ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಸದಲ್ಲಿ ಕೊಲ್ಲುವ ವಾಸನೆಗಳು

Last Updated 29 ಆಗಸ್ಟ್ 2019, 19:46 IST
ಅಕ್ಷರ ಗಾತ್ರ

ದ್ವೇಷರೋಷಗಳವೊಲೆ ನೇಹಮುಂ ಮೋಹಮುಂ |

ಪಾಶವಾಗಲ್ಬಹುದು ನಿನಗೆ ಮೈಮರಸಿ ||

ವಾಸನೆಗಳುರುಬಿ ಚಿತ್ತಜ್ವರಂಗಳ ಬಿತ್ತಿ |

ಮೋಸದಲಿ ಕೊಲ್ಲವುವೊ – ಮಂಕುತಿಮ್ಮ || 175 ||

ಪದ-ಅರ್ಥ: ದ್ವೇಷರೋಷಗಳವೊಲೆ=ದ್ವೇಷ+ರೋಷಗಳವೊಲೆ, ನೇಹ=ಸ್ನೇಹ, ಪಾಶವಾಗಲ್ಯಹುದು = ಪಾಶ + ವಾಗಲ್ಬಹುದು (ವಾಗಬಹುದು), ಉರುಬಿ=ಉಕ್ಕಿ, ಮೆರೆದು

ವಾಚ್ಯಾರ್ಥ: ದ್ವೇಷ, ರೋಷಗಳಂತೆ ಸ್ನೇಹ, ಮೋಹಗಳೂ ನಿನಗೆ ಮೈಮರೆಸಿ ಪಾಶವಾಗಬಹುದು. ಹಳೆಯ ವಾಸನೆಗಳು ಉಕ್ಕಿ ಬಂದು ನಿನ್ನಲ್ಲಿ ಚಿತ್ತ ಭ್ರಮೆಯನ್ನುಂಟುಮಾಡಿ ಮೋಸದಲ್ಲಿ ಕೊಲ್ಲುವವು.

ವಿವರಣೆ: ಪರಿವಾರದೊಳಗಿನ ದ್ವೇಷ, ಅಣ್ಣ-ತಮ್ಮಂದಿರ ನಡುವಿನ ದ್ವೇಷ ಕುರುಕ್ಷೇತ್ರ ಯುದ್ಧವಾಗಿ ಇಡೀ ದೇಶವನ್ನೇ ಅಹುತಿ ತೆಗೆದುಕೊಂಡದ್ದನ್ನು ಕೇಳಿದ್ದೇವೆ. ಎರಡು ಮನೆತನಗಳ ನಡುವಿನ ದ್ವೇಷದ ಕಾರಣ ಎರಡು ಎಕರೆ ಜಮೀನು. ಅದಕ್ಕಾಗಿ ಇಬ್ಬರೂ ತಾಲ್ಲೂಕು ಕೋರ್ಟಿನಿಂದ ಸುಪ್ರೀಂ ಕೋರ್ಟ್‌ವರೆಗೆ ಅಲೆದಾಡಿ, ವಕೀಲರನ್ನು ಶ್ರೀಮಂತರನ್ನಾಗಿಸಿ ತಾವು ದರಿದ್ರರಾಗಿ ಹಾಳಾಗಿ ಹೋದರು.

ಗಂಡ ಹೆಂಡತಿ ಸಾಯಂಕಾಲ ತಿರುಗಾಡಲು ಹೋಗಿದ್ದರು. ಅಲ್ಲೊಬ್ಬ ಫಟಿಂಗ ಬಂದ, ಹೆಂಡತಿಯನ್ನು ಚುಡಾಯಿಸಿದ. ಗಂಡನಿಗೆ ರೇಗದೆ ಇರಲಾಗುತ್ತದೆಯೇ? ಕೋಪದಿಂದ ಘಟಿಂಗನ ಕೆನ್ನೆಗೆ ಎರಡು ಬಿಟ್ಟ. ಆ ದುಷ್ಟ ತನ್ನ ಇನ್ನೊಬ್ಬ ಸ್ನೇಹಿತನನ್ನು ಕರೆತಂದು ಗಂಡನನ್ನು ಥಳಿಸಿದ. ಆಗ ರೋಷದಿಂದ ಕುದಿದ ಗಂಡ ಅಲ್ಲಿಯೆ ಬಿದ್ದಿದ್ದ ಮರದ ತುಂಡೊಂದನ್ನು ಎತ್ತಿಕೊಂಡು ಓಡುತ್ತ ಹೋಗಿ ಒಬ್ಬನ ತಲೆಗೆ ಅಪ್ಪಳಿಸಿದ. ಅವನು ಕೆಳಗೆ ಬಿದ್ದು ಸತ್ತೇ ಹೋದ. ಮತ್ತೊಬ್ಬ ಓಡಿ ಹೋದ. ಕೊಲೆಯ ಆಪಾದನೆ ಗಂಡನ ಮೇಲೆ ಬಿದ್ದು ಅವನು ತಪ್ಪಿತಸ್ಥನಲ್ಲ, ಅದು ರೋಷದಲ್ಲಿ ಆದ ಘಟನೆ ಎಂದು ಕೋರ್ಟು ತೀರ್ಮಾನ ನೀಡುವವರೆಗೆ ಐದು ವರ್ಷ ಜೈಲಿನಲ್ಲಿ ಕೊಳೆದ. ಸಂಸಾರದ ಹಾಲಿನಲ್ಲಿ ಹುಳಿ ಬಿದ್ದಿತ್ತು. ದ್ವೇಷ, ರೋಷಗಳು ಪಾಶಗಳಾಗಿ ಅವರನ್ನು ಸೆಳೆದಿದ್ದವು.

ಆದರೆ ಇವುಗಳಂತೆ ಸ್ನೇಹ, ಮೋಹಗಳೂ ಪಾಶವಾಗಬಹುದು. ಬಾಲ್ಯದಲ್ಲಿ ಗಾಂಧೀಜಿಯ ಸ್ನೇಹಿತನೊಬ್ಬ ಇವರನ್ನು ಮಾಂಸ ತಿನ್ನುವುದಕ್ಕೆ, ಸಿಗರೇಟು ಸೇದುವುದಕ್ಕೆ ಪ್ರೇರೇಪಿಸಿದ್ದ. ಅವನ ಸ್ನೇಹದ ಬಲೆಯಲ್ಲಿ ಸಿಲುಕಿ ಅವರು ಆ ಕಾರ್ಯಗಳನ್ನು ಮಾಡಿದ್ದೂ ಉಂಟು. ಆದರೆ ಬಲೆಯಲ್ಲಿ ಸಿಲುಕಿಕೊಳ್ಳದೆ ಪಾರಾದರು. ಅನೇಕ ತರುಣ-ತರುಣಿಯರು ಸ್ನೇಹಿತರ ಮಾತಿಗೆ ಕಟ್ಟುಬಿದ್ದು ಬದುಕಿನ ನೆಲೆಯನ್ನು ಕಳೆದುಕೊಂಡದ್ದನ್ನು ಕಂಡಿದ್ದೇವೆ. ಸ್ನೇಹಿತರಿಂದ ಕೆಟ್ಟದೇ ಆಗಬೇಕೆಂದಿಲ್ಲ. ಆದರೆ ಸ್ನೇಹಕ್ಕೋಸ್ಕರ ಮಾಡಬೇಕಾದ ಕೆಲಸ ಕಟ್ಟಿಹಾಕುತ್ತದೆ, ಬಂಧವಾಗುತ್ತದೆ. ಮೋಹ ಬೇಡವೆಂದು ಚಕ್ರವರ್ತಿ ಪದವನ್ನು ಬಿಟ್ಟ ಭರತ, ಕಾಡುಸೇರಿ ಜಿಂಕೆಯ ಮೋಹಕ್ಕೆ ಸಿಕ್ಕುಬಿದ್ದ. ಆ ಮೋಹ ಯಾವ ಪರಿಯದಾಗಿತ್ತೆಂದರೆ ಮರುಜನ್ಮದಲ್ಲಿ ಆತ ಜಿಂಕೆಯಾಗಿಯೇ ಹುಟ್ಟಿದ. ಮೋಹದ ಸೆಳೆತ ಅಂತಹದ್ದು.

ಈ ದ್ವೇಷ, ರೋಷ, ಸ್ನೇಹ, ಮೋಹಗಳು ಮನುಷ್ಯರ ಮನಸ್ಸಿನಲ್ಲಿ ವಾಸನೆಗಳನ್ನು ಉಕ್ಕೇರುವಂತೆ ಮಾಡುತ್ತವೆ. ಆಗ ಮನುಷ್ಯನ ಚಿಂತನಾಕ್ರಮವೇ ಬದಲಾಗಿ, ಭ್ರಮೆಯನ್ನುಂಟುಮಾಡಿ ಬದುಕನ್ನು ಹಾಳುಮಾಡುತ್ತವೆ. ಅಂದರೆ ಇವು ಯಾವುವೂ ಬೇಡವೇ? ಅವುಗಳನ್ನು ನಿವಾರಿಸುವುದು ಸಾಧ್ಯವೇ? ಅವುಗಳಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ, ಆದರೆ ಅವುಗಳನ್ನು ಒಂದು ಹದದಲ್ಲಿ ನಿಯಂತ್ರಣದಲ್ಲಿಟ್ಟರೆ ಬದುಕು ಸೊಗಸಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT