ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ- ಬೆರಗಿನ ಬೆಳಕು | ತಾಳುವ ಅನಿವಾರ್ಯತೆ

Last Updated 12 ಜುಲೈ 2022, 19:30 IST
ಅಕ್ಷರ ಗಾತ್ರ

ಬರುವೆಲ್ಲ ಬೇನೆಗಂ ಮದ್ದನಾರಿರಿಸಿಹರು ? |
ನರರ ಕೀಳ್ತನಕೆಲ್ಲ ಪರಿಹಾರವೆಂತು ? ||
ಕಿರಿದು ಪಲ್ಲನು ತಾಳಿಕೊಳಲೆಬೇಕಷ್ಟಿಷ್ಟು |
ಧರೆಯಂತರುಷ್ಣವನು – ಮಂಕುತಿಮ್ಮ || 670 ||

ಪದ-ಅರ್ಥ: ಬರುವೆಲ್ಲ=ಬರುವ+ಎಲ್ಲ, ಬೇನೆಗಂ=ಬೇನೆಗೆ,ಮದ್ದು ನಾರಿರಿಸಿಹರು=ಮದ್ದನು +ಆರು+ಇರಿಸಿಹರು, ಕೀಳ್ತನಕೆಲ್ಲ= ಕೀಳ್ತನಕೆ(ಕೀಳುಬುದ್ಧಿಗೆ)+ಎಲ್ಲ, ಪಲ್ಲನು =ಹಲ್ಲನು,ಧರೆಯ ತರುಷ್ಣವನು=ಧರೆಯ+ಅತರ+ಉಷ್ಣವನು

ವಾಚ್ಯಾರ್ಥ: ಮುಂದೆ ಬರುವ ರೋಗಗಳಿಗೆ ಔಷಧಗಳನ್ನು ಯಾರು ಸಿದ್ಧಮಾಡಿದ್ದಾರೆ? ಮನುಷ್ಯರ ಕೀಳುಬುದ್ಧಿಗೆ ಪರಿಹಾರವಿದೆಯೆ? ಹಲ್ಲನ್ನು ಕಿರಿದು ಅದನ್ನು ಅಷ್ಟಿಷ್ಟು ತಾಳಿಕೊಳ್ಳಲೇಬೇಕು, ಭೂಮಿ ತನ್ನ ಗರ್ಭದ ಬೆಂಕಿಯನ್ನು ತಾಳಿಕೊಂಡಂತೆ.

ವಿವರಣೆ: ಜಾಗತೀಕರಣದಿಂದ ಮಾಹಿತಿ, ಸರಕುಗಳು ಮತ್ತು ವ್ಯಕ್ತಿಗಳ ಹರಿವು ಪ್ರಪಂಚದಲ್ಲೆಲ್ಲ ಹೆಚ್ಚಾಗಿದೆ. ಮೊದಲು ಜನರು ತಮ್ಮ ತಮ್ಮ ಸೀಮಿತ ಕ್ಷೇತ್ರಗಳಲ್ಲೇ ಬದುಕು ಸಾಗಿಸುತ್ತಿದ್ದರು. ಆದ್ದರಿಂದ ಅವರಿಗೆ ಬಂದ ರೋಗಗಳು ಕೂಡ
ಅದೇ ಸಣ್ಣ ಪ್ರದೇಶದಲ್ಲಿ ಉಳಿದು, ನಶಿಸಿ ಹೋಗುತ್ತಿದ್ದವು. ಈಗ ಒಂದು ಪ್ರದೇಶದಲ್ಲಿ ಕಾಣಿಸಿಕೊಂಡ ರೋಗ ಬಹುಬೇಗ
ಪ್ರಪಂಚದ ಎಲ್ಲೆಡೆಗೆ ಹರಡುವ ಸಾಧ್ಯತೆ ಇದೆ. ಯಾವುದೋ ದೇಶದಲ್ಲಿ ಒಂದು ರೋಗ ಕಂಡರೆ, ನಾವು ಮತ್ತೊಂದು ದೇಶದಲ್ಲಿ ಕ್ಷೇಮವಾಗಿದ್ದೇವೆ ಎಂದು ಭಾವಿಸುವಂತಿಲ್ಲ. ಅದು ಮರುದಿನವೇ ಯಾರೋ ಪ್ರಯಾಣಿಕರೊಂದಿಗೆ ನಮ್ಮಲ್ಲಿಗೆ ಬಂದು ಸೇರಬಹುದು.

ಅದಕ್ಕೊಂದು ಮದ್ದು ಹುಡುಕಬೇಕು. ನಾವೆಲ್ಲ ಕಂಡಿದ್ದೇವೆ, ಮೊದಲು ನ್ಯುಮೋನಿಯಾ, ಕಾಲರಾ, ಪ್ಲೇಗುಗಳಂಥ ರೋಗಗಳು ಬಂದಾಗ ಜನ ಸಾವಿರಾರು ಸಂಖ್ಯೆಯಲ್ಲಿ ಪ್ರಾಣಕಳೆದುಕೊಂಡರು. ನಿಧಾನವಾಗಿ ಅವುಗಳಿಗೆ ಔಷಧಿ ಕಂಡು ಹಿಡಿದು ಅವುಗಳ ನಿವಾರಣೆಯಾಯಿತು ಎನ್ನುವಷ್ಟರಲ್ಲಿ ಹೃದಯದ ಕಾಯಿಲೆಗಳು ತೀವ್ರವಾದವು.

ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಹೊತ್ತಿಗೆ ಏಡ್ಸ್ಮ ಹಾಮಾರಿ ಧುತ್ತೆಂದು ಮುಂದೆನಿಂತಿತು. ಅದನ್ನು ನಿರ್ವಹಿಸಿ ಇನ್ನು ನಿರಾಳರಾದೆವು ಎಂದುಕೊಳ್ಳುವಾಗ ಕೊರೊನಾ ಎಂಬ ಪ್ರಚಂಡರೋಗ ಇಡೀ ಪ್ರಪಂಚವನ್ನು ದು:ಖದಲ್ಲಿ ಬೇಯಿಸಿತು. ಈಗ ಅದು ಶಾಂತವಾದಂತೆ ತೋರುತ್ತದೆ. ಆದರೆ ಮತ್ತೊಂದು ಹೊಸರೋಗ ಬರುವುದಿಲ್ಲವೆಂದು ಹೇಗೆ ಹೇಳುವುದು? ಅದಕ್ಕೆ
ನಮ್ಮ ಬಳಿ ಮದ್ದು ಇದೆಯೆ? ಹಾಗೆಯೇ ಮನುಷ್ಯನ ಕೀಳುತನಕ್ಕೆ ಏನಾದರೂ ಪರಿಹಾರವಿದೆಯೆ? ಪುರಾಣದ ಕಥೆಗಳಲ್ಲಿ ದೇವತೆಗಳಿಗೆ ಅಹಂಕಾರ ಬಂದು ಒದ್ದಾಡಿದ್ದು, ಶಿಕ್ಷೆ ಅನುಭವಿಸಿದ್ದು ಇಲ್ಲವೆ? ಸ್ವರ್ಗಲೋಕದ ಅಧಿಪತಿಯಾದ ಇಂದ್ರನಿಗೇ ಪರಸ್ತ್ರೀ ಮೋಹ ತಪ್ಪಲಿಲ್ಲ. ಧರ್ಮದ ಅವತಾರವೆನ್ನಿಸಿದ ಧರ್ಮರಾಜನಿಗೆ ಜೂಜಿನ ಮೋಹ ಬಿಡಲಿಲ್ಲ.

ರಾವಣನ ಮೋಹ, ದುರ್ಯೋಧನನ ರಾಜ್ಯದಾಸೆ, ಅಲೆಗ್ಝಾಂಡರ್‌ನ ಮಹತ್ವಾಕಾಂಕ್ಷೆ, ಹಿಟ್ಲರ್‌ನ ಜನಾಂಗೀಯ ದ್ವೇಷ, ಒಡೆದು ಆಳುವ ಬ್ರಿಟಿಷ್‌ ನಾಯಕರ ಬುದ್ಧಿ, ಜಾತಿಯನ್ನು ಮುಂದಿಟ್ಟು ಸಮುದಾಯಗಳನ್ನು ಒಡೆಯುವ ರಾಜಕೀಯ
ಹೇಸಿತನ ಇವೆಲ್ಲ ಮನುಷ್ಯನ ಕೀಳುತನ ಅನಾದಿಕಾಲದಿಂದ ಉಳಿದೇ ಬಂದದ್ದನ್ನು ಹೇಳುತ್ತವೆ. ಈ ಕೀಳುತನಕ್ಕೇನಾದರೂ ಪರಿಹಾರ ವಿದೆಯೆ? ಕಗ್ಗ ಹೇಳುತ್ತದೆ, ಇವುಗಳಿಗೆ ಒಂದೇ ಪರಿಹಾರ. ಅದು ಹಲ್ಲನ್ನು ಕಚ್ಚಿ ತಾಳಿಕೊಳ್ಳುವುದು.

ಕಾಲಕಾಲಕ್ಕೆ ರೋಗಗಳು ಮತ್ತು ಮನುಷ್ಯನ ನೀಚತನ ಮರಮರಳಿ ಬರುತ್ತವೆ. ಅವು ಸಂಪೂರ್ಣವಾಗಿ ನಿಂತು ಹೋಗುವುದಿಲ್ಲ. ಆದ್ದರಿಂದ ಅವುಗಳನ್ನು ತಾಳಿಕೊಳ್ಳದೆ ಬೇರೆ ವಿಧಿಯಿಲ್ಲ. ಭೂಮಿ ತನ್ನ ಗರ್ಭದಲ್ಲಿ ಇನ್ನೂ ಕುದಿಯುವ ಬೆಂಕಿಯನ್ನು ಇಟ್ಟುಕೊಂಡಂತೆ, ತಾಳಿಕೊಂಡಂತೆ ನಾವೂ ಈ ಅನಿವಾರ್ಯತೆಗಳನ್ನು ಸಹಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT