ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗಟ್ಟು ಸಾಧಿಸಿದ ಜಯ

Last Updated 2 ಆಗಸ್ಟ್ 2019, 17:58 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ. ಬೋಧಿಸತ್ವ ಒಂದು ಕಾಡಿನಲ್ಲಿ ವೃಕ್ಷದೇವತೆಯಾಗಿ ಹುಟ್ಟಿದ್ದ. ಅದೇ ಸಮಯದಲ್ಲಿ ವಾರಾಣಸಿಯಿಂದ ಸ್ವಲ್ಪವೇ ದೂರದಲ್ಲಿದ್ದ ಹಳ್ಳಿಯಲ್ಲಿ ಒಬ್ಬ ಬಡಗಿ ಇದ್ದ. ಅವನು ಮರ ತರಲು ಕಾಡಿಗೆ ಹೋದಾಗ ಅಲ್ಲಿ ಕೆಸರಿನ ಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಹಂದಿಯ ಮರಿಯನ್ನು ಕಂಡು ಕರುಣೆಯಿಂದ ಮನೆಗೆ ಕರೆ ತಂದ. ಅದು ಚೆನ್ನಾಗಿ ತಿಂದು ಕೊಬ್ಬಿ ತುಂಬ ಬಲಿಷ್ಠ ಪ್ರಾಣಿಯಾಯಿತು. ಆದರೆ ಸದಾಚಾರಿಯಾಗಿತ್ತು. ಬಡಗಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿತ್ತು. ಅದನ್ನು ಜನರೆಲ್ಲ ಬಡಗಿಯ ಹಂದಿ ಎಂದೆ ಕರೆಯುತ್ತಿದ್ದರು.

ಬಡಗಿಗೆ ಒಂದು ಹೆದರಿಕೆ ಬಂದಿತು. ಇಷ್ಟು ಚೆನ್ನಾಗಿ ಬೆಳೆದಿದ್ದ ಹಂದಿಯನ್ನು ಯಾರಾದರೂ ಕೊಂದು ತಿಂದಾರು ಎಂಬ ಚಿಂತೆಯಿಂದ ಅದನ್ನು ದೂರದ ದಟ್ಟವಾದ ಕಾಡಿನಲ್ಲಿ ಬಿಟ್ಟು ಬಂದ. ಆ ದೊಡ್ಡ ಹಂದಿ ಕಾಡಿನಲ್ಲಿ ಸುತ್ತುತ್ತ ಒಂದು ಸುರಕ್ಷಿತ ತಾಣವನ್ನು ಹುಡುಕುತ್ತಿತ್ತು. ಅಲ್ಲಿ ಒಂದು ಕಂದರದಲ್ಲಿ ನೂರಾರು ಹಂದಿಗಳು ವಾಸವಾಗಿರುವುದನ್ನು ಕಂಡು ಅದಕ್ಕೆ ಸಂತೋಷವಾಯಿತು. ಅವರನ್ನು ಕಂಡು ಮಾತನಾಡಿಸಿತು, ‘ಸ್ನೇಹಿತರೇ, ನಾನೂ ಒಂದು ಸುರಕ್ಷಿತ ಸ್ಥಾನವನ್ನು ಮತ್ತು ಸ್ನೇಹಿತರನ್ನು ಹುಡುಕುತ್ತಿದ್ದೆ. ನಾನು ನಗರದಿಂದ ಬಂದಿದ್ದೇನೆ. ನಾನೂ ನಿಮ್ಮೊಂದಿಗೆ ಇರಬಹುದೇ?’ ಎಂದು ಕೇಳಿತು. ‘ಹೌದಪ್ಪಾ, ಇದು ಒಳ್ಳೆಯ ಸ್ಥಾನವೇ ಸರಿ, ಆದರೆ ಸುರಕ್ಷಿತವಾದದ್ದಲ್ಲ. ನಾವು ಯಾವಾಗಲೂ ಭಯದಲ್ಲೇ ಬದುಕುತ್ತೇವೆ. ಇಲ್ಲಿ ಸಮೀಪದಲ್ಲಿ ಒಂದು ಹುಲಿ ಇದೆ. ಅದು ಪ್ರತಿದಿನ ಬಂದು ಒಂದು ಹಂದಿಯನ್ನು ಎತ್ತಿಕೊಂಡು ಹೋಗುತ್ತದೆ. ಹೀಗಾಗಿ ದಿನವೂ ನಾವು ಪ್ರಾಣವನ್ನು ಕೈಯಲ್ಲಿಯೇ ಹಿಡಿದುಕೊಂಡು ಬದುಕಿದ್ದೇವೆ’ ಎಂದವು ಹಂದಿಗಳು.

‘ಇಲ್ಲಿ ಒಟ್ಟು ಎಷ್ಟು ಹುಲಿಗಳಿವೆ?’ ಕೇಳಿತು ಬಡಗಿ ಹಂದಿ
‘ಇರುವುದೇ ಒಂದು’ ಎಂದವು ಹಂದಿಗಳು.

‘ನೀವು ಇಷ್ಟೊಂದು ಸಂಖ್ಯೆಯಲ್ಲಿದ್ದರೂ ಯಾಕೆ ಭಯ ಪಡುತ್ತೀರಿ? ನಾನು ಎಲ್ಲ ಯೋಜನೆ ಮಾಡುತ್ತೇನೆ’ ಎಂದು ಅಂದು ರಾತ್ರಿ ಹಂದಿಗಳಿಗೆ ತರಬೇತಿ ಕೊಟ್ಟು ವ್ಯೂಹ ರಚನೆ ಮಾಡಿತು. ಪುಟ್ಟ ಹಂದಿಗಳು ಹಾಗೂ ಅವುಗಳ ತಾಯಂದಿರನ್ನು ಮಧ್ಯದಲ್ಲಿ ನಿಲ್ಲಿಸಿ, ಮುಂದಿನ ಸುತ್ತಿನಲ್ಲಿ ಮಧ್ಯ ವಯಸ್ಸಿನ ಹಂದಿಗಳು ಇರುವಂತೆ ಮಾಡಿತು. ಕೊನೆಯ ಸುತ್ತಿನಲ್ಲಿ ಉದ್ದವಾದ ಕೋರೆಗಳನ್ನು ಹೊಂದಿದ ಬಲಿಷ್ಠ, ತರುಣ ಹಂದಿಗಳು ನಿಂತವು. ಈ ವ್ಯೂಹದ ಮುಂದೆ ಒಂದು ದೊಡ್ಡ ಆಳವಾದ ಗುಂಡಿಯನ್ನು ತೆಗೆಸಿ ಅದರ ಮೇಲೆ ತೆಳುವಾಗಿ ಕಡ್ಡಿ, ಎಲೆಗಳನ್ನು ಹಾಸಿ ಸಿದ್ಧಮಾಡಿತು ಬಡಗಿ ಹಂದಿ. ಅಷ್ಟರಲ್ಲಿ ಬೆಳಗಾಯಿತು.

ಹುಲಿ ಗುಹೆಯಿಂದ ಹೊರ ಬಂದು ಕೆಳಗೆ ಕಂದಕದಲ್ಲಿ ನೋಡಿತು. ಅದನ್ನು ನೋಡಿ ಓಡಿಹೋಗದೆ ಅಲ್ಲಿಯೇ ನಿಂತ ಹಂದಿಗಳನ್ನು ಕಂಡು ಆಶ್ಚರ್ಯವಾಯಿತು. ಅದರಲ್ಲೂ ಎಲ್ಲಕ್ಕಿಂತ ಮುಂದೆ ನಿಂತ ತುಂಬ ಬಲಿತ ಹಂದಿಯನ್ನು ನೋಡಿ ಅದರ ಬಾಯಿಯಲ್ಲಿ ನೀರೂರಿತು. ಅದು ಹಂದಿಯನ್ನು ದುರುಗುಟ್ಟಿ ನೋಡಿ ನೇರವಾಗಿ ಅದರ ಮೇಲೆ ಹಾರಿತು. ಬಡಗಿ ಹಂದಿ ಚಕ್ಕನೇ ಪಕ್ಕಕ್ಕೆ ಸರಿದಾಗ ಹುಲಿ ಹಾಸಿಟ್ಟ ಎಲೆ ಕಡ್ಡಿಗಳ ಮೇಲೆ ಬಿದ್ದು, ಕೆಳಗೆ ಗುಂಡಿಯ ತಳ ಸೇರಿತು. ಸಂಭ್ರಮದಿಂದ ಕಿರಿಚುತ್ತ ಉಳಿದ ಹಂದಿಗಳು ಓಡಿಬಂದು ಸರಸರನೇ ಮಣ್ಣನ್ನು ಹೊಂಡದೊಳಗೆ ತಳ್ಳಿ ಹುಲಿಯನ್ನು ಮುಚ್ಚಿ ಹಾಕಿಬಿಟ್ಟವು. ‘ಆಯಿತು ಹುಲಿಯ ಸಮಾಧಿ’ ಎಂದು ಬಡಗಿ ಹಂದಿ ಎಂದಾಗ ಒಂದು ಹಿರಿಯ ಹಂದಿ ಮುಂದೆ ಬಂದು, ‘ಅಯ್ಯಾ, ನೀನು ನಮ್ಮ ಹಾಗೆಯೇ ಹಂದಿಯಾದರೂ ತುಂಬ ಬಲಶಾಲಿ ಹಾಗೂ ಬುದ್ಧಿಶಾಲಿ. ನೀನೇ ನಮ್ಮ ನಾಯಕನಾಗಿ ನಮ್ಮ ತಂಡವನ್ನು ಮುನ್ನಡೆಸು’ ಎಂದು ಕೇಳಿತು. ಮುಂದೆ ಅನೇಕ ವರ್ಷ ಬಡಗಿ ಹಂದಿ ನಾಯಕನಾಗಿಯೇ ಉಳಿಯಿತು, ತನ್ನ ತಂಡವನ್ನು ಸಮರ್ಥವಾಗಿ ಬೆಳೆಸಿತು.

ನಾವು ಚಿಕ್ಕವರು, ಅಸಹಾಯಕರು ಎಂಬ ಗೊಣಗಾಟ ಬೇಡ. ನೂರು ಜನ ಇಂಥವರು ಸೇರಿದರೆ ಎಂಥದೇ ಪ್ರಬಲ ಶಕ್ತಿಯನ್ನು ಎದುರಿಸಿ ನಿಂತು ಗೆಲ್ಲಬಹುದು. ಸಣ್ಣದು, ದೊಡ್ಡದು ಎಂಬುದು ದೇಹದಲ್ಲಿಲ್ಲ, ಮನಸ್ಸಿನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT