ಬದುಕೊಂದು ರಗಳೆಯೇ?

7

ಬದುಕೊಂದು ರಗಳೆಯೇ?

ಗುರುರಾಜ ಕರಜಗಿ
Published:
Updated:

ತಿರುತಿರುಗಿ ತೊಳಲುವುದು ತಿರಿದನ್ನವುಣ್ಣುವುದು |
ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು ||
ಮರಳಿ ಕೊರಗಾಡುವುದು ಕೆರಳುವುದು ನರಳುವುದು |
ಇರವಿದೇನೊಣರಗಳೆ? – ಮಂಕುತಿಮ್ಮ ||23||

ತೊಳಲುವುದು = ಆಯಾಸಗೊಳ್ಳುವುದು, ತಿರಿದನ್ನವುಣ್ಣುವುದು = ತಿರಿದು (ಭಿಕ್ಷೆ ಬೇಡಿ) + ಅನ್ನ + ಉಣ್ಣುವುದು, ಕೆರಳುವುದು = ಕೋಪಗೊಳ್ಳುವುದು, ಇರವಿದೇನೊಣರಗಳೆ = ಇರವು (ಬದುಕು) + ಇದೇನು +ಒಣರಗಳೆ (ವ್ಯರ್ಥ ಪರದಾಟ)

ವಾಚ್ಯಾರ್ಥ: ತಿರುಗಿ ತಿರುಗಿ ಸುಸ್ತಾಗಿ ಭಿಕ್ಷೆ ಬೇಡಿ ಅನ್ನ ಉಣ್ಣುವುದು, ಅಹಂಕಾರದಿಂದ ಮೈಮರೆಯುವುದು, ದೀನತೆಯಿಂದ ಹಲ್ಲು ಕಿರಿಯುವುದು, ದೊರಕದಿದ್ದಾಗ ಕೊರಗುವುದು, ಕೋಪಗೊಳ್ಳುವುದು, ನರಳುವುದು ಇದೇ ಒಣ ರಗಳೆಯೇ ಬದುಕು ?

ವಿವರಣೆ: ಸುತ್ತಮುತ್ತ ಗಮನಿಸಿ ನೋಡಿ. ಬಹಳಷ್ಟು ಜನ ಹೇಗೆ ಬದುಕುತ್ತಿದ್ದಾರೆ? ಅದೆಂಥ ಬದುಕು? ಬದುಕಲಾರದ, ಅರೆಮನಸ್ಸಿನ ಬದುಕು. ಇಹಕ್ಕೆ ಸಾಲದು, ಪರಕ್ಕೆ ಮುಟ್ಟದು. ಸಹಜವಾದ ಉಲ್ಲಾಸವಿಲ್ಲ. ಯಾರನ್ನೋ ಬೇಡುವುದು, ಸ್ವಲ್ಪ ದೊರೆತ ತಕ್ಷಣ ಅಹಂಕಾರದಿಂದ ಬೀಗುವುದು. ಮುಖಂಡರನ್ನು ಕಂಡು ಕೈಚಾಚಿ ಹಲ್ಲು ಕಿರಿಯುವುದು, ಕೇಳಿದ್ದು ದೊರಕದಿದ್ದಾಗ ಕೊರಗುವುದು, ಯಾರ ಮೇಲೋ ಕೆರಳಿ ಹಾರಾಡುವುದು, ಕೊನೆಗೆ ಅಸಹಾಯಕತೆ ಕಾಡಿದಾಗ ನರಳುವುದು. ಇದೊಂದು ಬದುಕೇ? ಇಂಥದ್ದನ್ನು ಕಂಡೇ ಕನಕದಾಸರು ಹಾಡಿದರು –

ವೇದ ಶಾಸ್ತ್ರ ಪಂಚಾಂಗವ ಓದಿಕೊಂಡು,
ಅನ್ಯರಿಗೆ ಬೋಧನೆಯ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ||
...ಅಂಗಡಿ ಮುಂಗಟ್ಟನ್ನು ಹೂಡಿ, ವ್ಯಂಗ್ಯ ಮಾತುಗಳನ್ನು ಆಡಿ,
ಭಂಗ ಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||
...ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳು ಮಾಡಿ,
ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ||
...ಸನ್ಯಾಸಿ ಜಂಗಮ ಜೋಗಿ, ಜಟ್ಟಿ, ಮೊಂಡ ಬೈರಾಗಿ,
ನಾನಾ ವೇಷಗಳೆಲ್ಲ ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ||
...ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿ,
ಚಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ?

ನಮ್ಮ ಭಾರತೀಯ ಪರಂಪರೆಯಲ್ಲಿ ಬಂದ ನಂಬಿಕೆಯಂತೆ ಎಂಭತ್ನಾಲ್ಕು ಲಕ್ಷ ಜೀವರಾಶಿಗಳು ಇವೆ. ಇವೆಲ್ಲವುಗಳಿಗೆ ಕಿರೀಟಪ್ರಾಯವಾಗಿರುವುದು, ಸರ್ವಶ್ರೇಷ್ಠವಾಗಿರುವುದು ಮಾನವ ಜನ್ಮ. ನಿಸರ್ಗದಲ್ಲಿರುವ ಗಿಡ, ಮರಗಳು, ಹೂವು, ಹಕ್ಕಿಗಳು, ಚಿಕ್ಕ ಚಿಕ್ಕ ಪ್ರಾಣಿಗಳು ಅಷ್ಟು ಸಂತೋಷದಿಂದ, ಸಂಭ್ರಮದಿಂದ ಬದುಕುತ್ತಿದ್ದರೆ ಅತ್ಯಂತ ಪರಿಪೂರ್ಣ ಸೃಷ್ಟಿ ಎಂದೆನಿಸುವ ಮನುಷ್ಯನ ಬದುಕೇಕೆ ವ್ಯರ್ಥ ಪರದಾಟವಾಗಬೇಕು? ಇದು ಹೀಗಾಗದೆ ಸಂತೋಷಮಯವಾಗಬೇಕಾದರೆ ನಮ್ಮ ಆಂತರ್ಯದಲ್ಲಿರುವ ಆನಂದವನ್ನು ನಾವಾಗಿಯೇ ಕಂಡುಕೊಳ್ಳಬೇಕು. ಅಂತೆಯೇ ಕಗ್ಗದ ಈ ಪ್ರಶ್ನೆ ನಮ್ಮನ್ನು ಆ ದಿಕ್ಕಿನೆಡೆಗೆ ಪ್ರಚೋದಿಸುತ್ತದೆ.

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !