಿ.

* ಪ್ರತಿ ಪ್ರಶ್ನೆಯನ್ನು ಉತ್ತರಿಸುವ ಮುನ್ನ ಆ ಪ್ರಶ್ನೆಯ ಕ್ರಮಸಂಖ್ಯೆಯನ್ನು ಪುಟದ ಮಾರ್ಜಿನ್ ಒಳಗೆ ಸ್ಪಷ್ಟವಾಗಿ ನಮೂದಿಸಿ.

* ಪ್ರತಿ ಪ್ರಶ್ನೆಯ ಉತ್ತರದ ನಂತರ ಕೊಂಚ ಜಾಗ ಬಿಟ್ಟು ಮುಂದಿನ ಪ್ರಶ್ನೆಯ ಉತ್ತರವನ್ನು ಪ್ರಾರಂಭಿಸಿ.
ನೀವು ಕೇಳಿದಷ್ಟು ಹೆಚ್ಚುವರಿ ಹಾಳೆಗಳನ್ನು ಒದಗಿಸಲಾಗುತ್ತದೆ. ಆದರೆ, ಅನಗತ್ಯವಾಗಿ ಹೆಚ್ಚುವರಿ ಹಾಳೆಗಳನ್ನು ಪಡೆಯಬೇಡಿ.

* ಕೇಳಿರುವ ಪ್ರಶ್ನೆಗೆ ಅಗತ್ಯವಿರುವಷ್ಟೇ ಉತ್ತರಿಸಿ. ನೀವು ಎಷ್ಟು ಬರೆದಿದ್ದೀರಿ ಎನ್ನುವುದಕ್ಕಿಂತ ಹೇಗೆ ಬರೆದಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ.

* ಉತ್ತರಪತ್ರಿಕೆಯ ಕೊನೆಯ ಹಾಳೆಯನ್ನು ರಫ್ ವರ್ಕ್‌ಗಾಗಿ ಬಳಸಿಕೊಳ್ಳಿ. ಆ ಪುಟದ ಮೇಲೆ ರಫ್ ವರ್ಕ್ ಎಂದು ಸೂಚಿಸಿ.

* ಯಾವುದೇ ಕಾರಣಕ್ಕೂ ಪ್ರಶ್ನಪತ್ರಿಕೆಯ ಮೇಲೆ ರಿಜಿಸ್ಟರ್ ನಂಬರ್ ಹೊರತಾಗಿ ಬೇರೇನನ್ನೂ ಬರೆಯಬೇಡಿ.

* ನೀವು ಉತ್ತರಿಸುತ್ತಿರುವಾಗ ಕೊಠಡಿಯ ಒಳಗೆ ಅಥವಾ ಹೊರಗೆ ನಡೆಯುತ್ತಿರುವ ಇತರ ಘಟನೆಗಳ ಕಡೆ ಗಮನ ಹರಿಸಿ ನಿಮ್ಮ ಏಕಾಗ್ರತೆಗೆ ಭಂಗ ತಂದುಕೊಳ್ಳಬೇಡಿ.

* ಯಾವುದೇ ಕಾರಣಕ್ಕೆ ಅಕ್ಕಪಕ್ಕ ನೋಡಬೇಡಿ. ಪಕ್ಕದಲ್ಲಿರುವ ವಿದ್ಯಾರ್ಥಿಯ ಭವಿಷ್ಯದ ಗೊಡವೆ ನಿಮಗೆ ಬೇಡ.
ಕೊನೆಯ ಹತ್ತು ನಿಮಿಷ ಇರುವಾಗ ನೀವು ಪಡೆದಿರುವ ಹೆಚ್ಚುವರಿ ಹಾಳೆಗಳನ್ನು ಕ್ರಮವಾಗಿ ಜೋಡಿಸಿ ಅದನ್ನು ಮುಖ್ಯ ಉತ್ತರಪತ್ರಿಕೆಗೆ ದಾರದಿಂದ ಸೇರಿಸಿ ಗಂಟು ಹಾಕಿ. ಹೆಚ್ಚುವರಿ ಹಾಳೆಗಳ ಸಂಖ್ಯೆಯನ್ನು ಮುಖಪುಟದಲ್ಲಿ ನಮೂದಿಸಿ.

ಕೊನೆಯ ಬೆಲ್ ಆಗುವ ಮುನ್ನ ನಿಮ್ಮ ಉತ್ತರಪತ್ರಿಕೆಯನ್ನು ಮತ್ತೊಮ್ಮೆ ಪರಿಶೀಲಿಸಿ ನಿಮ್ಮ ಕೊಠಡಿ ಮೇಲ್ವಿಚಾರಕರಿಗೆ ವೈಯಕ್ತಿಕವಾಗಿ ಕೊಟ್ಟು ಹೊರಗೆ ಬನ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT