ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯನ ಅತಿಚರಿತೆ

Last Updated 4 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕ್ಷಿತಿಚಕ್ರ ರವಿಚಕ್ರ ಋತುಚಕ್ರಗಳಿಗಿಹುದು |
ಮಿತವೃತ್ತಿ; ನರನಿಗಂತೆಯೆ ಕರ್ಮನಿಯತಿ ||
ಕ್ಷಿತಿಕಂಪ ರಾಹುಕೇತುಭ್ರಮೆ ನರಪ್ರಗತಿ |
ಅತಿಚರಿತೆ ಪ್ರಕೃತಿಯಲಿ - ಮಂಕುತಿಮ್ಮ || 167 ||

ಪದ-ಅರ್ಥ: ಕ್ಷಿತಿಚಕ್ರ=ಭೂಮಿಯ ಚಕ್ರ, ಮಿತವೃತ್ತಿ=ಮಿತವಾದ ನಿರ್ದಿಷ್ಟವಾದ ಕೆಲಸ ಶಕ್ತಿ, ಕರ್ಮನಿಯತಿ=ಕರ್ಮ+ನಿಯತಿ(ನಿಯಮಕ್ಕೆ ಒಳಪಟ್ಟದ್ದು). ಕ್ಷಿತಿಕಂಪ=ಭೂಕಂಪ, ಅತಿಚರಿತೆ=ಮಿತಿಹಿಲ್ಲದ ನಡೆ.

ವಾಚ್ಯಾರ್ಥ: ಭೂಮಿಯ ಪ್ರದಕ್ಷಿಣೆ, ಸೂರ್ಯನ ಪರಿಭ್ರಮಣ, ಋತುಗಳ ಬದಲಾವಣೆಗಳೆಲ್ಲ ನಿಯತವಾದ ರೀತಿಯಲ್ಲೇ ನಡೆಯುವಂಥವುಗಳು. ಮನುಷ್ಯನಿಗೂ ಅದೇ ರೀತಿಯ ನಿಯಮ ಅವನ ಕರ್ಮಗಳಿಗಿದೆ. ಆದರೆ ಭೂಕಂಪ, ರಾಹು ಕೇತುಗಳ ಕಲ್ಪನೆಗಳು, ಮನುಷ್ಯನ ಜೀವನ ಪ್ರಗತಿ ಮುಂತಾದವುಗಳು ಪ್ರಕೃತಿಯಲ್ಲಿ ಮಿತಿಯಿಲ್ಲದೆ ನಡೆಯುವಂತಹವುಗಳು.

ವಿವರಣೆ: ಯಾವುದೇ ಒಂದು ವ್ಯವಸ್ಥೆ ಕ್ರಮಬದ್ಧವಾಗಿ ನಡೆಯಬೇಕಾದರೆ ಅದು ಒಂದು ನಿಯಮಕ್ಕೆ ಒಳಪಡಲೇಬೇಕು. ಭೂಮಿ ಕೋಟ್ಯಂತರ ವರ್ಷಗಳಿಂದ ಸೂರ್ಯನ ಸುತ್ತಲೂ ತಿರುಗುತ್ತಲೇ ಇದೆ. ಅದು ಸರಿಯಾಗಿ ತೊಂಬತ್ಮೂರು ಮಿಲಿಯನ್ ಮೈಲಿ ದೂರದಲ್ಲಿದ್ದುಕೊಂಡೇ ಸುತ್ತುತ್ತದೆ. ಆ ಅಂತರ ಹೆಚ್ಚು ಕಡಿಮೆಯಾಗುವುದಿಲ್ಲ. ಹತ್ತಿರ ಹೋದರೆ ಭೂಮಿ ಸುಟ್ಟು ಹೋದೀತು, ದೂರ ಸರಿದರೆ ಮರಗುಟ್ಟುತ್ತದೆ. ಅದೇ ದೂರದಲ್ಲಿ ಅಷ್ಟೇ ವೇಗದಲ್ಲಿ ತನ್ನ ಸುತ್ತ ಸುತ್ತುತ್ತ 365 ದಿನಗಳಿಗೊಂದರಂತೆ ಸೂರ್ಯನ ಸುತ್ತ ಚಕ್ರದಂತೆ ಚಲಿಸುತ್ತದೆ. ಅದರ ಗತಿ ಹೀಗೆ ನಿಯತವಾದದ್ದು. ಅದರಂತೆಯೇ ಸೂರ್ಯನ ಗತಿಯೂ ಪೂರ್ವನಿರ್ಧರಿತ ವಾದದ್ದೇ. ಪ್ರತಿಕ್ಷಣಕ್ಕೂ ಆರುನೂರು ಮಿಲಿಯನ್ ಟನ್‌ಗಳಷ್ಟು ಜನಜಲಕವನ್ನು ಒಂದುಗೂಡಿಸಿ ಹೀಲಿಯಂ ಅನ್ನು ತಯಾರು ಮಾಡುತ್ತ 5726 ಡಿಗ್ರಿಯಷ್ಟು ಉಷ್ಣತೆಯನ್ನು ಹೊರದೂಡಿ ತನ್ನ ಸುತ್ತಮುತ್ತಲಿನ ಪ್ರಪಂಚವನ್ನು ಬೆಳಗಿಸಿ, ಬೆಚ್ಚಗಿಡುತ್ತದೆ. ಇದು ಸೂರ್ಯ ಹುಟ್ಟಿದಾಗಿನಿಂದ ಇಂದಿನವರೆಗೆ ಚಾಚೂ ತಪ್ಪದಂತೆ ನಡೆದ ನಿಯಮಿತವಾದ ಕ್ರಿಯೆ. ಇದರಂತೆ ನಮ್ಮ ಋತುಗಳೂ ಕ್ರಮವಾಗಿ ಜರುಗುತ್ತವೆ. ಕೆಲವೊಮ್ಮೆ ಸಣ್ಣಪುಟ್ಟ ವ್ಯತ್ಯಾಸಗಳಾದರೂ ಸ್ಥೂಲವಾಗಿ ಮಳೆಗಾಲ, ಚಳಿಗಾಲ, ಬೇಸಿಗೆಗಾಲಗಳು ಒಂದು ನಿಯತವಾದ ರೀತಿಯಲ್ಲೇ ನಡೆಯುತ್ತವೆ. ಹೀಗಾಗಿ ಇವೆಲ್ಲ ಘಟನೆಗಳ ನಡವಳಿಕೆ ಒಂದು ಮಿತವೃತ್ತಿ.
ಇದರಂತೆ ಮನುಷ್ಯನಿಗೂ ಒಂದು ಕರ್ಮದ ನಿಯಮವಿದೆ. ಅವನು ಮಾಡಿದ ಕರ್ಮಕ್ಕೆ ಆತ ಬದ್ಧನಾಗಲೇಬೇಕು. ಅದನ್ನು ತಪ್ಪಿಸುವುದು ಅಸಾಧ್ಯ. ಒಳ್ಳೆಯ ಕರ್ಮ ಒಳ್ಳೆಯ ಫಲಗಳನ್ನೇ ನೀಡಿದರೆ, ಕೆಟ್ಟ ಕರ್ಮಗಳು ಕೆಟ್ಟ ಫಲವನ್ನೇ ಕೊಡುತ್ತವೆ. ಅವುಗಳನ್ನು ಆತ ಅನುಭವಿಸಲೇಬೇಕು. ಅದೂ ಒಂದು ನಿಯಮಿತವಾದ ಕರ್ಮಚಕ್ರ.

ಆದರೆ ಪ್ರಪಂಚವನ್ನು ಗಮನಿಸಿದರೆ ಕೆಲವು ಘಟನೆಗಳು, ವಿಷಯಗಳು ಯಾವುದೇ ನಿಯತಿಗೆ ಒಳಪಟ್ಟಂತೆ ತೋರುವುದಿಲ್ಲ. ಎಲ್ಲೆಲ್ಲಿಯೋ ಆಗುವ ಭೂಕಂಪಗಳು, ಅವುಗಳ ಪರಿಣಾಮವಾಗಿ ಬರುವ ಸುನಾಮಿಗಳು, ನಾವು ಸೃಷ್ಟಿಸಿಕೊಂಡ ಪ್ರಳಯದ, ಕಾಲ್ಪನಿಕ ರಾಹುಕೇತುಗಳ ಚಲನವಲನಗಳು, ಯಾವ ನಿಯಮವನ್ನು ಪಾಲಿಸುವುದಿಲ್ಲ. ಅದರಂತೆಯೇ ಮನುಷ್ಯನ ಪ್ರಗತಿ ಕಲ್ಪನಾತೀತವಾದದ್ದು. ಕಳೆದ ನೂರು ವರ್ಷಗಳಲ್ಲಿ, ಮನುಷ್ಯನ ಬದುಕಿನಲ್ಲಿ, ಜೀವನ ಶೈಲಿಯಲ್ಲಿ, ವೈಜ್ಞಾನಿಕ ಅವಿಷ್ಕಾರಗಳಲ್ಲಿ ಆದ ಬದಲಾವಣೆ ಇಡೀ ಪ್ರಪಂಚದ ಇತಿಹಾಸದಲ್ಲೇ ಹಿಂದೆಂದೂ ಆಗಿರಲಿಲ್ಲ. ಅಂತೆಯೇ ಬಹುಶ: ಮುಂದಿನ ಹತ್ತು ವರ್ಷಗಳಲ್ಲಿ ಆಗಬಹುದಾದ ಬದಲಾವಣೆ ಹಿಂದಿನ ನೂರುವರ್ಷಗಳಲ್ಲಿ ಕಂಡ ಬದಲಾವಣೆಗಳಿಗಿಂತ ಮಿಗಿಲಾಗಬಹುದು. ಇದನ್ನೇ ಕಗ್ಗ ‘ಅತಿಚರಿತೆ’ ಎನ್ನುತ್ತದೆ. ಯಾವುದೇ ನಿಯಮಕ್ಕೆ, ಮಿತಿಗೆ ಒಳಪಡದ ಬದಲಾವಣೆ. ಇದು ಪ್ರಗತಿಯೂ ಆಗಬಹುದು, ವಿನಾಶದ ದಾರಿಯೂ ಆಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT