ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ- ಬೆರಗಿನ ಬೆಳಕು| ನಿಜವಾದ ಸಾರ್ವಭೌಮ

Last Updated 22 ಜನವರಿ 2023, 19:30 IST
ಅಕ್ಷರ ಗಾತ್ರ

ಸಾರ್ವಭೌಮನು ಸೃಷ್ಟಿಯೊಳಗದೊರ್ವನೆ ಕಾಣೊ |

ಸರ್ವವನು ತನ್ನಾತ್ಮವೆಂದು ಬದುಕುವನು ||
ನಿರ್ವಿಕಾರಾಂತರಂಗದಿ ಜಗವ ಧರಿಸುವನು |
ಸರ್ವಮಂಗಳನವನು – ಮಂಕುತಿಮ್ಮ || 805 ||

ಪದ-ಅರ್ಥ: ಸೃಷ್ಟಿಯೊಳಗದೊರ್ವನೆ=ಸೃಷ್ಟಿಯೊಳಗೆ+ಅದು+ಓರ್ವನೆ(ಒಬ್ಬನೇ), ನಿರ್ವಿಕಾರಾಂತರಂಗದಿ=ನಿರ್ವಿಕಾರ(ವಿಕಾರ ರಹಿತ)+ಅಂತರಂಗದಿ.
ವಾಚ್ಯಾರ್ಥ: ಸರ್ವವನ್ನೂ ತನ್ನ ಆತ್ಮವೆಂದೇ ತಿಳಿದು ಬದುಕುವವನು ಇಡೀ ಸೃಷ್ಟಿಯೊಳಗೆ ಅವನೊಬ್ಬನೇ
ಸಾರ್ವಭೌಮ. ಅವನು ನಿರ್ವಿಕಾರವಾದ ಅಂತರಂಗವನ್ನು ಹೊಂದಿ ಜಗತ್ತಿನಲ್ಲಿ ಬಾಳುತ್ತಾನೆ. ಅವನ ಬಾಳು ಸದಾ ಮಂಗಳಕರವಾದದ್ದು.
ವಿವರಣೆ: ಪ್ರಜಾಪ್ರೇಮಿ ರಾಜನೊಬ್ಬ ಬೇಟೆಗೆಂದು ಕಾಡಿಗೆ ಹೋದ. ಜಿಂಕೆಗಳನ್ನು ಬೆನ್ನಟ್ಟಿದಾಗ ಪರಿವಾರದಿಂದ ದೂರವಾಗಿ ಒಬ್ಬನೇ ಗಾಢವಾದ ಅರಣ್ಯಪ್ರದೇಶವನ್ನು ಸೇರಿದ. ವಿಪರೀತನೀರಡಿಕೆ, ಹಸಿವು ಕಾಡಿತು. ಅಲ್ಲೊಂದು ಗುಡಿಸಲು ಕಂಡಿತು. ಅಲ್ಲಿ ಒಬ್ಬಸನ್ಯಾಸಿ. ರಾಜನಿಗೆ ಹಣ್ಣು, ನೀರು ಕೊಟ್ಟ. ರಾಜನ ಅನೇಕಸಮಸ್ಯೆಗಳಿಗೆ ಪರಿಹಾರ ಸೂಚಿಸಿದ. ರಾಜನಿಗೆ ಅವನ ಮೇಲೆ ತುಂಬವಿಶ್ವಾಸ ಹುಟ್ಟಿತು. ಮೇಲಿಂದ ಮೇಲೆ ಅಲ್ಲಿಗೆ ಹೋಗತೊಡಗಿದ.ಆಗಾಗ ಅಲ್ಲಿಗೆ ಹೋಗುವುದಕ್ಕಿಂತ ಅವನನ್ನೇ ರಾಜಧಾನಿಗೆ ಕರೆತರುವುದು ಒಳ್ಳೆಯದೆಂದು ಭಾವಿಸಿ ಕರೆದ. ಸನ್ಯಾಸಿ ತಕ್ಷಣವೇ ಸಿದ್ಧನಾದ. ರಾಜನಿಗೆ ಆಶ್ಚರ್ಯ. ರಾಜಧಾನಿಯಲ್ಲಿ ಸನ್ಯಾಸಿಗೊಂದು ಸುಂದರವಾದ ಮನೆ, ದಾಸ, ದಾಸಿಯರನ್ನು ಕೊಟ್ಟ. ಒಂದು ವಾರದ ನಂತರ ಸನ್ಯಾಸಿಗಳು ಹೇಗಿದ್ದಾರೆಂದು ಮಂತ್ರಿಗಳನ್ನು ಕೇಳಿದ. ಅವರು ಹೇಳಿದರು, “ಅವನೆಂಥ ಸನ್ಯಾಸಿ? ರಾಜಭೋಗದಲ್ಲಿ ತನ್ಮಯನಾಗಿದ್ದಾನೆ. ಯಾವ ಸಂಭ್ರಮವನ್ನೂ ತಪ್ಪಿಸಿಕೊಳ್ಳುವುದಿಲ್ಲ”. ರಾಜ ಸನ್ಯಾಸಿಯನ್ನೇ ಕೇಳಿದ, “ಸ್ವಾಮಿ, ನೀವಿರುವುದನ್ನು ಕಂಡರೆ ನನಗೂ, ನಿಮಗೂ ಯಾವ ವ್ಯತ್ಯಾಸವೂ ಕಾಣುತ್ತಿಲ್ಲ. ಯಾಕೆ ಹೀಗೆ?” ಸನ್ಯಾಸಿ, “ನಮ್ಮ ನಡುವಿನ ವ್ಯತ್ಯಾಸ ತೋರಿಸುತ್ತೇನೆ. ಬಾ”. ರಾಜನನ್ನು ಕರೆದುಕೊಂಡು ಅರಮನೆಯಿಂದ ಹೊರಟ. ನಗರವನ್ನು ದಾಟಿದ. ಮುಂದಿದ್ದ ನದಿಯನ್ನು ದಾಟಿದ. “ಇನ್ನೂ ಎಷ್ಟು ದೂರ?” ರಾಜ ಕೇಳಿದ. “ನನ್ನ ಜೊತೆಗೆ ಬಾ. ವ್ಯತ್ಯಾಸವನ್ನು ತೋರಿಸುತ್ತೇನೆ” ರಾಜ್ಯದ ಗಡಿ ಬಂದಿತು. ರಾಜ ನಿಂತ. “ನಾನು ಇನ್ನು ಮುಂದೆ ಬರಲಾರೆ. ನನ್ನ ರಾಜ್ಯದ ಸೀಮೆಯನ್ನು ಮೀರಲಾರೆ”. ಸನ್ಯಾಸಿ ನಕ್ಕ. “ನನಗೂ, ನಿನಗೂ ಇದೇ ವ್ಯತ್ಯಾಸ. ನಿನಗೆ ಒಂದು ಸೀಮೆ ಇದೆ. ಅದನ್ನು ನೀನು ದಾಟಲಾರೆ. ಆದರೆ ನನಗೆ ಯಾವ ಸೀಮೆಯೂ ಇಲ್ಲ. ನನಗೆ ಯಾವ ರಾಜ್ಯವಾದರೂ ಅಷ್ಟೇ. ನಿನಗೆ
ಅರಮನೆ ಬೇಕು, ಸಿಂಹಾಸನ ಬೇಕು. ನನಗೆ ಇದ್ದದ್ದೇ ಅರಮನೆ, ಕುಳಿತದ್ದೇ ಸಿಂಹಾಸನ. ನಾನು ಅರಮನೆಯಲ್ಲಿದ್ದೆ. ಆದರೆ ಅರಮನೆ ನನ್ನಲ್ಲಿರಲಿಲ್ಲ. ಗುಡಿಸಲಿನಲ್ಲೂ ಇದ್ದೆ, ಆದರೆ ಗುಡಿಸಲು ನನ್ನದಾಗಿರಲಿಲ್ಲ. ಒಂದು ರೀತಿಯಲ್ಲಿ ಎಲ್ಲವೂ ನನ್ನದೇ, ಆದರೆ ಯಾವುದೂ ನನ್ನದಲ್ಲ”. ರಾಜ ಸನ್ಯಾಸಿಯ ಕ್ಷಮೆ ಕೋರಿ ಮರಳಿ ಬರಲು ಕೇಳಿದ. ಸನ್ಯಾಸಿ, “ಮುಗಿಯಿತು ನನ್ನ ಆ ಮನೆಯ ವಾಸ. ನಿನಗೆ ವ್ಯತ್ಯಾಸ ತೋರಿಸಲು ಈ ನಡೆ” ಎಂದು ಹೇಳಿ ಹೊರಟ. ರಾಜ ಚಿಂತಿಸಿದ, ಸಾರ್ವಭೌಮನು ತಾನೋ, ಸನ್ಯಾಸಿಯೋ? ಕಗ್ಗ ಅದನ್ನೇ ಧ್ವನಿಸುತ್ತದೆ. ಯಾವನು ಎಲ್ಲರಲ್ಲಿಯೂ ತನ್ಮಾತ್ಮವನ್ನೇ ಕಾಣುತ್ತಾನೋ ಅವನಿಗೆ ಮಿತಿಗಳಿಲ್ಲ. ಅವನೇ ನಿಜವಾದ ಸಾರ್ವಭೌಮ. ಅವನು ನಿರ್ವಿಕಾರವಾಗಿ, ಸಮಚಿತ್ತದಿಂದ, ರಾಗ, ದ್ವೇಷಗಳಿಲ್ಲದೆ ಜಗತ್ತಿನಲ್ಲಿ ವ್ಯವಹರಿಸುತ್ತಾನೆ. ಅವನು ಮಾಡಿದ್ದು, ಚಿಂತಿಸಿದ್ದು ಪ್ರಪಂಚಕ್ಕೆ ಶುಭವೇ ಆದ್ದರಿಂದ ಅವನು ಸಕಲರಿಗೆ ಮಂಗಳಕರನಾದವನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT