ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಚಿಂತಾರಹಿತತೆಯ ಸೂತ್ರ

Last Updated 7 ಫೆಬ್ರುವರಿ 2023, 18:51 IST
ಅಕ್ಷರ ಗಾತ್ರ

ಮರವಂನೀನನರಿಯುವೊಡೆ ಬುಡವ ಕೀಳಲು ಬೇಡ |

ತರಿಯಬೇಡೆಲೆಕಡ್ಡಿಗಳ ಪರೀಕ್ಷಣಕೆ ||
ಎರೆ ನೀರ, ಸುರಿಗೊಬ್ಬರವ, ಕೆದಕು ಪಾತಿಯನು |
ನಿರುಕಿಸುತ ತಳಿರಲರ – ಮಂಕುತಿಮ್ಮ || 817 ||

ಪದ-ಅರ್ಥ: ನೀನರಿಯುವೊಡೆ=ನೀನು+ಅರಿಯುವೊಡೆ(ತಿಳಿಯುವುದಾದರೆ), ತರಿಯಬೇಡೆಲೆಕಡ್ಡಿಗಳ=ತರಿಯಬೇಡ(ಕಿತ್ತಬೇಡ)+ಎಲೆ+ಕಡ್ಡಿ
ಗಳ, ನಿರುಕಿಸುತ=ನಿರೀಕ್ಷಿಸುತ್ತ,ತಳಿರಲರ=ತಳಿರ(ಚಿಗುರಿನ)+ಅಲರ(ಹೂವು).
ವಾಚ್ಯಾರ್ಥ: ಮರದ ಗುಣವನ್ನು ನೀನು ತಿಳಿಯಬೇಕೆಂದಿದ್ದರೆ,ಅದರ ಬೇರನ್ನು ಕೀಳಬೇಡ. ಪರೀಕ್ಷೆಗಾಗಿ ಎಲೆಕಡ್ಡಿಗಳನ್ನು ಕಿತ್ತುಹಾಕಬೇಡ. ನೀರು ಹಾಕು, ಗೊಬ್ಬರವನ್ನು ಸುರಿ,ಪಾತಿಯನ್ನು ಕೆದರಿ ಸರಿಮಾಡು, ನಂತರ ಅದರ ಚಿಗುರನ್ನು,ಹೂವನ್ನು ನಿರೀಕ್ಷಿಸು.
ವಿವರಣೆ: ಇದು ಮೇಲ್ನೋಟಕ್ಕೆ ತುಂಬ ಸುಲಭವಾದ ಆದರೆ, ಆಂತರ್ಯದಲ್ಲಿ ಬಹುದೊಡ್ಡ ಚಿಂತನೆಯನ್ನು ತಿಳಿಸುವ ಕಗ್ಗ. ಮರದ ಗುಣವಿಶೇಷಗಳನ್ನು ನೀನುತಿಳಿಯಬೇಕೆಂದಿದ್ದರೆ ಅದರ ಬೇರುಗಳನ್ನು ಕೀಳಬೇಡ.ಬೇರು ಕಿತ್ತಿ ಹೋದರೆ ಮರ ಹೇಗೆ ಉಳಿದೀತು? ಮರದ ಪರೀಕ್ಷೆಯನ್ನು ಚೆನ್ನಾಗಿ ಮಾಡಲು ಮೇಲೆ ಸೊಂಪಾಗಿ ಹರಡಿದ್ದ ಎಲೆಕಡ್ಡಿಗಳನ್ನೆಲ್ಲ ಕತ್ತರಿಸಬೇಡ. ಮರದಬೆಳವಣಿಗೆಯನ್ನು ಅಪೇಕ್ಷಿಸುವುದಾದರೆ, ನೀನುಮಾಡಬೇಕಾದದ್ದು ಇಷ್ಟೇ. ಮೊದಲು ಬುಡಕ್ಕೆ ನೀರು ಹಾಕು, ಸರಿಯಾದ ಪ್ರಮಾಣದಲ್ಲಿ ಗೊಬ್ಬರ ಬೆರೆಸು. ಪಾತಿಯನ್ನು ಹದವಾಗಿಕೆದರಿ, ನೀರು ಕೆಳಗಿಳಿಯುವಂತೆ ಮಾಡು. ನಂತರ ತಾಳ್ಮೆಯಿಂದ ಚಿಗುರು, ಹೂವುಗಳನ್ನು ಬರುವುದನ್ನು, ಅದರ ಮೂಲಕ ಹಿತವಾದ ತಂಗಾಳಿ ಬರುವುದನ್ನು ನಿರೀಕ್ಷಿಸು. ಕೆಲವೊಮ್ಮೆ ವೈಜ್ಞಾನಿಕವಾಗಿ, ಮರದ ರೋಗ ಲಕ್ಷಣಗಳನ್ನು ಗುರುತಿಸಲು, ಬೇರನ್ನು, ಎಲೆ, ಕಡ್ಡಿಗಳನ್ನು ಪರೀಕ್ಷೆ ಮಾಡಬೇಕಾಗಬಹುದು. ಕಗ್ಗ ಅದನ್ನು ವಿರೋಧಿಸುವುದಿಲ್ಲ. ಕಗ್ಗದ ಚಿಂತನೆ ಇರುವುದು ಅತಿಪರೀಕ್ಷೆಯ ಬುದ್ಧಿ ಇರುವವರ ಬಗ್ಗೆ. ಅವರದು ಪ್ರತಿಯೊಂದರಲ್ಲೂ ಜಿಜ್ಞಾಸೆ. ಇದು ಸರಿಯೇ, ಇದು ಹೀಗಾಗಬೇಕಿತ್ತೇ, ಇದರ ಮೂಲವೇನು ಎಂಬ ಪ್ರಶ್ನೆಗಳ ಸಾಲು ಸಾಲು ಬರುತ್ತವೆ. ಕೆಲವರಿಗೆ ಪ್ರತಿಯೊಂದಕ್ಕೂ ಮೂಲಕ್ಕೇ ಹೋಗಿ ನೋಡುವ ಮೂಲವ್ಯಾಧಿ. ಆ ದೃಷ್ಟಿ ಅಧ್ಯಾತ್ಮದಂತಹ ವಿಷಯಕ್ಕೆ ಸರಿ. ಆದರೆ ಸಾಮಾನ್ಯಪ್ರಪಂಚದ ವ್ಯವಹಾರದಲ್ಲಿ ಅತಿಯಾದ ಚಿಕಿತ್ಸೆ ಬೇಡ. ಒಂದು ಪ್ರಚಲಿತವಾದ ಗಾದೆ ಇದೆ. “ದಿಟ್ಟಿಸಿ ನೋಡಿದರೆ ಮಾಡಿಕೊಂಡ ಹೆಂಡತಿ ಮೆಳ್ಳೆಗಣ್ಣು”. ಹೀಗೆಂದರೇನು? ಆಕೆ ಚೆನ್ನಾಗಿಯೇ ಇದ್ದಾಳೆ. ಆದರೆ ಸಂಶಯದಿಂದ ಅವಳ ಕಣ್ಣುಗಳನ್ನೇ ಸದಾ ದಿಟ್ಟಿಸಿ ನೋಡುತ್ತಿದ್ದರೆ ಆಕೆಯದು ಮೆಳ್ಳೆಗಣ್ಣು ಎನ್ನಿಸೀತು. ಅಷ್ಟು ಪರೀ ಕ್ಷೆಯ ಕಾರಣವಿಲ್ಲ. ನಮಗೆ ಅನೇಕ ಜನ ಸಂಬಂಧಿಗಳಿದ್ದಾರೆ. ಅವರಲ್ಲಿ ಎಲ್ಲರ ಮೂಲ ಕೆದಕುತ್ತ ಹೋಗಬೇಡಿ. ಕೆರೆಯ ನೀರು ಮೇಲೆ ತುಂಬ ತಿಳಿ. ಮೂಲವನ್ನು ನೋಡಿಯೇ ಬಿಡುತ್ತೇನೆಂದು ತಳದಲ್ಲಿ ಕಾಲಾಡಿಸಿದರೆ ಬಗ್ಗಡ ತೇಲಿಬಂದು ಹೊಲಸಾಗುತ್ತದೆ. ತಳಕೆದಕುವುದು ಬೇಡ. ನಮಗೆ ಬೇಕಾದದ್ದು ತಿಳಿನೀರು. ಅದನ್ನೇ ಕಗ್ಗ, ಮರದ ಗುಣ ತಿಳಿಯಲು ಬೇರು ಕೀಳಬೇಡ ಎಂದದ್ದು. ಸಂಬಂಧಗಳನ್ನು, ಸ್ಥಿತಿಗಳನ್ನು ತುಂಬ ಪರೀಕ್ಷಿಸುವುದು, ಅಸಂತೋಷಕ್ಕೆ ದಾರಿಯಾದೀತು. ಈ ಕಗ್ಗದಲ್ಲಿ ಬರುವ ಮರದ ಬೇರು, ಭೂತಕಾಲ, ಎಲೆಕಡ್ಡಿಗಳು ಭವಿಷ್ಯ. ಬಹಳಷ್ಟು ಜನ ಕೇವಲ ಭೂತ ಮತ್ತು ಭವಿಷ್ಯದ ಚಿಂತೆಯಲ್ಲಿ ಮುಳುಗಿದ್ದೇವೆ. ಪಾತಿ ಸರಿ ಮಾಡುವುದು, ನೀರು ಹನಿಸುವುದು ವರ್ತಮಾನದ ಕರ್ತವ್ಯಗಳು. ಅವುಗಳನ್ನು ಸರಿಯಾಗಿ ಮಾಡಿದರೆ ಭವಿಷ್ಯದ ಚಿಗುರು ಹೂವುಗಳು ಮತ್ತು ಅದರಿಂದ ಸಂತೋಷದ ತಂಗಾಳಿ ಖಂಡಿತ. ನಿನ್ನೆ ಬರಿಯ ಸ್ವಪ್ನ, ನಾಳೆ ಕೇವಲ ಕಲ್ಪನೆ. ಇಂದು ಸರಿಯಾಗಿ ಬಾಳಿದರೆ ಪ್ರತಿ ನೆನ್ನೆಯೂ ಸುಸ್ವಪ್ನವಾಗುತ್ತದೆ. ಮತ್ತು ಪ್ರತಿ ನಾಳೆಯೂ ಭರವಸೆಯ ಕಲ್ಪನೆಯಾಗುತ್ತದೆ. ಇದು ಚಿಂತಾರಹಿತ ಜೀವನದ ಸೂತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT