ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪ್ರೇಮ-ವ್ಯಾಮೋಹಗಳಲ್ಲಿ ಸಾಮರಸ್ಯ

Last Updated 15 ಏಪ್ರಿಲ್ 2022, 15:27 IST
ಅಕ್ಷರ ಗಾತ್ರ

ಪ್ರೇಮಾತಿಶಯವಿರದ ದಾಂಪತ್ಯ ವರ್ಧಿಸದು |
ವ್ಯಾಮೋಹಕೆಡೆಗೊಟ್ಟೊಡದು ನಿಗಳವಹುದು ||
ಸಾಮರಸ್ಯವನೆಂತು ಕಾಣ್ಬುದೀ ವಿಷಮದಲಿ |
ಆಮಿಷದ ತಂಟೆಯಿದು – ಮಂಕುತಿಮ್ಮ || 607 ||

ಪದ-ಅರ್ಥ: ಪ್ರೇಮಾತಿಶಯವಿರದ=ಪ್ರೇಮ+ಅತಿಶಯ+ಇರದ, ವರ್ಧಿಸದು=ಬೆಳೆಯದು, ವ್ಯಾಮೋಹಕೆಡೆಗೊಟ್ಟೊಡದು=ವ್ಯಾಮೋಹಕ್ಕೆ+ಎಡೆಗೊಟ್ಟೊಡೆ(ಅವಕಾಶ ಕೊಟ್ಟರೆ)+ಅದು, ನಿಗಳವಹುದು=ನಿಗಳ(ಬಂಧ, ಸಂಕೋಲೆ)+ಅಹುದು, ಸಾಮರಸ್ಯವನೆಂತು=ಸಾಮರಸ್ಯವನು+ಎಂತು, ಕಾಣ್ಬುದೀ=ಕಾಣ್ಬುದು(ಕಾಣುವುದು)+ಈ, ಆಮಿಷ=ದೇಹ, ಮನಸುಗಳ, ತಂಟೆಯಿದು=ತಂಟೆ(ತಕರಾರು)+ಇದು.

ವಾಚ್ಯಾರ್ಥ: ಅತಿಶಯದ ಪ್ರೇಮವಿರದ ದಾಂಪತ್ಯ ಬೆಳೆಯದು. ಅದು ವ್ಯಾಮೋಹಕ್ಕೆ ತಿರುಗಿದರೆ ಬಂಧವಾದೀತು. ಇಂಥ ವಿಷಮದಲ್ಲಿ ಸಾಮರಸತೆಯನ್ನು ಕಾಣುವುದು ಹೇಗೆ? ಇದು ದೇಹ, ಮನಸುಗಳ ತಕರಾರು.

ವಿವರಣೆ: ದಾಂಪತ್ಯ ಜೀವನಕ್ಕೆ ಆದರ್ಶ ಯಾವುದು? ವೇದಗಳಲ್ಲಿ ಬರುವ ವರ್ಣನೆ ತುಂಬ ಸುಂದರವಾದದ್ದು, ಅರ್ಥಗರ್ಭಿತವಾದದ್ದು. ‘ನಾನು ದಿವಿ, ನೀನು ಭುವಿ, ಪೃಥಿವಿ ತಾಯಿ, ಆಕಾಶ ತಂದೆ’. ‘ದ್ಯಾವಾಪೃಥಿವೀ’ ಎಂಬುದು ವೇದದ ಕಾಣ್ಕೆ. ತಾಯಿ ಪೃಥ್ವಿ, ತಂದೆ ಆಕಾಶ. ಇದು ಅಚ್ಚುಮೆಚ್ಚಿನ ಜೋಡಿ. ಆಕಾಶದಿಂದ ಸುರಿದ ಮಳೆಯಿಂದಾಗಿ ಪೃಥ್ವಿ ಗರ್ಭ ಧರಿಸುತ್ತಾಳೆ. ಆಕೆಯ ಗರ್ಭದ ಮಗು, ನೀರು ಮತ್ತೆ ಮೋಡವಾಗಿ ಆಕಾಶವನ್ನೇರುತ್ತದೆ. ಹೀಗೆ ಸದಾಕಾಲದ ಸಂಬಂಧ ಪೃಥ್ವಿ ಮತ್ತು ಆಕಾಶಗಳದ್ದು. ಆಕಾಶ ನೋಟಕ್ಕೆ ಸಿಲುಕುವಂಥದ್ದು ಆದರೆ ಕೈಗೆಟುಕದಂಥದ್ದು. ಆದರೆ ಆಕಾಶ ನೆಲವನ್ನು ಯಾವಾಗಲೂ ಮುಟ್ಟದಂತೆಯೇ ಕಂಡರೂ ಅದು ಯಾವಾಗಲೂ ದೂರವೇ. ಹೀಗೆ ಆತ್ಮೀಯ ಸಂಬಂಧವನ್ನು ಮತ್ತು ನಿರ್ಧಾರಿತ ದೂರವನ್ನು ಉಳಿಸಿಕೊಂಡಿರುವ ಈ ದಂಪತಿಗಳು ಒಂದು ಆದರ್ಶ. ಅಲ್ಲಿ ಪರಸ್ಪರಾವಲಂಬನೆ, ಪ್ರೀತಿ ಇದೆ. ಆದರೆ ಅದು ಅಲ್ಲಿ ಅತಿಶಯವಾದ ಮೋಹವಾಗದೆ ಅಂತರವನ್ನು ಕಾಪಾಡಿಕೊಂಡಿದೆ.

ಕಗ್ಗದ ಮಾತು ಬಲು ಚೆಂದ. ಪ್ರೇಮದ ಅತಿಶಯದ ಬಂಧವಿರದೆ ದಾಂಪತ್ಯ ಉಳಿಯದು. ಪ್ರೇಮವೇ ಎರಡು ಜೀವಗಳನ್ನು ಗಟ್ಟಿಯಾಗಿ ಹಿಡಿದಿಡುವ ಬಂಧ. ನಮ್ಮ ಪುರಾಣಗಳಲ್ಲಿ, ಇತಿಹಾಸದಲ್ಲಿ ಇಂಥ ಸುಂದರ ಪ್ರೇಮಮಯ ದಂಪತಿಗಳ ಚಿತ್ರಣಗಳನ್ನು ನೋಡಿದ್ದೇವೆ. ರಾಮ-ಸೀತೆಯರ ಪ್ರೇಮ, ಕೃಷ್ಣ-ರಾಧೆಯರ ಪ್ರೇಮ, ಅಷ್ಟೇ ಅಲ್ಲ, ಋಷಿಗಳಾಗಿದ್ದರೂ ಅನಾದೃಶ ಪ್ರೇಮದಿಂದ ಹೆಸರಾದ ವಶಿಷ್ಠ-ಅರುಂಧತಿಯರು, ಅಗಸ್ತ್ಯ-ಲೋಪಾಮುದ್ರೆ, ಯಾಜ್ಞವಲ್ಕ್ಯ-ಮೈತ್ರೇಯಿ, ಇವರೆಲ್ಲ ದಾಂಪತ್ಯಕ್ಕೆ ತಮ್ಮ ಪ್ರೇಮದಿಂದ ಹೊಸ ಆಯಾಮವನ್ನೇ ಕೊಟ್ಟವರು.

ಪ್ರೇಮ ಒಂದು ಅಳತೆಯಲ್ಲಿರಬೇಕು. ಅದು ಮಿತಿಯನ್ನು ದಾಟಿದರೆ ವ್ಯಾಮೋಹವಾಗುತ್ತದೆ. ಅದು ಅನಾಹುತಕ್ಕೆ ಎಡೆಮಾಡುತ್ತದೆ. ರಾಮಾಯಣದಲ್ಲಿ ಕೈಕೇಯಿಯ ಬಗ್ಗೆ ದಶರಥನ ವ್ಯಾಮೋಹ ರಾಮಾಯಣದ ದಿಶೆಯನ್ನೇ ಬದಲಿಸಿತು. ಹೆಂಡತಿಯ ಮೋಹದಲ್ಲಿ ಸಿಕ್ಕಿಬಿದ್ದ ದಶರಥ ಮೂಢನ ಹಾಗೆ ವರ್ತಿಸುತ್ತಾನೆ, ಅಸಂಬದ್ಧ ಪ್ರಲಾಪ ಮಾಡುತ್ತಾನೆ, ಅಸಾಧ್ಯವಾದದ್ದನ್ನು ನಡೆಸುವ ಮಾತುಕೊಡುತ್ತಾನೆ. ಕೊನೆಗೆ ಸೋಲುತ್ತಾನೆ.

ಕಗ್ಗದ ಕೊನೆಯ ಎರಡು ಸಾಲುಗಳು ವಿಶೇಷವನ್ನು ಧ್ವನಿಸುತ್ತವೆ. ಪ್ರೇಮ ಮತ್ತು ವ್ಯಾಮೋಹಗಳೆಂಬ ಎರಡು ಧ್ರುವಗಳ ಮಧ್ಯೆ ಸಾಮರಸ್ಯವನ್ನು ಸಾಧಿಸುವುದೆಂತು? ಅದನ್ನು ಆಮಿಷದ ತಂಟೆ ಎನ್ನುತ್ತದೆ. ಆಮಿಷವೆಂದರೆ ದೇಹ ಮತ್ತು ಮನಸ್ಸುಗಳ ವಿಚಾರ. ಸಾಮಾನ್ಯವಾಗಿ ಮನಸ್ಸು ಪ್ರೇಮಕ್ಕೆ ಹಾತೊರೆದರೆ, ದೇಹ ವ್ಯಾಮೋಹಕ್ಕೆ ಮುಖ ಮಾಡುತ್ತದೆ. ಈ ತಂಟೆಗೆ ಒಂದು ಪರಿಹಾರವೆಂದರೆ ಮನಸ್ಸನ್ನು ಬೆಳೆಸಿ, ದೇಹದ ಬಯಕೆಯನ್ನು ಕೊಂಚ ಮಿತಿಯಲ್ಲಿ ಇಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT