ಸೋಮವಾರ, ಸೆಪ್ಟೆಂಬರ್ 23, 2019
24 °C

ಜನರ ಮಂಗಬುದ್ಧಿ

ಗುರುರಾಜ ಕರಜಗಿ
Published:
Updated:
Prajavani

ಇಂಗಿತಜ್ಞಾನವಿಲ್ಲದ ಬಂಧುಪರಿವಾರ |
ಹಂಗಿಸುವ ಛಲವುಳ್ಳ ಸತಿಪುತ್ರಸಖರು ||
ಬಂಗಾರದಸಿ ಚುಚ್ಚಿ ಸಿಂಗರದ ಬೊಟ್ಟೆನುವ |
ಮಂಗಬುದ್ಧಿಯ ಜನರು – ಮಂಕುತಿಮ್ಮ || 176 ||

ಪದ-ಅರ್ಥ: ಇಂಗಿತಜ್ಞಾನ=ಮನಸ್ಸಿನ ಭಾವನೆಗಳನ್ನು ತಿಳಿಯುವ ಜ್ಞಾನ, ಬಂಗಾರದಸಿ=ಬಂಗಾರದ+ಅಸಿ(ಖಡ್ಗ), ಸಿಂಗರದ=ಸಿಂಗಾರದ

ವಾಚ್ಯಾರ್ಥ: ಮತ್ತೊಬ್ಬರ ಮನಸ್ಸಿನ ಭಾವನೆಗಳನ್ನು ತಿಳಿಯದ ಬಂಧು ಪರಿವಾರ, ಸದಾಕಾಲ ಹಂಗಿಸುವುದನ್ನೇ ಉದ್ದೇಶವಾಗಿಟ್ಟುಕೊಂಡ ಹೆಂಡತಿ, ಮಕ್ಕಳು ಮತ್ತು ಸ್ನೇಹಿತರು. ಇವರೆಲ್ಲ ಬಂಗಾರದ ಖಡ್ಗದಿಂದ ತಿವಿದು ಶೃಂಗಾರದ ಬೊಟ್ಟು ಎನ್ನುವ ಮಂಗಬುದ್ಧಿಯ ಜನರು.

ವಿವರಣೆ: ಒಂದು ಸಂಸಾರ ವ್ಯವಸ್ಥಿತವಾಗಿ, ಸಂತೋಷವಾಗಿ ಇರಬೇಕಾದರೆ ಮುಖ್ಯವಾಗಿ ಬೇಕಾದದ್ದು ಇಂಗಿತಜ್ಞಾನ. ಎಲ್ಲವನ್ನು ಬಾಯಿಬಿಟ್ಟು ಹೇಳಬೇಕಿಲ್ಲ, ಹೇಳಬಾರದು. ಮತ್ತೊಬ್ಬರ ಮನಸ್ಸಿಗೆ ಯಾವುದು ಚೆನ್ನ ಎನ್ನಿಸೀತು, ಯಾವುದು ನೋವು ತಂದೀತು ಎಂಬ ತಿಳಿವಳಿಕೆಯೇ ಇಂಗಿತ ಜ್ಞಾನ. ಹೆಂಡತಿಗೆ ಏನು ಬೇಕೆಂಬುದನ್ನು, ಆಕೆ ಬಾಯಿಬಿಟ್ಟು ಹೇಳದೆ ತಿಳಿದುಕೊಂಡು ಆ ಇಚ್ಛೆಯನ್ನು ಪೂರೈಸುವುದು ಸೂಕ್ಷ್ಮಗ್ರಾಹಿತ್ವ ಅಥವಾ ಸಂವೇದನಾಶೀಲತೆ. ಅದರಂತೆ ಮನೆಮಂದಿಯೆಲ್ಲ ಸೂಕ್ಷ್ಮತೆಯಿಂದ ಬದುಕಿದರೆ ಸಂಸಾರ ಸ್ವರ್ಗವಾದೀತು. ಆದರೆ ಕಗ್ಗ ನಮಗೆ ಎಚ್ಚರಿಕೆ ಕೊಡುವುದು ಹಾಗಾಗದಿದ್ದರೆ ಏನಾದೀತು ಎಂದು. ಮತ್ತೊಬ್ಬರ ಬಗ್ಗೆ ಯಾವ ಕಾಳಜಿಯೂ ಇಲ್ಲದೆ, ತಮಗೆ ಮನ ಬಂದಂತೆ ಪರಿವಾರದವರು ವರ್ತಿಸಿದರೆ ಅದು ಸಂಸಾರವಾಗದೆ ಸಂತೆಯಾಗುತ್ತದೆ. ಇಡೀ ಕಗ್ಗ ಸಂಸಾರ ಹೇಗಿರಬೇಕು, ಸಂಸಾರದಲ್ಲಿ ಜನರು ಹೇಗೆ ವರ್ತಿಸಬೇಕು ಎನ್ನುವುದನ್ನೇ ತಿಳಿಸುತ್ತದೆ.

ಗಂಡ ಆಫೀಸಿಗೆ ಹೋಗಿದ್ದಾನೆ. ಅವನ ಹೆಂಡತಿ ಅನಕ್ಷರಸ್ಥೆ. ಮಗುವಿಗೆ ಜ್ವರ ವಿಪರೀತವಾಗಿದೆ. ಆಕೆ ಗಾಬರಿಯಿಂದ ಗಂಡನಿಗೆ ಫೋನ್ ಮಾಡುತ್ತಾಳೆ. ಹೆಂಡತಿಗೆ ಓದಲು ಬರುವುದಿಲ್ಲವೆಂಬುದನ್ನು ತಿಳಿದ ಗಂಡ ಕಪಾಟಿನಲ್ಲಿ ಒಂದು ಕೆಂಪು ಲೇಬಲ್ ಹಚ್ಚಿದ ಬಾಟಲಿಯಲ್ಲಿದ್ದ ಔಷಧಿಯನ್ನು ಎರಡು ಚಮಚ ಹಾಕು ಎಂದು ಹೇಳಿದ. ಹೆಂಡತಿ ಅಂತೆಯೇ ಮಾಡಿದಳು. ಮುಂದೆ ಒಂದು ತಾಸಿನಲ್ಲಿ ಮಗುವಿನ ಬಾಯಿಯಲ್ಲಿ ನೊರೆಬಂದು ಒದ್ದಾಡತೊಡಗಿತು. ಹೆಂಡತಿಯಿಂದ ಫೋನ್ ಬಂದಾಗ ಗಂಡ ಓಡಿಬಂದ, ಮಗುವನ್ನು ಆಸ್ಪತ್ರೆಗೆ ಕರೆದೊಯ್ದ, ಮಗು ತೀರಿಹೋಯಿತು. ಹೆಂಡತಿ ತಿಳಿಯದೆ ಔಷಧಿಯ ಬದಲು ಮತ್ತೊಂದು ಕೆಂಪು ಲೇಬಲ್ ಇದ್ದ ವಿಷವನ್ನು ಕೊಟ್ಟಿದ್ದು ತಿಳಿಯಿತು. ಗಂಡ ಅವಳ ಮೇಲೆ ಕೂಗಾಡಲಿಲ್ಲ, ಹಂಗಿಸಲಿಲ್ಲ. ಆಪ್ತರು ಅವನ ತಾಳ್ಮೆಯನ್ನು ಹೊಗಳಿದಾಗ ಹೇಳಿದ, ‘ತಪ್ಪು ನನ್ನದು. ಅಕೆಗೆ ಓದು ಬರುವುದಿಲ್ಲ ಎಂದು ತಿಳಿದ ನಾನು ಬೇರೆ ಯಾವುದಾದರೂ ವಿಧಾನವನ್ನು ಹುಡುಕಬೇಕಿತ್ತು. ತಾಯಿ ಎಂದಾದರೂ ತಿಳಿದು ವಿಷ ಕೊಟ್ಟಾಳೆಯೇ ? ಆಕೆ ದುಃಖದಲ್ಲಿ ಬೆಂದು ಹೋಗಿದ್ದಾಳೆ. ಈಗ ಮಗುವನ್ನು ಕಳೆದುಕೊಂಡ ನಾನು ಆಕೆಯನ್ನು ಕಳೆದುಕೊಳ್ಳಲೇ?‘ ಆಕೆಯನ್ನು ಪ್ರೀತಿಯಿಂದ ಸಂತೈಸಿದ. ಇದು ತಪ್ಪುಗಳನ್ನು ಸ್ವೀಕರಿಸುವ, ಕ್ಷಮಿಸುವ ಸ್ವಭಾವ. ಇದೇ ಸಂಸಾರವನ್ನು ಬಿಗಿಯಾಗಿ ಹಿಡಿಯುವ ಅಂಟು. ಆದರೆ ಬರೀ ಹಂಗಿಸುತ್ತ, ಕಾಲೆಳೆಯುತ್ತ ಇರುವ ಮನೆಯ ಮಂದಿ ಹೇಗಿರುತ್ತಾರೆಂದರೆ ಖಡ್ಗದಿಂದ ಗಾಯಮಾಡಿ ಅದು ಶೃಂಗಾರದ ಅಲಂಕಾರ ಮಾಡುವ ರೀತಿ ಎಂದು ಹೇಳುತ್ತಾರೆ. ಖಡ್ಗ ಬಂಗಾರದ್ದಾದರೂ ಗಾಯ ಸುಳ್ಳೇ?

ಮತ್ತೊಬ್ಬರ ಮನಸ್ಸನ್ನು ತಿಳಿದು ನಡೆದರೆ, ಹಂಗಿಸದೆ, ತಾಳ್ಮೆಯಿಂದ, ತಿಳಿವಳಿಕೆಯಿಂದ ನೋವು ಮಾಡದೆ ಬದುಕಿದರೆ, ಆ ಸಂಸಾರ ಸುಖಸಾಗರ. ಅದನ್ನು ತಿಳಿಯದೆ ವರ್ತಿಸುವ ಜನರನ್ನು ಕಗ್ಗ ‘ಮಂಗಬುದ್ಧಿಯವರು’ ಎಂದು ಕರೆಯುತ್ತದೆ.

Post Comments (+)