ಬುಧವಾರ, ಸೆಪ್ಟೆಂಬರ್ 18, 2019
23 °C

ಆಸೆ ತರುವ ಅನಾಹುತ

ಗುರುರಾಜ ಕರಜಗಿ
Published:
Updated:

ಕಾಂಕ್ಷೆಗಳ ಬೋಧಿಸುವ ಬಂಧುಸಖರುಪಕಾರ|
ಯಕ್ಷಿಯರು ಮ್ಯಾಕ್‍ಬೆತನಿಗೆಸಗಿದುಪದೇಶ ||
ಉತ್ಸಾಹವಿದ್ದೇನು? ವಾತ್ಸಲ್ಯವಿದ್ದೇನು? |
ಅಕ್ಷಿ ನಿರ್ಮಲವೇನೊ? – ಮಂಕುತಿಮ್ಮ || 175 ||

ಪದ-ಅರ್ಥ: ಕಾಂಕ್ಷೆಗಳ=ಅಪೇಕ್ಷೆಗಳ, ಬಂಧುಸಖರುಪಕಾರ=ಬಂಧು+ ಸಖರ+ಉಪಕಾರ, ಮ್ಯಾಕ್‍ಬೆತನಿಗೆಸಗಿದುಪದೇಶ=ಮ್ಯಾಕ್‍ಬೆತನಿಗೆ+ ಎಸಗಿದ (ನೀಡಿದ)+ಉಪದೇಶ, ಅಕ್ಷಿ=ಕಣ್ಣು, ದೃಷ್ಟಿ.

ವಾಚ್ಯಾರ್ಥ: ನಮಗೆ ಆಸೆಗಳನ್ನು ಪ್ರಚೋದಿಸುವ ಸ್ನೇಹಿತರು ಮಾಡುವ ಉಪಕಾರ, ಮ್ಯಾಕ್‍ಬೆತ್‍ನಿಗೆ ಯಕ್ಷಿಯರು ನೀಡಿದ ಉಪದೇಶದಂತೆಯೇ. ಎಷ್ಟು ಉತ್ಸಾಹ, ವಾತ್ಸಲ್ಯವಿದ್ದರೇನು ಫಲ, ಕಣ್ಣು ದೃಷ್ಟಿ ನಿರ್ಮಲವಾಗಿದೆಯೆ?

ವಿವರಣೆ: ನನ್ನ ಪರಿಚಯದವರೊಬ್ಬರು ಸಣ್ಣ ವ್ಯಾಪಾರ ಮಾಡಿಕೊಂಡು ಅದರಲ್ಲೇ ತೃಪ್ತಿಯಿಂದ ಬದುಕಿದ್ದರು. ಅವರ ಸ್ನೇಹಿತನೊಬ್ಬ ಹೊಸದೊಂದು ದೊಡ್ಡ ವ್ಯಾಪಾರ ಮಾರಾಟಕ್ಕಿದೆಯೆಂದೂ, ಅವಸರದ ಮಾರಾಟವಾದ್ದರಿಂದ ತುಂಬ ಕಡಿಮೆ ದರದಲ್ಲಿ ಸಿಗುತ್ತದೆಂದೂ ಹೇಳಿ ಇವರು ಅದನ್ನು ತೆಗೆದುಕೊಳ್ಳುವಂತೆ ಪುಸಲಾಯಿಸಿದ. ಇವರು ಮೊದಮೊದಲು ಬೇಡ ಅದು ನನ್ನ ಶಕ್ತಿಯನ್ನು ಮೀರಿದ್ದು ಎಂದರು. ಆತ, ನಿಮಗೆ ಉನ್ನತ ಗುರಿ ಇರಬೇಕು, ನಿಮಗೆ ಸಾಧ್ಯವಾಗದಿದ್ದರೆ ಮತ್ತಾರಿಗೆ ಸಾಧ್ಯವಾದೀತು ಎಂದು ಪ್ರೇರಣೆ ನೀಡಿದ. ಪಾಪ! ಇವರು ಸಾಲ ಮಾಡಿ ಆ ವ್ಯಾಪಾರವನ್ನು ಕೊಂಡರು. ಆ ವ್ಯಾಪಾರ ಮೋಸದ್ದು. ಅದರ ಬೆಳವಣಿಗೆ ದೂರ, ಉಳಿಸಿಕೊಳ್ಳುವುದೇ ದುರ್ಭರವಾಯಿತು. ಸಾಲ ಏರುತ್ತಲಿತ್ತು. ಬೇರೆ ದಾರಿ ಉಳಿಯದೆ ತಮ್ಮ ಹಳೆಯ ವ್ಯಾಪಾರ, ಮನೆ, ಆಸ್ತಿ ಎಲ್ಲವನ್ನೂ ಮಾರಿ ಬರಿದಾಗಿ ನಿಂತರು. ಮತ್ತೊಬ್ಬರು ಈ ಪ್ರೇರಣೆ ನೀಡಿದ ಸ್ನೇಹಿತರನ್ನು ಯಾಕೆ ಹೀಗೆ ಅವರನ್ನು ಒತ್ತಾಯಿಸಿದಿರಿ ಎಂದು ಕೇಳಿದರೆ ಅವರು, ‘ಅವನು ಬಹಳ ಹಾರಾಡುತ್ತಿದ್ದ, ಸರಿಯಾಗಿ ಬುದ್ಧಿ ಬರಲಿ ಎಂದು ಹೀಗೆ ಮಾಡಿದೆ’ ಎಂದರಂತೆ. ಇಂಥ ಸ್ನೇಹಿತರಿದ್ದರೆ ವೈರಿಗಳೇಕೆ ಬೇಕು? ಕಗ್ಗ ಈ ಮಾತನ್ನೇ ಹೇಳುತ್ತದೆ. ಹೀಗೆ ಅಪೇಕ್ಷೆಗಳನ್ನು ಕೆರಳಿಸುವ ಬಂಧುಗಳ, ಸ್ನೇಹಿತರ ಉಪಕಾರ, ಯಕ್ಷಿಯರು ಮ್ಯಾಕ್‍ಬೆತ್‍ನಿಗೆ ನೀಡಿದ ಉಪದೇಶದಂತೆಯೇ ಅಪಕಾರಿಯಾದದ್ದು.

ಇಲ್ಲೊಂದು ಶೇಕ್ಸ್‌ಪಿಯರ್‌ನ ಮಹಾನ್ ದುರಂತನಾಟಕ, ‘ಮ್ಯಾಕ್‍ಬೆತ್’ನ ಎಳೆಯೊಂದನ್ನು ಡಿ.ವಿ.ಜಿ ತರುತ್ತಾರೆ. ಸ್ಕಾಟಲೆಂಡಿನ ರಾಜ ಡಂಕನ್‍ನ ಸೇನಾಪತಿ ಮ್ಯಾಕ್‍ಬೆತ್. ಆತ ಪರಾಕ್ರಮಿ ಹಾಗೂ ಮಹಾತ್ವಾಕಾಂಕ್ಷಿ. ಒಂದು ಯುದ್ಧವನ್ನು ಗೆದ್ದು ಬರುವಾಗ ಅವನ ಎದುರು ಮೂವರು ಮಾಟಗಾತಿಯರು ಬಂದು, ‘ಮ್ಯಾಕ್‍ಬೆತ್, ನಿನ್ನಿಂದಲೇ ರಾಜ ಯುದ್ಧಗಳನ್ನು ಗೆಲ್ಲುವುದು. ಮುದುಕ ರಾಜ ಏನು ಮಾಡಿಯಾನು? ನೀನು ಸದ್ಯದಲ್ಲೇ ರಾಜನಾಗುತ್ತೀ’ ಎಂದು ಹೇಳಿ ಮಾಯವಾದರು. ಮೊದಲೇ ಮಹತ್ವಾಕಾಂಕ್ಷಿ, ಮೇಲೆ ಈ ಪ್ರೇರಣೆ ದೊರಕಿದಾಗ ತಾನು ರಾಜನಾಗಲೇಬೇಕು ಎಂಬ ಹಟ ಬಂದಿತು. ತನ್ನ ಮನೆಗೆ ಬಂದ ವೃದ್ಧ ರಾಜ ಡಂಕನ್‍ನನ್ನು ಮ್ಯಾಕ್‍ಬೆತ್ ಕೊಲೆ ಮಾಡುತ್ತಾನೆ. ನಂತರ ತೊಳಲಾಡಿ, ತನ್ನ ಸ್ಥಾನವನ್ನು ಭದ್ರಪಡಿಸಲು ಮತ್ತೆ ಕೆಲವರನ್ನು ಕೊಂದು ನರಕಯಾತನೆ ಪಟ್ಟು ನಾಶವಾಗುತ್ತಾನೆ. ಸಲಹೆ ನೀಡುವ ಸ್ನೇಹಿತರಲ್ಲಿ, ಬಂಧುಗಳಲ್ಲಿ ಎಷ್ಟು ಉತ್ಸಾಹವಿದ್ದರೇನು, ಎಷ್ಟು ಪ್ರೀತಿ, ಅಂತಃಕರಣವಿದ್ದರೇನು? ಮನಸ್ಸು ನಿರ್ಮಲವಿದೆಯೆ?

ಮನಸ್ಸು ನಿರ್ಮಲವಿರದ ಯಾವ ಸಲಹೆ, ಪ್ರೋತ್ಸಾಹವೂ ಮಾಟಗಾತಿ ಯರು ಮ್ಯಾಕ್‍ಬೆತ್‍ನಿಗೆ ನೀಡಿದ ಪ್ರಲೋಭನೆಯಾಗುತ್ತದೆ. ಆಸೆಗಳನ್ನು ಹುಟ್ಟಿಸುವ ಸ್ನೇಹಿತರ ಮನಸ್ಸು ನಿರ್ಮಲವಿರಬೇಕೆಂದು ಅಪೇಕ್ಷಿಸುವುದರೊಂದಿಗೆ, ಆ ಸಲಹೆ, ಆಸೆಗಳನ್ನು ಪರೀಕ್ಷೆ ಮಾಡದೆ ಒಪ್ಪಿಕೊಳ್ಳದಿರುವ ಶಕ್ತಿ ನಮಗೂ ಇರಬೇಕು. 

Post Comments (+)